ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಹಾನಿ ಪ್ರದೇಶಗಳನ್ನು ಪರಿಶೀಲಿಸಿದ ಉಪಮುಖ್ಯಮಂತ್ರಿ ಜಿ. ಪರಮೇಶ್ವರ

Last Updated 27 ಮೇ 2019, 6:49 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಸಚಿವ ಜಿ. ಪರಮೇಶ್ವರ ಅವರು ವಿಜಯನಗರ, ಮಲ್ಲೇಶ್ವರ, ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆ ಪ್ರದೇಶಗಳಿಗೆ ಭೇಟಿ ನೀಡಿ ಮಳೆಯಿಂದ ಆದ ಅನಾಹುತದ ಕುರಿತು ಪರಿಶೀಲನೆ ನಡೆಸಿದರು.

ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆಯಲ್ಲಿ ಮೂರಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿದ್ದವು. ವಿಜಯನಗರಕ್ಕೆ ತೆರಳಿದ ಅವರು ರಸ್ತೆ ಬಳಿ ನೆಲಕ್ಕುರುಳಿದ ಮರಗಳನ್ನು ವೀಕ್ಷಿಸಿದರು.‌ ಇದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಆಗುತ್ತಿರುವ ಸಮಸ್ಯೆ ಆಲಿಸಿದರು.

ನೆಲಕ್ಕುರುಳಿದ ರೆಂಬೆಗಳನ್ನು ಕೂಡಲೇ ತೆರವು ಮಾಡುವಂತೆ ಸಿಬ್ಬಂದಿಗೆ ಸೂಚನೆ ನೀಡಿದರು. ಜೊತೆಗೆ ಮಳೆಯಿಂದಾಗಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿದ್ದು, ಕೂಡಲೇ ಸರಿಪಡಿಸುವಂತೆಯೂಬೆಸ್ಕಾಂ ಸಿಬ್ಬಂದಿಗೆ ಸೂಚಿಸಿದರು.

ಬಳಿಕ ಸುದ್ದಿಗಾರಜೊತೆ ಮಾತನಾಡಿದ ಅವರು, ‘ಕಳೆದ ಎರಡು ದಿನದಿಂದ ನಗರದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಿದ್ದು, 500ಕ್ಕೂ ಹೆಚ್ಚು ಮರಗಳು ಹಾನಿಯಾಗಿದೆ. 100ಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿವೆ. ರಾಜ್ಯದ ಕೆಲವೆಡೆ 120 ಮೀ.ಮೀ ಗೂ ಅಧಿಕ ಮಳೆಯಾಗಿದೆ. ಬಿರುಗಾಳಿ ಇದ್ದ ಕಾರಣ ಹೆಚ್ಚು ಮರ ನೆಲಕ್ಕುರುಳಿವೆ. ಮರಗಳ ತೆರವು, ವಿದ್ಯುತ್‌ ಸಂಪರ್ಕ ಸರಿಪಡಿಸುವುದು ಸೇರಿ ಇತರೆ ಮಳೆ ಹಾನಿ ಸರಿಪಡಿಸಲು ಬಿಬಿಎಂಪಿ, ಬೆಸ್ಕಾಂ ಸೇರಿ ಇತರೆ ಇಲಾಖೆಗಳ 61 ತಂಡಗಳು ಕೆಲಸ ಮಾಡುತ್ತಿವೆ‌. ಜೊತೆಗೆ ಬಿಬಿಎಂಪಿ ಸಹಾಯ ವಾಣಿ ಸಹಿತ ಇರುವುದರಿಂದ ಸಮಸ್ಯೆಗಳು ಕೂಡಲೇ ತಿಳಿದು ಬರುತ್ತಿದೆ’ ಎಂದರು.

ಕೆಲವೇ ದಿನಗಳಲ್ಲಿ ಮುಂಗಾರು ಮಳೆ ಪ್ರಾರಂಭವಾಗಲಿದೆ. ಅದಕ್ಕೂ ಈಗಾಗಲೇ ಬಿಬಿಎಂಪಿ ಸಿದ್ಧವಾಗಿದೆ. ಒಂದು ತಿಂಗಳು ಪೂರ್ವಭಾವಿಯಾಗಿ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳುವ ಸಂಬಂಧ ಅಧಿಕಾರಿಗಳ ಸಭೆ ಕರೆದು ಸೂಚನೆ ನೀಡಿದ್ದೆ. ಹೀಗಾಗಿ ಮಳೆಯಾದರೂ ತಗ್ಗು ಪ್ರದೇಶದಲ್ಲಿ ಪ್ರವಾಹದಂಥ ಪರಿಸ್ಥಿತಿ ಎದುರಾಗಿಲ್ಲ ಎಂದರು.

ಮರ ಬಿದ್ದಾಗ ಹೆಚ್ಚಾಗಿ ಸಮಸ್ಯೆ ಆಗುವುದು ಕೇಬಲ್‌ಗಳು ಕಡಿತವಾಗುವುದು. ಇನ್ನು ಎರಡು ತಿಂಗಳಲ್ಲಿ ಎಲ್ಲ ಕೇಬಲ್‌ಗಳ ಲೈನ್‌ಗಳನ್ನು ನೆಲದಡಿಯಲ್ಲಿ ಎಳೆಯುವ ಯೋಜನೆ ಕೈಗೆತ್ತಿಕೊಳ್ಳಲಿದ್ದೇವೆ ಎಂದರು.

ಬಳಿಕ ಮಲ್ಲೇಶ್ವರದ ಸಂಪಿಗೆ ರಸ್ತೆಯುದ್ದಕ್ಕೂ ನೆಲಕ್ಕುರುಳಿದ ಮರಗಳನ್ನು ಪರಿಶೀಲನೆ ನಡೆಸಿ ಸ್ಥಳೀಯ ಸಮಸ್ಯೆ ಕೂಡ ಆಲಿಸಿದರು.

ಭಾನುವಾರ ರಾತ್ರಿ ನಗರದ ಪ್ರಮುಖ ಪ್ರದೇಶಗಳಾದ ರಾಜಾಜಿನಗರ, ಮಲ್ಲೇಶ್ವರಂ, ಆರ್.ಟಿ.ನಗರ, ಜೆ.ಸಿ.ನಗರ ಸೇರಿದಂತೆ ಇನ್ನೂ ಹಲವು ಪ್ರದೇಶಗಳಲ್ಲಿ ಬೃಹದಾಕಾರದ ಮರಗಳು ಧರೆಗೆ ಉರುಳಿವೆ. ರಾತ್ರಿ 9ರ ಸುಮಾರಿಗೆ ಆರಂಭವಾದ ಮಳೆ ಸುಮಾರು 1ಗಂಟೆಗೂ ಹೆಚ್ಚು ಸಮಯ ಬಿದ್ದ ಪರಿಣಾಮ ರಸ್ತೆ ತುಂಬೆಲ್ಲಾ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಮಳೆಯ ಜೊತೆ ಜೊತೆಯಲ್ಲಿಯೇ ಗಾಳಿಯೂ ರಭಸವಾಗಿ ಬೀಸಿದ್ದರಿಂದ ಮರಗಳು ಕೆಲವೆಡೆ ಮುರಿದು ಬಿದ್ದಿದ್ದರೆ, ಮತ್ತೆ ಕೆಲವು ಕಡೆ ಬುಡ ಸಹಿತ ಉರುಳಿಬಿದ್ದಿವೆ.

ರಾಜಭವನದ ಸಮೀಪದ ರಸ್ತೆ, ಕ್ವೀನ್ಸ್ ರಸ್ತೆ, ಕನ್ನಿಂಗ್ ಹ್ಯಾಂ ರಸ್ತೆ, ರಾಜಾಜಿನಗರ, ವಿಮಾನನಿಲ್ದಾಣ ರಸ್ತೆ ಸೇರಿದಂತೆ ಹಲವೆಡೆ ಮರಗಳು ಉರುಳಿಬಿದ್ದಿವೆ. ಜಯಮಹಲ್, ಆರ್.ಟಿ.ನಗರದ ಹಲವು ರಸ್ತೆಗಳಲ್ಲಿ ಮರಗಳು ಉರುಳಿಬಿದ್ದು, ಜನ ತೀವ್ರ ತೊಂದರೆ ಅನುಭವಿಸಿದ್ದಾರೆ.

ಪರಿಶೀಲನೆ ವೇಳೆ ಮೇಯರ್‌ ಗಂಗಾಬಿಕೆ, ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್, ಶಾಸಕ ಎಂ. ಕೃಷ್ಣಪ್ಪ ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT