ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಒಂದೊಂದೇ ದೇಶದಿಂದ ಹಿಂದೂಗಳ ಸಮಾಪ್ತಿ: ದತ್ತಾತ್ರೇಯ ಹೊಸಬಾಳೆ ಕಳವಳ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಕಳವಳ
Published : 11 ಆಗಸ್ಟ್ 2024, 15:50 IST
Last Updated : 11 ಆಗಸ್ಟ್ 2024, 15:50 IST
ಫಾಲೋ ಮಾಡಿ
Comments

ಬೆಂಗಳೂರು: ‘ಹಿಂದೂಗಳನ್ನು ಒಂದೊಂದೇ ದೇಶದಿಂದ ಸಮಾಪ್ತಗೊಳಿಸುವ ಕಾರ್ಯ ನಡೆಯುತ್ತಿದೆ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಕಳವಳ ವ್ಯಕ್ತಪಡಿಸಿದರು.

ಭಾನುವಾರ ವಿಶ್ವ ಹಿಂದು ಪರಿಷತ್‌ನ ದಕ್ಷಿಣ ಪ್ರಾಂತ ಕಾರ್ಯಾಲಯ ‘ಧರ್ಮಶ್ರೀ’ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹಿಂದೂಗಳು ನೂರಾರು ವರ್ಷಗಳಿಂದ ಯಾವ ದೇಶಕ್ಕೆ ವಲಸೆ ಹೋದರೂ ಅಲ್ಲಿನ ಸಂಸ್ಕೃತಿಯ ಜೊತೆ ಹೊಂದಿಕೊಂಡು, ಆ ಸಂಸ್ಕೃತಿಯನ್ನು ಗೌರವಿಸಿಕೊಂಡು ಬದುಕುವುದನ್ನು ರೂಢಿಸಿಕೊಂಡಿದ್ದಾರೆ. ಇಂದು ಅನೇಕ ದೇಶಗಳಲ್ಲಿ ಹಿಂದುಗಳ ಮಾನವಹಕ್ಕುಗಳ ಸ್ಥಿತಿ ಗಂಭೀರವಾಗಿದೆ. ಶಾಂತಿದೂತರು ಎಂದೆನಿಸಿಕೊಂಡವರು ಅಶಾಂತಿ ಹರಡುತ್ತಿದ್ದಾರೆ. ಸೇವೆ ಮಾಡುತ್ತೇವೆಂದು ಹೊರಟವರು ಮತಾಂತರ ಮಾಡುತ್ತಿದ್ದಾರೆ’ ಎಂದು ತಿಳಿಸಿದರು.

‘ಬಾಂಗ್ಲಾದ ಹಿಂದುಗಳನ್ನು ರಕ್ಷಣೆ ಮಾಡಲು ಜಗತ್ತಿನ ಎಲ್ಲರೂ ಧ್ವನಿ ಎತ್ತಬೇಕು, ಭಾರತದ ಹಿಂದು ಸಮಾಜ ಇದಕ್ಕಾಗಿ ತನ್ನಿಂದ ಸಾಧ್ಯವಿರುವುದನ್ನೆಲ್ಲ ಮಾಡಬೇಕು. ಭಾರತದ ಸರ್ಕಾರವು ಬಾಂಗ್ಲಾ ದೇಶದಲ್ಲಿರುವ ಹಿಂದುಗಳು, ಬೌದ್ಧರು ಸೇರಿ ಎಲ್ಲ ಅಲ್ಪಸಂಖ್ಯಾತರ ಜೀವನ, ಮಾನ, ಪ್ರಾಣ, ಆಸ್ತಿಗಳ ರಕ್ಷಣೆ ಮಾಡಲು ಮುಂದಾಗಬೇಕು’ ಎಂದು ಆಗ್ರಹಿಸಿದರು.

ಆರ್ಟ್ ಆಫ್ ಲಿವಿಂಗ್ ಫೌಂಡೇಷನ್ ಸಂಸ್ಥಾಪಕ ಶ್ರೀಶ್ರೀ ರವಿಶಂಕರ ಗುರೂಜಿ ಮಾತನಾಡಿ, ‘ಬಾಂಗ್ಲಾದ ಪರಿಸ್ಥಿತಿಯ ಬಗ್ಗೆ ಆತಂಕ, ಕಳಕಳಿ ಹೊಂದಿಲ್ಲದವರು ಮನುಷ್ಯರೇ ಅಲ್ಲ. ಅಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಮೃಗೀಯ ವರ್ತನೆ ನಿಲ್ಲಬೇಕು. ಅಲ್ಲಿನ ಸರ್ಕಾರವು ತಕ್ಷಣ ಹಿಂದು ಸಮಾಜದವರ ರಕ್ಷಣೆಗೆ ಮುಂದಾಗಬೇಕು’ ಎಂದು ಆಗ್ರಹಿಸಿದರು.

‘ಹಿಂದೂಗಳನ್ನು ಜಾತಿ ಹೆಸರಿನಲ್ಲಿ ವಿಭಜಿಸಲಾಗುತ್ತಿದ್ದು, ಅದಕ್ಕೆ ತಕ್ಕ ಉತ್ತರ ನೀಡಿ ಒಗ್ಗಟ್ಟು ಪ್ರದರ್ಶಿಸಬೇಕು. ಅಸ್ಪಶ್ಯತೆ ಹೋಗಲಾಡಿಸಬೇಕು. ಜೈನ, ಬೌದ್ಧ ಮತ್ತು ಸಿಖ್ಖರ ಜೊತೆ ನಿರಂತರವಾಗಿ ಸಂವಾದವನ್ನಿಟ್ಟುಕೊಂಡು ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಪ್ರಯತ್ನ ನಡೆಯಬೇಕು’ ಎಂದು ಸಲಹೆ ನೀಡಿದರು.

ವಿಶ್ವ ಹಿಂದೂ ಪರಿಷದ್ ಅಂತರರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್, ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿ ಜಗನ್ನಾಥ ಶಾಸ್ತ್ರಿ, ಹಿರಿಯ ಕಾರ್ಯಕರ್ತ ವೈ.ಕೆ‌. ರಾಘವೇಂದ್ರ ರಾವ್, ವಿಶ್ವ ಹಿಂದೂ ಪರಿಷತ್ ಉಪಾಧ್ಯಕ್ಷೆ ವಿಜಯಲಕ್ಷ್ಮಿ ದೇಶಮಾನೆ, ಕ್ಷೇತ್ರೀಯ ಪ್ರಚಾರಕ್ ಸುಧೀರ್, ಕ್ಷೇತ್ರೀಯ ಸಂಘಚಾಲಕ ಡಾ.ಪಿ.ವಾಮನ್ ಶೆಣೈ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT