ಬೆಂಗಳೂರು: ನಾಗವಾರದ ಮಾನ್ಯತಾ ಟೆಕ್‌ಪಾರ್ಕ್ ಬಳಿಯ ಇಂಡಿಯನ್ ಪಬ್ಲಿಕ್ ಶಾಲೆಗೆ ಗುರುವಾರ ಮುಂಜಾನೆ ಬಾಂಬ್ ಬೆದರಿಕೆಯ ಇ–ಮೇಲ್ ಬಂದು ಕೆಲ ಸಮಯ ಆತಂಕ ತಂದೊಡ್ಡಿತ್ತು.
ಪೊಲೀಸರು ಪರಿಶೀಲನೆ ನಡೆಸಿದ ಮೇಲೆ ಹುಸಿ ಬಾಂಬ್ ಬೆದರಿಕೆ ಸಂದೇಶ ಎಂದು ಗೊತ್ತಾಗಿ ಶಾಲಾ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ನಿಟ್ಟುಸಿರು ಬಿಟ್ಟರು.
ಶಾಲಾ ಆಡಳಿತಾಧಿಕಾರಿ ಪದ್ಮಿನಿ ರಾಘವೇಂದ್ರ ಅವರು ನಿತ್ಯದಂತೆಯೇ ಗುರುವಾರ ಬೆಳಿಗ್ಗೆಯೂ ಶಾಲೆಗೆ ಬಂದಿದ್ದರು. ಇ–ಮೇಲ್ ಪರಿಶೀಲಿಸುತ್ತಿದ್ದ ವೇಳೆ ಫಾದರ್ ಕೊಡಾಚಿ ಹೆಸರಿನ coldghost456@gmail.com ಐ.ಡಿಯಿಂದ ಬಾಂಬ್ ಬೆದರಿಕೆ ಇ–ಮೇಲ್ ಬಂದಿತ್ತು. ‘ಶಾಲೆಯ ಸುತ್ತಲೂ ಐದು ಬಾಂಬ್‌ಗಳನ್ನು ಇಡಲಾಗಿದೆ. ಮಧ್ಯಾಹ್ನ 1.30ರ ಸುಮಾರಿಗೆ ಎಲ್ಲ ಬಾಂಬ್‌ಗಳು ಸ್ಫೋಟವಾಗಲಿವೆ’ ಎಂದು ಬರೆಯಲಾಗಿತ್ತು. ಇದನ್ನು ಓದಿ ಗಾಬರಿಗೊಂಡು ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು.
‘ಬಾಂಬ್ ಪತ್ತೆದಳ, ಬಾಂಬ್ ನಿಷ್ಕ್ರಿಯ ದಳ, ಶ್ವಾನದಳದೊಂದಿಗೆ ತಕ್ಷಣವೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಾಯಿತು. ಯಾವುದೇ ಸ್ಪೋಟಕ ವಸ್ತುಗಳು ಪತ್ತೆಯಾಗಿಲ್ಲ. ಇದೊಂದು ಹುಸಿ ಸಂದೇಶವೆಂದು ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.
ಈ ಸಂಬಂಧ ಗೋವಿಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಿಂದೆಯೂ ನಗರದ ಹಲವು ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆಯ ಇ–ಮೇಲ್ ಬಂದಿದ್ದವು.