ಭಾನುವಾರ, ಜುಲೈ 3, 2022
27 °C
ವಾಟ್ಸ್‌ಆ್ಯಪ್ ಗ್ರೂಪ್‌ ಮೂಲಕ ಸಾಮಾಜಿಕ ಸೇವೆ

ನಡುವಯಸ್ಸಿನಲ್ಲಿ ಸೈಕ್ಲಿಂಗ್‌ ಸಾಧನೆ

ಶಿವರಾಜ ರಾಮನಾಳ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸೈಕ್ಲಿಂಗ್‌ ಪ್ರವೃತ್ತಿ ಮೂಲಕ ದೇಹಾರೋಗ್ಯ ಕಾಪಿಟ್ಟುಕೊಳ್ಳುವ ಸಂದೇಶ ನೀಡುವ ಇವರು ಯುವಜನತೆಗೆ ಮಾದರಿ. 

ಸೈಕ್ಲಿಂಗ್‌ ಮೂಲಕ ಸದೃಢ ಆರೋಗ್ಯ ಕಾಪಾಡಿಕೊಂಡಿರುವ ನೀಳಕಾಯದ ವಿಜಯ್‌ ಬಿ. ಅವರು ಸದ್ಯ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಮಂಡಳಿಯ (ಎಫ್‌ಕೆಸಿಸಿಐ) ಸಹ ಕಾರ್ಯದರ್ಶಿ.

52 ವರ್ಷದ ವಿಜಯ್‌ ಅವರು ಮೊದಲು ಕೊಂಚ ದಪ್ಪಗಿದ್ದರು. ಸ್ವಿಮ್ಮಿಂಗ್‌ ಹವ್ಯಾಸ ಬೆಳೆಸಿಕೊಂಡ ಬಳಿಕ 48ರ ವಯಸ್ಸಿನಲ್ಲಿ ಸಾಮಾನ್ಯ ಸೈಕಲ್‌ ತುಳಿಯಲು ಆರಂಭಿಸಿದರು. ಆದರೆ, ಸೈಕ್ಲಿಂಗ್‌ಗಾಗಿಯೇ ಪ್ರತ್ಯೇಕ ಉಡುಗೆ, ತೊಡುಗೆಯ ವಸ್ತ್ರಸಂಹಿತೆ ಅಗತ್ಯವಿದೆ ಎಂದು ಒಡನಾಡಿಗಳಿಂದ ಅರಿತರು. ಆಗಿನಿಂದ ನಿತ್ಯ ಆರಂಭವಾದ ಸೈಕಲ್‌ ಪಯಣದ ಹವ್ಯಾಸ ಪ್ರವೃತ್ತಿಯಾಗಿ ಬದಲಾಯಿತು.

ಮೊದಲು 20, 30 ಕಿ.ಮೀ. ತುಳಿಯಬಹುದು ಎಂದು ಆರಂಭಿಸಿದ ಸೈಕ್ಲಿಂಗ್‌ ಯಾನ ಈಗ ಸಾವಿರಾರು ಮೈಲುಗಟ್ಟಲೆ ಸಾಗಿದೆ. ಸೈಕ್ಲಿಂಗ್‌ ಅವರ ಜೀವನನಕ್ಕೆ ಹೊಸ ದಿಕ್ಕು ತೋರಿಸಿದೆ. ಹಾಗೆಂದು ಅದಕ್ಕಾಗಿ ಅವರು ವೃತ್ತಿ ತೊರೆದಿಲ್ಲ. ಬಿಡುವಿನ ಸಮಯವನ್ನು ಮತ್ತು ರಜಾ ದಿನಗಳನ್ನು ಸೈಕ್ಲಿಂಗ್‌ಗೆ ಮುಡಿಪಿಟ್ಟಿದ್ದಾರೆ.

ವಿಜಯ್‌ ಅವರು ಬೆಂಗಳೂರು ಮಾತ್ರವಲ್ಲದೆ ವಾರಾಂತ್ಯಗಳಲ್ಲಿ ದೂರದ ಪಯುಣ (ಲಾಂಗ್‌ ರೈಡ್‌) ಬೆಳೆಸುತ್ತಾರೆ. ನಾಲ್ಕು ವರ್ಷಗಳಲ್ಲಿ ಅವರು ಸೈಕಲ್‌ ಮೂಲಕವೇ ಮೈಸೂರು, ಮಲೆ ಮಹದೇಶ್ವರ ಬೆಟ್ಟ, ಜೋಗ ಜಲಪಾತ, ಸಿಗಂದೂರು, ತಿರುಪತಿ, ಧರ್ಮಸ್ಥಳ, ಗೋಕಾಕ್‌, ಬೆಳಗಾವಿ, ಹುಬ್ಬಳ್ಳಿ, ಸಿರಾ, ತುಮಕೂರು ಮೊದಲಾದ ಕಡೆ 90 ಗಂಟೆಗಳಲ್ಲಿ ಪಯಣಿಸಿದ್ದಾರೆ. 

ಬೆಳಿಗ್ಗೆ 4.30ಕ್ಕೆ ಆರಂಭವಾಗುವ ವಿಜಯ್‌ ಅವರ ದಿನಚರಿ, ರಾತ್ರಿ 9.30ರವರೆಗೆ ಮುಕ್ತಾಯಗೊಳ್ಳುತ್ತದೆ. ಸೈಕ್ಲಿಸ್ಟ್‌ಗಳು ಹೆಲ್ಮೆಟ್‌ ಧಾರಣೆ ಮಾಡಲೇಬೇಕು. ದಾರಿಯಲ್ಲಿ ಹಳ್ಳಗಳಿರುತ್ತವೆ. ಅಪಘಾತಗಳಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಸುರಕ್ಷತೆ ದೃಷ್ಟಿಯಿಂದ ಇದು ಮುಖ್ಯವಾದುದು ಎಂದು ವಿಜಯ್‌ ಹೇಳುತ್ತಾರೆ.

‘ಸೈಕ್ಲಿಂಗ್‌ ನನ್ನ ಜೀವನ ಬದಲಿಸಿದೆ. 77 ಕೆಜಿ ಇದ್ದ ನಾನು ಈಗ 62 ಕೆಜಿಗೆ ಇಳಿದಿದ್ದೇನೆ. ದೇಹದ ಆಕಾರ ಬದಲಾಗಿದೆ. ಆಸ್ತಮಾದಿಂದ ಬಳಲುತ್ತಿದ್ದ ನನಗೆ ಈಗ ಯಾವುದೇ ರೋಗಗಳಿಲ್ಲ. ಸೈಕಲ್‌ ತುಳಿಯುವುದರಿಂದ ರೋಗ ನಿರೋಧಕ ಶಕ್ತಿ  ಹೆಚ್ಚುತ್ತದೆ. ಆರೋಗ್ಯ ತಹಬದಿಯಲ್ಲಿರುತ್ತದೆ. ದೇಹ ದಂಡಿಸಲು ಪಥ್ಯ ಮಾಡಬೇಕಿಲ್ಲ. ಆದರೆ ತಿಂದ ಆಹಾರವನ್ನು ಕರಗಿಸಲು ಶ್ರಮ ಪಡಬೇಕು’ ಎಂದು ಸಲಹೆ ನೀಡುತ್ತಾರೆ ವಿಜಯ್‌.

ನೆರವಾದ ವಾಟ್ಸ್‌ ಆ್ಯಪ್‌ ಗ್ರೂಪ್‌:

ತಾನೂ ಸೈಕಲ್‌ ತುಳಿಯಬೇಕು ಎಂಬ ಆಸೆ ಚಿಗುರೊಡೆದಾಗ ವಿಜಯ್‌ ಅವರಿಗೆ ನೆರವಿಗೆ ಬಂದದ್ದು ವಾಟ್ಸ್‌ ಆ್ಯಪ್‌ ಗ್ರೂಪ್‌. ಹೈ ಆನ್‌ ವೀಲ್ಸ್‌ ಹೆಸರಿನ ಈ ವಾಟ್ಸ್‌ಆ್ಯಪ್‌ ಗುಂಪಿನಲ್ಲಿ ಎಲ್ಲ ವಯೋಮಾನದವರು ಇದ್ದಾರೆ. ಸೈಕ್ಲಿಂಗ್‌ಗಾಗಿ ರೂಪಿಸಲಾದ ಈ ಗುಂಪಿನಲ್ಲಿ ವಿಜಯ್‌ ಅವರು ಸೇರಿದಾಗ 20 ಜನರಿದ್ದರು. ಈಗ ಇವರಿಂದ ಸ್ಫೂರ್ತಿಗೊಂಡು ಇನ್ನೂ 30 ಮಂದಿ ಜೊತೆಯಾಗಿದ್ದಾರೆ. ಎಲ್ಲರೂ ಸೇರಿ ಇದುವರೆಗೆ 25 ಸಾವಿರ ಕಿ.ಮೀ. ತುಳಿದಿರುವುದಾಗಿ ವಿಜಯ್‌ ಹೇಳುತ್ತಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು