ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇತನ ಹೆಚ್ಚಿಸಲು ಹಾಸ್ಟೆಲ್‌ ಕಾರ್ಮಿಕರ ಪಟ್ಟು: ಪ್ರತಿಭಟನೆ

ರಾಜ್ಯ ಸಂಯುಕ್ತ ವಸತಿನಿಲಯ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ
Published 19 ಜನವರಿ 2024, 14:13 IST
Last Updated 19 ಜನವರಿ 2024, 14:13 IST
ಅಕ್ಷರ ಗಾತ್ರ

ಬೆಂಗಳೂರು: ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ, ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕ ಸಂಘದ ನೇತೃತ್ವದಲ್ಲಿ ಹಾಸ್ಟೆಲ್‌ ಕಾರ್ಮಿಕರು ಇಲ್ಲಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ ಬೃಹತ್‌ ಪ್ರತಿಭಟನೆ ನಡೆಸಿದರು.

ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ವಿವಿಧ ವಿಶ್ವವಿದ್ಯಾಲಯಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ ನಡೆಯುತ್ತಿರುವ ವಸತಿ ನಿಲಯಗಳು, ವಸತಿ ಶಾಲೆಗಳು, ವಸತಿ ಕಾಲೇಜು ಹಾಗೂ ಆಶ್ರಮ ಶಾಲೆಗಳಲ್ಲಿ ಹೊರಗುತ್ತಿಗೆ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಲಕ್ಷಾಂತರ ಮಕ್ಕಳ ಉತ್ತಮ ವಿದ್ಯಾಭ್ಯಾಸಕ್ಕೆ ಪೂರಕವಾಗಿ ಮಕ್ಕಳಿಗೆ ಊಟ, ವಸತಿ, ಸುರಕ್ಷತೆ ಕಲ್ಪಿಸುತ್ತಿದ್ದಾರೆ. ಕನಿಷ್ಠ ಕೂಲಿಯಲ್ಲೇ ಮಹತ್ವದ ಸೇವೆ ಒದಗಿಸುತ್ತಿದ್ದಾರೆ. ಅವರ ವೇತನವನ್ನು ತಿಂಗಳಿಗೆ ₹35,950ಕ್ಕೆ ಹೆಚ್ಚಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಅಡುಗೆ ಸಿಬ್ಬಂದಿ, ಅಡುಗೆ ಸಹಾಯಕರು, ಕಾವಲುಗಾರರ ಕೆಲಸವನ್ನು ಕಾಯಂ ಮಾಡಬೇಕು. ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ ಕಡಿತದ ಆದೇಶವನ್ನು ತಕ್ಷಣವೇ ಹಿಂದಕ್ಕೆ ಪಡೆಯಬೇಕು. ಬಾಕಿ ವೇತನವನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಸಂಘದ ರಾಜ್ಯ ಸಮಿತಿಯ ಕೆ.ವಿ.ಭಟ್‌ ಮಾತನಾಡಿ, ‘ಕೆಲವು ಜಿಲ್ಲೆಗಳಲ್ಲಿ ರೊಟ್ಟಿ ಮಾಡುವ ಕೆಲಸವನ್ನು ಹಾಸ್ಟೆಲ್‌ ಕಾರ್ಮಿಕರು ಮಾಡಬೇಕಿದೆ. ಹೀಗಾಗಿ ಹೆಚ್ಚಿನ ಸಿಬ್ಬಂದಿ ಅಗತ್ಯವಿದ್ದು ಸಿಬ್ಬಂದಿ ನೇಮಿಸಬೇಕು. ಆಶ್ರಮ ಶಾಲೆಗಳಲ್ಲಿ ಕಾವಲುಗಾರರು ಇಲ್ಲದೇ ಸಮಸ್ಯೆಯಾಗಿದೆ. ತಕ್ಷಣವೇ ಕಾವಲುಗಾರರನ್ನು ನೇಮಿಸಬೇಕು’ ಎಂದು ಕೋರಿದರು.

‘ವಾರದ ರಜೆ, ರಾಷ್ಟ್ರೀಯ ಹಬ್ಬಗಳ ರಜೆ, ಸಾಂದರ್ಭಿಕ ರಜೆಗಳನ್ನು ನೀಡಬೇಕು ಅಥವಾ ರಜೆಯ ದಿನಗಳಂದು ಕೆಲಸ ಮಾಡಿಸಿಕೊಂಡಲ್ಲಿ ಕಾರ್ಮಿಕ ಕಾಯ್ದೆಯನ್ವಯ ದುಪ್ಪಟ್ಟು ವೇತನ ಪಾವತಿಸಬೇಕು’ ಎಂದು ಒತ್ತಾಯಿಸಿದರು.

ಲಾಕ್‌ಡೌನ್‌ ಅವಧಿಯ ವೇತನವನ್ನು ತಕ್ಷಣವೇ ಪಾವತಿಸಬೇಕು. ತಿಂಗಳ ವೇತನ, ಇಪಿಎಫ್‌, ಇಎಸ್‌ಐ ವಂತಿಗೆಯನ್ನು ಪ್ರತಿತಿಂಗಳು ನೀಡದ ಗುತ್ತಿಗೆ ಎಜೆನ್ಸಿಯವರ ಮೇಲೆ ದೂರು ದಾಖಲಿಸಬೇಕು ಎಂದೂ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT