ಮಂಗಳವಾರ, ಫೆಬ್ರವರಿ 18, 2020
23 °C

ಹೃದಯ ಸಮಸ್ಯೆ: ನಾಲ್ಕು ವರ್ಷದ ಬಾಲಕನಿಗೆ ಕಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹೃದಯ ಸಮಸ್ಯೆ ಎದುರಿಸುತ್ತಿದ್ದ ನಾಲ್ಕು ವರ್ಷದ ಬಾಲಕನಿಗೆ ನಗರದ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಹೃದಯ ಕಸಿ ಮಾಡಿದ್ದಾರೆ.

ಕೊಲ್ಕತ್ತದ ಬಾಲಕ ಚಹಲ್ ಪಟ್ವಾರಿ ಎಂಬಾತ ಡಿಲೇಟೆಡ್ ಕಾರ್ಡಿಯೊಮಿಯೋಪತಿ (ಹೃದಯವು ದೊಡ್ಡದಾಗುವ ಜತೆಗೆ ರಕ್ತವನ್ನು ಕ್ರಮವಾಗಿ ಪಂಪ್ ಮಾಡಲು ಸಾಧ್ಯವಾಗದಿರುವುದು) ಸಮಸ್ಯೆಯಿಂದ ಎರಡು ವರ್ಷಗಳಿಂದ ಬಳಲುತ್ತಿದ್ದ. ಆತನಿಗೆ ಆಹಾರ ಸೇವನೆಯೂ ಕಷ್ಟವಾಗಿತ್ತು. ಬಾಲಕನನ್ನು ನಾರಾಯಣ ಹೆಲ್ತ್‌ ಸಿಟಿ ಆಸ್ಪತ್ರೆಗೆ ಪೋಷಕರು ದಾಖಲಿಸಿದ್ದರು. ಮಕ್ಕಳ ಹೃದ್ರೋಗ ಸಲಹಾ ತಜ್ಞ ಡಾ.ಶಶಿರಾಜ್ ಸುಬ್ರಹ್ಮಣ್ಯ ನೇತೃತ್ವದ ವೈದ್ಯರ ತಂಡ ಬಾಲಕನಿಗೆ ಹೃದಯ ಕಸಿಗೆ ಸೂಚಿಸಿತ್ತು.

2019ರ ಫೆಬ್ರುವರಿ ತಿಂಗಳಲ್ಲಿ ಅಂಗಾಂಗ ಕಸಿಗೆ ಜೀವಸಾರ್ಥಕತೆ ಯೋಜನೆಯಡಿ ಬಾಲಕನ ಹೆಸರನ್ನು ಪೋಷಕರು ನೋಂದಾಯಿಸಿದ್ದರು. ಬಾಲಕನಿಗೆ ಹೃದಯ ನೀಡಿದ ವ್ಯಕ್ತಿ 45 ವರ್ಷದವರಾಗಿದ್ದು, ಅವರು ಮಿದುಳು ರಕ್ತ ಸ್ರಾವದಿಂದ ಬಳಲುತ್ತಿದ್ದರು. ಹೆಬ್ಬಾಳದ‌ ಆಸ್ಟರ್ ಸಿಎಂಐ ಆಸ್ಪತ್ರೆಗೆ ದಾಖಲಿಸಲಾಗಿತ್ತು. 2019ರ ಡಿ.21ರಂದು ಅವರ ಮಿದುಳು ನಿಷ್ಕ್ರಿಯ ಗೊಂಡಿರುವುದನ್ನು ವೈದ್ಯರು ಪ್ರಕಟಿಸಿದರು. ಅವರ ಕುಟುಂಬ ಅಂಗಾಂಗ ದಾನಕ್ಕೆ ಒಪ್ಪಿಕೊಂಡಿತು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಡಾ.ಶಶಿರಾಜ್ ಸುಬ್ರಹ್ಮಣ್ಯ ಮಾತನಾಡಿ, ‘ರಾಜ್ಯದಲ್ಲಿ ಅತಿ ಕಿರಿಯ ವ್ಯಕ್ತಿಗೆ ಹೃದಯ ಕಸಿ ಮಾಡಿದ ಹೆಗ್ಗಳಿಕೆ ನಮ್ಮದಾಗಿದೆ. ಬಾಲಕ ನಾಲ್ಕನೇ ಹಂತದ ಹೃದಯ ವೈಫಲ್ಯದಿಂದ ಬಳಲುತ್ತಿದ್ದ. ಆತನ ಆರೋಗ್ಯ ಸ್ಥಿತಿಯನ್ನು ಸ್ಥಿರವಾಗಿಸುವುದು ಸವಾಲಾಗಿತ್ತು’ ಎಂದು ಹೇಳಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು