ಶನಿವಾರ, ಜನವರಿ 18, 2020
27 °C
ಸಂಜಯನಗರ, ಗಂಗಾನಗರ, ರಾಧಾಕೃಷ್ಣ ದೇವಸ್ಥಾನ, ಹೆಬ್ಬಾಳ ವಾರ್ಡ್‌ಗಳಲ್ಲೊಂದು ಸುತ್ತು

ಹೆಬ್ಬಾಳ ವಿಧಾನಸಭಾ ಕ್ಷೇತ್ರ: ಕಾಮಗಾರಿ ಸಾಲು–ಸಂಚಾರವೇ ಸವಾಲು

ಗುರು ಪಿ.ಎಸ್‌ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಹೆಬ್ಬಾಳ ಕ್ಷೇತ್ರದ ವ್ಯಾಪ್ತಿಯ ಸಂಜಯನಗರ, ಗಂಗಾನಗರ, ರಾಧಾಕೃಷ್ಣ ದೇವಸ್ಥಾನ ಹಾಗೂ ಹೆಬ್ಬಾಳ ವಾರ್ಡ್‌ಗಳು ಉತ್ತಮ ರಸ್ತೆಗಳು ಹಾಗೂ ಉದ್ಯಾನಗಳಿಂದ ಗಮನ ಸೆಳೆಯುತ್ತವೆ. ಆದರೆ, ಅವುಗಳನ್ನು ನೋಡಿ ಈ ಎಲ್ಲ ವಾರ್ಡ್‌ಗಳು ಸಂಪೂರ್ಣ ಅಭಿವೃದ್ಧಿ ಹೊಂದಿವೆ ಎಂಬ ನಿರ್ಧಾರಕ್ಕೆ ಬರಲಾಗದು. ಈ ವಾರ್ಡ್‌ಗಳಲ್ಲೂ ಗ್ರಾಮಠಾಣಾ ಪ್ರದೇಶಗಳಲ್ಲಿ ಅಭಿವೃದ್ಧಿ ಪರ್ವ ಇನ್ನಷ್ಟೇ ಆರಂಭವಾಗಬೇಕಿದೆ.

ಇಸ್ರೊ, ವಾಯುಪಡೆಯ ತರಬೇತಿ ಕೇಂದ್ರ, ಎಂ.ಎಸ್. ರಾಮಯ್ಯ ಆಸ್ಪತ್ರೆಗಳಂತಹ ಪ್ರತಿಷ್ಠಿತ ಸಂಸ್ಥೆಗಳು ಈ ವಾರ್ಡ್‌ಗಳಲ್ಲಿ ಇವೆಯಾದರೂ, ಇಲ್ಲೂ ಕೊರತೆಗಳು ಇಲ್ಲದಿಲ್ಲ. ಈ ವಾರ್ಡ್‌ಗಳ ಸ್ಥಿತಿ ಗತಿಗಳು ಹೇಗಿವೆ, ಇಲ್ಲಿ ಪ್ರಮುಖವಾಗಿ ಯಾವ ಕೆಲಸಗಳು ಆಗಬೇಕಿವೆ ಎಂಬುದನ್ನು ಗುರು ಪಿ.ಎಸ್‌ ಕಟ್ಟಿಕೊಟ್ಟಿದ್ದಾರೆ.

ರಾಧಾಕೃಷ್ಣ ದೇವಸ್ಥಾನ ವಾರ್ಡ್‌ 18: ಇದು ಬಿಬಿಎಂಪಿಯ ಹಳೆಯ ವಾರ್ಡ್‌ಗಳಲ್ಲೊಂದು. ಮೇಲ್ನೋಟಕ್ಕೆ ಮೂಲಸೌಕರ್ಯಗಳ ಕೊರತೆಗಳೇನೂ ಇಲ್ಲ. ಈ ಹಿಂದೆ ಉಪಮೇಯರ್‌ ಆಗಿದ್ದ ಎಂ. ಆನಂದ್‌ ಇಲ್ಲಿನ ಪಾಲಿಕೆ ಸದಸ್ಯ. ಸಾಕಷ್ಟು ಅನುದಾನ ಬಂದು ಅಭಿವೃದ್ಧಿಯೂ ಆಗಿದೆ. ಇಸ್ರೊದಂತಹ ಪ್ರತಿಷ್ಠಿತ ಸಂಸ್ಥೆ ಈ ವಾರ್ಡ್‌ನಲ್ಲಿದೆ. ಕೆ.ಜಿ. ಲೇಔಟ್, ಮಂಜುನಾಥ ಲೇಔಟ್‌, ರಾಚೋಟಹಳ್ಳಿ, ಲೊಟ್ಟೆಗೊಳ್ಳಹಳ್ಳಿ, ಡಾಲರ್ಸ್‌ ಕಾಲೊನಿ, ಎಂ.ಎಸ್. ರಾಮಯ್ಯ ಆಸ್ಪತ್ರೆ ಆಸುಪಾಸಿನ ಹಲವು ಪ್ರದೇಶಗಳು ಈ ವಾರ್ಡ್‌ ವ್ಯಾಪ್ತಿಗೆ ಬರುತ್ತವೆ.

ರಸ್ತೆ ದುರಸ್ತಿ, ಒಳಚರಂಡಿ ನಿರ್ಮಾಣದಂತಹ ಕಾಮಗಾರಿಗಳು ಇಲ್ಲಿ ಪ್ರಗತಿಯಲ್ಲಿವೆ. ಆದರೆ, ಕಾಮಗಾರಿಯ ವೇಗ ಚುರುಕುಗೊಳ್ಳಬೇಕು ಎಂದು ನಿವಾಸಿಗಳು ಹೇಳುತ್ತಾರೆ. ನಿಯಮಿತವಾಗಿ ಕಾವೇರಿ ನೀರು ಪೂರೈಸಲಾಗುತ್ತಿದೆ. 50ಕ್ಕೂ ಹೆಚ್ಚು ಕೊಳವೆಬಾವಿಗಳನ್ನು ಕೊರೆಸಲಾಗಿದ್ದು, ಸಾರ್ವಜನಿಕ ಬಳಕೆಗೆ ವ್ಯವಸ್ಥೆ ಮಾಡಲಾಗಿದೆ.

ವಾರ್ಡ್‌ನ ಹಲವು ರಸ್ತೆಗಳ ಇಕ್ಕೆಲಗಳಲ್ಲಿ ಬಾನೆತ್ತರ ಬೆಳೆದ ಮರಗಳಿವೆ. ಈ ರಸ್ತೆಗಳಲ್ಲಿ ಸಂಚರಿಸುವುದು ಆಹ್ಲಾದ ನೀಡುತ್ತದೆ. ಆದರೆ, ಮಳೆ ಬಂದಾಗ, ಜೋರು ಗಾಳಿ ಇದ್ದಾಗ ಮರದ ಕೊಂಬೆಗಳು ವಿದ್ಯುತ್‌ ತಂತಿ, ಕೇಬಲ್‌ಗಳ ಮೇಲೆ ಬಿದ್ದು ಅಪಘಾತ ಸಂಭವಿಸುತ್ತದೆ. ಅಪಾಯಕಾರಿ ಕೊಂಬೆಗಳನ್ನು ಕತ್ತರಿಸುವ ಕೆಲಸ ನಿಯಮಿತವಾಗಿ ಆಗಬೇಕು ಎಂದು ಸ್ಥಳೀಯರು ಹೇಳುತ್ತಾರೆ. 

ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ನಾಯಿ ಕಡಿತದಿಂದ ಹಲವರು ಗಾಯಗೊಂಡಿದ್ದಾರೆ. ಅವುಗಳಿಗೆ ಸಂತಾನಶಕ್ತಿಹರಣ ಚಿಕಿತ್ಸೆಗಳನ್ನು ಮಾಡುವ ಮೂಲಕ ಅವುಗಳ ಸಂತತಿ ನಿಯಂತ್ರಿಸಬೇಕು ಎಂಬ ಒತ್ತಾಯ ಸ್ಥಳೀಯರದ್ದು.


ರಾಧಾಕೃಷ್ಣ ದೇವಸ್ಥಾನ ವಾರ್ಡ್ ನಲ್ಲಿ ನಡೆಯುತ್ತಿರುವ ಫುಟ್ ಪಾತ್ ನಿರ್ಮಾಣ ಕಾಮಗಾರಿ

ಸಂಜಯನಗರ ವಾರ್ಡ್‌– 19: ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಪ್ರತಿಷ್ಠಿತ ವಾರ್ಡ್‌ ಸಂಜಯನಗರ. ವಿನಾಯಕ ಬಡಾವಣೆ, ಎಂ.ಜಿ. ಲೇಔಟ್‌, ಪಿ ಆ್ಯಂಡ್‌ ಟಿ ಕಾಲೊನಿ, ಸೆಂಟ್ರಲ್‌ ಎಕ್ಸೈಸ್‌ ಲೇಔಟ್‌, ಕೆಇಬಿ ಲೇಔಟ್, ಎಸಿಎಸ್‌, ಭೂಪಸಂದ್ರ ಈ ವಾರ್ಡ್‌ ವ್ಯಾಪ್ತಿಯಲ್ಲಿವೆ. ಉತ್ತಮ ರಸ್ತೆಗಳು, ಅಲ್ಲಲ್ಲಿ ಉದ್ಯಾನ, ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆಯಿಂದ ವಾರ್ಡ್‌ ಗಮನ ಸೆಳೆಯುತ್ತದೆ. ಆದರೆ, ನಾಗಶೆಟ್ಟಿಹಳ್ಳಿ ಗ್ರಾಮಠಾಣಾ ಪ್ರದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಆಗಬೇಕಿದೆ. 

ಇಸ್ರೊ ಕಟ್ಟಡದ ಹಿಂದಿನ ಪ್ರದೇಶಗಳು ಈ ವಾರ್ಡ್‌ಗೆ ಬರುತ್ತವೆ. ಇಲ್ಲಿನ ಖಾಲಿ ನಿವೇಶನಗಳಲ್ಲಿ ಕಸದ ರಾಶಿ ಸುರಿಯಲಾಗಿದೆ. ಅಲ್ಲದೇ, ಅಲ್ಲಿಯೇ ಕಸವನ್ನು ಸುಡಲಾಗುತ್ತಿದೆ. ವಿಶ್ವಪ್ರಸಿದ್ಧ ಇಸ್ರೊ ಕೇಂದ್ರ ಕಚೇರಿ ಇಲ್ಲೇ ಇದ್ದರೂ, ಇಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಕಸ ಸುರಿಯುವವರಿಗೆ ದಂಡ ವಿಧಿಸಲಾಗುತ್ತಿದೆ. ಈ ಕಾರ್ಯಕ್ಕಾಗಿ ಮಾರ್ಷಲ್‌ಗಳನ್ನು ನಿಯೋಜಿಸಲಾಗಿದೆ. ನಿವೇಶನಗಳ ಮಾಲೀಕರಿಗೂ ನೋಟಿಸ್‌ ನೀಡಲಾಗುತ್ತಿದೆ. ಆದರೂ, ಕಸದ ಸಮಸ್ಯೆ ನೀಗುತ್ತಿಲ್ಲ. ರಾತ್ರಿಯ ವೇಳೆ ಕಸ ಸುರಿಯಲಾಗುತ್ತಿರುವುದರಿಂದ ಸಮಸ್ಯೆ ಹೆಚ್ಚಾಗಿದೆ ಎನ್ನುತ್ತಾರೆ ಪಾಲಿಕೆ ಸದಸ್ಯೆ ಜಿ.ಇಂದಿರಾ.

ಸಂಜಯನಗರ ಮುಖ್ಯರಸ್ತೆಯಲ್ಲಿರುವ ಪಾಲಿಕೆ ಆಸ್ಪತ್ರೆಯಲ್ಲಿ ನಿರ್ವಹಣೆ ಕೊರತೆ ಇದೆ. ಈ ನಿಟ್ಟಿನಲ್ಲಿ, ಅದರ ಅಭಿವೃದ್ಧಿ ಕೆಲಸ ಕೈಗೆತ್ತಿಕೊಳ್ಳಲಾಗುತ್ತಿದೆ. 


ಸಂಜಯ್ ನಗರ ವಾರ್ಡ್‌ನಲ್ಲಿನ ಇಸ್ರೊ ಕೇಂದ್ರದ ಹಿಂದೆಯೇ ಕಸದ ರಾಶಿ ಸುರಿಯಲಾಗಿದ್ದು, ಬೆಂಕಿ ಹಚ್ಚಿರುವುದು

ಗಂಗಾನಗರ ವಾರ್ಡ್‌ 20: ಈ ವಾರ್ಡ್‌ನ ಹಲವು ಬಡಾವಣೆಗಳು ದೊಡ್ಡ ರಸ್ತೆ, ಪಾದಚಾರಿ ಮಾರ್ಗ, ಇಕ್ಕೆಲಗಳಲ್ಲಿ ಸಾಲು ಮರಗಳಿಂದ ಗಮನ ಸೆಳೆದರೆ, ಸಾಕಷ್ಟು ಬಡಾವಣೆಗಳು ಕಿರಿದಾದ ರಸ್ತೆಯ ಪರಿಣಾಮ ಸದಾ ವಾಹನಗಳಿಂದ ಗಿಜಿಗುಡುತ್ತಿರುತ್ತವೆ. ಎಚ್‌ಎಂಟಿ ಲೇಔಟ್‌, ಸಹಕಾರ ನಗರ, ಹೆಬ್ಬಾಳದಲ್ಲಿನ ನಾಲ್ಕು ಬೂತ್, ಸಂಜಯನಗರದಲ್ಲಿನ 2 ಬೂತ್‌ಗಳು ಈ ವಾರ್ಡ್‌ ವ್ಯಾಪ್ತಿಯಲ್ಲಿವೆ. ಅಲ್ಲಲ್ಲಿ ಹರಿದು ಹಂಚಿ ಹೋದಂತೆ ಕಾಣುತ್ತದೆ ಈ ವಾರ್ಡ್‌. 

ಕಸ ಹಾಕುವ ಸ್ಥಳವನ್ನೇ ಉದ್ಯಾನವಾಗಿ ಮಾರ್ಪಡಿಸುವ ಮೂಲಕ ಸಮಸ್ಯೆಗೆ ವಿಭಿನ್ನವಾಗಿ ಪರಿಹಾರ ಕಂಡುಕೊಳ್ಳಲಾಗಿದೆ. ಎಂ.ಕೆ. ಅಹ್ಮದ್‌ ಬಡಾವಣೆಯಲ್ಲಿ ಮೊದಲು ಕಸ ಸುರಿಯುತ್ತಿದ್ದ ಸ್ಥಳದಲ್ಲಿ ಸಸಿಗಳನ್ನು ನೆಟ್ಟು ಉದ್ಯಾನ ನಿರ್ಮಿಸಲಾಗಿದೆ. ಸುತ್ತ ಬೇಲಿ ಹಾಕಿ, ನಡಿಗೆ ಪಥ ನಿರ್ಮಿಸಿ ಅದನ್ನು ಅಭಿವೃದ್ಧಿ ಮಾಡಬೇಕಾದ ಅಗತ್ಯವಿದೆ.

ಜನನಿಬಿಡ ಸ್ಥಳವಾದ ಹೆಬ್ಬಾಳ ರೈಲು ನಿಲ್ದಾಣದ ಬಳಿ ಕೆಳಸೇತುವೆ ನಿರ್ಮಿಸಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಾರೆ. ಹೆಬ್ಬಾಳ ವೃತ್ತ ಅಥವಾ ಬಸ್‌ ನಿಲ್ದಾಣಕ್ಕೆ ಬರಲು ಸಾರ್ವಜನಿಕರು ರೈಲು ಹಳಿಯ ಮೇಲೆ ಬರುವ ಅನಿವಾರ್ಯ ಇದೆ. ಇದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಎಂದು ಸ್ಥಳೀಯರು ದೂರುತ್ತಾರೆ.

ಹೆಬ್ಬಾಳ ವಾರ್ಡ್–21: ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಹಲವು ಪ್ರದೇಶಗಳು ಈ ವಾರ್ಡ್‌ನಲ್ಲಿವೆ. ಇಲ್ಲಿ ಸಂಚರಿಸಿದರೆ ಹಳ್ಳಿಯ ವಾತಾವರಣದಲ್ಲಿ ಓಡಾಡಿದಂತೆ ಖುಷಿಯಾಗುತ್ತದೆ. ವಿಮಾನ ನಿಲ್ದಾಣಕ್ಕೆ ಹೋಗುವ ಪ್ರಮುಖ ಮಾರ್ಗವೂ ಇದಾಗಿರುವುದರಿಂದ ಸಂಚಾರ ದಟ್ಟಣೆಯ ಬಿಸಿ ಇಲ್ಲಿ ಮಾಮೂಲಿ.

ಬಿಟಿಎಸ್‌ ಡಿಪೊ, ಸಾಯಿಬಾಬಾ ದೇವಸ್ಥಾನ, ಚೌಡಯ್ಯ ಬ್ಲಾಕ್‌, ಅಮರಜ್ಯೋತಿ ಲೇಔಟ್‌, ಹೆಬ್ಬಾಳ ಅರ್ಧ ಭಾಗ, ಚೋಳನಾಯಕನಹಳ್ಳಿ, ಕುಂತಿಗ್ರಾಮ ಬೆಟ್ಟ ಈ ವಾರ್ಡ್‌ನ ವ್ಯಾಪ್ತಿಯಲ್ಲಿವೆ. ಎಚ್‌ಎಂಟಿ ಲೇಔಟ್‌, ಆನಂದನಗರ, ಅಮರಜ್ಯೋತಿ ಲೇಔಟ್‌ಗಳಲ್ಲಿನ ಉದ್ಯಾನಗಳನ್ನು ಉತ್ತಮವಾಗಿ ಅಭಿವೃದ್ಧಿ ಪಡಿಸಲಾಗಿದೆ. ಓಪನ್‌ ಜಿಮ್‌ಗಳು, ಯೋಗ ಕೇಂದ್ರ ಹಾಗೂ ಮಕ್ಕಳ ಆಟಿಕೆಗಳಿರುವ ಈ ಉದ್ಯಾನಗಳು ಚಟುವಟಿಕೆಯ ತಾಣಗಳೂ ಆಗಿ ಗಮನ ಸೆಳೆಯುತ್ತಿವೆ. 

ವಿವಿಧ ಕಾಮಗಾರಿಗಳು ನಡೆಯುತ್ತಿದ್ದು, ಶೀಘ್ರವಾಗಿ ಮುಗಿಯಬೇಕು ಮತ್ತು ಆಟದ ಮೈದಾನಕ್ಕೆ ಸೂಕ್ತ ಸ್ಥಳಗಳನ್ನು ಗುರುತಿಸಿ ಅಭಿವೃದ್ಧಿ ಪಡಿಸಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಾರೆ.

ವಾರ್ಡ್‌ನ ಪ್ರಮುಖ ಮೂರು ಸಮಸ್ಯೆಗಳು 

18– ರಾಧಾಕೃಷ್ಣ ದೇವಸ್ಥಾನ ವಾರ್ಡ್‌

* ಬೀದಿ ನಾಯಿಗಳ ಹಾವಳಿ 
* ಮರಗಳ ರೆಂಬೆಯಿಂದ ಅಪಾಯ 
* ಮಳೆ ನೀರು ಹರಿಯಲು ವ್ಯವಸ್ಥೆ ಇಲ್ಲದಿರುವುದು

19– ಸಂಜಯನಗರ ವಾರ್ಡ್‌ 
* ಕಸ ವಿಲೇವಾರಿ ಕಾರ್ಯ ಉತ್ತಮವಾಗಬೇಕು
* ಬೀದಿ ನಾಯಿಗಳ ಹಾವಳಿ ನಿಯಂತ್ರಿಸಬೇಕು
* ಪಾಲಿಕೆ ಆಸ್ಪತ್ರೆಯ ನಿರ್ವಹಣೆ ಕೊರತೆ

 20– ಗಂಗಾನಗರ ವಾರ್ಡ್‌
* ಪಾದಚಾರಿ ಮಾರ್ಗ ಒತ್ತುವರಿ 
* ಆಟದ ಮೈದಾನಗಳ ಕೊರತೆ 
* ರೈಲು ಹಳಿ ಬಳಿ ಕೆಳಸೇತುವೆ ಇಲ್ಲದಿರುವುದು

21– ಹೆಬ್ಬಾಳ ವಾರ್ಡ್‌
* ಹದಗೆಟ್ಟಿರುವ ಕಿರಿದಾದ ರಸ್ತೆಗಳು 
* ಸಂಚಾರ ದಟ್ಟಣೆ 
* ಕಾಮಗಾರಿ ವಿಳಂಬ ಕಿರಿಕಿರಿ

ಪಾಲಿಕೆ ಸದಸ್ಯರು ಏನಂತಾರೆ?

‘₹25 ಕೋಟಿ ಮೊತ್ತದ ಕೆಲಸ ಬಾಕಿ’
ನಮ್ಮ ವಾರ್ಡ್‌ನಲ್ಲಿ ಹೇಳಿಕೊಳ್ಳುವಂತಹ ಸಮಸ್ಯೆ ಇಲ್ಲ. ನಿಯಮಿತವಾಗಿ ನಿರ್ವಹಣೆ ಕಾರ್ಯ ಕೈಗೆತ್ತಿಕೊಳ್ಳಬೇಕಾಗಿದೆ. ರಸ್ತೆಗಳ ದುರಸ್ತಿ ಮತ್ತು ಒಳಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ₹25 ಕೋಟಿ ಮೊತ್ತದಷ್ಟು ಕೆಲಸ ಬಾಕಿ ಇದ್ದು, ಈ ಕಾಮಗಾರಿಗಳ ಟೆಂಡರ್‌ ಕರೆಯಲಾಗಿದೆ. ಖಾಲಿ ನಿವೇಶನಗಳಲ್ಲಿ ಕಸದ ರಾಶಿ ಇದ್ದರೆ, ಆ ನಿವೇಶನಗಳ ಮಾಲೀಕರಿಗೆ ನೋಟಿಸ್‌ ನೀಡಲಾಗುತ್ತಿದೆ. 
–ಎಂ. ಆನಂದ್‌, ರಾಧಾಕೃಷ್ಣ ದೇವಸ್ಥಾನ ವಾರ್ಡ್‌ ಸದಸ್ಯ

**
‘ಜನರ ಸಹಕಾರ ಅಗತ್ಯ’
ನಮ್ಮ ವಾರ್ಡ್‌ಗೆ ವಿಶೇಷ ಅನುದಾನ ₹2 ಕೋಟಿ, ನಗರೋತ್ಥಾನ ಯೋಜನೆಯಡಿ ₹2.5 ಕೋಟಿ ನೀಡಲಾಗಿದೆ. ಇದಕ್ಕೆ ಸಂಬಂಧಿಸಿದ ಕಾಮಗಾರಿಗಳ ಕೆಲಸ ಇನ್ನಷ್ಟೇ ಆರಂಭವಾಗಬೇಕಿದೆ. ಖಾಲಿ ನಿವೇಶನಗಳಲ್ಲಿ ಕಸ ಎಸೆಯುವ ಸಮಸ್ಯೆ ಇದೆಯಾದರೂ, ಮಾರ್ಷಲ್‌ಗಳ ದಂಡ ವಿಧಿಸುತ್ತಿರುವುದರಿಂದ ನಿಯಂತ್ರಣಕ್ಕೆ ಬಂದಿದೆ. ಕಸ ನಿರ್ವಹಣೆಯಲ್ಲಿ ರಾಧಾಕೃಷ್ಣ ದೇಗುಲ ಹಾಗೂ ಸಂಜಯನಗರ ವಾರ್ಡ್‌ಗಳನ್ನು ಮಾದರಿ ವಾರ್ಡ್‌ಗಳಾಗಿ ರೂಪಿಸುವ ಉದ್ದೇಶವಿದೆ. ಈ ನಿಟ್ಟಿನಲ್ಲಿ ಕೆಲಸ ಪ್ರಾರಂಭವಾಗಿದೆ. ಆದರೆ, ಸಮರ್ಪಕ ಕಸ ವಿಂಗಡಣೆ ಮತ್ತು ವಿಲೇವಾರಿಗೆ ಜನರ ಸಹಕಾರವೂ ಅಗತ್ಯ.
–ಜಿ. ಇಂದಿರಾ, ಸಂಜಯನಗರ ವಾರ್ಡ್‌ ಸದಸ್ಯೆ

**
‘ಆಸ್ಪತ್ರೆ ಅಭಿವೃದ್ಧಿ ಶೀಘ್ರ’
ಕಳೆದ ಬಾರಿ ನಮ್ಮ ವಾರ್ಡ್‌ಗೆ ಹೆಚ್ಚು ಅನುದಾನ ನೀಡಿಲ್ಲ. ಈ ಬಾರಿ ವಿಶೇಷ ಅನುದಾನ ₹2.5 ಕೋಟಿ ಮತ್ತು ನಗರೋತ್ಥಾನ ಯೋಜನೆಯಡಿ ₹1.47 ಕೋಟಿ ಕೊಟ್ಟಿದ್ದಾರೆ. ಈ ಮೊತ್ತದ ಕಾಮಗಾರಿಗೆ ಕಾರ್ಯಾದೇಶ ಪತ್ರ ಇನ್ನಷ್ಟೇ ನೀಡಬೇಕಿದೆ. ಹೆಬ್ಬಾಳ ರೈಲು ನಿಲ್ದಾಣ ಬಳಿ ಕೆಳಸೇತುವೆ ಅಗತ್ಯವಿದೆ. ಇದಕ್ಕೆ ಮೂರು ವರ್ಷಗಳ ಹಿಂದೆಯೇ ಗುದ್ದಲಿ ಪೂಜೆ ನೆರವೇರಿಸಲಾಗಿತ್ತು. ರಸ್ತೆ ಅಗಲೀಕರಣ ಮಾಡಬೇಕಾಗಿರುವುದರಿಂದ ಹಾಗೂ ಇತರೆ ತಾಂತ್ರಿಕ ಕಾರಣಗಳಿಂದ ಕೆಳಸೇತುವೆ ಕಾಮಗಾರಿ ವಿಳಂಬವಾಗುತ್ತಿದೆ. ಇನ್ನು, ಗಂಗಾನಗರದಲ್ಲಿ ಬಿಬಿಎಂಪಿ ಆಸ್ಪತ್ರೆಯಲ್ಲಿ ಶೀಘ್ರವೇ ಡಯಾಲಿಸಿಸ್‌ ಕೇಂದ್ರ ಆರಂಭಿಸಲಾಗುವುದು.
–ಎಂ. ಪ್ರಮೀಳಾ, ಗಂಗಾನಗರ ವಾರ್ಡ್‌ ಸದಸ್ಯೆ

**
‘ಗ್ರಾಮಠಾಣಾ ಅಭಿವೃದ್ಧಿ ಕಷ್ಟ’
ನಿರಂತರವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಗ್ರಾಮಠಾಣಾಗಳು ಇರುವ ಕಡೆಗೆ ಸ್ವಲ್ಪ ಮೂಲಸೌಕರ್ಯ ಕೊರತೆ ಇದ್ದರೂ, ಅವುಗಳ ಅಭಿವೃದ್ಧಿಗೂ ಗಮನ ನೀಡಲಾಗಿದೆ. ವಿಶೇಷ ಅನುದಾನದಡಿ ವಾರ್ಡ್‌ಗೆ ₹2 ಕೋಟಿ ನೀಡಲಾಗಿದೆ. ಈ ಹಿಂದೆ ವಾರ್ಡ್‌ಗೆ ನೀಡಲಾಗಿದ್ದ ಅನುದಾನ ವಾಪಸ್‌ ತೆಗೆದುಕೊಂಡರು. ಶಾಸಕರ ನಿಧಿಯಿಂದ ₹9 ಕೋಟಿ ನೀಡಿದ್ದಾರೆ. ಈ ಅನುದಾನದಿಂದ ರಸ್ತೆ ನಿರ್ಮಾಣ, ಒಳಚರಂಡಿ ಹಾಗೂ ಉದ್ಯಾನಗಳ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು. ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಉಚಿತವಾಗಿ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶವಿದೆ. 
–ಆನಂದಕುಮಾರ್, ಹೆಬ್ಬಾಳ ವಾರ್ಡ್‌ ಸದಸ್ಯ

***

ಜನ ಏನಂತಾರೆ ? 

‘ಅಪರಿಮಿತ ಕೇಬಲ್‌ಗಳಿಂದ ತೊಂದರೆ’

ರಸ್ತೆಯ ಬದಿಯಲ್ಲಿನ ಮರಗಳು ವಿದ್ಯುತ್‌ ಕಂಬದ ಬಳಿ ಹಾದುಹೋಗಿವೆ. ಸಾಕಷ್ಟು ಆಪ್ಟಿಕ್‌ ಫೈಬರ್‌ ಕೇಬಲ್‌ (ಒಎಫ್‌ಸಿ) ಕೇಬಲ್‌ಗಳು ಜೋತಾಡುತ್ತಿವೆ. ರೆಂಬೆಗಳು ಅವುಗಳ ಮೇಲೆ ಬಿದ್ದಾಗ, ಕೇಬಲ್‌ ಬೀದಿ ಮೇಲೆ ಬಿದ್ದು ಅಪಘಾತಗಳು ಸಂಭವಿಸಿವೆ. ವಿದ್ಯುತ್‌ ತಂತಿಗಳ ಮೇಲೆ ಕೊಂಬೆಗಳು ಬಿದ್ದಾಗ ಅವುಗಳ ಸುರಕ್ಷಾ ಕವಚ ಕಿತ್ತು ಹೋಗಿ ಅಕ್ಕ ಪಕ್ಕದ  ಮನೆಗಳಲ್ಲಿ ವಿದ್ಯುತ್‌ ಅವಘಡ ಸಂಭವಿಸಿದ ಉದಾಹರಣೆಗಳಿವೆ. ನಿವಾಸಿಗಳೂ ಅಪಾಯಕ್ಕೆ ಸಿಲುಕಿದ್ದಾರೆ. 
–ನಾರಾಯಣ್, ರಾಧಾಕೃಷ್ಣ ದೇವಸ್ಥಾನ ವಾರ್ಡ್‌ ನಿವಾಸಿ   

*
‘ಮಳೆ ನೀರು ಹರಿಯಲು ವ್ಯವಸ್ಥೆ ಇಲ್ಲ’
ರಸ್ತೆಗಳೆಲ್ಲ ಡಾಂಬರು ಕಂಡಿವೆ. ಆದರೆ, ಮಳೆ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆಯೇ ಇಲ್ಲ. ರಸ್ತೆಯ ಮೇಲೆಯೇ ನೀರು ಹರಿಯುವುದರಿಂದ ಅಪಘಾತಗಳು ಸಂಭವಿಸುತ್ತವೆ. ಅಲ್ಲದೆ, ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ದಂಡ ವಿಧಿಸಲಾಗುತ್ತಿದೆ. ಹೀಗೆ, ಕಸ ಇರುವ ಖಾಲಿ ನಿವೇಶನಗಳ ಮಾಲೀಕರಿಗೂ ಹೆಚ್ಚು ದಂಡ ವಿಧಿಸಬೇಕು.
–ಅನಿಲ್‌ ವಿನ್ಸೆಂಟ್‌, ಸಂಜಯನಗರ ವಾರ್ಡ್‌ ನಿವಾಸಿ

*
‘ಪಾದಚಾರಿ ಮಾರ್ಗಗಳ ಒತ್ತುವರಿ’
ಗಂಗಾನಗರದ ವಸಂತಪ್ಪ ಬ್ಲಾಕ್‌ನ ಪ್ರಮುಖ ರಸ್ತೆಗಳಲ್ಲಿ ಪಾದಚಾರಿ ಮಾರ್ಗವಿಲ್ಲ. ರಸ್ತೆಗಳ ಬದಿಯಲ್ಲಿ ಸಾರ್ವಜನಿಕರು ಓಡಾಡಲು ಸ್ಥಳವೇ ಇಲ್ಲ. ಅಂಗಡಿ–ಮಳಿಗೆಗಳ ಮುಂದೆ ದ್ವಿಚಕ್ರ ವಾಹನಗಳನ್ನು ಇಡಲಾಗಿರುತ್ತದೆ. ಮಕ್ಕಳು, ಹೆಣ್ಣುಮಕ್ಕಳು ಓಡಾಡಲು ತುಂಬಾ ತೊಂದರೆಯಾಗುತ್ತದೆ. ಬಸ್ಸು, ಕಾರು ಸೇರಿದಂತೆ ಹೆಚ್ಚು ವಾಹನಗಳು ಇಲ್ಲಿ ಓಡಾಡುವುದರಿಂದ ದಟ್ಟಣೆ ಹೆಚ್ಚಾಗಿರುತ್ತದೆ. 
–ಗಂಗಾಧರ, ಗಂಗಾನಗರ ವಾರ್ಡ್‌ ನಿವಾಸಿ‌

*
‘ಆಟದ ಮೈದಾನಗಳ ಕೊರತೆ’
ಈ ಹತ್ತು ವರ್ಷಗಳಲ್ಲಿ ವಾರ್ಡ್‌ನಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಅಲ್ಲಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆರಂಭಿಸಲಾಗಿದ್ದು, ಅನುಕೂಲವಾಗಿದೆ. ನಗರದ ಎಲ್ಲೆಡೆಯಂತೆ ಇಲ್ಲಿಯೂ ಸಂಚಾರ ದಟ್ಟಣೆ ಇದೆ. ಆಟದ ಮೈದಾನದ ಕೊರತೆ ಇದೆ. ನಾವು ಕ್ರಿಕೆಟ್‌ ಆಡಲು ಎಚ್‌ಎಂಟಿ ಮೈದಾನಕ್ಕೆ ಹೋಗಬೇಕಾಗಿದೆ. 
–ಶ್ರೀನಾಥ್‌, ಹೆಬ್ಬಾಳ ವಾರ್ಡ್‌ ನಿವಾಸಿ 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು