ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಕಾರಿ, ಬೆಳೆಗಳಲ್ಲಿ ಹೆಚ್ಚಿದ ರಾಸಾಯನಿಕ

ಆರು ಕೆರೆಗಳ ನೀರಿನಲ್ಲಿ ಅತಿಯಾದ ಲೋಹದ ಅಂಶ
Last Updated 20 ಜನವರಿ 2021, 1:21 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಸುತ್ತಮುತ್ತಲಿನ ಆರು ಕೆರೆಗಳ ನೀರು ಅತಿಯಾಗಿ ಕಲುಷಿತಗೊಂಡಿರುವುದರ ಪರಿಣಾಮವಾಗಿ ಸುತ್ತಲಿನ ಜಮೀನುಗಳಲ್ಲಿ ಬೆಳೆಯುತ್ತಿರುವ ತರಕಾರಿ ಮತ್ತು ಇತರ ಬೆಳೆಗಳಲ್ಲಿ ರಾಸಾಯನಿಕದ ಪ್ರಮಾಣ ಹೆಚ್ಚುತ್ತಿರುವುದನ್ನು ವಿಜ್ಞಾನಿಗಳ ತಂಡ ಪತ್ತೆಮಾಡಿದೆ.

ಮಾರಗೊಂಡನಹಳ್ಳಿ, ಎಲೆ ಮಲ್ಲಪ್ಪ ಶೆಟ್ಟಿ, ಹೊಸಕೋಟೆ, ವರ್ತೂರು, ಬೈರಮಂಗಲ ಮತ್ತು ಜಿಗಣಿ ಕೆರೆಗಳ ನೀರಿನಲ್ಲಿ ಲೋಹದ ಅಂಶ ಹೆಚ್ಚಾಗಿರುವುದು ಮೂರು ವರ್ಷಗಳ ಕಾಲ ನಡೆಸಿದ ಅಧ್ಯಯನದಲ್ಲಿ ದೃಢಪಟ್ಟಿದೆ. ‘ಕರೆಂಟ್‌ ಸೈನ್ಸ್‌‘ ನಿಯತಕಾಲಿಕೆಯಲ್ಲಿ ಸಂಶೋಧಕರ ತಂಡ ಈ ವಿಚಾರವನ್ನು ಹಂಚಿಕೊಂಡಿದೆ.

‘ಕೆಲವು ವರ್ಷಗಳ ಹಿಂದೆ ಉತ್ತಮ ಇಳುವರಿ ನೀಡುತ್ತಿದ್ದ ಜಮೀನುಗಳಲ್ಲಿ ಈಗ ಉತ್ಪಾದನೆ ಗಣನೀಯವಾಗಿ ಕುಸಿದಿರುವುದು ಕಂಡುಬಂದಿದೆ’ ಎಂದು ಅಧ್ಯಯನ ತಂಡದಲ್ಲಿದ್ದ ಬೆಂಗಳೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಎನ್‌.ಬಿ. ಪ್ರಕಾಶ್‌ ತಿಳಿಸಿದರು.

ಈ ಆರೂ ಕೆರೆಗಳ ಪ್ರದೇಶದಲ್ಲಿ ಪ್ರತಿ ಕೆ.ಜಿ.ಗೆ ಕ್ರೋಮಿಯಂ ಪ್ರಮಾಣ 89.36 ಮಿಲಿ ಗ್ರಾಂ.ನಿಂದ 145.21 ಮಿ.ಗ್ರಾಂ. ಇದೆ (ದೇಶದಲ್ಲಿ 100 ಮಿ.ಗ್ರಾಂ. ಮಿತಿ ಇದೆ). ಕ್ಯಾಡ್ಮಿಯಂ ಮಿತಿ 3 ಗ್ರಾಂ. ಇದ್ದು, ಈ ಕೆರೆಗಳ ಪ್ರದೇಶದಲ್ಲಿ 2.87ರಿಂದ 5.33ರವರೆಗೂ ಇದೆ. ನಿಕ್ಕಲ್‌ ಪ್ರಮಾಣದ ಮಿತಿ 50 ಮಿ.ಗ್ರಾಂ. ಇದ್ದು, ಈ ಕೆರೆಗಳ ವ್ಯಾಪ್ತಿಯಲ್ಲಿ 30.38 ಮಿ. ಗ್ರಾಂನಿಂದ 50.51 ಮಿ.ಗ್ರಾಂ.ವರೆಗೂ ಪತ್ತೆಯಾಗಿದೆ ಎಂದು ಅಧ್ಯಯನ ತಂಡ ತಿಳಿಸಿದೆ.

‘ಗಿಡಗಳು ತಮಗೆ ಅಗತ್ಯವಿರುವ ಪೋಷಕಾಂಶಗಳ ಜತೆಯಲ್ಲಿ ಅತಿಯಾದ ಲೋಹದ ಅಂಶಗಳನ್ನೂ ಬಳಸಿಕೊಳ್ಳುತ್ತಿವೆ. ಪರಿಣಾಮವಾಗಿ ಕೃಷಿ ಉತ್ಪನ್ನಗಳಲ್ಲೂ ಲೋಹದ ಅಂಶ ಹೆಚ್ಚಾಗುತ್ತಿದೆ’ ಎನ್ನುತ್ತಾರೆ ಪ್ರೊ. ಪ್ರಕಾಶ್.

ಎಲ್ಲ ಬೆಳೆಗಳಲ್ಲಿ ಯುರೋಪ್‌ ಖಂಡದಲ್ಲಿ ನಿಗದಿಪಡಿಸಿರುವ 0.2 ಮಿ. ಗ್ರಾಂ.ಗಳಿಗಿಂತಲೂ ಹೆಚ್ಚಿನ ಪ್ರಮಾಣದ ಕ್ರೋಮಿಯಂ ಇದೆ. ನವಿಲು ಕೋಸು, ಪಾಲಕ್‌ ಸೊಪ್ಪು, ಹರಿವೆ ಸೊಪ್ಪು, ಟೊಮಾಟೊ, ಭತ್ತ ಮತ್ತು ಬೀಟ್‌ರೂಟ್‌ಗಳಲ್ಲಿ ಅತಿಯಾದ ಪ್ರಮಾಣದ ಕ್ರೋಮಿಯಂ ಪತ್ತೆಯಾಗಿದೆ ಎಂದು ಅಧ್ಯಯನ ತಂಡ ಹೇಳಿದೆ.

ಕೈಗಾರಿಕೆಗಳೇ ಕಾರಣ:‘ಕೈಗಾರಿಕೆಗಳು ಹೊರಬಿಡುವ ವಿಷ ನಮ್ಮ ಊಟದ ತಟ್ಟೆಯನ್ನು ತಲುಪುತ್ತಿದೆ. ಕೃಷಿ ಉತ್ಪನ್ನಗಳಲ್ಲಿ ಅತಿಯಾದ ಪ್ರಮಾಣದ ಲೋಹದ ಅಂಶ ಪತ್ತೆಯಾಗಿರುವುದಕ್ಕೆ ಕೈಗಾರಿಕೆಗಳೇ ಕಾರಣ. ಉದ್ದಿಮೆಗಳು ಕಾನೂನಿನ ಪ್ರಕಾರ ಮಾಲಿನ್ಯ ನಿಯಂತ್ರಣದ ಕ್ರಮಗಳನ್ನು ಕೈಗೊಳ್ಳಬೇಕು. ಆದರೆ, ವಾಸ್ತವದಲ್ಲಿ ಅದು ಆಗುತ್ತಿಲ್ಲ’ ಎಂದು ಸಂಶೋಧನಾ ಲೇಖನದ ಕುರಿತ ಪ್ರತಿಕ್ರಿಯೆಯಲ್ಲಿ ಪರಿಸರ ವಿಜ್ಞಾನಿ ಡಾ.ಟಿ.ವಿ. ರಾಮಚಂದ್ರ ಹೇಳಿದ್ದಾರೆ.

‘ತರಕಾರಿಗಳ ಮೂಲಕ ಅತಿಯಾದ ಪ್ರಮಾಣದ ಲೋಹದ ಅಂಶ ಮನುಷ್ಯನ ದೇಹ ಸೇರುವುದು ಅಪಾಯಕಾರಿ. ಎಳೆಯ ಮಕ್ಕಳ ಮೇಲೆ ತೀವ್ರ ದುಷ್ಪರಿಣಾಮ ಆಗುತ್ತದೆ. ಕ್ಯಾಡ್ಮಿಯಂ ಪ್ರಮಾಣದ ಹೆಚ್ಚಳದಿಂದ ಕ್ಯಾನ್ಸರ್, ಹೃದ್ರೋಗ, ಮಧುಮೇಹ ಮತ್ತು ಚರ್ಮ ರೋಗಗಳು ಬರುವ ಸಾಧ್ಯತೆ ಇರುತ್ತದೆ‘ ಎನ್ನುತ್ತಾರೆ ಪೋಷಕಾಂಶ ತಜ್ಞೆ ಶೀಲಾ ಕೃಷ್ಣಸ್ವಾಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT