ಬುಧವಾರ, ಡಿಸೆಂಬರ್ 7, 2022
22 °C
ಇ–ಹಾಸ್ಪಿಟಲ್ ಪೋರ್ಟಲ್‌ನಲ್ಲಿ ಆಯುಷ್ಮಾನ್ ಭಾರತ ಖಾತೆಯ ಐಡಿ ಲಿಂಕ್‌

ಕೆ.ಸಿ. ಜನರಲ್: ಗರಿಷ್ಠ ಆರೋಗ್ಯ ದಾಖಲಾತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಆಯುಷ್ಮಾನ್ ಭಾರತ’ ಯೋಜನೆಯಡಿ ಆರೋಗ್ಯ ಖಾತೆಯನ್ನು ಇ–ಆಸ್ಪತ್ರೆಯ ‘ಎಚ್‌ಎಂಐಎಸ್’ ಪೋರ್ಟಲ್‌ಗೆ ಲಿಂಕ್ ಮಾಡುವಲ್ಲಿ ಇಲ್ಲಿನ ಕೆ.ಸಿ. ಜನರಲ್ ಆಸ್ಪತ್ರೆ ದೇಶದಲ್ಲಿಯೇ ಮುಂಚೂಣಿಯಲ್ಲಿದ್ದು, ಈವರೆಗೆ 20,600 ಆರೋಗ್ಯ ದಾಖಲಾತಿಯನ್ನು ಲಿಂಕ್ ಮಾಡಲಾಗಿದೆ. 

ಆರೋಗ್ಯ ಖಾತೆಯನ್ನು ಇಷ್ಟು ಸಂಖ್ಯೆಯಲ್ಲಿ ದೇಶದ ಯಾವುದೇ ಆಸ್ಪತ್ರೆ ಇ–ಆಸ್ಪತ್ರೆ ಪೋರ್ಟಲ್‌ಗೆ ಜೋಡಿಸಿಲ್ಲ. ಆಸ್ಪತ್ರೆಗಳ ಈ ಪಟ್ಟಿಯಲ್ಲಿ ಜಯನಗರ ಸಾರ್ವಜನಿಕ ಆಸ್ಪತ್ರೆ ಐದನೇ ಸ್ಥಾನದಲ್ಲಿದ್ದು, 10,694 ಆರೋಗ್ಯ ದಾಖಲಾತಿಯನ್ನು ಲಿಂಕ್ ಮಾಡಿದೆ. 

ರಾಜ್ಯದಲ್ಲಿ ಈವರೆಗೆ 3.78 ಲಕ್ಷ ಆರೋಗ್ಯ ದಾಖಲಾತಿಯನ್ನು ಲಿಂಕ್ ಮಾಡಲಾಗಿದೆ. ಈ ಮೂಲಕ ರಾಜ್ಯವು ದೇಶದಲ್ಲಿಯೇ ಅಗ್ರ ಸ್ಥಾನದಲ್ಲಿದೆ. ಉಡುಪಿ ಜಿಲ್ಲಾ ಆಸ್ಪತ್ರೆ, ಸರ್.ಸಿ.ವಿ. ರಾಮನ್ ಸಾರ್ವಜನಿಕ ಆಸ್ಪತ್ರೆ, ವಿಜಯಪುರ ಜಿಲ್ಲಾ ಆಸ್ಪತ್ರೆ, ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆ, ಕೆ.ಜಿ.ಎಫ್ ತಾಲ್ಲೂಕು ಆಸ್ಪತ್ರೆ, ಶ್ರೀನಿವಾಸಪುರ ತಾಲ್ಲೂಕು ಆಸ್ಪತ್ರೆಗಳು ಉತ್ತಮ ಸಾಧನೆ ಮಾಡಿವೆ. 

‘ಆರೋಗ್ಯ ದಾಖಲೆಗಳ ಡಿಜಿಟಲೀಕರಣದಿಂದ ದೇಶದ ಎಲ್ಲೆಡೆ ರೋಗಿಯ ಚಿಕಿತ್ಸಾ ಇತಿಹಾಸ ದೊರೆಯಲಿದೆ. ಇದರಿಂದ ವೈದ್ಯಕೀಯ ಸೇವೆಗಳನ್ನು ಸುಲಭವಾಗಿ ಒದಗಿಸಲು ಸಾಧ್ಯವಾಗುತ್ತದೆ. ಆಸ್ಪತ್ರೆಗಳು, ಔಷಧ ಮಳಿಗೆಗಳು ಹಾಗೂ ಪ್ರಯೋಗಾಲಯಗಳಿಗೂ ದತ್ತಾಂಶಗಳ ಡಿಜಿಟಲೀಕರಣ ನೆರವಾಗಲಿದೆ. ಆಯುಷ್ಮಾನ್ ಭಾರತ–ಆರೋಗ್ಯ ಕರ್ನಾಟಕ ಯೋಜನೆಯಡಿ ರಾಜ್ಯದಲ್ಲಿ 5.10 ಕೋಟಿ ಜನರಿಗೆ ವೈದ್ಯಕೀಯ ಸೇವೆ ದೊರೆಯಲಿದೆ’ ಎಂದು ಇಲಾಖೆಯ ಆಯುಕ್ತ ಡಿ. ರಂದೀಪ್ ತಿಳಿಸಿದರು. 

ಎಲ್ಲರಿಗೂ ಕಾರ್ಡ್ ಗುರಿ: ‘‍ಯೋಜನೆಯಡಿ ಬಿಪಿಎಲ್ ಕುಟುಂಬಗಳಿಗೆ ವಾರ್ಷಿಕ ₹ 5 ಲಕ್ಷದವರೆಗೆ ಆರೋಗ್ಯ ವಿಮೆ ಹಾಗೂ ಎಪಿಎಲ್ ಕುಟುಂಬಗಳಿಗೆ ₹ 1.50 ಲಕ್ಷದವರೆಗೆ ವೈದ್ಯಕೀಯ ನೆರವು ಉಚಿತವಾಗಿ ದೊರೆಯಲಿದೆ. ಪ್ರಾಥಮಿಕ ಹಂತದ ಚಿಕಿತ್ಸೆಗಳನ್ನು ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡಲಾಗುತ್ತದೆ. ಸಂಕೀರ್ಣ ಮತ್ತು ತೀವ್ರತರ ಕಾಯಿಲೆಗಳಿಗೂ ಚಿಕಿತ್ಸೆ ಒದಗಿಸಲಾಗುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸೌಲಭ್ಯಗಳು ಲಭ್ಯವಿಲ್ಲದಿದ್ದರೆ ರೋಗಿಯ ಆಯ್ಕೆಯ ಹತ್ತಿರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ’ ಎಂದು ಡಿ. ರಂದೀಪ್ ಹೇಳಿದರು. 

‘ಡಿಸೆಂಬರ್ ಅಂತ್ಯದ ವೇಳೆಗೆ ರಾಜ್ಯದ ಎಲ್ಲರಿಗೂ ಆರೋಗ್ಯ ಕಾರ್ಡ್‌ಗಳನ್ನು ವಿತರಿಸುವ ಗುರಿ ಹೊಂದಲಾಗಿದೆ. ಈ ಕಾರ್ಡ್‌ ಹೊಂದಿದ್ದಲ್ಲಿ ದೇಶದಾದ್ಯಂತ ಸುಲಭವಾಗಿ ವೈದ್ಯಕೀಯ ಸೇವೆಗಳನ್ನು ಪಡೆಯಬಹುದು. ಈ ಹಿಂದೆ ನೀಡಲಾದ ಚಿಕಿತ್ಸೆಯ ದತ್ತಾಂಶವೂ ದೊರೆಯುತ್ತದೆ. ರೋಗಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಆನ್‌ಲೈನ್ ಮೂಲಕವೇ ಮೆಲ್ದರ್ಜೆಯ ಆಸ್ಪತ್ರೆಗೆ ರೆಫರ್‌ ಮಾಡಲು ಈ ಕಾರ್ಡ್ ಸಹಕಾರಿಯಾಗಲಿದೆ’ ಎಂದು ವಿವರಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು