ಬುಧವಾರ, ನವೆಂಬರ್ 25, 2020
24 °C
ಭಾರಿ ಮಳೆಗೆ ನಿರುತ್ತರವಾದ ಉತ್ತರಹಳ್ಳಿ l ಹಲವೆಡೆ ಮರ ಬಿದ್ದು ಹಾನಿ

ಮಳೆ ಆರ್ಭಟ: ಹಲವು ಮನೆಗಳಿಗೆ ನುಗ್ಗಿದ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಗುರುವಾರ ಸಂಜೆಯಿಂದ ರಾತ್ರಿಯವರೆಗೆ ಗುಡುಗು ಸಹಿತ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತವಾಯಿತು. ಹಲವು ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಪಡಿಪಾಟಲು ಅನುಭವಿಸಿದರು.

ಅರೆ–ಬರೆ ಮುಗಿದ ಕಾಮಗಾರಿಗಳು, ಗುಂಡಿ ತೋಡಿ ಬಿಟ್ಟ ರಸ್ತೆಗಳು ಜನರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದವು. ಸುಮಾರು ಆರು ತಾಸು ಸುರಿದ ಮಳೆಗೆ
ನಗರದ ಕೆಲವು ಪ್ರದೇಶಗಳು ಹೊಳೆಯಂತಾದವು. ಯಲಹಂಕ, ಟ್ರಿನಿಟಿ ವೃತ್ತ, ಹೊರಮಾವುವಿನ ಪ್ರಗತಿ ಲೇಔಟ್‌ ಸೇರಿದಂತೆ ಹಲವು ಕಡೆಗಳಲ್ಲಿ ಮರಗಳು ಬಿದ್ದ ಬಗ್ಗೆ ವರದಿಯಾಗಿವೆ.

ರಾಜ್ಯದಲ್ಲಿ ಪೂರ್ವಾಭಿಮುಖವಾಗಿ ಮೋಡಗಳ ಚಲನೆ ಹಾಗೂ ದಕ್ಷಿಣ ತಮಿಳುನಾಡಿನಲ್ಲಿ ಮೇಲ್ಮೈ ಸುಳಿಗಾಳಿ ಸೃಷ್ಟಿಯಾಗಿರುವುದರಿಂದ ನಗರದಲ್ಲಿ ಧಾರಾಕಾರ ಮಳೆ ಸುರಿಯಿತು.

ಟಿನ್‌ಫ್ಯಾಕ್ಟರಿಯ ಉದಯನಗರ ಭಾಗದಲ್ಲಿ ಒಳಚರಂಡಿ ನೀರು ಮುಖ್ಯ ಮತ್ತು ಒಳ ರಸ್ತೆಗಳ ಭಾಗದಲ್ಲಿ ಹರಿದಿದ್ದರಿಂದ ಸ್ಥಳೀಯರು ದುರ್ನಾತ ಸಹಿಸಿಕೊಳ್ಳಬೇಕಾಯಿತು. ರಾಜಕಾಲುವೆ ನೀರನ್ನು ವಸತಿ ಪ್ರದೇಶಗಳ ಕಡೆಗೆ ಹರಿಯುವಂತೆ ಮಾಡಿದ್ದರಿಂದ ಉತ್ತರಹಳ್ಳಿಯ ನಿವಾಸಿಗಳು ತೀವ್ರ ಸಂಕಷ್ಟಕ್ಕೆ ಈಡಾಗಬೇಕಾಯಿತು.

‘ಉತ್ತರಹಳ್ಳಿ ಕೆರೆ ತುಂಬಿದರೆ ಆ ನೀರು ವಸತಿ ಪ್ರದೇಶದತ್ತ ಬರುತ್ತದೆ. ರಾಜಕಾಲುವೆಯ ನೀರು ಮನೆಯ ಕಡೆಗೇಬರುತ್ತದೆ. ಕಾಲುವೆಯ ನೀರು ಮನೆ
ಯೊಳಗೆ ಬಾರದಂತೆ ಸಣ್ಣ ಕಟ್ಟೆ ಕಟ್ಟಿಕೊಂಡಿದ್ದೆವು. ಆದರೆ, ಒಳಚರಂಡಿ ಪೈಪ್‌ಲೈನ್‌ ಮತ್ತು ರಸ್ತೆ ನಿರ್ಮಾಣಕ್ಕಾಗಿ ಜಲಮಂಡಳಿ ಹಾಗೂ ಬಿಬಿಎಂಪಿ
ಯವರು ಅದನ್ನೆಲ್ಲ ಕಿತ್ತು ಹಾಕಿದರು. ಈಗ ನೀರು ನುಗ್ಗುತ್ತಿದೆ. ಮನೆಯ ಗೋಡೆ ಗಳೂ ಸೋರುತ್ತಿವೆ’ ಎಂದು ಉತ್ತರಹಳ್ಳಿಯ 7ನೇ ಮುಖ್ಯರಸ್ತೆ, 3ನೇ ಬ್ಲಾಕ್‌ನ ನಿವಾಸಿಗಳು ‘ಪ್ರಜಾವಾಣಿ’ಯೊಂದಿಗೆ ಅಳಲು ತೋಡಿಕೊಂಡರು.

‘ರಾಜಕಾಲುವೆ ಕಾಮಗಾರಿ ಪ್ರಾರಂಭಿ ಸಿದ್ದರು. ಅದನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಲಾಕ್‌ಡೌನ್‌ಗಿಂತ ಮುಂಚೆ ರಸ್ತೆ ನಿರ್ಮಾಣ ಮಾಡಲು ಪ್ರಾರಂಭಿಸಿದ್ದರು.
ಇನ್ನೂ ಅದು ಪೂರ್ಣಗೊಂಡಿಲ್ಲ. ರಸ್ತೆಯಲ್ಲಿ ಓಡಾಡಲೂ ಆಗುತ್ತಿಲ್ಲ’ ಎಂದರು.

ವಾಹನ ಸವಾರರ ಪರದಾಟ: ಮಡಿವಾಳ, ಸಿಲ್ಕ್‌ಬೋರ್ಡ್‌, ಚಾಮರಾಜಪೇಟೆ, ಮತ್ತಿಕೆರೆ, ಯಶವಂತಪುರ, ಕನಕಪುರ ರಸ್ತೆ, ಬನಶಂಕರಿ ಸೇರಿ ನಗರದ ಬಹುತೇಕ ಕಡೆಗಳಲ್ಲಿ ರಸ್ತೆಗಳು ಜಲಾವೃತಗೊಂಡು ವಾಹನ ಸವಾರರು ಪರದಾಡಿದರು.

ಕಾವೇರಿ ಜಂಕ್ಷನ್, ಮಲ್ಲೇಶ್ವರ ಸೆಂಟ್ರಲ್, ಮೈಸೂರು ರಸ್ತೆ, ಚಾಮರಾಜಪೇಟೆ, ಮಡಿವಾಳ ಹಾಗೂ ಓಕಳಿಪುರದಲ್ಲಿ ಸಂಚಾರ ದಟ್ಟಣೆಯೂ ಉಂಟಾಗಿತ್ತು. ಯಲಹಂಕ ನ್ಯೂಟೌನ್ ಹಾಗೂ ಟ್ರಿನಿಟಿ ಸರ್ಕಲ್ ವ್ಯಾಪ್ತಿಯಲ್ಲಿ ಕೆಲವು ಮರಗಳು ಧರೆಗುರುಳಿದವು.

ಮೇಲ್ಸೇತುವೆ ಕೆಳಗೆ ನೀರು: ನಗರದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಹೆಬ್ಬಾಳ,ಮಲ್ಲೇಶ್ವರ, ಯಶವಂತಪುರ ಹಾಗೂ ಓಕಳೀಪುರ ಸೇರಿದಂತೆ ನಗರದ ಹಲವು ಭಾಗದಲ್ಲಿ ಮಳೆ ನೀರು ನಿಂತು ವಾಹನ ಸವಾರರು ಪರದಾಡಿದರು.

ಆದರೆ, ಮಳೆಯಿಂದ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ತಿಳಿಸಿದ್ದಾರೆ.

ಇನ್ನೂ ಎರಡು ಅಥವಾ ಮೂರು ದಿನ ಮಳೆ ಸುರಿಯುವ ಸಂಭವ ಇದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.

ಬಾಣಂತಿ ಮಗುವಿಗೆ ತೊಂದರೆ
‘ಮನೆಯ ಗೋಡೆಗಳು ಕುಸಿಯುತ್ತೇವೆಯೇನೋ ಎಂಬಷ್ಟರ ಮಟ್ಟಿಗೆ ರಭಸವಾಗಿ ನೀರು ಹರಿಯುತ್ತಿದೆ. ಈ ಮೊದಲು ಇದೇ ರೀತಿಯ ಪರಿಸ್ಥಿತಿ ಬಂದಾಗ ನಿರಾಶ್ರಿತರ ಕೇಂದ್ರಕ್ಕೆ ಕರೆದೊಯ್ಯುವುದಾಗಿ ಅಧಿಕಾರಿಗಳು ಹೇಳಿದ್ದರು. ಆ ಕೆಲಸ ಮಾಡಲಿಲ್ಲ. ರಾಜಕಾಲುವೆ ನೀರು ಹರಿಯದಂತೆ ನಾವೇ ಸಣ್ಣ ಕಟ್ಟೆ ಕಟ್ಟಿಸಿಕೊಂಡೆವು. ಅದನ್ನೂ ಒಡೆದು ಹಾಕಿದರು. ಮನೆಯಲ್ಲಿ ಬಾಣಂತಿ, ಮಗು ಇದೆ. ರಾತ್ರಿಯಿಡೀ ಜಾಗರಣೆ ಮಾಡಬೇಕಾದ ಸ್ಥಿತಿ ಇದೆ’ ಎಂದು ಉತ್ತರಹಳ್ಳಿಯ ನಿವಾಸಿ ಕೆ. ಲಕ್ಷ್ಮಣ್‌ ಹೇಳಿದರು.

‘ನಾನು ಮತ್ತು ಕೆಲವು ನಿವಾಸಿಗಳು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಅವರಿಗೆ ಕರೆ ಮಾಡಿದೆವು. ಆದರೆ, ಅವರು ಸರಿಯಾಗಿ ಸ್ಪಂದಿಸಲಿಲ್ಲ’ ಎಂದು ಅವರು ದೂರಿದರು.

‘ಪ್ರತಿ ಬಾರಿ ಮಳೆ ಬಂದಾಗ ಇಷ್ಟು ಆತಂಕವಾಗುತ್ತಿರಲಿಲ್ಲ. ಕಾಮಗಾರಿ ಹೆಸರಿನಲ್ಲಿ ಎಲ್ಲೆಂದರಲ್ಲಿ ಗುಂಡಿ ತೋಡಿ ಹೋಗಿದ್ದಾರೆ. ನೀರು ತುಂಬಿಕೊಂಡು, ಮನೆಯ ಅಡಿಪಾಯ ಮತ್ತು ಗೋಡೆಗಳು ಶಿಥಿಲವಾಗುತ್ತಿವೆ’ ಎಂದು ಅವರು ಹೇಳಿದರು.

ಕೊಡಿಗೇಹಳ್ಳಿ: ಹೆಚ್ಚು ಮಳೆ

ನಗರದ ಕೊಡಿಗೇಹಳ್ಳಿಯಲ್ಲಿ ಗುರುವಾರ ಹೆಚ್ಚು ಅಂದರೆ, 65.50 ಮಿ.ಮೀ. ಮಳೆಯಾಗಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಹೇಳಿದೆ.

ದೊರೆಸಾನಿಪಾಳ್ಯದ ಇಎಂಪಿಆರ್‌ಐ ಕ್ಯಾಂಪಸ್‌ನಲ್ಲಿ 51 ಮಿ.ಮೀ. ಮಳೆಯಾಗಿದೆ ಎಂದು ಅದು ಹೇಳಿದೆ.

ನಗರದ ವಿವಿಧೆಡೆ ವಿದ್ಯುತ್‌ ವ್ಯತ್ಯಯ

ಸಂಜೆ ಸುರಿದ ಮಳೆಯಿಂದ ನಗರದ ಬಹುತೇಕ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಯಿತು. ಸಂಜೆಯಿಂದ ಮಧ್ಯರಾತ್ರಿಯವರೆಗೆ ಕತ್ತಲಲ್ಲಿಯೇ ಕಳೆಯಬೇಕಾಯಿತು.

ಜಯನಗರ, ಜೆ.ಪಿ. ನಗರ, ರಾಮಮೂರ್ತಿ ನಗರ, ಆರ್.ಟಿ. ನಗರ, ತಾವರೆಕೆರೆ, ಕುಮಾರಸ್ವಾಮಿ ಲೇಔಟ್, ಹೊಸೂರು ರಸ್ತೆ ಮತ್ತಿತರ ಕಡೆಗಳಲ್ಲಿ ವಿದ್ಯುತ್ ವ್ಯತ್ಯಯವಾಯಿತು.

‘ನಾಗನಾಥಪುರ ಉಪವಿಭಾಗ ವ್ಯಾಪ್ತಿಯಲ್ಲಿ ಎಫ್‌–4 ಫೀಡರ್‌ ಮಾರ್ಗದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿತ್ತು. ಈ ಕಾರಣದಿಂದ ಬೆಂಗಳೂರು ಉತ್ತರ ಮತ್ತು ದಕ್ಷಿಣ ಭಾಗದ ಕೆಲವಡೆ ವಿದ್ಯುತ್‌ ಪೂರೈಕೆಯಲ್ಲಿ ಸಮಸ್ಯೆಯಾಯಿತು. ಹಲವಾರು ಕಡೆ ಮರಗಳು ಬಿದ್ದಿದ್ದರಿಂದಲೂ ವಿದ್ಯುತ್‌ ವ್ಯತ್ಯಯವಾಯಿತು’ ಎಂದು ಬೆಸ್ಕಾಂ ಎಂಜಿನಿಯರ್‌ ಒಬ್ಬರು ತಿಳಿಸಿದರು.

ಎಲ್ಲೆಲ್ಲಿ ಎಷ್ಟು ಮಳೆ (ಮಿ.ಮೀ.ಗಳಲ್ಲಿ)

ಪ್ರದೇಶ ಮತ್ತು ಪ್ರಮಾಣ

ಕೊಡಿಗೇಹಳ್ಳಿ- 65.50

ಕೋನಪ್ಪನ ಅಗ್ರಹಾರ-56

ದೊರೆಸಾನಿ ಪಾಳ್ಯ-51

ಬಿಳೇಕಹಳ್ಳಿ-44.5

ಕೋಣನಕುಂಟೆ-42.5

ಜಯನಗರ-42.5

ಆರ್.ಆರ್. ನಗರ-40

ಉತ್ತರಹಳ್ಳಿ-40

ಚೊಕ್ಕಸಂದ್ರ-45.5

ಎಚ್‌ಎಂಟಿ ವಾರ್ಡ್‌- 40

ವಿ. ನಾಗೇನಹಳ್ಳಿ-39.5

ಬಸವನಗುಡಿ- 38

ನಾಯಂಡಹಳ್ಳಿ- 37

ಬೆನ್ನಿಗಾನಹಳ್ಳಿ- 36

ಪಟ್ಟಾಭಿರಾಮನಗರ- 35

ಪೀಣ್ಯ ಕೈಗಾರಿಕಾ ಪ್ರದೇಶ- 31

ಎಚ್‌ಎಎಲ್- 30

ಕೆಂಗೇರಿ- 30

ಸಾರಕ್ಕಿ- 29

ಶೆಟ್ಟಿಹಳ್ಳಿ- 28

ಹೇರೋಹಳ್ಳಿ- 28

ಹೆಗ್ಗನಹಳ್ಳಿ- 28

ಕೃಷ್ಣರಾಜಪುರ- 26

ಮಾರಪ್ಪನಪಾಳ್ಯ- 26

ರಾಮಮೂರ್ತಿ ನಗರ- 25

ಜಕ್ಕೂರು- 24

ಕೆಂಗೇರಿ- 23

ಕಮ್ಮನಹಳ್ಳಿ- 21

ಆಧಾರ: ಕೆಎಸ್‌ಎನ್‌ಡಿಎಂಸಿ

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು