ಭಾನುವಾರ, ಜುಲೈ 3, 2022
27 °C

ಆರೋಗ್ಯ ಸಚಿವ ಸುಧಾಕರ್‌ ರಾಜೀನಾಮೆಗೆ ಎಎಪಿ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಆರೋಗ್ಯ ಇಲಾಖೆ ಯಲ್ಲಿ ನಿರಂತರವಾಗಿ ಭ್ರಷ್ಟಾಚಾರ ನಡೆಯುತ್ತಿದ್ದು, ಆರೋಗ್ಯ ಸಚಿವ ಕೆ.ಸುಧಾಕರ್‌ ಕೂಡಲೇ ರಾಜೀನಾಮೆ ನೀಡಬೇಕು. ಭ್ರಷ್ಟಾಚಾರದ ತನಿಖೆಗೆ ರಾಜ್ಯ ಪಾಲರು ಆದೇಶ ಮಾಡಬೇಕು’ ಎಂದು ಆಮ್‌ ಆದ್ಮಿ ಪಕ್ಷ (ಎಎಪಿ) ಆಗ್ರಹಿಸಿದೆ.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿ ಕಾನೂನು ಘಟಕದ ಅಧ್ಯಕ್ಷ ನಂಜಪ್ಪ ಕಾಳೇಗೌಡ, ‘ಆರೋಗ್ಯ ಇಲಾಖೆಯ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ ನೇಮಕಾತಿ, ಬಡ್ತಿ ಹಾಗೂ ವರ್ಗಾವಣೆಯಲ್ಲಿ ಭ್ರಷ್ಟಾಚಾರ ಅವ್ಯಾಹತವಾಗಿ ನಡೆಯುತ್ತಿದೆ. ವೈದ್ಯಕೀಯ ಮಹಾವಿದ್ಯಾಲಯ, ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಸೇವೆ ಪಡೆಯಲು ರೋಗಿಗಳು ಲಂಚ ನೀಡಬೇಕಾಗಿದೆ’ ಎಂದು ಆರೋಪಿಸಿದರು.

‘ಕೋವಿಡ್‌ ಸಂದರ್ಭದಲ್ಲಿ ವೈದ್ಯಕೀಯ ಉಪಕರಣ ಹಾಗೂ ಔಷಧಿ ಖರೀದಿಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಿ ಸಾರ್ವಭೌಮ ಬಗಲಿ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಆದರೆ ಈ ಬಗ್ಗೆ ತನಿಖೆ ನಡೆಯ ದಿರುವುದು ದುರದೃಷ್ಟಕರ. ಈ ಗಂಭೀರ ವಿಚಾರದ ಬಗ್ಗೆ ತನಿಖೆ ನಡೆದರೆ, ಆರೋಗ್ಯ ಇಲಾಖೆಯ ಕೋಟ್ಯಂತರ ರೂಪಾಯಿ ಅವ್ಯವಹಾರ ಬಯಲಾಗುತ್ತದೆ’ ಎಂದರು.

ಕಾರ್ಮಿಕ ಘಟಕದ ಅಧ್ಯಕ್ಷ ರವಿಶಂಕರ್‌, ‘ಸಚಿವ ಸುಧಾಕರ್ ಹಾಗೂ ಅಧಿಕಾರಿಗಳ ಹಣದ ದಾಹದಿಂದ ರೋಗಿಗಳು ಜೀವ ಕಳೆದುಕೊಳ್ಳುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಯಿಂದ ರೋಗಿಯ ಶವ ಹೊರಗೊಯ್ಯಲೂ ಲಂಚ ನೀಡಬೇಕು. ಆರೋಗ್ಯ ಇಲಾಖೆಯ ಟೆಂಡರ್‌ ಪ್ರಕ್ರಿಯೆಗಳಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ. ಆದರೆ, ಯಾರ ವಿರುದ್ಧವೂ ತನಿಖೆ ನಡೆಯುತ್ತಿಲ್ಲ. ಭ್ರಷ್ಟ ಸಚಿವರಿಂದಾಗಿ ಇಡೀ ಇಲಾಖೆಯೇ ಭ್ರಷ್ಟವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು