‘ಜಿಬಿಎ’ ಕೇವಲ ಮಿರುಗುಟ್ಟುವ ಪುಸ್ತಕವಾಗಿರದೆ ಬೆಂಗಳೂರಿಗರನ್ನು ಹಲವು ದಶಕಗಳಿಂದ ಕಾಡುತ್ತಿರುವ ಪಾದಚಾರಿ ಮಾರ್ಗದ ಒತ್ತುವರಿ ತೆರವು, ಕಸದ ಸಮಸ್ಯೆ ನಿವಾರಣೆ, ಮಳೆ ನೀರು ಕಾಲುವೆ ಸುಧಾರಿಸುವಂತಹ ಆಡಳಿತ ವ್ಯವಸ್ಥೆಯಾಗಬೇಕು. ಐಟಿ ಕಂಪನಿಗಳಿಂದ ‘ನಾಗರಿಕ ಸ್ನೇಹಿ’ ಸೇವಾ ಸೌಲಭ್ಯಗಳನ್ನು ಪಡೆದು ರಾಷ್ಟ್ರೀಕೃತ ಹಾಗೂ ಪ್ರತಿಷ್ಠಿತ ಬ್ಯಾಂಕುಗಳಲ್ಲಿರುವಂತೆ ‘ಕೋರ್ ಬ್ಯಾಂಕಿಂಗ್ ಸಲ್ಯೂಷನ್ (ಸಿಬಿಎಸ್)’ ಮಾದರಿಯಲ್ಲಿ ‘ಜಿಬಿಎ’ ಸೇವೆ ಒದಗಿಸಬೇಕು. ಆಗ ‘ಜಿಬಿಎ’ಗೂ ಸರ್ಕಾರಕ್ಕೂ ಕೀರ್ತಿ. ಬಿಬಿಎಂಪಿಯಂತೆ ನಾಗರಿಕರನ್ನು ಮೂಲೆಯಿಂದ ಮೂಲೆಗೆ ಅಲೆಸಿದರೆ ‘ಜಿಬಿಎ’ ಸ್ಥಾಪನೆ ಉದ್ದೇಶ ಈಡೇರದೇ ಪ್ರಭಾವಿಗಳಿಗೆ ರಿಯಲ್ ಎಸ್ಟೇಟ್ ಸಂಸ್ಥೆ ಆಗಲಿದೆ.ಬಿ. ರಮೇಶ್, ಉತ್ತರಹಳ್ಳಿ
ಬೃಹತ್ ಬೆಂಗಳೂರು ಹೋಗಿ ಗ್ರೇಟರ್ ಬೆಂಗಳೂರು ಎಂದು ಆಗುವುದಾದರೆ ಬೃಹತ್ ಮತ್ತು ಗ್ರೇಟರ್‌ನ ಅರ್ಥದಲ್ಲಿ ಏನು ವ್ಯತ್ಯಾಸವಿದೆ? ಪರಭಾಷಿಕರನ್ನು ಒಲಿಸಲು ಈ ಪದ ಬಳಸಿದಂತಿದೆ. ‘ಗ್ರೇಟರ್’ ಆಗಬೇಕಿದ್ದರೆ ಎಲ್ಲ ಕೆಲಸಗಳು ಗ್ರೇಟ್ ಆಗಿರಬೇಕು. ನಗರದ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಗುಂಡಿಗಳು ಬಿದ್ದಿವೆ. ಒಂದು ದಿನ ಡಾಂಬರು ಹಾಕುತ್ತಾರೆ. ಮರುದಿನ ಇನ್ನೊಂದು ಕಾಮಗಾರಿ ಎಂದು ರಸ್ತೆ ಅಗೆಯುತ್ತಾರೆ. ಸಣ್ಣ ಕೆಲಸಕ್ಕೂ ಕಚೇರಿಗಳಲ್ಲಿ ಗಂಟೆಗಟ್ಟಲೆ ಕಾಯಿಸುತ್ತಾರೆ. ಜಿಬಿಎ ಬಂದಮೇಲಾದರೂ ಈ ಪರಿಸ್ಥಿತಿಗಳು ಬದಲಾಗಲಿ.ಎಂ.ಕಿತ್ತೀಶ್, ಶಿವರಾಮ ಕಾರಂತ ನಗರ ಎಂಸಿಇಸಿಎಚ್‌ಎಸ್ ಬಡಾವಣೆ
ಬಿಬಿಎಂಪಿ ಹೋಗಿ ಜಿಬಿಎ ಆಗಿದೆ. ಆಡಳಿತ ವ್ಯವಸ್ಥೆ ಬಿಬಿಎಂಪಿಯಲ್ಲೇ ಉಳಿದಿದೆ. ನಗರದಲ್ಲಿ ಬಹುತೇಕ ಕೆರೆಗಳು, ರಾಜ ಕಾಲುವೆಗಳು ಮಾಯವಾಗಿ ಮಳೆಗಾಲದಲ್ಲಿ ಜನ ಮನೆ ಬಿಟ್ಟು ಹೊರಬರುವ ಪರಿಸ್ಥಿತಿ ಇದೆ. ಕೆಲವು ಕಡೆ ವಿಪರೀತ ಸಂಚಾರ ದಟ್ಟಣೆಯಿಂದಾಗಿ ಜನರು ರೋಸಿಹೋಗಿದ್ದಾರೆ. ಕಸದ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಇವೆಲ್ಲ ಸರಿ ಹೋಗಬೇಕು. ಕಚೇರಿಗಳಲ್ಲಿ ದುಡ್ಡು ಕೊಟ್ಟರೆ ಮಾತ್ರ ಕೆಲಸ ಎಂಬ ಪರಿಸ್ಥಿತಿ ಬದಲಾಗುವ ಲಕ್ಷಣ ಕಾಣುತ್ತಿಲ್ಲ. ಇಂಥ ಕಾನೂನುಬಾಹಿರ ಕೃತ್ಯಗಳಿಗೆ ಕಡಿವಾಣ ಹಾಕಬೇಕು. ಸಿಂಗಪುರ, ಇಸ್ರೇಲ್‌ನಂತಹ ದೇಶಗಳಲ್ಲಿ ಆಗಿರುವ ಅಭಿವೃದ್ಧಿಯನ್ನು ಅಧ್ಯಯನ ಮಾಡಿ ವೈಜ್ಞಾನಿಕ ರೀತಿಯಲ್ಲಿ ಜಿಬಿಎ ಕೆಲಸ ಮಾಡಲು ಪಣ ತೊಡಬೇಕು. ಕೇವಲ ಹೆಸರು ಬದಲಾವಣೆ ಮಾಡಿ ಅಭಿವೃದ್ಧಿ ಆಗದೇ ಹೋದರೆ ‘ಹೊಸ ಬಾಟಲಿಯಲ್ಲಿ ಹಳೇ ಮದ್ಯ’ ಅನ್ನುವ ಗಾದೆ ಮಾತಿನಂತೆ ಆಗಲಿದೆ.ಡಿ. ಪ್ರಸನ್ನಕುಮಾರ್, ಎಲ್‌ಐಸಿ ಕಾಲೊನಿ
ಜಿಬಿಎಗೆ ಎಲ್ಲ ಇಲಾಖೆಗಳನ್ನು ಒಂದೇ ಸೂರಿನಡಿ ಸೇರಿಸಬೇಕು. ಆಗ ಅಧಿಕಾರಿಗಳು ಜವಾಬ್ದಾರಿಯನ್ನು ಒಬ್ಬರ ಮೇಲೆ ಒಬ್ಬರು ಹಾಕಿ ನುಣುಚಿಕೊಳ್ಳುವುದು ನಿಲ್ಲಲಿದೆ. ರಸ್ತೆಗಳನ್ನು ಅಗೆದು ಹಾಳು ಮಾಡಿ ನಮ್ಮ ತೆರಿಗೆ ಹಣ ಪೋಲಾಗುವುದನ್ನು ತಡೆಯಬೇಕು. ಮನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಒಂದೇ ಕಡತದಲ್ಲಿ ಏಕ ಗವಾಕ್ಷಿಯಲ್ಲಿ ಅನುಮತಿಗಳು ದೊರೆಯುವಂತೆ ಮಾಡಬೇಕು. ಸಂಚಾರ ದಟ್ಟಣೆಯಾಗದಂತೆ ಮುಂದಿನ 30 ವರ್ಷಗಳ ಚಿಂತನೆಯುಳ್ಳ ಯೋಜನೆಯನ್ನು ರೂಪಿಸಬೇಕು. ವ್ಯಾಪ್ತಿ ವಿಸ್ತರಿಸುತ್ತಿರುವುದರಿಂದ ಕಸ ವಿಲೇವಾರಿಗೆ ಸರಿಯಾದ ಪರಿಹಾರ ಕಂಡುಕೊಳ್ಳಬೇಕು. ಗ್ರೇಟರ್ ಬೆಂಗಳೂರು ನಿಜವಾಗಲೂ ಗ್ರೇಟ್ ಆಗಲು ಸರ್ಕಾರವೂ ಕೆಲಸ ಮಾಡಬೇಕು. ಸಾರ್ವಜನಿಕರೂ ಸಹಕಾರ ನೀಡಬೇಕು.ಸಿ. ಮುರಳಿಧರ್, ವೆಂಕಟಾಲ, ಯಲಹಂಕ
‘ಗ್ರೇಟರ್ ಬೆಂಗಳೂರು ಪ್ರದೇಶ’ ಘೋಷಣೆಯಾಗಿರುವುದು ಸಂತೋಷದ ಸಂಗತಿ. ಎಲ್ಲ ಆಯಾಮಗಳಿಂದಲೂ ಅಭಿವೃದ್ಧಿ ಕಾರ್ಯಗಳು ನಡೆಯಬೇಕು. ನಿಯಮಗಳು ಸರಿಯಾದ ರೀತಿಯಲ್ಲಿ ಜಾರಿಗೊಂಡು ವಿಶ್ವದಲ್ಲಿ ಮಟ್ಟದಲ್ಲಿ ಗ್ರೇಟರ್ ಬೆಂಗಳೂರು ಎಂದು ಕರೆಸಿಕೊಳ್ಳುವ ರೀತಿಯಲ್ಲಿ ಹೊರ ಹೊಮ್ಮಿದರೆ ಸಾಕು. ನಂತರ ಮುಂದೇನಾಗಬೇಕು ಎಂಬುದರ ಬಗ್ಗೆ ಚಿಂತಿಸೋಣ.ಎಚ್. ದೊಡ್ಡ ಮಾರಯ್ಯ, ಸಂತೃಪ್ತಿ ನಗರ,
ಜಿಬಿಎ ಆಯ್ತು, ಮುಂದೇನು–ಇದೊಂದು ಯಕ್ಷ ಪ್ರಶ್ನೆ. ಉತ್ತರ ಶೂನ್ಯ. ಬಿಬಿಎಂಪಿ ರಚನೆಯಾಗಿ ದಶಕಗಳಾದರೂ ಜನ ಸಾಮಾನ್ಯರ ಕಷ್ಟಗಳು ನೀಗಿವೆಯೇ? ಹೆಸರು ಬದಲಾವಣೆ ಆಗಿದೆ ಅಷ್ಟೇ. ಆದರೆ ಅಧಿಕಾರ ನಡೆಸುವವರ, ಅಧಿಕಾರಿಗಳ ಕಾರ್ಯವೈಖರಿ ಬದಲಾಗುವುದೇ? ಅನಧಿಕೃತ ಕೇಬಲ್ ತೆರವುಗೊಳಿಸಿ ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿರುವುದು ಇಂದು ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಇದೇ ನಿತ್ಯದ ಗೋಳಾಗಿದೆ. ಜನ ಎಚ್ಚೆತ್ತಿಕೊಳ್ಳುವರೆಗೆ ಇದೇ ಪರಿಸ್ಥಿತಿ ಮುಂದುವರಿಯಲಿದೆ.ಎಂ.ಎನ್. ಅನಂತಮೂರ್ತಿ, ಅಕ್ಷಯ ನಗರ
ಬೆಂಗಳೂರು ಮಹಾನಗರವು ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದೆ. ಹಿಂದೆ ನಗರಕ್ಕೆ ಸೇರಿಸಿರುವ ಪ್ರದೇಶಗಳಿಗೆ ಇನ್ನೂ ನೀರು ಸರಬರಾಜು ವ್ಯವಸ್ಥೆ ಸರಿಯಾಗಿಲ್ಲ. ಇದನ್ನೆಲ್ಲ ಸರಿಪಡಿಸುವವರೆಗೆ ಗ್ರೇಟರ್ ಬೆಂಗಳೂರು ಪ್ರದೇಶಕ್ಕೆ ಬೇರೆ ಹಳ್ಳಿಗಳನ್ನು ಸೇರಿಸಬಾರದು.ಚಂದ್ರಶೇಖರ್ ಟಿ.ಎ., ತೋಟಗೆರೆ
ಜಿಬಿಎ ಆಯ್ತು: ಮುಂದೇನಾಗಬೇಕು ‘ಗ್ರೇಟರ್ ಬೆಂಗಳೂರು ಪ್ರದೇಶ’ ಘೋಷಣೆಯಾಗಿದೆ. ಮುಂದೆ ಏನಾಗಬೇಕು? ಪ್ರತಿಕ್ರಿಯಿಸಿ. ಮಾಹಿತಿ ಸಂಕ್ಷಿಪ್ತವಾಗಿರಲಿ.ಜೊತೆಗೆ ವಿಳಾಸ ಭಾವಚಿತ್ರವಿರಲಿ. ವ್ಯಾಟ್ಸ್‌ಆ್ಯಪ್ ಸಂಖ್ಯೆ: 9606038256
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.