ಶುಕ್ರವಾರ, ಏಪ್ರಿಲ್ 23, 2021
32 °C
ಮೇಕೆದಾಟು ಅಣೆಕಟ್ಟು ಯೋಜನೆಗೆ ವಿರೋಧ: ವನ್ಯಸಂಪತ್ತು ನಾಶ ಭೀತಿ

ಅಣೆಕಟ್ಟೆಯಿಂದ ಅಳಿಲಿಗೆ ಅಳಿವಿನ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕಾವೇರಿ ವನ್ಯಧಾಮಕ್ಕೆ ಹೊಂದಿಕೊಂಡಿರುವ ಮೇಕೆದಾಟು ಬಳಿ ಅಣೆಕಟ್ಟು ನಿರ್ಮಿಸಲು ಮುಂದಾಗಿರುವ ರಾಜ್ಯಸರ್ಕಾರದ ನಿರ್ಧಾರಕ್ಕೆ ವನ್ಯಜೀವಿ ತಜ್ಞರು ಮತ್ತು ಪ್ರಾಣಿ ಅರಿವು ಸಂಶೋಧಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಅಣೆಕಟ್ಟು ಯೋಜನೆಯಿಂದ ಬೆಟ್ಟಳಿಲುಗಳ ಸಂತತಿಗೆ ಮತ್ತು ಕಾಡಿನ ಪರಿಸರ ವ್ಯವಸ್ಥೆಗೆ ಕಂಟಕ ಎದುರಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

‘ರಾಜ್ಯದಲ್ಲೇ ಹೆಚ್ಚು ವಿಸ್ತೀರ್ಣ ಹೊಂದಿರುವ ವನ್ಯಧಾಮ ಎಂಬ ಖ್ಯಾತಿ ಪಡೆದುಕೊಂಡಿರುವ ಕಾವೇರಿ ಅಭಯಾರಣ್ಯ, 1,027 ಚ.ಮೀ. ವ್ಯಾಪ್ತಿಯಲ್ಲಿ ಹರಡಿಕೊಂಡಿದ್ದು ವೈವಿಧ್ಯಮಯ ಜೀವಸಂಕುಲಗಳನ್ನು ತನ್ನೊಳಗೆ ಇರಿಸಿಕೊಂಡಿದೆ.  ಬೆಟ್ಟಳಿಲು ಅಥವಾ ನಸು ಬೂದು ಬಣ್ಣದ ದೈತ್ಯ ಅಳಿಲು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿದ್ದು, ಅವುಗಳು ಅಪಾಯದ ಅಂಚಿನಲ್ಲಿವೆ’ ಎಂದು ಪ್ರಾಣಿ ಅರಿವು ಸಂಶೋಧಕ ಯೋಗಾನಂದ್‌ ಚಂದ್ರಯ್ಯ ಆತಂಕ ವ್ಯಕ್ತಪಡಿಸಿದರು. ಇವರು ನಿಸರ್ಗ ಸಂರಕ್ಷಣೆಯ ಅಂತರರಾಷ್ಟ್ರೀಯ ಒಕ್ಕೂಟದ (ಐಯುಸಿಎನ್‌) ಸದಸ್ಯರೂ ಆಗಿದ್ದಾರೆ.

‘ಅಭಯಾರಣ್ಯದಿಂದ 100 ಕಿ.ಮೀ ದೂರದಲ್ಲಿರುವ ಬೆಂಗಳೂರು ನಗರಕ್ಕೆ ನೀರು ಪೂರೈಸುವ ಸಲುವಾಗಿ ರಾಜ್ಯ ಸರ್ಕಾರವು ಪ್ರಸ್ತಾಪಿಸಿರುವ ಮೇಕೆದಾಟು ಅಣೆಕಟ್ಟು ಯೋಜನೆಯು ಕಾವೇರಿ ವನ್ಯಧಾಮ ವಿನಾಶದ ಮುನ್ಸೂಚನೆಯಾಗಿದೆ. ಒಂದು ವೇಳೆ ರಾಜ್ಯ ಸರ್ಕಾರವು ಕಾಡಿನ ಹೃದಯ ಭಾಗದಲ್ಲಿರುವ ಮೇಕೆದಾಟು ಪ್ರದೇಶದಲ್ಲಿ ಅಣೆಕಟ್ಟು ನಿರ್ಮಿಸಲು ಮುಂದಾದರೆ, ಅದರ ಪರಿಣಾಮ 2925.5 ಹೆಕ್ಟರ್ ನಷ್ಟು ಅರಣ್ಯ ಪ್ರದೇಶವು ಜಲಾಹುತಿಯಾಗಲಿದ್ದು,1 ಲಕ್ಷಕ್ಕೂ ಹೆಚ್ಚು ಬೃಹತ್ ಮರಗಳು ನೀರು ಪಾಲಾಗಲಿವೆ’ ಎಂದು ಅವರು ಹೇಳಿದ್ದಾರೆ.

‘ಅತ್ಯಂತ ನಾಚಿಕೆ ಮತ್ತು ಚುರುಕು ಸ್ವಭಾವದ ಬೆಟ್ಟಳಿಲುಗಳು ಸುಲಭವಾಗಿ ಕಾಣಸಿಗದು. ಆದರೆ, ಈ ವನ್ಯಧಾಮದಲ್ಲಿ ಇಂತಹ ಹಲವು ಅಳಿಲುಗಳು ಕಾಣಸಿಗುತ್ತವೆ. ಹೆಚ್ಚಾಗಿ ಹಗಲಿನಲ್ಲಿ ಸಕ್ರಿಯವಾಗಿರುವ ಇವು ಮರಗಳಲ್ಲಿಯೇ ಹೆಚ್ಚಿನ ಸಮಯ ಕಳೆಯುತ್ತವೆ. ನದಿ ಬಯಲಿನ ಐವತ್ತು ಮೀಟರ್ ಅಂತರದಲ್ಲಿರುವ ಬೃಹದಾಕಾರದ ಮರಗಳೇ ಇವುಗಳ ಪ್ರಮುಖ ಆವಾಸಸ್ಥಾನ. ಅದರೆ ಅಭಿವೃಧಿಯ ಹೆಸರಿನಲ್ಲಿ ನಡೆಯುತ್ತಿರುವ ಅರಣ್ಯನಾಶದಿಂದಾಗಿ ಇವುಗಳ ಸಂಖ್ಯೆಯು ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

‘ಮೇಕೆದಾಟು ಅಣೆಕಟ್ಟು ಯೋಜನೆಯು ಕೇವಲ ಬೆಟ್ಟಳಿಲುಗಳು ಮಾತ್ರವಲ್ಲದೆ ಇಲ್ಲಿನ ಎಲ್ಲ ಅಪರೂಪದ ಜೀವಿಗಳನ್ನು ಮುಳುಗಿಸುವ ಯೋಜನೆಯಾಗಲಿದೆ. ಈಗಾಗಲೇ ಕುಸಿದಿರುವ ಕಾಡಿನ ಗುಣಮಟ್ಟಕ್ಕೆ ತತ್ತರಿಸಿ ಹೋಗಿರುವ ವನ್ಯಪ್ರಾಣಿಗಳು ಕಾಡಿನಿಂದ ನಾಡಿಗೆ ಧಾವಿಸುತ್ತಿವೆ. ಇದರಿಂದಾಗಿ ಮಾನವ ಮತ್ತು ಪ್ರಾಣಿಗಳ ನಡುವಿನ ಸಂಘರ್ಷ ಮತ್ತಷ್ಟು ಹೆಚ್ಚಾಗುತ್ತದೆ’ ಎಂದು ಯೋಗಾನಂದ್ ಆತಂಕ ವ್ಯಕ್ತಪಡಿಸಿದ್ದಾರೆ.

ಮೇಕೆದಾಟು ಅಣೆಕಟ್ಟು ಯೋಜನೆ ವಿವರ
₹9,000 ಕೋಟಿ: 
ಯೋಜನೆಯ ವೆಚ್ಚ
67.16 ಟಿಎಂಸಿ ಅಡಿ: ಅಣೆಕಟ್ಟೆಯ ಸಂಗ್ರಹಣಾ ಸಾಮರ್ಥ್ಯ
400 ಮೆಗಾವಾಟ್‌: ವಾರ್ಷಿಕ ವಿದ್ಯುತ್‌ ಉತ್ಪಾದನೆ
4,996 ಹೆಕ್ಟರ್‌: ಮುಳುಗಡೆಯಾಗಲಿರುವ ಭೂ ವಿಸ್ತೀರ್ಣ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು