ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋರ್ಡಿಂಗ್‌: ಆದಾಯಕ್ಕಿಂತ ಅನಾಹುತವೇ ಹೆಚ್ಚು !

ರಾಜ್ಯ ಸರ್ಕಾರದ ಆದೇಶಕ್ಕೆ ಮಾಜಿ ಮೇಯರ್‌ಗಳ ವಿರೋಧ
Last Updated 31 ಜುಲೈ 2021, 20:11 IST
ಅಕ್ಷರ ಗಾತ್ರ

ಹೋರ್ಡಿಂಗ್‌ ಮಾಫಿಯಾಗೆ ಮಣೆ ಭಾಗ–5

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಹೋರ್ಡಿಂಗ್‌ ಹಾಕಲು ಮತ್ತೆ ಅವಕಾಶ ನೀಡಿರುವ ರಾಜ್ಯ ಸರ್ಕಾರದ ಆದೇಶದಿಂದ ಪಾಲಿಕೆಗೆ ಆದಾಯ ಬರುವುದಕ್ಕಿಂತ ಅಪಾಯವೇ ಹೆಚ್ಚು ಎಂದು ಒಕ್ಕೊರಲ ದನಿಯಲ್ಲಿ ಹೇಳುತ್ತಾರೆ ಮಾಜಿ ಮೇಯರ್‌ಗಳು. ರಾಜ್ಯ ಸರ್ಕಾರದ ಆದೇಶಕ್ಕೆ ಅಚ್ಚರಿ ವ್ಯಕ್ತಪಡಿಸುವ ಅವರು, ಆದೇಶವನ್ನು ವಾಪಸ್‌ ಪಡೆಯುವುದೇ ಸೂಕ್ತ ಎಂದು ಸಲಹೆಯನ್ನೂ ನೀಡುತ್ತಾರೆ.

‘ನಾನು 2000ನೇ ವರ್ಷದಲ್ಲಿ ಮೇಯರ್‌ ಆಗಿದ್ದಾಗ, ಜಯರಾಜ್‌ ಬಿಬಿಎಂಪಿ ಆಯುಕ್ತರಾಗಿದ್ದರು. ಹೋರ್ಡಿಂಗ್‌ ಹಾಕುವುದಕ್ಕೆ ಅವಕಾಶ ಇರಬೇಕೆ, ಬೇಡವೇ ಎಂದು ತೀರ್ಮಾನಿಸಲು ನಂದನ್‌ ನಿಲೇಕಣಿಯವರ ನೇತೃತ್ವದಲ್ಲಿ ಬೆಂಗಳೂರು ಅಭಿವೃದ್ಧಿ ಕಾರ್ಯಪಡೆ ರಚಿಸಲಾಗಿತ್ತು. ಹೋರ್ಡಿಂಗ್‌ ಹಾಕುವುದು ಬೇಡ ಎಂದು ಕಾರ್ಯಪಡೆ ಶಿಫಾರಸು ಮಾಡಿದ್ದರು’ ಎಂದು ಮಾಜಿ ಮೇಯರ್‌ ರಾಮಚಂದ್ರಪ್ಪ ಹೇಳಿದರು.

‘ಹೋರ್ಡಿಂಗ್‌ ನಿರ್ಬಂಧಿಸಿದರೆ ಪಾಲಿಕೆಗೆ ಆದಾಯ ಬರುವುದಿಲ್ಲವಲ್ಲ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. ಆಗ, ಬಸ್‌ ತಂಗುದಾಣಗಳಲ್ಲಿ ಮಾತ್ರ ಜಾಹೀರಾತು ಹಾಕಲು ಅವಕಾಶ ನೀಡಿ, ಅವರು ಒಂದು ನಿಲ್ದಾಣಕ್ಕೆ ₹24 ಸಾವಿರ ನೆಲದ ಬಾಡಿಗೆ ನೀಡಬೇಕು ಎಂದು ಕಾರ್ಯಪಡೆ ಸಲಹೆ ನೀಡಿತು. 2000ನೇ ವರ್ಷದಲ್ಲಿಯೇ ₹1 ಕೋಟಿ ಆದಾಯ ಇದರಿಂದ ಬಂದಿತ್ತು’ ಎಂದು ಅವರು ತಿಳಿಸಿದರು.

‘ಕ್ರಮೇಣ ಎಲ್ಲ ಕಡೆಗೆ ಹೋರ್ಡಿಂಗ್‌ ಹಾಕಲು ಅವಕಾಶ ನೀಡುತ್ತಾ ಬರಲಾಯಿತು. ಹೋರ್ಡಿಂಗ್‌ಗಳ ಹಾವಳಿ ಹೆಚ್ಚಾಗಿದ್ದರಿಂದ ಕಾಂಗ್ರೆಸ್‌ ಮೇಯರ್‌ಗಳಿದ್ದಾಗಲೇ ನಿರ್ಬಂಧಿಸಲಾಗಿತ್ತು’ ಎಂದು ಹೇಳಿದರು.

‘ಬಿಬಿಎಂಪಿಯಲ್ಲಿ ಸ್ಥಳೀಯ ಸರ್ಕಾರ ಅಸ್ತಿತ್ವದಲ್ಲೇ ಇಲ್ಲದ ಸಂದರ್ಭದಲ್ಲಿ ಮತ್ತೆ ಹೋರ್ಡಿಂಗ್‌ಗೆ ಅವಕಾಶ ನೀಡಲಾಗಿದೆ. ಜನಪ್ರತಿನಿಧಿಗಳು ಇರದ ವೇಳೆ, ಬಿಬಿಎಂಪಿಯಲ್ಲಿ ಯಾವಾಗಲೂ ಇಂತಹ ತೀರ್ಮಾನ ಕೈಗೊಳ್ಳಲಾಗುತ್ತದೆ. 2007ರಿಂದ 2010ರ ಅವಧಿಯಲ್ಲಿಯೂ ಇಂಥದ್ದೇ ಸಂದರ್ಭವಿತ್ತು. ಆಗ, ವಾಣಿಜ್ಯ ಬ್ಯಾಂಕ್‌ಗಳಿಂದ ಸಾವಿರಾರು ಕೋಟಿ ರೂಪಾಯಿ ಸಾಲ ತೆಗೆದುಕೊಳ್ಳಲಾಗಿತ್ತು’ ಎಂದು ಅವರು ನೆನಪಿಸಿಕೊಂಡರು.

ಸರ್ವಾನುಮತದ ತೀರ್ಮಾನ:

‘ನಾನು ಮೇಯರ್ ಆಗಿದ್ದಾಗ, ಹೋರ್ಡಿಂಗ್‌ ನಿಷೇಧಿಸುವ ಬಗ್ಗೆ ಸುದೀರ್ಘ ಚರ್ಚೆ ನಡೆದಿತ್ತು. ಸದಸ್ಯರೆಲ್ಲರ ಸಲಹೆಯ ನಂತರ, ಸರ್ವಾನುಮತದ ತೀರ್ಮಾನ ತೆಗೆದುಕೊಂಡು ಹೋರ್ಡಿಂಗ್‌ ಹಾಕುವುದನ್ನು ನಿರ್ಬಂಧಿಸಲಾಗಿತ್ತು’ ಎಂದು ಮಾಜಿ ಮೇಯರ್ ಗಂಗಾಂಬಿಕೆ ಹೇಳಿದರು.

‘ಈ ರೀತಿಯ ಜಾಹೀರಾತುಗಳಿಂದ ಪಾಲಿಕೆಗೆ ಆದಾಯಕ್ಕಿಂತ ನಷ್ಟವೇ ಜಾಸ್ತಿ. ಅಪಘಾತಗಳು ಸಂಭವಿಸುವ ಸಾಧ್ಯತೆಯೂ ಇರುತ್ತದೆ’ ಎಂದು ಅವರು ಅಭಿಪ್ರಾಯಪಟ್ಟರು.

ಬೇರೆ ಮಾರ್ಗಗಳಿವೆ:

‘ದೂರದರ್ಶನ, ದಿನಪತ್ರಿಕೆಗಳು, ಸಾಮಾಜಿಕ ಮಾಧ್ಯಮಗಳು ಸೇರಿದಂತೆ ಜಾಹೀರಾತು ನೀಡಲು ಹಲವು ಮಾರ್ಗಗಳು ಇವೆ. ಹೋರ್ಡಿಂಗ್‌ ಮೂಲಕವೇ ಜಾಹೀರಾತು ನೀಡಬೇಕು ಎಂಬುದೇನೂ ಇಲ್ಲ. ಹೋರ್ಡಿಂಗ್‌ಗೆ ಅವಕಾಶ ನೀಡಿದರೆ, ಖಾಸಗಿ ಕಂಪನಿಗಳಿಗಿಂತ ರಾಜಕಾರಣಿಗಳ ಜಾಹೀರಾತು ಫಲಕಗಳೇ ಹೆಚ್ಚಾಗಿರುತ್ತವೆ’ ಎಂದು ಮಾಜಿ ಮೇಯರ್‌ ಕಟ್ಟೆ ಸತ್ಯನಾರಾಯಣ ಅಭಿಪ್ರಾಯಪಟ್ಟರು.

‘ಇದೇ ಕ್ಷೇತ್ರವನ್ನು ನಂಬಿದವರಿಗೆ ಉದ್ಯೋಗ ನಷ್ಟವಾಗುತ್ತದೆ ಎಂಬ ವಾದವೂ ಸರಿಯಲ್ಲ. ಈ ಹಿಂದೆ, ಹೋರ್ಡಿಂಗ್‌ ನಿಷೇಧಿಸಿದ್ದಾಗ ಅವರೆಲ್ಲ ಬೇರೆ ಮಾರ್ಗ ಕಂಡುಕೊಂಡಿದ್ದರು. ಈಗಲೂ ಬೇರೆ ವೃತ್ತಿಯಲ್ಲಿ ಅವರು ತೊಡಗಿಕೊಂಡಿದ್ದಾರೆ’ ಎಂದರು.

‘ಹೋರ್ಡಿಂಗ್‌ಗೆ ಅವಕಾಶ ನೀಡಿದರೆ, ಗುತ್ತಿಗೆದಾರರು ಮತ್ತು ಕೆಲವು ಅಧಿಕಾರಿಗಳಿಗೆ ಸಹಾಯವಾಗುತ್ತದೆಯೇ ವಿನಾ, ಬಿಬಿಎಂಪಿಗೆ ಆರ್ಥಿಕವಾಗಿ ನಷ್ಟವೇ ಆಗುತ್ತದೆ’ ಎಂದೂ ಅವರು ಅಭಿಪ್ರಾಯಪಟ್ಟರು.

ನೆಲದ ಬಾಡಿಗೆಯೂ ಬರುವುದಿಲ್ಲ:

‘ಸರ್ಕಾರದ ಹೊಸ ಜಾಹೀರಾತು ನೀತಿಯಲ್ಲಿ ಯಾವ, ಯಾವ ಅಂಶಗಳು ಇವೆ ಎಂಬುದನ್ನು ಇನ್ನೂ ನೋಡಿಲ್ಲ. ಆದರೆ, ಇದರಿಂದ ನಗರದ ಸೌಂದರ್ಯಕ್ಕೆ ಧಕ್ಕೆ ಆಗುತ್ತದೆ ಎನ್ನುವುದು ಸತ್ಯ. ಅಲ್ಲದೆ, ಹೋರ್ಡಿಂಗ್‌ಗಳನ್ನು ಸಾಮಾನ್ಯವಾಗಿ ಖಾಸಗಿ ಕಟ್ಟಡಗಳ ಮೇಲೆಯೇ ಹೆಚ್ಚಾಗಿ ಹಾಕಲಾಗಿರುತ್ತದೆ. ಇದರಿಂದ ಬಿಬಿಎಂಪಿಗೆ ನೆಲದ ಬಾಡಿಗೆಯೂ ಬರುವುದಿಲ್ಲ’ ಎಂದು ಮಾಜಿ ಮೇಯರ್‌ ಗೌತಮ್‌ ಕುಮಾರ್ ಜೈನ್ ಹೇಳಿದರು.

‘ನಿರೀಕ್ಷೆಗಿಂತ ₹62 ಕೋಟಿ ಕಡಿಮೆ’

‘ಹೋರ್ಡಿಂಗ್‌ಗೆ ಅವಕಾಶ ನೀಡುವುದರಿಂದ ಪಾಲಿಕೆಗೆ ಎಷ್ಟು ಆದಾಯ ಬರುತ್ತದೆ ಎಂಬುದನ್ನು ಪರಿಶೀಲಿಸಿದ ನಂತರ ಈ ಬಗ್ಗೆ ತೀರ್ಮಾನಿಸಲು ಯೋಚಿಸಲಾಗಿತ್ತು. ಅಧಿಕೃತವಾಗಿ ಹಾಕಿರುವ ಹೋರ್ಡಿಂಗ್‌ಗಳಿಂದಲೇ ₹180 ಕೋಟಿ ಆದಾಯ ನಿರೀಕ್ಷಿಸಿದ್ದೆವು. ಆದರೆ, ಬಂದಿದ್ದು ₹118 ಕೋಟಿ ಮಾತ್ರ’ ಎಂದು ಮಾಜಿ ಮೇಯರ್‌ ಜಿ. ಪದ್ಮಾವತಿ ಹೇಳಿದರು.

‘ಖಾಸಗಿಯವರು ಹೆಚ್ಚು ಲಾಭ ಮಾಡಿಕೊಳ್ಳುತ್ತಾರೆಯೇ ವಿನಾ ಬಿಬಿಎಂಪಿಗೆ ಇದರಿಂದ ಹೆಚ್ಚು ಪ್ರಯೋಜನ ಆಗುವುದಿಲ್ಲ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT