ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರ ಆಸ್ಪತ್ರೆ: ಕಾಯುವುದೇ ಕಾಯಕ

Last Updated 7 ಏಪ್ರಿಲ್ 2022, 20:21 IST
ಅಕ್ಷರ ಗಾತ್ರ

ಬೆಂಗಳೂರು: ‘ಬೆಳಿಗ್ಗೆ ಬೇಗ ಬಂದರೂ ಸಿಕ್ಕಿದ ಟೋಕನ್‌ ಸಂಖ್ಯೆ 82. ಈಗ ಮಧ್ಯಾಹ್ನ 1.30 ಆಗಿದೆ. ನನ್ನ ಪಾಳಿ ಇನ್ನೂ ಬಂದಿಲ್ಲ. ಡಾಕ್ಟರ್‌ ಈಗ ಊಟಕ್ಕೆ ಹೋದರು’

ರಾಜಾಜಿನಗರದ ಇಎಸ್‌ಐ ಆಸ್ಪತ್ರೆಗೆ ಆರೋಗ್ಯ ತಪಾಸಣೆ ಸಲುವಾಗಿ ಬಂದ ಹೊರರೋಗಿ ಕೆ.ರಮೇಶ್‌ಕುಮಾರ್‌ ತಿಳಿಸಿದರು.

‘ನನಗೆ ವಯಸ್ಸಾಗಿದೆ. ಪತ್ನಿ ಇಲ್ಲೇ 3–4 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾಳೆ. ನನಗೆ ಮೂಳೆ ಸಮಸ್ಯೆ ಇತ್ತು. ಬೆಳಗ್ಗಿನಿಂದ ಕಾದರೂ ಇನ್ನೂ ನನ್ನ ಸರದಿ ಬಂದಿಲ್ಲ. ಫಲಕದಲ್ಲಿ ಐವರು ವೈದ್ಯರ ಹೆಸರುಗಳಿವೆ. ಆದರೆ, ರೋಗಿಗಳನ್ನು ಇಬ್ಬರು ವೈದ್ಯರು ಮಾತ್ರ ನೋಡುತ್ತಿದ್ದಾರೆ’ ಎಂದು ಅವರು ದೂರಿದರು.

‘ನಾನು ಬೆಳಿಗ್ಗೆ 9 ಗಂಟೆಗೆ ಬಂದೆ. ಕೊನೆಗೂ ಈಗ ಡಾಕ್ಟರ್‌ ಸಿಕ್ಕಿದರು. ಆಸ್ಪತ್ರೆಯಲ್ಲಿ ಒಳ್ಳೆಯ ಚಿಕಿತ್ಸೆ ಸಿಗುತ್ತದೆ. ಆದರೆ, ಬೆಳಿಗ್ಗೆಯಿಂದ ಕಾಯಬೇಕು ಎನ್ನುವುದೇ ಗೋಳು’ ಎಂದು ದಾಸರಹಳ್ಳಿಯ ಲಕ್ಷ್ಮೀದೇವಮ್ಮ ತಿಳಿಸಿದರು.

‘ಮಾತ್ರೆ ತೆಗೆದುಕೊಳ್ಳಬೇಕು ಎಂದರೆ ಆಸ್ಪತ್ರೆಯಿಂದ ಹೊರಗೆ ಹೋಗಬೇಕು. ಎಲ್ಲ ಮಾತ್ರೆಗಳು ಇಲ್ಲಿ ಸಿಗುವುದಿಲ್ಲ. ಬಿಸಿಲು ಬೇರೆ, ಅಷ್ಟು ದೂರ ನಡೆದು ಹೋಗುವುದೇ ತ್ರಾಸದಾಯಕ’ ಎಂದು ಅವರು ಹಣೆ ಮೇಲಿನ ಬೆವರ ಹನಿಗಳನ್ನು ಒರೆಸಿಕೊಂಡರು.

ಇದು ಇವರಿಬ್ಬರ ಸಮಸ್ಯೆ ಅಷ್ಟೇ ಅಲ್ಲ. ಈ ಇಎಸ್‌ಐ ಆಸ್ಪತ್ರೆಗೆ ಆರೋಗ್ಯ ತಪಾಸಣೆಗಾಗಿ ಬಹುತೇಕ ರೋಗಿಗಳು ಎದುರಿಸುವ ಬವಣೆ ಇದು. ಈ ಕಾರ್ಮಿಕರ ಆಸ್ಪತ್ರೆಯಲ್ಲಿ ಕಾಯುವುದೇ ರೋಗಿಗಳ ಕಾಯಕವಾಗಿಬಿಟ್ಟಿದೆ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅನೇಕ ರೋಗಿಗಳು ಬೇಸರ ವ್ಯಕ್ತಪಡಿಸಿದರು.

‘ಆಸ್ಪತ್ರೆ ಚೆನ್ನಾಗಿದೆ. ರೋಗಿಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಆದರೆ, ತುಂಬಾ ಹೊತ್ತು ಕಾಯಬೇಕು. ಏನು ಕೇಳಿದರೂ ವೈದ್ಯರು ಇಲ್ಲ ಎನ್ನುತ್ತಾರೆ. ಆಸ್ಪತ್ರೆಗೆ ತುಂಬಾ ಜನ ಬರುತ್ತಾರೆ. ನಿರ್ವಹಣೆ ಕೊರತೆಯೂ ಇದೆ’ ಎಂದು ದೂರುತ್ತಾರೆ ಇಲ್ಲಿಗೆ ಚಿಕಿತ್ಸೆಗಾಗಿ ಬಂಧುವೊಬ್ಬರನ್ನು ಕರೆತಂದ ದೀಪಾಂಜಲಿನಗರದ ಆನಂದ್‌.

‘ನನ್ನ ಚಿಕ್ಕಪ್ಪನಿಗೆ ಕಾಲಿನ ಮೂಳೆಯಲ್ಲಿ ಸಮಸ್ಯೆ ಇತ್ತು. ಶಸ್ತ್ರಚಿಕಿತ್ಸೆ ಮಾಡಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದರು. ಈ ಆಸ್ಪತ್ರೆಗೆ ಅವರನ್ನು ದಾಖಲು ಮಾಡಿದೆವು. ಶಸ್ತ್ರಚಿಕಿತ್ಸೆ ಮಾಡಲು ಒಂದು ವಾರ ತೆಗೆದುಕೊಂಡರು. ಕಾರಣ ಕೇಳಿದರೆ, ಅಗತ್ಯ ಪರಿಕರಗಳು ಇಲ್ಲ. ವೈದ್ಯರೂ ಇಲ್ಲ ಎನ್ನುತ್ತಾರೆ’ ಎಂದು ಅವರು ತಿಳಿಸಿದರು.

ಬಿಲ್ಲು– ಬವಣೆ: ‘ಇಲ್ಲಿ ಚಿಕಿತ್ಸೆಗಾಗಿ ಬರುವವರೆಲ್ಲರೂ ಕಾರ್ಮಿಕರೇ. ಎಲ್ಲದಕ್ಕೂ ಬಿಲ್ಲುಗಳು ಬೇಕು. ಎಲ್ಲದಕ್ಕೂ ರೋಗಿಯ ಸಹಿ ಬೇಕು ಎನ್ನುತ್ತಾರೆ. ಆದರೆ, ಒಂದೇ ಬಾರಿಗೆ ಈ ಎಲ್ಲ ಕೆಲಸಗಳು ಆಗುವುದಿಲ್ಲ. ಚಿಕಿತ್ಸೆ ಏನೋ ನಡೆದುಹೋಗುತ್ತದೆ. ಆದರೆ, ದಾಖಲಾತಿ ಜೋಡಣೆಗೆ, ದುಡ್ಡು ಪಡೆಯುವುದಕ್ಕೇ 15 ದಿನಗಳಿಗೂ ಹೆಚ್ಚು ಸಮಯ ತಗಲುತ್ತದೆ. ಆ ಕಾರ್ಡ್‌ ಬೇಕು, ಈ ಕಾರ್ಡ್‌ ಬೇಕು ಎಂದು ಸತಾಯಿಸುತ್ತಾರೆ. ಅದರಲ್ಲೇ ದಿನ ಕಳೆದುಹೋಗುತ್ತದೆ’ ಎಂದು ಕೆ. ರಮೇಶ್‌ಕುಮಾರ್‌ ಬೇಸರ ವ್ಯಕ್ತಪಡಿಸಿದರು.

ಚಿಕಿತ್ಸೆಗಾಗಿ ಬಂದಿದ್ದ ಮಹಿಳಾ ರೋಗಿಯೊಬ್ಬರಿಗೆ ನಡೆಯಲೂ ಆಗುತ್ತಿರಲಿಲ್ಲ. ಅವರನ್ನು ಕುಟುಂಬದವರೇ ಸ್ಟ್ರೆಚರ್‌ನಲ್ಲಿ ಮಲಗಿಸಿ, ಆಸ್ಪತ್ರೆಯ ಒಳಕ್ಕೆ ತಳ್ಳಿಕೊಂಡು ಹೋದರು. ಸ್ಕ್ಯಾನಿಂಗ್‌ ಮಾಡಿಸಿಕೊಂಡ ವೃದ್ಧೆಯೊಬ್ಬರನ್ನು ಅವರ ಮೊಮ್ಮಗನೇ ತಳ್ಳಿಕೊಂಡು ಹೊರಬಂದರು. ಆಸ್ಪತ್ರೆಯ ಆವರಣದಲ್ಲಿ ಗುರುವಾರ ಕಂಡ ದೃಶ್ಯಗಳು ಇಲ್ಲಿರುವ ಸಿಬ್ಬಂದಿ ಕೊರತೆಗೆ ಕನ್ನಡಿ ಹಿಡಿಯುವಂತಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT