ಬುಧವಾರ, ಸೆಪ್ಟೆಂಬರ್ 29, 2021
20 °C

ಪ್ರಜಾವಾಣಿ ವರದಿ ಫಲಶ್ರುತಿ| ಬಿಬಿಎಂಪಿ ಜಾಹೀರಾತು ನಿಯಮ ಹಿಂಪಡೆದ ಸರ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಜಾಹೀರಾತು ಹೋರ್ಡಿಂಗ್‌ಗಳನ್ನು ಅಳವಡಿಸಲು ಅವಕಾಶ ಕಲ್ಪಿಸುವ ‘ಬಿಬಿಎಂಪಿ ಜಾಹೀರಾತು ನಿಯಮಗಳು–2021’ ಅನ್ನು ರಾಜ್ಯ ಸರ್ಕಾರ ಹಿಂಪಡೆದಿದೆ.

ಹೈಕೋರ್ಟ್‌ ಸೂಚನೆಯಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಹೋರ್ಡಿಂಗ್‌ ಅಳವಡಿಕೆ ನಿಷೇಧಿಸಿ 2018ರಲ್ಲಿ ಆದೇಶ ಹೊರಡಿಸಲಾಗಿತ್ತು. ನಿರ್ಬಂಧ ತೆರವುಗೊಳಿಸಿ, ಹೋರ್ಡಿಂಗ್‌ ಅಳವಡಿಸಲು ಅವಕಾಶ ನೀಡುವಂತೆ ಜಾಹೀರಾತು ಏಜೆನ್ಸಿಗಳು ಪಾಲಿಕೆ ಮತ್ತು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿದ್ದವು. ಅದರನ್ವಯ ನಿಯಮಗಳನ್ನು 2019ರಲ್ಲೇ ರೂಪಿಸಲಾಗಿತ್ತು.

ನಗರದಲ್ಲಿ ಮತ್ತೆ ಹೋರ್ಡಿಂಗ್‌ಗಳಿಗೆ ಹಾಗೂ ಹೊರಾಂಗಣ ಜಾಹೀರಾತುಗಳಿಗೆ ಅವಕಾಶ ಕಲ್ಪಿಸುವ ಈ ನಿಯಮಗಳಿಗೆ ಸಾರ್ವಜನಿಕರಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಹಾಗಾಗಿ ಹಿಂದಿನ ಸರ್ಕಾರಗಳು ಈ ನಿಯಮಗಳಿಗೆ ಅನುಮೋದನೆ ನೀಡಿರಲಿಲ್ಲ. ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವುದಕ್ಕೆ ಕೆಲವೇ ದಿನಗಳ ಹಿಂದೆ ಸರ್ಕಾರವು ಈ ಜಾಹೀರಾತು ನಿಯಮಗಳನ್ನು ಜಾರಿಗೆ ಅನುಮೋದನೆ ನೀಡಿತ್ತು.

ಹೋರ್ಡಿಂಗ್‌ಗಳನ್ನು ಅಳವಡಿಸಲು ಇದ್ದ ನಿರ್ಬಂಧ ತೆರವಿನ ಹಿಂದಿನ ಲೆಕ್ಕಾಚಾರ, ಅದರಿಂದ ಆಗುವ ತೊಂದರೆ, ಜಾಹೀರಾತು ಏಜೆನ್ಸಿಗಳ ಒತ್ತಡ ಹಾಗೂ ಈ ಜಾಹೀರಾತು ನಿಯಮಗಳ ಜಾರಿಯಿಂದ ಮುಂದೆ ಒದಗುವ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವ ಸಲುವಾಗಿ ‘ಪ್ರಜಾವಾಣಿ’ಯು ‘ಹೋರ್ಡಿಂಗ್‌ ಮಾಫಿಯಾಕ್ಕೆ ಮಣೆ’ ಎಂಬ ಶೀರ್ಷಿಕೆಯಡಿ ಸರಣಿ ವರದಿಗಳನ್ನು ಪ್ರಕಟಿಸಿತ್ತು.

ಆ ಬಳಿಕ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಪಾಲ್ಗೊಂಡಿದ್ದ ಏಳು ಸಚಿವರು ಕೂಡಾ ಹೊಸ ಜಾಹೀರಾತು ನಿಯಮಗಳ ಜಾರಿಯನ್ನು ವಿರೋಧಿಸಿದರು. ಹೋರ್ಡಿಂಗ್‌ ಅಳವಡಿಸಲು ಅವಕಾಶ ಕಲ್ಪಿಸುವುದನ್ನು ಬಿಜೆಪಿ ಪಾಲಿಕೆಯ ವಿರೋಧ ಪಕ್ಷದಲ್ಲಿದ್ದಾಗ ವಿರೋಧಿಸಿತ್ತು. ಈಗ ಜಾಹೀರಾತು ಏಜೆನ್ಸಿಗಳ ಪರವಾಗಿ ತೀರ್ಮಾನ ಕೈಗೊಂಡರೆ ಕೆಟ್ಟ ಸಂದೇಶ ರವಾನೆಯಾಗುತ್ತದೆ ಎಂದು ಕೆಲವು ಸಚಿವರು ಕಳವಳ ವ್ಯಕ್ತಪಡಿಸಿದ್ದರು. ಯಡಿಯೂರಪ್ಪ ಅವರು ಅಧಿಕಾರದಿಂದ ಕೆಳಗಿಳಿಯುವ ಮುನ್ನ ತರಾತುರಿಯಲ್ಲಿ  ಜಾರಿಗೊಳಿಸಿದ್ದ ಜಾಹೀರಾತು ನಿಯಮಗಳ ಅನುಷ್ಠಾನಕ್ಕೆ ಅವಕಾಶ ನೀಡಕೂಡದು ಎಂದು ಒತ್ತಾಯಿಸಿದ್ದರು.

ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಾಹೀರಾತು ನಿಯಮಗಳ ಅನುಷ್ಠಾನದ ಕುರಿತು ಮರು ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದ್ದರು. ನಗರದಲ್ಲಿ ಹೋರ್ಡಿಂಗ್‌ಗಳನ್ನು ಮತ್ತೆ ಅಳವಡಿಸಲು ಅವಕಾಶ ನೀಡದಂತೆ ತಾಕೀತು ಮಾಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು