ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಳಿಮಾವು: ನೀರಿಳಿದ ಬಳಿಕ ಜಾರಿ ಬೀಳುವ ಸರದಿ

ಹುಳಿಮಾವು ಕೆರೆ ಕೋಡಿ ಒಡೆದು ದುರಂತ
Last Updated 27 ನವೆಂಬರ್ 2019, 5:05 IST
ಅಕ್ಷರ ಗಾತ್ರ

ಬೊಮ್ಮನಹಳ್ಳಿ: ಹುಳಿಮಾವು ಕೆರೆಯ ಕೋಡಿ ಒಡೆದು ಉಂಟಾದ ಪ್ರವಾಹದ ನೀರು ಸಂಪೂರ್ಣ ಇಳಿದಿದೆ. ಆದರೆ, ನೆರೆಪೀಡಿತ ಪ್ರದೇಶದ ಜನ ಹೊಸ ಸಮಸ್ಯೆ ಎದುರಿಸುತ್ತಿದ್ದಾರೆ. ಮನೆಯಂಗಳದಲ್ಲಿ ಹಾಗೂ ರಸ್ತೆಯಲ್ಲಿ ನಡೆಯುವಾಗ ಜಾರಿ ಬೀಳುತ್ತಿದ್ದಾರೆ.

’ನಾವು ಮನೆಯಂಗಳವನ್ನು ಸ್ವಚ್ಛಗೊಳಿಸಿದರೂ ಕೆಸರನ್ನು ಪೂರ್ತಿ ಹೊರ ಹಾಕಲು ಸಾಧ್ಯವಾಗಿಲ್ಲ. ಈ ಕೆಸರಿನಿಂದಾಗಿ ಜಾರಿ ಬೀಳುವ ಪರಿಸ್ಥಿತಿ ಇದೆ’ ಎಂದು ಆರ್‌.ಆರ್‌ ಬಡಾವಣೆ ನಿವಾಸಿ, ಸಾಫ್ಟ್‌ವೇರ್‌ ಎಂಜಿನಿಯರ್‌ ವಿಘ್ನೇಶ್‌ ಬಾಳಿಗ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮುಖ್ಯರಸ್ತೆಗಳನ್ನು ಸ್ವಚ್ಛಗೊಳಿಸಿದ್ದಾರೆ. ಒಳ ರಸ್ತೆಗಳಲ್ಲಿ ಕೆಲವೆಡೆ ಕೆಸರು ಈಗಲೂ ಇದೆ. ನಮ್ಮ ಮನೆಯ ಆಸುಪಾಸಿನಲ್ಲಿ ಎರಡು ದಿನಗಳಲ್ಲಿ ಏನಿಲ್ಲವೆಂದರೂ 15ರಿಂದ 20 ಮಂದಿ ಜಾರಿ ಬಿದ್ದಿದ್ದಾರೆ. ನಾನು ಕೂಡಾ ಇಂದು ಜಾರಿ ಬಿದ್ದೆ. ವಯಸ್ಸಾದವರಂತೂ ನಿರಾತಂಕವಾಗಿ ನಡೆಯವುದು ಕಷ್ಟ ಎಂಬ ಪರಿಸ್ಥಿತಿ ಇದೆ’ ಎಂದರು ಅವರು ವಿವರಿಸಿದರು.

ಇನ್ನೂ ಸಜ್ಜಾಗಿಲ್ಲ ಮನೆ: ಭಾನುವಾರವೇ ಪ್ರವಾಹ ಇಳಿದಿದ್ದರೂ ಅನೇಕರು ಇನ್ನೂ ಮನೆಯಲ್ಲಿ ಉಳಿದುಕೊಳ್ಳಲು ಸಾಧ್ಯವಾಗಿಲ್ಲ. ಮಂಗಳವಾರ ರಾತ್ರಿಯೂ ಕೆಲವರು ಗೆಳೆಯರ ಹಾಗೂ ಬಂಧುಗಳ ಮನೆಯಲ್ಲಿ ಆಶ್ರಯ ಪಡೆದರು.

‘ನಮ್ಮ ಮನೆಯ ಹಾಸಿಗೆ, ಪೀಠೋಪಕರಣಗಳು, ಯುಪಿಎಸ್‌., ಟಿ.ವಿ. ಪ್ರಿಜ್, ಎಲ್ಲವೂ ಒದ್ದೆಯಾಗಿವೆ. ಮನೆಯನ್ನು ಎಷ್ಟು ಸಲ ಸ್ವಚ್ಛಗೊಳಿಸಿದರೂ ಕೆಸರಿನ ದುರ್ವಾಸನೆ ಹೋಗುತ್ತಿಲ್ಲ. ಹಾಗಾಗಿ ರಾತ್ರಿ ನಾವು ಬಂಧುಗಳ ಮನೆಯಲ್ಲಿ ಉಳಿದುಕೊಂಡಿದ್ದೇವೆ’ ಎಂದು ವಿಘ್ನೇಶ್‌ ತಿಳಿಸಿದರು.

‘ಕುಡಿಯುವ ನೀರಿನ ಬಾಟಲಿಗಳನ್ನು ಪಾಲಿಕೆಯವರು ಭಾನುವಾರ ನೀಡಿದ್ದರು. ಅವೆಲ್ಲ ಖಾಲಿಯಾಗಿವೆ. ಜಲಮಂಡಳಿಯವರು ಸೋಮವಾರ ನೀರು ಪೂರೈಸುವುದಾಗಿ ತಿಳಿಸಿದ್ದರು. ಇನ್ನೂ ನೀರು ಬಂದಿಲ್ಲ’ ಎಂದರು.

ಸರ್ವೆ ಆರಂಭಿಸಿದ ಅಧಿಕಾರಿಗಳು

ನೆರೆಯಿಂದಾಗಿ ಆದ ನಷ್ಟದ ಪ್ರಮಾಣವನ್ನು ತಿಳಿಯಲು ಅಧಿಕಾರಿಗಳು ತಂಡಗಳಾಗಿ ಬಡಾವಣೆಗಳಲ್ಲಿ ಸರ್ವೆ ಕಾರ್ಯ ಆರಂಭಿಸಿದರು. ಪ್ರತಿ ಮನೆಗಳಿಗೆ ಭೇಟಿ ನೀಡಿ ಆಸ್ತಿಪಾಸ್ತಿ ನಷ್ಟಕ್ಕೊಳಗಾದ ನಿವಾಸಿಗಳಿಂದ ಆಧಾರ್ ಪ್ರತಿ ಹಾಗೂ ಬ್ಯಾಂಕ್ ಖಾತೆ ವಿವರಗಳನ್ನು ಪಡೆದರು.

‘ಸರ್ವೆಯೇನೋ ಮಾಡಿ ಹೋಗುತ್ತೀರಿ, ಆದರೆ, ಪರಿಹಾರ ಕೊಡುವುದು ಯಾವಾಗ’ ಎಂದು ಗೃಹಿಣಿಯೊಬ್ಬರು ಅಧಿಕಾರಿಗಳನ್ನು ಪ್ರಶ್ನಿಸಿದರು. ಶೀಘ್ರವೇ ನೀಡುವುದಾಗಿ ಸರ್ಕಾರ ಹೇಳಿದೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದರು.

‘ನಮ್ಮ ಗುಡಿಸಲು ಕೊಚ್ಚಿ ಹೋಗಿದೆ, ನಾವು ಬಳ್ಳಾರಿಯಿಂದ ಇಲ್ಲಿಗೆ ಕೂಲಿ ಅರಸಿ ಬಂದವರು, ನಮಗೆ ವಿಳಾಸ ದೃಢೀಕರಣಕ್ಕೆ ಯಾವುದೇ ದಾಖಲಾತಿ ಇಲ್ಲ, ನಾವು ಏನ್ಮಾಡೋದು?’ ಎಂದು ಕೆಲ ಕೂಲಿಕಾರ್ಮಿಕರು ಅಧಿಕಾರಿಗಳನ್ನು ಪ್ರಶ್ನಿಸಿದರು. ‘ಪರಿಹಾರಕ್ಕೆ ನಿಮ್ಮ ಬ್ಯಾಂಕ್ ಖಾತೆ ಮಾತ್ರವೇ ಸಾಕು, ಪರಿಹಾರ ಸಿಗುತ್ತದೆ’ ಎಂದು ಸರ್ವೆಗೆ ಬಂದಿದ್ದ ಅಧಿಕಾರಿಗಳು ಸಮಾಧಾನಪಡಿಸಿದರು.

ಭರದಿಂದ ಸಾಗಿದೆ ತಡೆಗೋಡೆ ನಿರ್ಮಾಣ:

ಕೆರೆ ದಂಡೆ ಒಡೆದು ರಾಜಕಾಲುವೆ ಮೂಲಕ ಹಾದುಹೋಗುವ ಕಡೆ ಅಡ್ಡಲಾಗಿ ಮರಳು ಮೂಟೆಗಳ ಗೋಡೆ ನಿರ್ಮಾಣ ಕಾರ್ಯ ಭರದಿಂದ ಸಾಗಿತ್ತು. ಕಾರ್ಮಿಕರು ಮುಂಜಾನೆಯಿಂದಲೇ ಗೋಡೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು. ‘ಮುನ್ನೆಚ್ಚರಿಕೆ ಕ್ರಮವಾಗಿ ತಾತ್ಕಾಲಿಕವಾಗಿ ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ’ ಎಂದು ಸ್ಥಳದಲ್ಲಿದ್ದ ಎಂಜಿನಿಯರ್ ಒಬ್ಬರು ತಿಳಿಸಿದರು.

‘ಅಪಾರ್ಟ್‌ಮೆಂಟ್‌ ಸಮುಚ್ಚಯಗಳ ತಳಮಹಡಿಗಳಲ್ಲಿ ತುಂಬಿದ್ದ ನೀರನ್ನು ಹೊರ ಹಾಕುವುದು, ಸ್ವಚ್ಛಗೊಳಿಸುವುದು ಹಾಗೂ ರಸ್ತೆ, ಚರಂಡಿಗಳ ಹೂಳೆತ್ತುವ ಕಾರ್ಯ ನಡೆದಿದೆ. ರಸ್ತೆ ಡಾಂಬರೀಕರಣ, ಚರಂಡಿಗಳ ದುರಸ್ತಿ ಕಾರ್ಯವನ್ನು ಎರಡು ದಿನಗಳಲ್ಲಿ ಆರಂಭಿಸುತ್ತೇವೆ’ ಎಂದು ಬಿಬಿಎಂಪಿ ಬೊಮ್ಮನಹಳ್ಳಿ ಮುಖ್ಯ ಎಂಜಿನಿಯರ್ ಸಿದ್ದೇಗೌಡ ತಿಳಿಸಿದರು.

ಕಣ್ಣೀರು ಹಾಕಿದ ಪಾಲಿಕೆ ಸದಸ್ಯೆ:

‘ಕಳೆದ ಮೂರು ದಿನಗಳಿಂದ ಜನರ ಪಾಡು ಹೇಳ ತೀರದು. ಇಬ್ಬರು ಗರ್ಭಿಣಿಯರು ತಾತ್ಕಾಲಿಕ ಆಶ್ರಯ ಕೇಂದ್ರದಲ್ಲಿದ್ದಾರೆ. ಸಾಕಷ್ಟು ಬಡವರು ಮನೆಗಳನ್ನು ಕಳೆದುಕೊಂಡಿದ್ದಾರೆ. ನನ್ನ ವಾರ್ಡಿನ ಜನಕ್ಕೆ ಈ ಪರಿಸ್ಥಿತಿ ಬರಬಾರದಿತ್ತು’ ಎಂದು ಅರೆಕೆರೆ ವಾರ್ಡ್ ಪಾಲಿಕೆ ಸದಸ್ಯೆ ಭಾಗ್ಯಲಕ್ಷ್ಮಿ ಮುರಳಿ ದುಃಖ ತಡೆಯಲಾರದೇ ಕಣ್ಣೀರು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT