ಶುಕ್ರವಾರ, ಫೆಬ್ರವರಿ 21, 2020
18 °C
ರಾಷ್ಟ್ರೀಯ ತೋಟಗಾರಿಕೆ ಮೇಳ ಸಂಪನ್ನ l ನಾಲ್ಕು ದಿನಗಳಲ್ಲಿ 60 ಸಾವಿರ ರೈತರ ಭೇಟಿ

ವಿದೇಶಿಗರನ್ನೂ ಆಕರ್ಷಿಸಿದ ಮೇಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ (ಐಐಎಚ್‌ಆರ್‌) ಆವರಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ತೋಟಗಾರಿಕಾ ಮೇಳ ಶನಿವಾರ ಸಂಪನ್ನಗೊಂಡಿತು. ವಿವಿಧ ಜಿಲ್ಲೆಗಳಿಂದ ಭೇಟಿ ನೀಡಿದ ನೋಂದಾಯಿತ 15 ಸಾವಿರಕ್ಕೂ ಹೆಚ್ಚು ರೈತರು ಮೇಳ ಕಣ್ತುಂಬಿಕೊಂಡರು.

ಎರಡನೇ ಶನಿವಾರ ರಜಾದಿನ ಆದ ಕಾರಣ ಮೇಳ ವೀಕ್ಷಿಸಲು ನಗರವಾಸಿಗಳು ಹಾಗೂ ವಿವಿಧ ಶಾಲಾ ಕಾಲೇಜುಗಳಿಂದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದರು. ನೋಂದಾಯಿತ ರೈತರನ್ನು ಹೊರತುಪಡಿಸಿ ಏಳು ಸಾವಿರಕ್ಕೂ ಅಧಿಕ ಮಂದಿ ಮೇಳದಲ್ಲಿದ್ದರು. ಕರ್ನಾಟಕ ಮಾತ್ರವಲ್ಲದೆ ಆಂಧ್ರಪ್ರದೇಶ (300), ತಮಿಳುನಾಡು (132), ತೆಲಂಗಾಣ (61), ಕೇರಳ (25), ಮಹಾರಾಷ್ಟ್ರ (26) ಹಾಗೂ ಇತರೆ ರಾಜ್ಯಗಳಿಂದ 110ಕ್ಕೂ ಹೆಚ್ಚು ರೈತರು ಮತ್ತು ವಿದೇಶಿಗರು ಭಾಗವಹಿಸಿದರು. 

ತಾಕುಗಳಿಗೆ ಪ್ರಶಸ್ತಿ: ಮೇಳದಲ್ಲಿದ್ದ ಪ್ರದರ್ಶನ ತಾಕುಗಳ ಸರ್ಕಾರ ಸಂಸ್ಥೆ ವಿಭಾಗದಲ್ಲಿ ಲಾಲ್‌ಬಾಗ್‌ನ ತೋಟ ಗಾರಿಕೆ ಸಂಸ್ಥೆ ಪ್ರಥಮ ಸ್ಥಾನ ಪಡೆದರೆ, ತಮಿಳುನಾಡು ದ್ವಿತೀಯ ಸ್ಥಾನ ಗಳಿಸಿತು. ನರ್ಸರಿ ವಿಭಾಗದಲ್ಲಿ ಹಿತಕಾರಿ ನರ್ಸರಿ (ಪ್ರಥಮ), ಜಾಕ್ ಏರಿಯಲ್ (ದ್ವಿತೀಯ) ಬಹುಮಾನ ಪಡೆಯಿತು.

ರಕ್ತದಾನ ಶಿಬಿರ: ಮೇಳದಲ್ಲಿ ಗ್ರೇಸ್ ರಕ್ತನಿಧಿ ಸಂಸ್ಥೆಯು ರಕ್ತದಾನ ಶಿಬಿರ ಆಯೋಜಿಸಿತ್ತು. ‘ಸುಮಾರು 65 ಯೂನಿಟ್‍ಗಳಷ್ಟು ರಕ್ತವನ್ನು ಸಂಗ್ರಹಿಸಲಾಗಿದೆ’ ಎಂದು ಡಾ.ಎಂ.ಭಟ್ಟಾಚಾರ್ಯ ತಿಳಿಸಿದರು.

ಸೌರ ಸೈಕಲ್ ಗಾಡಿ: ತೋಟಗಾರಿಕಾ ಸಂಸ್ಥೆಯು ಅಭಿವೃದ್ಧಿಪಡಿಸಿದ್ದ ಮೂರು ಚಕ್ರದ ಸೌರ ಸೈಕಲ್ ಆಕರ್ಷಣೆಯ ಬಿಂದುವಾಗಿತ್ತು. ಸೌರಶಕ್ತಿಯಿಂದ ಚಲಿಸುವ ಸೈಕಲ್‌ನಲ್ಲಿ ತರಕಾರಿಗಳನ್ನು ಇಡಲು ವ್ಯವಸ್ಥೆ ಮಾಡಲಾಗಿತ್ತು.  

ಮೇಳದಲ್ಲಿ ವಾಹನ ದಟ್ಟಣೆ: ‘ವಾಹನ ನಿಲುಗಡೆಗೆ ಮೂರು ಹಂತದಲ್ಲಿ ಜಾಗ ನಿಗದಿ ಮಾಡಿದ್ದೆವು. ಶುಕ್ರವಾರದವರೆಗೆ ಕೇವಲ ಒಂದು ಹಂತದಲ್ಲಿ ವಾಹನಗಳು ನಿಂತಿದ್ದವು. ಆದರೆ, ಶನಿವಾರ ನಿರೀಕ್ಷೆಗೂ ಮೀರಿದ ಜನ ಮೇಳಕ್ಕೆ ಬಂದಿದ್ದಾರೆ. ಮೂರೂ ಹಂತದಲ್ಲೂ ವಾಹನ
ಗಳನ್ನು ನಿಲ್ಲಿಸಿದರು. ಐಐಎಚ್‌ಆರ್‌ ಪ್ರವೇಶ ದ್ವಾರದಿಂದ ಮೇಳ ನಡೆಯುವ ಸ್ಥಳದವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ವಾಹನ
ಗಳಿಗೆ ಸೂಕ್ತ ನಿಲುಗಡೆ ಜಾಗ ತೋರಿಸಲು ಸಿಬ್ಬಂದಿ ಹರಸಾಹಸ ಪಡುವಂತಾಯಿತು’ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. 

ಕೀಟನಾಶಕ ಸಿಂಪಡಣೆಗೆ ಬಾಡಿಗೆ ಡ್ರೋನ್‌ 

ಎಕರೆಗಟ್ಟಲೆ ಇರುವ ತೋಟಗಳಿಗೆ ಡ್ರೋನ್‌ ಮೂಲಕ ಕೀಟನಾಶಕ ಸಿಂಪಡಿಸುವ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದ್ದು, ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಡ್ರೋನ್‌ ಬಾಡಿಗೆಗೆ ನೀಡಲಾಗುತ್ತಿದೆ.

ಬೆಂಗಳೂರಿನ ಜನರಲ್‌ ಏರೋನಾಟಿಕ್ಸ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆ ಇದನ್ನು ಅಭಿವೃದ್ಧಿಪ‍ಡಿಸಿದ್ದು, ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ಮಾಹಿತಿ ನೀಡಲಾಯಿತು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಮೇಳಕ್ಕೆ ಬಂದಿದ್ದ ರೈತರು ಡ್ರೋನ್‌ ಬಾಡಿಗೆ ಲಭ್ಯವಿರುವ ಕುರಿತು ಸಿಬ್ಬಂದಿಯಿಂದ ಮಾಹಿತಿ ‍ಪಡೆಯಲು ಮುಗಿಬಿದ್ದರು. ಕಡಿಮೆ ಬೆಲೆಯಲ್ಲಿ ಡ್ರೋನ್‌ ಲಭ್ಯವಿರುವ ಕಾರಣ ತಮ್ಮ ತೋಟಗಳಿಗೆ ಕೀಟನಾಶಕ ಸಿಂಪಡಣೆಗೆ ರೈತರು ಹೆಸರು ನೋಂದಾಯಿಸಿಕೊಂಡರು.

‘ರೈತರಿಗೆ ಸಮಯ ಹಾಗೂ ಹಣ ಉಳಿಸುವ ಉದ್ದೇಶದಿಂದ ಡ್ರೋನ್ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದೇವೆ. ಡ್ರೋನ್ ಬಳಸಲು ರೈತರಿಗೆ ಅಧಿಕೃತ ಪರವಾನಗಿ ಅವಶ್ಯಕ. ಇದನ್ನು ಸ್ವಂತಕ್ಕೆ ಖರೀದಿಸಿದರೆ ರೈತರಿಗೆ ₹8 ಲಕ್ಷದಿಂದ ₹10 ಲಕ್ಷದವರೆಗೆ ಖರ್ಚಾಗುತ್ತದೆ. ರೈತರಿಗೆ ಕಡಿಮೆ ದರದಲ್ಲಿ ಬಾಡಿಗೆಗೆ ಡ್ರೋನ್ ಸೇವೆ ಒದಗಿಸಲು ಉದ್ದೇಶಿಸಲಾಗಿದೆ’ ಎಂದು ಸಂಸ್ಥೆಯ ಹಿರಿಯ ಎಂಜಿನಿಯರ್ ವಿನಯ್ ‘ಪ್ರಜಾವಾಣಿ’ಗೆ ತಿಳಿಸಿದರು.

ಬ್ಯಾಟರಿಚಾಲಿತ ‘ಡ್ರೋನ್ ಇದಾಗಿದ್ದು, ಕಂಪ್ಯೂಟರ್ ಮೂಲಕ ನಿಯಂತ್ರಿಸಬಹುದು. ತೋಟದ ಸ್ಥಳ, ಸಿಂಪಡಣೆ ಎತ್ತರ ಹಾಗೂ ವೇಗವನ್ನು ಕಂಪ್ಯೂಟರ್‌ ಮೂಲಕ ನಿಗದಿ ಮಾಡಬಹುದು. ನಿಗದಿತ ಪ್ರದೇಶವನ್ನು ಮಾತ್ರವೇ ಡ್ರೋನ್ ಕ್ರಮಿಸುತ್ತದೆ. ಹದಿನೈದು ಲೀಟರ್‌ಗಳಷ್ಟು ಕೀಟನಾಶ ಹೊರಬಲ್ಲದು’ ಎಂದರು.

‘ಡ್ರೋನ್ ಮೂಲಕ ಕೀಟನಾಶಕ ಸಿಂಪಡಣೆ ತಂತ್ರಜ್ಞಾನ ಬಹಳ ಇಷ್ಟವಾಯಿತು. ಬಾಡಿಗೆ ದರವೂ ಕಡಿಮೆ ಇದ್ದು, ಕೆಲಸಗಾರರ ಸಮಸ್ಯೆ ಇಲ್ಲ. ಹೆಸರು ನೋಂದಾಯಿಸಿದ್ದೇನೆ. ಜಿಲ್ಲೆಯ ರೈತರಿಗೂ ಇದರ ಮಾಹಿತಿ ತಲುಪಿಸುತ್ತೇನೆ’ ಎಂದು ರಾಯಚೂರಿನ ರೈತ ಬಸವರಾಜ್ ತಿಳಿಸಿದರು.

ಎಲ್ಲ ಜಿಲ್ಲೆಗಳಿಗೆ ಡ್ರೋನ್ ಲಭ್ಯ: ‘ಪ್ರಾಯೋಗಿಕವಾಗಿ ಈವರೆಗೆ 60ಕ್ಕೂ ಹೆಚ್ಚು ತೋಟಗಳಿಗೆ ಡ್ರೋನ್‌ ಮೂಲಕ ಕೀಟನಾಟಕ ಸಿಂಪಡಣೆ ಯಶಸ್ವಿಯಾಗಿದೆ. ಎಲ್ಲ ಜಿಲ್ಲೆಗಳ ರೈತರು ಇದರ ಸದುಪಯೋಗ ಪಡೆಯಬಹುದು. ಡ್ರೋನ್ ಸೇವೆ ಬಳಸಲು ಇಚ್ಛಿಸುವ ರೈತರು 9900105372 ಸಂಖ್ಯೆಗೆ ಕರೆ ಮಾಡಬಹುದು’ ಎಂದು ಕಾಮೇಶ್ ಮಾಹಿತಿ ನೀಡಿದರು.

***

ಕೀಟನಾಶಕ ಸಿಂಪಡಣೆಗೆ ಈ ತಂತ್ರಜ್ಞಾನ ಸುಲಭ. ರೈತರಿಗೆ ಇದರ ಮಾಹಿತಿ ತಲುಪಿದರೆ ಹಣವೂ ಉಳಿಸಬಹುದು. ರೈತರಿಗೆ ಶ್ರಮವೂ ತಗ್ಗಲಿದೆ.
–ವಿಶ್ವನಾಥ್, ರೈತ

ರೈತರಿಗೆ ತೋಟದ ಕೆಲಸ ಕಡಿಮೆ ಮಾಡುವುದು ಡ್ರೋನ್ ಉದ್ದೇಶ. ರೈತರು ಕಡಿಮೆ ದರದಲ್ಲಿ ತಮ್ಮ ತೋಟಗಳಿಗೆ ಕೀಟನಾಶಕ ಸಿಂಪಡಿಸಿಕೊಳ್ಳಬಹುದು.
–ಕೆ.ಕಾಮೇಶ್, ತಂತ್ರಜ್ಞ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು