ಶುಕ್ರವಾರ, ಜೂನ್ 25, 2021
22 °C

ಜಾತಿ ವ್ಯವಸ್ಥೆಯೇ ಭ್ರಷ್ಟಾಚಾರಕ್ಕೆ ಬುನಾದಿ: ಸಿದ್ದರಾಮಯ್ಯ ಅಭಿಪ್ರಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಜಾತಿ ವ್ಯವಸ್ಥೆಯು ಸಮಾಜದ ಬಹುದೊಡ್ಡ ಪಿಡುಗು. ಭ್ರಷ್ಟಾಚಾರಕ್ಕೆ ಇದೇ ಬುನಾದಿ. ಸಂತರು, ಸೂಫಿಗಳು, ದಾರ್ಶನಿಕರು, ಸಮಾಜ ಸುಧಾರಕರು ಎಷ್ಟೆಲ್ಲಾ ಪ್ರಯತ್ನಪಟ್ಟರೂ ಈ ಪಿಡುಗನ್ನು ಬೇರು ಸಹಿತ ಕಿತ್ತೊಗೆಯಲು ಆಗಿಲ್ಲ. ಈ ವ್ಯವಸ್ಥೆ ಜೀವಂತವಾಗಿರುವವರೆಗೂ ಸಮಾಜದಲ್ಲಿ ಬದಲಾವಣೆ ಸಾಧ್ಯವಿಲ್ಲ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಎಚ್‌.ಎಂ.ರೇವಣ್ಣ ಸಾಂಸ್ಕೃತಿಕ ಪ್ರತಿಷ್ಠಾನವು ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಎಚ್‌.ಎಂ.ರೇವಣ್ಣ–ಅಭಿನಂದನೆ ಮತ್ತು ಗ್ರಂಥಗಳ ಬಿಡುಗಡೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಓದಿ: 

‘ಬಡವರು ಹಾಗೂ ಶೋಷಿತ ವರ್ಗಕ್ಕೆ ಅವಕಾಶಗಳನ್ನು ಕಲ್ಪಿಸಿಕೊಡುವುದು ನಿಜವಾದ ರಾಜಕಾರಣ. ಬಡವರು ಮುಖ್ಯವಾಹಿನಿಗೆ ಬರದೇ ಹೋದರೆ ಸಮ ಸಮಾಜದ ಆಶಯ ಈಡೇರುವುದಿಲ್ಲ. ರಾಜಕೀಯ ಸ್ವಾತಂತ್ರ್ಯದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯ ಸೇರಿದಾಗ ಮಾತ್ರ ಬದಲಾವಣೆ ಸಾಧ್ಯ ಎಂದು ಬಿ.ಆರ್‌.ಅಂಬೇಡ್ಕರ್‌ ಅವರೇ ಹೇಳಿದ್ದಾರೆ. ತಮ್ಮ ಜಾತಿಯವರು ಎಂಬ ಕಾರಣಕ್ಕೆ ಭ್ರಷ್ಟ ರಾಜಕಾರಣಿ ಹಾಗೂ ಅಧಿಕಾರಿಗಳನ್ನು ಜನರೇ ಸಮರ್ಥಿಸಿಕೊಳ್ಳುತ್ತಾರೆ. ಈ ಧೋರಣೆ ಬದಲಾಗಬೇಕು’ ಎಂದರು.

ಕಾಂಗ್ರೆಸ್‌ ಮುಖಂಡ ಎಂ.ವೀರಪ್ಪ ಮೊಯಿಲಿ, ‘ರೇವಣ್ಣ ನಾನು ಗುರುತಿಸಿದ ಶಾಸಕ. ಅವರು ಜನಪರ ಕೆಲಸಗಳನ್ನು ಮಾಡುತ್ತಾ ಇಷ್ಟು ಎತ್ತರಕ್ಕೆ ಬೆಳೆದಿರುವುದು ಹೆಮ್ಮೆಯ ವಿಷಯ’ ಎಂದರು.

ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ‘ನಮ್ಮದು 35 ವರ್ಷಗಳ ಗೆಳೆತನ. ರಾಜಕಾರಣದಲ್ಲಿ ದ್ವೇಷ, ಅಸೂಯೆ ಹೆಚ್ಚು. ಹೀಗಿದ್ದರೂ ನಾನು, ರೇವಣ್ಣ ಮತ್ತು ಸಿದ್ದರಾಮಯ್ಯ ಕುಟುಂಬದ ಸದಸ್ಯರಂತಿದ್ದೇವೆ’ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ‘ನಾನು ಮತ್ತು ರೇವಣ್ಣ ಜೊತೆ ಜೊತೆಯಾಗಿಯೇ ಬೆಳೆದವರು. ಅವರು ಉತ್ತಮ ಕಬಡ್ಡಿ ಆಟಗಾರ. ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಎಲ್ಲರನ್ನೂ ಪ್ರೇರೇಪಿಸುತ್ತಿದ್ದರು’ ಎಂದರು.

ಎಚ್‌.ಎಂ.ರೇವಣ್ಣ, ‘ಇವತ್ತಿನ ರಾಜಕಾರಣ ಹಣ ಬಲ ಮತ್ತು ತೋಳ್ಬಲದ ಮೇಲೆ ನಡೆಯುತ್ತಿದೆ. ಇಂತಹ ವ್ಯವಸ್ಥೆಯಲ್ಲಿ ನಾವು ಸ್ವಂತ ಬಲದಿಂದ ಮೇಲಕ್ಕೇರಿದ್ದೇವೆ’ ಎಂದರು.

ಕವಿ ಸಿದ್ದಲಿಂಗಯ್ಯ ‘ಬೂಸಾ ಚಳವಳಿ ವೇಳೆ ನನ್ನ ಮೇಲೆ ಹಲ್ಲೆ ನಡೆದಿತ್ತು. ಆಗ ರೇವಣ್ಣ ನನ್ನ ಜೀವ ಉಳಿಸಿದ್ದರು. ಈ ವೇದಿಕೆಯಲ್ಲಿ ಕುಳಿತು ಮಾತನಾಡುತ್ತಿರುವುದಕ್ಕೆ ಅವರೇ ಕಾರಣ’ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌, ’ಸಂಗತ‘ ಕೃತಿಯ ಸಂಪಾದಕರಾದ ಲಕ್ಷ್ಮಣ ಕೊಡಸೆ, ಕಾ.ತ.ಚಿಕ್ಕಣ್ಣ, ಕಿರುಚಿತ್ರ ನಿರ್ದೇಶಕ ಹುಲಿ ಚಂದ್ರಶೇಖರ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು