ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಎಪಿಎ ಚರ್ಚೆಗೆ ನಕಾರ: ಐಐಎಸ್‌ಸಿ ಧೋರಣೆಗೆ ಆಕ್ಷೇಪ

ಸಂಸ್ಥೆಯ ಘನತೆಗೆ ಧಕ್ಕೆ: ವಿದ್ಯಾರ್ಥಿಗಳು, ಶಿಕ್ಷಣ ತಜ್ಞರ ಆಕ್ರೋಶ
Published 4 ಜುಲೈ 2023, 23:30 IST
Last Updated 4 ಜುಲೈ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ಕಾನೂನುಬಾಹಿರ ಚಟುವಟಿಕೆ ನಿಗ್ರಹ ಕಾಯ್ದೆ (ಯುಎಪಿಎ) ಕುರಿತು ಚರ್ಚೆ ನಡೆಸಲು ಅವಕಾಶ ನೀಡದಿರುವ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಧೋರಣೆಗೆ 500ಕ್ಕೂ ಹೆಚ್ಚು ವಿಜ್ಞಾನಿಗಳು, ಶಿಕ್ಷಣ ತಜ್ಞರು ಮತ್ತು ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಜೂನ್‌ 28ರಂದು ವಿದ್ಯಾರ್ಥಿ ಹೋರಾಟಗಾರರಾದ ನತಾಶಾ ನರ್ವಾಲ್‌ ಮತ್ತು ದೇವಾಂಗನಾ ಕಲಿತಾ ನೇತೃತ್ವದಲ್ಲಿ ಯುಎಪಿಎ ಕುರಿತ ಚರ್ಚಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹೋರಾಟದಲ್ಲಿ ಈ ಇಬ್ಬರು ಭಾಗಿಯಾಗಿದ್ದರು. ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 2020ರಲ್ಲಿ ಯುಎಪಿಎ ಅಡಿಯಲ್ಲಿ ಇವರನ್ನು ಬಂಧಿಸಲಾಗಿತ್ತು. ನಂತರ, ದೆಹಲಿ ಹೈಕೋರ್ಟ್‌ ನೀಡಿದ ಜಾಮೀನಿನ ಮೇರೆಗೆ ಇಬ್ಬರನ್ನು ಬಿಡುಗಡೆ ಮಾಡಲಾಗಿತ್ತು.

ಐಐಎಸ್‌ಸಿಯ ನಿರಂತರ ಶಿಕ್ಷಣ ಕೇಂದ್ರದಲ್ಲಿ (ಸಿಸಿಇ) ಯುಎಪಿಎ ಕುರಿತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಿಸಿಇ ಮುಖ್ಯಸ್ಥರು ಅನುಮೋದನೆ ನೀಡಿದ್ದರು.

ಆದರೆ, ಜೂನ್‌ 27ರಂದು ಸಂಘಟಕರಿಗೆ ಇ–ಮೇಲ್‌ ಕಳುಹಿಸಿದ ಐಐಎಸ್‌ಸಿ ರಿಜಿಸ್ಟ್ರಾರ್‌ ಕ್ಯಾಪ್ಟನ್‌ ಶ್ರೀಧರ್‌ ವಾರಿಯರ್‌, ‘ಮುಂಚಿತವಾಗಿಯೇ ಆಡಳಿತಾತ್ಮಕ ಅನುಮೋದನೆ ಪಡೆದುಕೊಂಡಿಲ್ಲ’ ಎನ್ನುವ ಕಾರಣ ನೀಡಿ ಅನುಮತಿ ನಿರಾಕರಿಸಿದರು. ‘ಕಾರ್ಯಕ್ರಮದ ಬಗ್ಗೆ ದೂರುಗಳು ಸಹ ಬಂದಿವೆ’ ಎಂದು ಇ–ಮೇಲ್‌ನಲ್ಲಿ ಉಲ್ಲೇಖಿಸಲಾಗಿತ್ತು.

ಐಐಎಸ್‌ಸಿ ನಡೆಗೆ ಆಕ್ಷೇಪ ವ್ಯಕ್ತಪಡಿಸಿ ನಿರ್ದೇಶಕ ಪ್ರೊ. ಗೋವಿಂದನ್‌ ರಂಗರಾಜನ್‌ ಅವರಿಗೆ ಪತ್ರ ಬರೆದಿರುವ ವಿಜ್ಞಾನಿಗಳು, ಶಿಕ್ಷಣ ತಜ್ಞರು ಮತ್ತು ವಿದ್ಯಾರ್ಥಿಗಳು, ‘ನಾವು ಬದುಕುವ ಸಮಾಜದಲ್ಲಿನ ವಿಚಾರಗಳ ಕುರಿತು ಚರ್ಚಿಸಲು ಮುಕ್ತ ಸ್ವಾತಂತ್ರ್ಯವಿರುವ ವಾತಾವರಣ ಕಲ್ಪಿಸಬೇಕು’ ಎಂದು ಒತ್ತಾಯಿಸಿದ್ದಾರೆ.

‘ಈ ರೀತಿಯ ಧೋರಣೆಯಿಂದ ಸಂಸ್ಥೆಯ ಘನತೆಗೆ ಜಾಗತಿಕವಾಗಿ ಧಕ್ಕೆಯಾಗಿದೆ. ಕ್ರಿಯಾಶೀಲ ಪ್ರಜಾಪ್ರಭುತ್ವದ ದೃಷ್ಟಿಯಿಂದ ಇಂತಹ ಚರ್ಚೆಗಳು ಅಗತ್ಯವಾಗಿವೆ. ನತಾಶಾ ಮತ್ತು ದೇವಾಂಗನಾ ಅವರ ಅನುಭವಗಳನ್ನು ಆಲಿಸಲು ಇದೊಂದು ಉತ್ತಮ ವೇದಿಕೆಯಾಗಿತ್ತು. ಶಾಂತಿಯುತವಾಗಿ ಚರ್ಚೆ ನಡೆಸಲು ಅವಕಾಶ ನೀಡದ ಸಂಸ್ಥೆಯು, ವೈಜ್ಞಾನಿಕ ವಿಶ್ಲೇಷಣೆಗಳನ್ನು ನಡೆಸಲು ಹೇಗೆ ಉತ್ತೇಜನ ನೀಡುತ್ತದೆ’ ಎಂದು ಪ್ರಶ್ನಿಸಿದ್ದಾರೆ.

ಐಐಎಸ್‌ಸಿ, ಐಐಟಿ, ಟಾಟಾ ಇನ್‌ಸ್ಟಿಟ್ಯೂಟ್‌ ಆಫ್‌ ಫಂಡಮೆಂಟಲ್‌ ರಿಸರ್ಚ್‌, ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಅಡ್ವಾನ್ಸ್ಡ್‌ ಸ್ಟಡೀಸ್‌, ರಾಮನ್‌ ಸಂಶೋಧನಾ ಸಂಸ್ಥೆ ಹಾಗೂ ಯೂನಿವರ್ಸಿಟಿ ಆಫ್‌ ಕ್ಯಾಲಿಫೋರ್ನಿಯಾ, ಕಾರ್ನೆಲ್‌ ಯುನಿವರ್ಸಿಟಿ, ಇಂಪೀರಿಯಲ್‌ ಕಾಲೇಜ್‌ ಲಂಡನ್‌, ಸೋಲ್‌ ನ್ಯಾಷನಲ್‌ ಯುನಿವರ್ಸಿಟಿ ಸೇರಿದಂತೆ ವಿದೇಶದ ಹಲವು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು ಈ ಪ‍ತ್ರಕ್ಕೆ ಸಹಿ ಹಾಕಿದ್ದಾರೆ.

ಆದರೆ, ವಿದ್ಯಾರ್ಥಿಗಳ ಮತ್ತು ತಜ್ಞರ ಅಭಿಪ್ರಾಯವನ್ನು ಸಂಸ್ಥೆಯ ಅಭಿಪ್ರಾಯವೆಂದು ಬಿಂಬಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

‘ಕಾರ್ಯಕ್ರಮ ಆಯೋಜಿಸಲು ಅಗತ್ಯ ಇದ್ದ ಎಲ್ಲ ಅನುಮತಿಗಳನ್ನು ಮುಂಚಿತವಾಗಿಯೇ ಪಡೆಯಲಾಗಿತ್ತು’ ಎಂದು ಐಐಎಸ್‌ಸಿಯ ಪಿಎಚ್‌.ಡಿ. ವಿದ್ಯಾರ್ಥಿ ಶೈರಿಕ್‌ ಸೇನ್‌ಗುಪ್ತಾ ತಿಳಿಸಿದ್ದಾರೆ.

ಅನುಮತಿ ಸಿಗದ ಕಾರಣ ಕ್ಯಾಂಪಸ್‌ನಲ್ಲಿರುವ ಫುಡ್‌ಕೋರ್ಟ್‌ ಸಮೀಪದಲ್ಲೇ ವಿದ್ಯಾರ್ಥಿಗಳು ಅನೌಪಚಾರಿಕವಾಗಿ ಈ ಕಾರ್ಯಕ್ರಮ ನಡೆಸಿದರು. ಆದರೆ, ಭದ್ರತಾ ಸಿಬ್ಬಂದಿ ಈ ಅನೌಪಚಾರಿಕ ಕಾರ್ಯಕ್ರಮಕ್ಕೂ ಅಡ್ಡಿಪಡಿಸಲು ಯತ್ನಿಸಿದರು ಎಂದು ‘ಇಂಟರ್‌ನ್ಯಾಷನಲ್‌ ಸೆಂಟರ್‌ ಫಾರ್‌ ಥಿಯರಿಟಿಕಲ್‌ ಸೈನ್ಸಸ್‌’ನ ಪ್ರೊ. ಸುಬ್ರತ್‌ ರಾಜು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT