ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲು ಜಾರಿಗೆ ಒತ್ತಾಯ

ಕಾನೂನು ವಿಶ್ವವಿದ್ಯಾಲಯ ಪ್ರವೇಶಾತಿ: ರಾಜ್ಯದವರಿಗೆ ಶೇ 50 ಕೋರಿಕೆ
Last Updated 10 ಜೂನ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ‘ನ್ಯಾಷನಲ್‌ ಲಾ ಆಫ್‌ ಸ್ಕೂಲ್‌ ವಿಶ್ವವಿದ್ಯಾಲಯದ ಪ್ರವೇಶಾತಿಯಲ್ಲಿ ರಾಜ್ಯದ ವಿದ್ಯಾರ್ಥಿಗಳಿಗೆ ಶೇ 50 ರಷ್ಟು ಮೀಸಲು ನೀಡುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ತಿದ್ದುಪಡಿ ಮಸೂದೆಗೆ ಶೀಘ್ರವೇ ಅನುಮೋದನೆ ನೀಡಬೇಕು’ ಎಂದು ಬೆಂಗಳೂರು ವಕೀಲರ ಸಂಘ ರಾಜ್ಯಪಾಲರನ್ನು ಒತ್ತಾಯಿಸಿದೆ.

ಈ ಕುರಿತಂತೆ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ಮತ್ತು ಪ್ರಧಾನ ಕಾರ್ಯದರ್ಶಿ ಎ.ಎನ್‌.ಗಂಗಾಧರಯ್ಯ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದು, ‘ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ (ತಿದ್ದುಪಡಿ) ಮಸೂದೆ–2017 ಅನ್ನು ಶೀಘ್ರ ಜಾರಿಗೆ ತರಬೇಕು’ ಎಂದು ಒತ್ತಾಯಿಸಿದ್ದಾರೆ.

‘ರಾಜ್ಯದ ವಿದ್ಯಾರ್ಥಿಗಳ ಹಿತಾಸಕ್ತಿ ದೃಷ್ಟಿಯಿಂದ ತಿದ್ದುಪಡಿ ಮಸೂದೆಗೆ ಶೀಘ್ರವೇ ಅನುಮೋದನೆ ನೀಡಬೇಕು. ಇದರಿಂದ ಪ್ರಸಕ್ತ ಶೈಕ್ಷಣಿಕ ವರ್ಷದ ಪ್ರವೇಶಾತಿಗೆ ಅನುಕೂಲವಾಗುತ್ತದೆ. ಈಗಾಗಲೇ ಸಂಘವು ತಮ್ಮ ಕಚೇರಿಗೆ 2018ರ ಮಾರ್ಚ್‌ 24ರಂದೇ ಈ ಕುರಿತು ಮನವಿ ಸಲ್ಲಿಸಿದೆ. ಆದರೆ, ಈತನಕ ಅದಕ್ಕೆ ಯಾವುದೇ ಪ್ರತ್ಯುತ್ತರ ಬಂದಿಲ್ಲ’ ಎಂದು ಪತ್ರದಲ್ಲಿ ವಿವರಿಸಲಾಗಿದೆ.

‘ದೇಶದ ವಿವಿಧಡೆ ರಾಷ್ಟ್ರೀಯ ಕಾನೂನು ಕಾಲೇಜುಗಳಲ್ಲಿ ಸ್ಥಳೀಯರಿಗೆ ಮೀಸಲು ಕಲ್ಪಿಸಲಾಗಿದೆ. ಆದರೆ, ಕರ್ನಾಟಕದಲ್ಲಿ ನೀಡಿಲ್ಲ’ ಎಂದು ಸಂಘ ಆಕ್ಷೇಪಿಸಿದೆ.

ಪರಿಷತ್ ಮನವಿ: ‘ತಿದ್ದುಪಡಿ ಮಸೂದೆ ಆದಷ್ಟು ಶೀಘ್ರ ಜಾರಿಗೆ ಬರುವಂತಾಗಬೇಕು’ ಎಂದು ರಾಜ್ಯ ವಕೀಲರ ಪರಿಷತ್‌ ಹೇಳಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪರಿಷತ್‌ ಅಧ್ಯಕ್ಷ ಕೆ.ಬಿ.ನಾಯಕ್‌, ‘ಸದ್ಯ ನ್ಯಾಷನಲ್‌ ಲಾ ಸ್ಕೂಲ್ ಕೇವಲ ಉತ್ತರ ಭಾರತದವರಿಗೆ ಮಾತ್ರ ಎಂಬಂತಾಗಿದೆ. ಸ್ಥಳೀಯರಿಗೆ ಆದ್ಯತೆ ಇಲ್ಲದಂತಾಗಿದೆ’ ಎಂದರು.

ಸಿಒಪಿ ಅವಧಿ: ‘2009ರ ಪೂರ್ವದಲ್ಲಿ ವಕೀಲರಾಗಿ ನೋಂದಾಯಿತರಾದವರು 2016ರ ನವೆಂಬರ್ 30ರವರೆಗೆ ವಕೀಲಿ ವೃತ್ತಿ ನಡೆಸುವುದಕ್ಕಾಗಿ (ಸರ್ಟಿಫಿಕೇಷನ್‌ ಆಫ್‌ ಪ್ರ್ಯಾಕ್ಟೀಸ್–ಸಿಒಪಿ) ರಾಜ್ಯ ವಕೀಲರ ಪರಿಷತ್‌ನಿಂದ ವೃತ್ತಿನಿರತ ದೃಢೀಕರಣ ಪತ್ರ ಪಡೆಯದೇ ಇರುವವರು, ₹ 1 ಸಾವಿರ ಶುಲ್ಕ ಭರಿಸಿ 2019ರ ಆಗಸ್ಟ್‌ 31ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ’ ಎಂದು ಅವರು ತಿಳಿಸಿದರು.

‘2009–2010ರ ಶೈಕ್ಷಣಿಕ ವರ್ಷದ ನಂತರ ಕಾನೂನು ಪದವಿ ಪಡೆದು ಅಖಿಲ ಭಾರತ ಮಟ್ಟದಲ್ಲಿ ನಡೆಯುವ ಬಾರ್‌ ಪರೀಕ್ಷೆಯಲ್ಲಿ ಪಾಸಾದವರು ಭಾರತೀಯ ವಕೀಲರ ಪರಿಷತ್‌ ನೀಡಿರುವ ಪ್ರಮಾಣ ಪತ್ರ ಮತ್ತು ಕಾನೂನು ಪದವಿ ಅಂಕಪಟ್ಟಿಗಳ ದ್ವಿಪ್ರತಿಯೊಂದಿಗೆ ಪರಿಷತ್‌ಗೆ 2019ರ ಆಗಸ್ಟ್‌ 31ರೊಳಗೆ ಘೋಷಣಾ ಪತ್ರ ಸಲ್ಲಿಸಬೇಕು’ ಎಂದೂ ನಾಯಕ್ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT