ಮಂಗಳವಾರ, ಜನವರಿ 25, 2022
25 °C
ಬಸವನಗುಡಿಯಲ್ಲಿ ಮರುಕಳಿಸಿದ ಸಂಭ್ರಮ: ಹರಿದು ಬಂದ ಜನಸಾಗರ

ಕಡಲೆಕಾಯಿ ಪರಿಷೆಗೆ ವೈಭವದ ಮೆರುಗು: ಬಸವನಗುಡಿಯಲ್ಲಿ ಮರುಕಳಿಸಿದ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಸವನಗುಡಿ ರಸ್ತೆಯ ಇಕ್ಕೆಲಗಳಲ್ಲಿ ಸೋಮವಾರ ಸಂಭ್ರಮದ ವಾತಾವರಣ. ‘ಬಡವರ ಬಾದಾಮಿ’ ಕಡಲೆಕಾಯಿಯ ರಾಶಿಗಳೇ ಎಲ್ಲೆಡೆ ಆವರಿಸಿಕೊಂಡಿದ್ದವು. ಬಸವಣ್ಣನ ಕ್ಷೇತ್ರದಲ್ಲಿ ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಗೆ ಜನಸಾಗರವೇ ಹರಿದು ಬಂದಿತ್ತು. ವಿದ್ಯಾರ್ಥಿಗಳು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಜನರ ಉತ್ಸಾಹ ಕೋವಿಡ್‌ ಕರಿನೆರಳನ್ನು ಮರೆಮಾಚಿತ್ತು. ಕೊರೊನಾ ವೈರಾಣುವಿನ ಹೊಸ ರೂಪಾಂತರ ತಳಿ ಓಮೈಕ್ರಾನ್ ಸೋಂಕಿನ ಭೀತಿಯ ನಡುವೆಯೂ ಸಂಭ್ರಮ ಕಳೆಗಟ್ಟಿತ್ತು.

ಬಸವನಗುಡಿಯ ಐತಿಹಾಸಿಕ ಕಡಲೆಕಾಯಿ ಪರಿಷೆಯಲ್ಲಿ ಕಂಡುಬಂದ ದೃಶ್ಯಗಳಿವು. ಕಾರ್ತಿಕ ಮಾಸದ ಕೊನೆಯ ಸೋಮವಾರ ಕಡಲೆಕಾಯಿ ಪರಿಷೆ ನಡೆಯುತ್ತದೆ.

ಮುಜರಾಯಿ ಇಲಾಖೆ, ಬಿಬಿಎಂಪಿ ಸಹಯೋಗದಲ್ಲಿ ನಡೆಯುವ ಈ ಕಡಲೆಕಾಯಿ ಪರಿಷೆಗೆ ಶಾಸಕರಾದ ಎಲ್‌.ಎ. ರವಿಸುಬ್ರಹ್ಮಣ್ಯ, ಉದಯ್ ಬಿ. ಗರುಡಾಚಾರ್ ಚಾಲನೆ ನೀಡಿದರು. ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ಗೌರವ್ ಗುಪ್ತ, ವಲಯ ಆಯುಕ್ತ ತುಳಸಿ ಮದ್ದಿನೇನಿ, ವಲಯ ಜಂಟಿ ಆಯುಕ್ತ ಜಗದೀಶ್ ನಾಯಕ್ ಇದ್ದರು.

ಪರಿಷೆ ಅಂಗವಾಗಿ ದೊಡ್ಡ ಬಸವಣ್ಣ ಮತ್ತು ದೊಡ್ಡ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ಅಭಿಷೇಕಗಳು ನಡೆದವು. ಕಡಲೆಕಾಯಿಯ ವಿಶೇಷ ಅಭಿಷೇಕ ನಡೆಸಲಾಯಿತು. ಕಡಲೆಕಾಯಿಯಿಂದ ಬಸವಣ್ಣನ ವಿಗ್ರಹದ ತುಲಾಭಾರ ನಡೆಸಿ ಸಾರ್ವಜನಿಕರಿಗೆ ಪ್ರಸಾದ ರೂಪದಲ್ಲಿ ವಿತರಿಸಲಾಯಿತು.

ರಸ್ತೆಯ ಅಕ್ಕಪಕ್ಕ ಎರಡು ಸಾವಿರ ತಾತ್ಕಾಲಿಕ ಮಳಿಗೆಗಳನ್ನು ತೆರೆಯಲಾಗಿದೆ. ಇವುಗಳಲ್ಲಿ ಕಡಲೆಕಾಯಿ ಮಾರಾಟ ಮಳಿಗೆಗಳೇ ಹೆಚ್ಚು. ತಿಂಡಿ–ತಿನಿಸು, ಬಣ್ಣ ಬಣ್ಣದ ಬಲೂನು, ಬಗೆ ಬಗೆಯ ಆಟಿಕೆ, ಅಲಂಕಾರಿಕ ವಸ್ತುಗಳು, ಗೃಹೋಪಯೋಗಿ ವಸ್ತುಗಳನ್ನು ಮಾರುವ ಮಳಿಗೆಗಳು ಸಹ ಜನರನ್ನು ಸೆಳೆಯುತ್ತಿವೆ. ಕೆಲವು ವ್ಯಾಪಾರಿಗಳು ಒಂದು ದೊಡ್ಡ ಸೇರು ಹಸಿ ಕಡಲೆಕಾಯಿಗೆ ₹50 ಮತ್ತು ಸಣ್ಣ ಸೇರು ಕಡಲೆಕಾಯಿಗಳನ್ನು ₹25ಗೆ ಮಾರಾಟ ಮಾಡಿದರು.

ಮಾಗಡಿ, ರಾಮನಗರ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ತಮಿಳುನಾಡು ಮತ್ತು ಆಂಧ್ರಪ್ರದೇಶ ಸೇರಿದಂತೆ ವಿವಿಧ ಭಾಗಗಳ ರೈತರು ಮತ್ತು ವ್ಯಾಪಾರಿಗಳು ಕಡಲೆಕಾಯಿ ಮಾರಾಟಕ್ಕಿಟ್ಟಿದ್ದಾರೆ. ಬೇಯಿಸಿದ ಕಡಲೆಕಾಯಿ, ಹಸಿ ಕಡಲೆಕಾಯಿಗಳು ಇಲ್ಲಿ ಲಭ್ಯ. ಡಿ.1ರವರೆಗೆ ಪರಿಷೆ ನಡೆಯಲಿದೆ.

ಪರಿಷೆಯ ಮುನ್ನಾ ದಿನವಾದ ಭಾನುವಾರವೇ ಒಂದು ಲಕ್ಷಕ್ಕೂ ಹೆಚ್ಚು ಜನ ಭೇಟಿ ನೀಡಿದ್ದರು. ಈ ಮೂರು ದಿನಗಳಲ್ಲಿ ಸುಮಾರು 6 ಲಕ್ಷ ಜನ ಪರಿಷೆಗೆ ಭೇಟಿ ನೀಡುವ ನಿರೀಕ್ಷೆ ಇದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

 

ಪರಿಷೆಯಲ್ಲಿ ಲಸಿಕಾ ಕೇಂದ್ರ

ಪರಿಷೆಯಲ್ಲಿ ಲಸಿಕಾ ಕೇಂದ್ರಗಳನ್ನು ಸಹ ಸ್ಥಾಪಿಸಲಾಗಿದೆ. ಕೋವಿಡ್‌ ಮಾರ್ಗಸೂಚಿಗಳನ್ನು ಪಾಲಿಸುವಂತೆ ಅರಿವು ಮೂಡಿಸಲು ಹೆಚ್ಚಿನ ಸಂಖ್ಯೆಯಲ್ಲಿ ಮಾರ್ಷಲ್‌ಗಳನ್ನು ನಿಯೋಜಿಸಲಾಗಿದೆ. ಜನರ ಸುರಕ್ಷತೆಗಾಗಿ 500ಕ್ಕೂ ಹೆಚ್ಚು ಪೊಲೀಸರು, ಹೋಂ ಗಾರ್ಡ್‌ಗಳನ್ನು ನಿಯೋಜಿಸಲಾಗಿದೆ. 30ಕ್ಕಿಂತ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. 12 ಕಾವಲು ಸ್ಥಾವರಗಳನ್ನು ಸ್ಥಾಪಿಸಲಾಗಿದೆ.

ಪ್ಲಾಸ್ಟಿಕ್‌ ನಿಷೇಧ

ಪರಿಷೆಯಲ್ಲಿ ಪ್ಲಾಸ್ಟಿಕ್‌ ನಿಷೇಧಿಸಲಾಗಿದೆ. ಜನರು ಪೇಪರ್‌ ಬ್ಯಾಗ್‌ ಅಥವಾ ಬಟ್ಟೆ ಚೀಲಗಳನ್ನು ತರಬೇಕು ಎಂದು ಬಿಬಿಎಂಪಿ ಮನವಿ ಮಾಡಿದೆ.

* ಕೋವಿಡ್‌ ಕಾರಣಕ್ಕೆ ಪರಿಷೆಯನ್ನು ಕಳೆದ ವರ್ಷ ಸಂಭ್ರಮದಿಂದ ನಡೆಸಲು ಸಾಧ್ಯವಾಗಿರಲಿಲ್ಲ. ಈ ಬಾರಿ ಮತ್ತೆ ಹಳೆಯ ಸಂಪ್ರದಾಯಕ್ಕೆ ಮೆರುಗು ಬಂದಿದೆ. ಮುಂದಿನ ಪೀಳಿಗೆಗೆ ಈ ಸಂಪ್ರದಾಯ, ಸಂಸ್ಕೃತಿಯ ಪರಿಚಯವಾಗಬೇಕು.

-ಎಲ್‌.ಎ. ರವಿ ಸುಬ್ರಹ್ಮಣ್ಯ, ಶಾಸಕ

* ಕೊರೊನಾ ತೊಲಗಿ ಇದೇ ರೀತಿಯ ಉತ್ಸವಗಳು ಯಾವುದೇ ತೊಡಕುಗಳು ಇಲ್ಲದೆಯೇ ನಿರಂತರವಾಗಿ ನಡೆಯಲಿ. ಈ ರೀತಿ ಪರಿಷೆಗಳಿಂದ ರೈತರಿಗೂ, ವ್ಯಾಪಾರಸ್ಥರಿಗೂ ಅನುಕೂಲವಾಗುತ್ತದೆ.

-ಮಂಜುನಾಥ್‌, ನಾಗರಿಕ

* ಕಡಲೆ ಕಾಯಿ ಪರಿಷೆ ನೋಡಿ ಖುಷಿಯಾಗಿದೆ. ಬಹು ದಿನಗಳ ನಂತರ ಇಂತಹ ಜಾತ್ರೆಗೆ ಬಂದಿದ್ದೇನೆ. ಮನೆಯಲ್ಲಿಯೇ ಇದ್ದು ಬೇಸರವಾಗಿತ್ತು. ಕಡಲೆಕಾಯಿ ಮತ್ತು ಹಲವಾರು ವಸ್ತುಗಳನ್ನು ಖರೀದಿಸಿದ್ದೇನೆ.

-ಸಂಗೀತಾ, ವಿದ್ಯಾರ್ಥಿನಿ

* ಇಷ್ಟೊಂದು ಪ್ರಮಾಣದಲ್ಲಿ ಕಡಲೆಕಾಯಿ ವ್ಯಾಪಾರ ವಹಿವಾಟು ನಾನು ನೋಡಿದ್ದು ಇದೇ ಮೊದಲು. ಈ ಪರಿಷೆ ಬಗ್ಗೆ ಕೇಳಿದ್ದೆ. ಆದರೆ, ನೋಡಿರಲಿಲ್ಲ. ಹೀಗಾಗಿ ನೋಡಲು ಬಂದೆ

-ಪ್ರಣತಿ, ವಿದ್ಯಾರ್ಥಿನಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು