ಮಂಗಳವಾರ, ಮಾರ್ಚ್ 21, 2023
29 °C
ಸಿಎಂಗೆ ಸಂಪೂರ್ಣ ಮಾಹಿತಿ ನೀಡಿದ ಗೃಹ ಸಚಿವ

'ಡ್ರಗ್ಸ್‌ ಪ್ರಕರಣದ ತಾರ್ಕಿಕ ಅಂತ್ಯಕ್ಕೆ ಪೊಲೀಸರಿಗೆ ಪೂರ್ಣ ಸ್ವಾತಂತ್ರ್ಯ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೃಹ ಸಚಿವ ಬಸವರಾಜ ಬೊಮ್ಮಾಯಿ

ಬೆಂಗಳೂರು: ರಾಜ್ಯದ ಡ್ರಗ್ಸ್‌ ಜಾಲದ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಮುಟ್ಟಿಸಲಾಗುವುದು. ಈ ಸಂಬಂಧ ಪೊಲೀಸರಿಗೆ ಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಡ್ರಗ್ಸ್‌ ಪ್ರಕರಣಗಳಿಗೆ ಸಂಬಂಧಿಸಿದಂತೆ ಈವರೆಗೆ ಆಗಿರುವ ತನಿಖೆಯ ಪ್ರಗತಿ ಕುರಿತು  ಸೋಮವಾರ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮಾಹಿತಿ ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.

ಪೊಲೀಸರು ನಿಷ್ಪಕ್ಷವಾಗಿ ತನಿಖೆ ನಡೆಸುತ್ತಿದ್ದಾರೆ. ಯಾರದ್ದೇ ಒತ್ತಡವೂ ಪೊಲೀಸರ ಮೇಲಿಲ್ಲ. ಇದರಿಂದಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗಿವೆ. ಪ್ರತಿ ದಿನವೂ ಹೊಸ ಮಾಹಿತಿಗಳು ಮತ್ತು ಸಾಕ್ಷ್ಯಗಳು ಬಯಲಿಗೆ ಬರುತ್ತಿವೆ. ಹಲವರು ಸಿಕ್ಕಿ ಬೀಳುತ್ತಿದ್ದಾರೆ. ಜಾಲವನ್ನು ಸಂಪೂರ್ಣ ಬಯಲಿಗೆಳೆಯಬೇಕಾಗಿರುವುದರಿಂದ ಈ ಹಂತದಲ್ಲಿ ಸೂಕ್ಷ್ಮ ಮಾಹಿತಿಗಳನ್ನು ಮಾಧ್ಯಮಗಳಿಗೆ ನೀಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಬೆಂಗಳೂರು ಮತ್ತು ರಾಜ್ಯದ ವಿವಿಧ ಭಾಗಗಳಿಗೆ ಇತರ ರಾಜ್ಯಗಳಿಂದ ಮಾದಕ ದ್ರವ್ಯಗಳು ಬರುತ್ತಿವೆ. ಈ ಕುರಿತು ತನಿಖೆ ನಡೆಸಲು ಜಿಲ್ಲಾಧಿಕಾರಿಗಳು ಮತ್ತು ಎಸ್ಪಿಗಳಿಗೆ ಸೂಚಿಸಲಾಗಿದೆ. ನೆರೆ ರಾಜ್ಯಗಳ ಪೊಲೀಸ್‌ ಅಧಿಕಾರಿಗಳ ಜತೆ ಸಂಪರ್ಕದಲ್ಲಿರಲೂ ಸೂಚಿಸಲಾಗಿದೆ. ಗಡಿಯಲ್ಲಿರುವ ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಾದ ತಪಾಸಣೆ ನಡೆಸಲಾಗುವುದು. ಇದಕ್ಕಾಗಿ ಅಧಿಕಾರಿಗಳ ಸಭೆ ನಡೆಸಿ ಹಲವು ಸಲಹೆ ಸೂಚನೆಗಳನ್ನು ನೀಡಲಾಗಿದೆ ಎಂದು ಬೊಮ್ಮಾಯಿ ಹೇಳಿದರು.

ತನಿಖೆಯ ಹಿಂದೆ ಯಾವುದೇ ರಾಜಕೀಯ ಒತ್ತಡಗಳಿಲ್ಲ. ಈ ಜಾಲ ಎಷ್ಟೇ ಪ್ರಬಲವಾಗಿದ್ದರೂ ಸರಿ, ಮಟ್ಟ ಹಾಕದೇ ಬಿಡುವುದಿಲ್ಲ. ಬಂಧನದ ಭೀತಿಯಿಂದ ತಲೆ ಮರೆಸಿಕೊಂಡವರು ಎಲ್ಲಿದ್ದರೂ ಬಿಡುವ ಪ್ರಶ್ನೆಯೇ ಇಲ್ಲ ಎಂದರು.

ಡ್ರಗ್ಸ್‌ ಜಾಲವನ್ನು ಮಟ್ಟ ಹಾಕಲು ಈವರೆಗೆ ಕೈಗೊಂಡಿರುವ ಕ್ರಮಗಳು ಸಿಸಿಬಿ ಮತ್ತು ತನಿಖೆಯ ಹಿಂದಿನ ಜಾಲ, ಅಂತರ ರಾಷ್ಟ್ರೀಯ ಸಂಪರ್ಕ, ಬಂಧನದಲ್ಲಿರುವ ಆರೋಪಿಗಳ ಹಿನ್ನೆಲೆಯ ಕುರಿತು ಮುಖ್ಯಮಂತ್ರಿಗೆ ಸಂಪೂರ್ಣ ಮಾಹಿತಿ ನೀಡಿದ್ದೇನೆ ಎಂದು ಅವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು