ಸೋಮವಾರ, ಆಗಸ್ಟ್ 8, 2022
21 °C

ಗ್ರಾ.ಪಂ: ತಡರಾತ್ರಿವರೆಗೆ ಮುಂದುವರಿದ ಮತ ಎಣಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಲಹಂಕ: ಯಲಹಂಕ ತಾಲ್ಲೂಕು ವ್ಯಾಪ್ತಿಯ 14 ಗ್ರಾಮಪಂಚಾಯಿತಿಗಳ ಒಟ್ಟು 125 ಕ್ಷೇತ್ರಗಳ 298 ಸ್ಥಾನಗಳಿಗಾಗಿ ನಡೆದ ಚುನಾವಣೆಯ ಮತಎಣಿಕೆ ಕಾರ್ಯ ತಡರಾತ್ರಿಯವರೆಗೂ ಮುಂದುವರಿದಿತ್ತು.

ಮತ ಎಣಿಕೆ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದ್ದು, 266 ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಏಳು ಅಭ್ಯರ್ಥಿಗಳ ಕೊನೆಯ ಹಂತದ ಮತಎಣಿಕೆ ಕಾರ್ಯ ನಡೆದಿತ್ತು.

ಒಟ್ಟು 719 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದರು. ಈ ಪೈಕಿ 25 ಸ್ಥಾನಗಳಿಗೆ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದಂತೆ 273 ಸ್ಥಾನಗಳಿಗಾಗಿ ಚುನಾವಣೆ ನಡೆದಿತ್ತು.

ಅರಕೆರೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಬೈರಾಪುರ ಗ್ರಾಮದ ಅಭ್ಯರ್ಥಿ ಚನ್ನಪ್ಪ ಎಂಬುವರು ಕೇವಲ ಒಂದು ಮತದ ಅಂತರದಿಂದ ಜಯಗಳಿಸಿದರು. ಬಿಜೆಪಿ ಯಲಹಂಕ ಗ್ರಾಮಾಂತರ ಮಂಡಲದ ಅಧ್ಯಕ್ಷ ಹನುಮಯ್ಯ ಅವರ ಪತ್ನಿ 23 ಮತಗಳ ಅಂತರದಿಂದ ಪರಾಭವಗೊಂಡರು.

ಶೇಷಾದ್ರಿಪುರ ಪ್ರಥಮದರ್ಜೆ ಕಾಲೇಜಿನಲ್ಲಿ ಮತಎಣಿಕೆ ಕಾರ್ಯ ನಡೆಯಿತು. ತಮ್ಮ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ ಸುದ್ದಿ ತಿಳಿಯುತ್ತಿದ್ದಂತೆ, ಕೊರೊನಾ ನಿಯಮಗಳನ್ನೂ ಗಾಳಿಗೆ ತೂರಿ ಗುಂಪುಗುಂಪಾಗಿ ಸೇರಿಕೊಂಡು ಅಭ್ಯರ್ಥಿಗೆ ಹಾರಹಾಕಿ ಸಂಭ್ರಮಿಸುತ್ತಿದ್ದ ದೃಶ್ಯ ಕಂಡುಬಂದಿತು.

ಮಹಿಳಾ ಅಭ್ಯರ್ಥಿಗೆ ಐದನೇ ಬಾರಿ ಗೆಲುವು
ಹೆಸರಘಟ್ಟ:
ಗ್ರಾಮದ ಅಭ್ಯರ್ಥಿ ಅಂಜನಾದೇವಿ ಸತತ ಐದನೇ ಬಾರಿ ಗೆಲುವು ಸಾಧಿಸುವ ಮೂಲಕ ಗಮನ ಸೆಳೆದಿದ್ದಾರೆ.

2000ರಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಸ್ಪರ್ಧಿಸಿದ ಅವರು ನಿರಂತರವಾಗಿ ಗೆಲುವು ಸಾಧಿಸಿದ್ದಾರೆ. ಒಂದು ಬಾರಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದರು. ಈ ಬಾರಿ ತೀವ್ರ ಪೈಪೋಟಿ ಎದುರಿಸಿದ ಅವರು 6 ಮತಗಳ ಅಂತರದಿಂದ ಗೆಲುವನ್ನು ತಮ್ಮದಾಗಿಸಿ ಕೊಂಡಿದ್ದಾರೆ. ಅಂಜನಾದೇವಿ ಅವರ ಮಗಳು ಕೆ.ವಿದ್ಯಾ ಗ್ರಾಮದ ನಾಲ್ಕನೇ ವಾರ್ಡ್‌ನಿಂದ ಸ್ಪರ್ಧಿಸಿ 400 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಹೋಬಳಿಯ ಏಳು ಗ್ರಾಮ ಪಂಚಾಯಿತಿಗಳಲ್ಲಿ ಕಳೆದ ಸಲ ಸದಸ್ಯರಾಗಿದ್ದವರೇ ಮರು ಆಯ್ಕೆಯಾಗಿದ್ದಾರೆ. ಹೆಸರಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ವಸಂತಲಕ್ಷ್ಮೀ, ಕಸಘಟ್ಟಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಮಂಜುಳಾ ಮಹೇಂದ್ರನಾಥ ಎರಡನೇ ಬಾರಿ ಗೆಲುವು ಸಾಧಿಸಿದ್ದಾರೆ. ಹುರುಳಿಚಿಕ್ಕನಹಳ್ಳಿ, ಸೊಣೇನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷರಾಗಿದ್ದವರು ಸೋಲು ಕಂಡಿದ್ದಾರೆ.

ಅಭ್ಯರ್ಥಿಗೆ ಒಂದೂ ಮತ ಇಲ್ಲ
ದಾಬಸ್ ಪೇಟೆ: ಸೋಂಪುರ ಹೋಬಳಿಯ ಆರು ಗ್ರಾಮ ಪಂಚಾಯಿತಿಗಳ 105 ವಾರ್ಡ್‌ಗಳ ಫಲಿತಾಂಶ ಬುಧವಾರ ಹೊರಬಿದ್ದಿದ್ದು, ಹಳೆಯ ಮುಖಗಳ ಜೊತೆಗೆ ಹೊಸ ಮುಖಗಳು ಆಯ್ಕೆಯಾಗಿದ್ದಾರೆ. ಜೊತೆಗೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆ.

ಅರೆಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿಗೆ ಒಳಪಡುವ ಗೋವಿಂದಪುರ ವಾರ್ಡ್‌ನ ಅಭ್ಯರ್ಥಿ ಹಬೀಬ್ ಉಲ್ಲಾ ಎಂಬುವವರಿಗೆ ಒಂದು ಮತ ಸಹ ಬಿದ್ದಿಲ್ಲ. ಈ ವಾರ್ಡ್‌ನಿಂದ ನಾಲ್ಕು ಅಭ್ಯರ್ಥಿಗಳು ಸ್ಪರ್ಧಿಸಿದ್ದು, 129 ಮತ ಪಡೆದ ಜಬೀಉಲ್ಲಾ ಬೇಗ್ ಜಯಗಳಿಸಿದ್ದಾರೆ. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಮತಾ ಅವರ ಪತಿ ಗೋವಿಂದ ರಾಜು, ಶಿವಗಂಗೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹೊನ್ನಗಂಗಶೆಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೆಂಕಟೇಶ್ ಅವರ ಇಬ್ಬರು ಮಕ್ಕಳು, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಪುಟ್ಟಗಂಗಯ್ಯ ಅವರ ಪತ್ನಿ ಸೋತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು