ಬುಧವಾರ, ಮೇ 27, 2020
27 °C
ವಸತಿ ಸೌಕರ್ಯ ಕಲ್ಪಿಸಲು ₹ 25 ಕೋಟಿ ಬಿಡುಗಡೆ: ಸಚಿವ ಅಶೋಕ

ಕಟ್ಟಡ ಕಾರ್ಮಿಕರ ಗುಳೆ ತಡೆಯಲು ಕಠಿಣ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕೂಲಿ ಹಾಗೂ ಕಟ್ಟಡ ಕಾರ್ಮಿಕರು ನಗರದಿಂದ ಗುಳೆ ಹೋಗುತ್ತಿದ್ದಾರೆ. ಅವರ ಮೂಲಕ ಕೊರೊನಾ ಸೋಂಕು ಇತರ ಊರುಗಳಿಗೂ ಹಬ್ಬುವ ಸಾಧ್ಯತೆ ಇದೆ. ಹಾಗಾಗಿ ಅವರು ಹೊರಹೋಗುವುದನ್ನು ತಡೆಯಲು ಕಠಿಣ ಕ್ರಮ ಕೈಗೊಂಡಿದ್ದೇವೆ’ ಎಂದು ಕಂದಾಯ ಸಚಿವ ಆರ್‌.ಅಶೋಕ ತಿಳಿಸಿದರು.

ವಲಸೆ ಕಟ್ಟಡ ಕಾರ್ಮಿಕರ ಸಮಸ್ಯೆ ಬಗ್ಗೆ ಚರ್ಚಿಸಲು ಕಾನ್ಫೆಡರೇಷನ್‌ ಆಫ್‌ ರಿಯಲ್‌ ಎಸ್ಟೇಟ್‌ ಡೆವಲಪರ್ಸ್‌ ಅಸೋಸಿಯೇಷನ್‌ (ಕ್ರೆಡೈ) ಹಾಗೂ ಬಿಲ್ಡರ್‌ಗಳ ಇತರ ಸಂಸ್ಥೆಗಳ ಜೊತೆ ಮಂಗಳವಾರ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ನಗರದಲ್ಲಿ 1 ಲಕ್ಷಕ್ಕೂ ಅಧಿಕ ಕೂಲಿ ಕಾರ್ಮಿಕರಿದ್ದಾರೆ. ಯಾವುದೇ ಕಾರಣಕ್ಕೂ ಊರಿಗೆ ತೆರಳಲು ಅವರಿಗೆ ಅವಕಾಶ ಕೊಡಬಾರದು. ಅವರು ಟೆಂಪೊ ಹಾಗೂ ಟ್ರ್ಯಾಕ್ಟರ್‌ಗಳ ಮೂಲಕ ಗುಂಪುಗುಂಪಾಗಿ ಹೋಗುವುದನ್ನು ತಡೆಯಬೇಕು. ಅಂತಹ ವಾಹನಗಳನ್ನೂ ಜಪ್ತಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ’ ಎಂದರು.

‘ಕಾರ್ಮಿಕರನ್ನು ನಗರದಲ್ಲಿಯೇ ಉಳಿಸಿಕೊಂಡು ಅವರಿಗೆ ವಸತಿ ಸೌಲಭ್ಯ ಒದಗಿಸಲಿದ್ದೇವೆ. ಈ ಸಲುವಾಗಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಖಾತೆಗೆ ₹25 ಕೋಟಿ ಬಿಡುಗಡೆ ಮಾಡಲಾಗಿದೆ. ಅವರ ಖಾತೆಯಲ್ಲಿ ಸದ್ಯ ₹ 34 ಕೋಟಿ ಲಭ್ಯ ಇದೆ. ಕಲ್ಯಾಣಮಂಟಪಗಳಲ್ಲಿ, ತುಮಕೂರು ರಸ್ತೆಯ ಬಳಿಯ ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಮೈದಾನದಲ್ಲಿ ಅವರಿಗೆ ವಸತಿ, ಊಟ ಹಾಗೂ ವೈದ್ಯಕೀಯ ಸೌಲಭ್ಯ ಕಲ್ಪಿಸಲು ಸೂಚಿಸಲಾಗಿದೆ’ ಎಂದರು. 

ಲಾಲ್‌ಬಾಗ್, ಕಬ್ಬನ್ ಉದ್ಯಾನ ಸೇರಿದಂತೆ ಇನ್ನಿತರ ಉದ್ಯಾನಗಳಲ್ಲಿ ಹಾಗೂ ಬಯಲು ಪ್ರದೇಶಗಳಲ್ಲಿ ಪಕ್ಷಿಗಳಿಗೆ ಆಹಾರ ವಿತರಿಸಲಾಗುವುದು ಎಂದರು.

‘ಕಾರ್ಮಿಕರ ಹೊರದಬ್ಬಿದರೆ ಮಾಲೀಕರ ಬಂಧನ’
‘ಶೆಡ್ ಬಿಟ್ಟು ತೆರಳಲು ನಿರ್ಮಾಣ ಹಂತದ ಕಟ್ಟಡ ಮಾಲೀಕರು ಒತ್ತಾಯ ಮಾಡಿದರೆ ಕೂಡಲೇ ದೂರು ಕೊಡಿ. ಅಂತಹ ಮಾಲೀಕರನ್ನು ಬಂಧಿಸಲಾಗುವುದು’ ಎಂದು ಕಂದಾಯ ಸಚಿವ ಅಶೋಕ ಅವರು ತಿಳಿಸಿದರು.

‘ಕಾರ್ಮಿಕರು ಶೆಡ್‌ ಬಿಟ್ಟು ಹೊರಹೋಗದಂತೆ ಕಾಮಗಾರಿಗಳ ಗುತ್ತಿಗೆದಾರರು ಹಾಗೂ ಡೆವಲಪರ್‌ಗಳೇ ನೋಡಿಕೊಳ್ಳಬೇಕು. ಅವರ ಖರ್ಚುವೆಚ್ಚವನ್ನು ಭರಿಸಬೇಕು. ಅವರನ್ನು ಹೊರದಬ್ಬಿದರೆ, ಅಂತಹ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುತ್ತೇವೆ. ಕಟ್ಟಡಕ್ಕೆ ನೀಡಿರುವ ಪರವಾನಗಿ ರದ್ದುಪಡಿಸುತ್ತೇವೆ’ ಎಂದು ಅವರು ಎಚ್ಚರಿಕೆ ನೀಡಿದರು.

ಮನೆ ಬಿಡುವಂತೆ ಬಾಡಿಗೆದಾರರ ಮೇಲೆ ಮಾಲೀಕರು ಒತ್ತಡ ಹೇರಬಾರದು ಎಂದೂ ಸಚಿವರು ಸೂಚಿಸಿದರು.

‘ನೇರವಾಗಿ ಊಟದ ಪೊಟ್ಟಣ ಹಂಚದಿರಿ’
‘ಸ್ವಯಂಸೇವಾ ಸಂಸ್ಥೆಗಳು ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವವರಿಗೆ ಊಟದ ಪೊಟ್ಟಣಗಳನ್ನು ನೇರವಾಗಿ ಹಂಚುತ್ತಿವೆ. ಆ ರೀತಿ ಮಾಡದೆ, ಹತ್ತಿರ ಪೊಲೀಸ್ ಠಾಣೆಗೆ ಅಥವಾ ಕಂದಾಯ ಅಧಿಕಾರಿ ಕಚೇರಿಗೆ ಊಟವನ್ನು ತಲುಪಿಸಿ. ಅದರ ವಿತರಣೆಗೆ ಅವರೇ ಕ್ರಮವಹಿಸಲಿದ್ದಾರೆ’ ಎಂದು ಅಶೋಕ ತಿಳಿಸಿದರು. 

‘ಪರಿಹಾರ ಕಾರ್ಯಕ್ಕೆ ದೇಣಿಗೆ ನೀಡುವವರು ಯಾವುದೇ ಖಾಸಗಿ ಖಾತೆಗಳಿಗೆ ಹಣ ಜಮೆ ಮಾಡಬೇಡಿ. ನೇರವಾಗಿ ಮುಖ್ಯಮಂತ್ರಿ ಅವರ ಪರಿಹಾರ ನಿಧಿಗೆ ನೀಡಿ’ ಎಂದು ಸಲಹೆ ನೀಡಿದರು.

**
ಕೊರೊನಾ ಸೋಂಕು ತಡೆಗಟ್ಟುವ ಕಾರ್ಯಕ್ಕೆ ನೆರವಾಗುವ ನಿಟ್ಟಿನಲ್ಲಿ ಸಚಿವನಾಗಿ ನನಗೆ ಸಿಗುವ ವೇತನವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುತ್ತೇನೆ 
-ಆರ್‌.ಅಶೋಕ, ಕಂದಾಯ ಸಚಿವ

*
ಕಾರ್ಮಿಕರಿಗೆ ಊಟ ವಸತಿ ಒದಗಿಸಲು ಸಂಸ್ಥೆಯ ಸಿಬ್ಬಂದಿಗೆ ಪಾಸ್‌ ನೀಡುತ್ತೇವೆ. ಕಾರ್ಮಿಕರು ವಿನಾಕಾರಣ ಓಡಾಡಿದರೆ ಸಂಸ್ಥೆ ವಿರುದ್ಧ ಕ್ರಮಕೈಗೊಳ್ಳುತ್ತೇವೆ.
-ಬಿ.ಎಚ್‌.ಅನಿಲ್‌ಕುಮಾರ್‌, ಬಿಬಿಎಂಪಿ ಆಯುಕ್ತ 

*
ಪಾಲಿಕೆಯ ಎಲ್ಲಾ ಸದಸ್ಯರ ಮೂರು ತಿಂಗಳ ವೇತನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲು ಕ್ರಮ ವಹಿಸಲಾಗಿದೆ. 
-ಎಂ.ಗೌತಮ್‌ ಕುಮಾರ್‌, ಮೇಯರ್‌ 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು