ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರ್ಷಿತಾ ಮನೆಯಲ್ಲಿ ಚಿನ್ನ ಜಪ್ತಿ

ಕೊಲೆಯಾದ ಪತ್ನಿಯ ಆಭರಣವನ್ನು ಕೊರಿಯರ್ ಮಾಡಿದ್ದ ದಂತವೈದ್ಯ
Last Updated 25 ಫೆಬ್ರುವರಿ 2020, 20:20 IST
ಅಕ್ಷರ ಗಾತ್ರ

ಬೆಂಗಳೂರು/ಕಡೂರು: ರಾಜರಾಜೇಶ್ವರಿನಗರದಲ್ಲಿ ಇದೇ 22ರಂದು ಆತ್ಮಹತ್ಯೆ ಮಾಡಿಕೊಂಡಿದ್ದ ಹರ್ಷಿತಾ (34) ಅವರ ಮನೆಯನ್ನು ಮಂಗಳವಾರ ಶೋಧ ನಡೆಸಿದ ಚಿಕ್ಕಮಗಳೂರು ಜಿಲ್ಲೆಯ ಕಡೂರು ಠಾಣೆ ಪೊಲೀಸರು ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ದಂತ ವೈದ್ಯ ರೇವಂತ್‌ ಎಂಬುವರು ಆತ್ಮಹತ್ಯೆಗೆ ಶರಣಾದ ಬೆನ್ನಲ್ಲೇ, ಅವರ ಸ್ನೇಹಿತೆ ಹರ್ಷಿತಾ ಸಹ ಆತ್ಮಹತ್ಯೆ ಮಾಡಿಕೊಂಡಿದ್ದರು. ಎರಡೂ ಪ್ರಕರಣಕ್ಕೂ ಸಂಬಂಧವಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಕಡೂರು ಪೊಲೀಸರು ಈ ಶೋಧ ಕಾರ್ಯ ನಡೆಸಿದರು.

ತಮ್ಮ ಪತ್ನಿ ಕವಿತಾ ಅವರನ್ನು ರೇವಂತ್‌ ಅವರೇ ಕೊಲೆ ಮಾಡಿರುವ ಆರೋಪವಿದೆ. ಆ ಪ್ರಕರಣದಲ್ಲಿ ಪೊಲೀಸರು ತಮ್ಮನ್ನು ಬಂಧಿಸುತ್ತಾರೆಂದು ಹೆದರಿ ರೇವಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

‘ಕವಿತಾ ಕೊಲೆಯಾದ ದಿನವೇ ಅವರ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ರೇವಂತ್, ಬೆಂಗಳೂರಿನಲ್ಲಿದ್ದ ಹರ್ಷಿತಾಗೆ ಕೊರಿಯರ್ ಮಾಡಿದ್ದ. ಮೊಬೈಲ್‌ಗೆ ಕರೆ ಮಾಡಿ ಕೊರಿಯರ್‌ ಕಳುಹಿಸಿರುವುದಾಗಿಯೂ ತಿಳಿಸಿದ್ದ’ ಎಂದು ಕಡೂರು ಪೊಲೀಸರು ಹೇಳಿದರು.

‘ಕೊರಿಯರ್ ಕಳುಹಿಸಿದ ಮರುದಿನವೇ ರೇವಂತ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸುದ್ದಿ ತಿಳಿದು ಹರ್ಷಿತಾ ಸಹ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇವರಿಬ್ಬರು ಸ್ನೇಹಿತರೆಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ವಿವರಿಸಿದರು.

ಇಬ್ಬರೂ ಕಡೂರಿನವರು: ‘ವೈದ್ಯ ರೇವಂತ್ ಅವರ ಕಡೂರಿನ ಮನೆಯಲ್ಲಿ ಹರ್ಷಿತಾ ಕುಟುಂಬ ಬಾಡಿಗೆಗೆ ಇತ್ತು. ಅದೇ ವೇಳೆ ಅವರಿಬ್ಬರ ನಡುವೆ ಸ್ನೇಹ ಏರ್ಪಟ್ಟಿತ್ತು. ಬಳಿಕ, ಮನೆಯವರು ಇಬ್ಬರಿಗೂ ಬೇರೆ ಬೇರೆ ಮದುವೆ ಮಾಡಿದ್ದರು. ಅದಾದ ಬಳಿಕವೂ ಅವರಿಬ್ಬರು ಕದ್ದುಮುಚ್ಚಿ ಭೇಟಿಯಾಗುತ್ತಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪತಿ ಅಮಾಯಕ ?

‘ತನ್ನ ಸಾವಿಗೆ ಪತಿ ಸುಧೀಂದ್ರ ಕಾರಣ’ ಎಂದು ಮರಣ ಪತ್ರ ಬರೆದಿಟ್ಟು ಹರ್ಷಿತಾ ಆತ್ಮಹತ್ಯೆ ಮಾಡಿಕೊಂಡಿದ್ದರು. ಅದೇ ಪತ್ರ ಆಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಪತಿ ಸುಧೀಂದ್ರ (36) ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.

‘ಬಿಎಂಟಿಸಿ ಬಸ್ ಚಾಲಕ ಸುಧೀಂದ್ರ ಅವರು ಅಮಾಯಕರು ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.ರೇವಂತ್‌ ಜೊತೆ ಸ್ನೇಹ ಹೊಂದಿದ್ದ ಹರ್ಷಿತಾ, ಈ ರೀತಿ ಮರಣಪತ್ರ ಬರೆದದ್ದು ಏಕೆ? ಎಂಬುದನ್ನು ತಿಳಿದುಕೊಳ್ಳಬೇಕಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT