ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣ್ಣದೋಕುಳಿಯಲ್ಲಿ ಮಿಂದೆದ್ದ ಬೆಂಗಳೂರು ಜನ

ಸ್ನೇಹ, ಪ್ರೀತಿಯ ಸಂಕೇತವಾಗಿ ಬಣ್ಣ ಎರಚಿ ಸಂಬಂಧಗಳ ರಂಗು ಹೆಚ್ಚಿಸಿಕೊಂಡ ಯುವಸಮೂಹ
Published 25 ಮಾರ್ಚ್ 2024, 16:19 IST
Last Updated 25 ಮಾರ್ಚ್ 2024, 16:19 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ವಿವಿಧೆಡೆ ಸೋಮವಾರ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಮಕ್ಕಳು, ಯುವಜನರು ಸೇರಿದಂತೆ ಎಲ್ಲ ವಯೋ­ಮಾನದವರು ಬೆಳಿಗ್ಗೆಯಿಂದ ಸಂಜೆಯವರೆಗೂ ಬಣ್ಣದಲ್ಲಿ ಮಿಂದೆದ್ದರು.

ಯುವಜನರು ರಸ್ತೆ, ಬೀದಿಗಳಲ್ಲಿ ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸಿದರು. ಹೋಟೆಲ್‌ಗಳು, ಮೈದಾನಗಳಲ್ಲಿಯೂ ಹೋಳಿ ಆಚರಿಸಲಾಯಿತು. ಕೆಲ ವಸತಿ ಸಮುಚ್ಚಯ ಹಾಗೂ ಮನೆಗಳಲ್ಲಿ ಪರಸ್ಪರ ಹೋಳಿ ಆಚರಿಸಿ, ನಂತರ ಸಿಹಿ ಹಂಚಿ ಸವಿದರು.

ಯುವಕ, ಯುವತಿಯರು, ಮಕ್ಕಳು, ಮಹಿಳೆಯರು ಪರಸ್ಪರ ಬಣ್ಣದಾಟದಲ್ಲಿ ತೊಡಗಿಸಿಕೊಂಡಿರುವ ದೃಶ್ಯ ಸಾಮಾನ್ಯವಾಗಿತ್ತು. ಚಿಕ್ಕಮಕ್ಕಳು ಪಿಚಕಾರಿಯಿಂದ ದೊಡ್ಡವರಿಗೆ ಬಣ್ಣ ಎರೆಚುತ್ತಿರುವುದು ಕಂಡುಬಂತು. ಬಣ್ಣವಾಟವಾಡಿದ ಮನೆ ಮುಂದೆ ವಿವಿಧ ಬಣ್ಣದ ಅಲಂಕಾರ ಕಂಡುಬಂದಿತು. ರಸ್ತೆಗಳೆಲ್ಲ ಬಣ್ಣಮಯವಾಗಿದ್ದವು. 

ಬಿಸಿಲಿನ್ನೂ ಲೆಕ್ಕಿಸದೇ ಮಕ್ಕಳು ಪಿಚಕಾರಿ ಹಿಡಿದು ಬಣ್ಣದ ನೀರನ್ನು ಸಿಡಿಸಿ ಸಂಭ್ರಮಿಸಿದರು.‌ ಕೆಲವೆಡೆ ಡಿ.ಜೆ ಸಂಗೀತಕ್ಕೆ ಮೈಮರೆತು ಯುವಜನರು ಕುಣಿದು ಕುಪ್ಪಳಿಸಿದರು. ಚರ್ಚ್‌ ಸ್ಟ್ರೀಟ್‌, ಶೇಷಾದ್ರಿಪುರ, ಕುಮಾರಕೃಪಾ ಮತ್ತು ಶಿವಾನಂದ ವೃತ್ತದಲ್ಲಿ ಮತ್ತು ಅರಮನೆ ಮೈದಾನದಲ್ಲಿ ಯುವಕ–ಯುವತಿಯರು ಬಣ್ಣದಾಟದಲ್ಲಿ ತೊಡಗಿದ್ದರು. ಖಾಸಗಿ ಕಂಪನಿಗಳ ಕಚೇರಿಗಳಲ್ಲಿ ಹೋಳಿ ಸಂಭ್ರಮ ಕಂಡು ಬಂದಿತು.

ನಗರದ ಬಹುತೇಕ ಎಲ್ಲೆಡೆ ಹೋಳಿ ಸಂಭ್ರಮ. ಪಂಚತಾರಾ ಹೊಟೇಲ್‌ಗಳು ಸೇರಿದಂತೆ ಹಲವು ಪ್ರದೇಶಗಳಲ್ಲಿ ಹೋಳಿ ಹಬ್ಬವನ್ನು ಕಾರ್ಯಕ್ರಮದ ರೀತಿಯಲ್ಲಿ ಆಚರಿಸಲಾಯಿತು. ವಿವಿಧ ಬಡಾವಣೆಗಳಲ್ಲಿಯೂ ಮತಭೇದ ಮರೆತು ಹೋಳಿಯಲ್ಲಿ ಪಾಲ್ಗೊಂಡರು. ಸ್ನೇಹ, ಪ್ರೀತಿಯ ಸಂಕೇತವಾಗಿ ಬಣ್ಣಗಳ ಎರಚಿ ಸಂಬಂಧಗಳ ರಂಗು ಹೆಚ್ಚಿಸಿಕೊಂಡರು.

ಕಾಲೇಜುಗಳಲ್ಲಿ ವಿದ್ಯಾರ್ಥಿ–ವಿದ್ಯಾರ್ಥಿನಿಯರು ಮುಖಕ್ಕೆ, ತಲೆಗೆಲ್ಲ ಪರಸ್ಪರ ಬಣ್ಣ ಹಚ್ಚಿಕೊಂಡು ಕೇಕೆ ಹಾಕಿ ಸಂಭ್ರಮಿಸಿದರು. ಬಳಿಕ ಹೋಳಿ ಆಡಿರುವುದನ್ನು ಊರಿಗೆ ಸಾರಲು ಎಂಬಂತೆ ಯುವಕರು ಬೈಕ್‌ಗಳಲ್ಲಿ ಸುತ್ತಾಡಿದರು.

ಅರಮನೆ ಮೈದಾನದಲ್ಲಿ ಸೋಮವಾರ ಹೋಳಿ ಹಬ್ಬದ ಅಂಗವಾಗಿ ಮಕ್ಕಳು ಪರಸ್ಪರ ಬಣ್ಣ ಹಚ್ಚಿ ಸಂಭ್ರಮಿಸಿದರು. –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌
ಅರಮನೆ ಮೈದಾನದಲ್ಲಿ ಸೋಮವಾರ ಹೋಳಿ ಹಬ್ಬದ ಅಂಗವಾಗಿ ಮಕ್ಕಳು ಪರಸ್ಪರ ಬಣ್ಣ ಹಚ್ಚಿ ಸಂಭ್ರಮಿಸಿದರು. –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌

ರಸ್ತೆಗುಂಡಿಗೆ ಬಣ್ಣದೋಕುಳಿ ಆರ್‌.ಟಿ.ನಗರದ ಆತ್ಮಾನಂದ ಕಾಲೊನಿಯ 6ನೇ ಅಡ್ಡರಸ್ತೆಯಲ್ಲಿದ್ದ ಹೊಂಡಕ್ಕೆ ಬಣ್ಣ ಬಳಿಯುವ ಮೂಲಕ ಕಲಾವಿದ ಬಾದಲ್‌ ನಂಜುಂಡಸ್ವಾಮಿ ಗಮನ ಸೆಳೆದಿದ್ದಾರೆ. ‘ರಸ್ತೆಯಲ್ಲಿ ಗುಂಡಿಗಳು ಬಿದ್ದು ಹಲವು ಸಮಯವಾಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಗಮನ ಹರಿಸಿಲ್ಲ. ಈಗ ಚುನಾವಣೆಯ ನೆಪ ಹೇಳುತ್ತಾರೆ. ಜನಸಂಚಾರದ ಪ್ರಮುಖ ರಸ್ತೆಯೇ ಹೀಗಾದರೆ ಒಳ ರಸ್ತೆಗಳನ್ನು ಕೇಳುವವರು ಇರುವುದಿಲ್ಲ. ಅದಕ್ಕಾಗಿ ಹೋಳಿ ಹಬ್ಬದ ದಿನ ಮುಖಕ್ಕೆ ಬಣ್ಣ ಹಚ್ಚಿ ಸಂಭ್ರಮಿಸುವ ಬದಲು ಸಂಬಂಧಪಟ್ಟವರ ಗಮನ ಸೆಳೆಯಲು ಒಂದು ಹೊಂಡಕ್ಕೆ ಬಣ್ಣ ಹಚ್ಚಿದ್ದೇನೆ’ ಎಂದು ಬಾದಲ್‌ ನಂಜುಂಡಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT