ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ಅಕ್ರಮ ಕೊಳವೆಬಾವಿ ಕೊರೆತ: 36 ಪ್ರಕರಣ ದಾಖಲು

Published 20 ಏಪ್ರಿಲ್ 2024, 15:40 IST
Last Updated 20 ಏಪ್ರಿಲ್ 2024, 15:40 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಅನುಮತಿ ಇಲ್ಲದೆ ಕೊಳವೆಬಾವಿ ಕೊರೆಯಿಸಿದ ಸಂಬಂಧ 36 ಪ್ರಕರಣಗಳು ದಾಖಲಾಗಿದ್ದು, ಪೊಲೀಸ್‌ ಠಾಣೆಯಲ್ಲಿ ಜಲಮಂಡಳಿ ದೂರು ದಾಖಲಿಸಿದೆ.

ನಗರದಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿರುವುದರಿಂದ ಕೊಳವೆಬಾವಿ ಕೊರೆಯಿಸುವುದನ್ನು ನಿರ್ಬಂಧಿಸಲಾಗಿದೆ. ಇಷ್ಟಾದರೂ ಹಲವೆಡೆ ಕೊರೆಸಲಾಗುತ್ತಿದೆ. ನಾಗರಿಕರ ದೂರಿನ ಆಧಾರದಲ್ಲಿ ಜಲಮಂಡಳಿ ಅಧಿಕಾರಿಗಳು ಸ್ಥಳಪರಿಶೀಲಿಸಿ ಕ್ರಮಜರುಗಿಸುತ್ತಿದ್ದಾರೆ.

ವೀರಭದ್ರನಗರ, ಅಂಬರ್‌ ಲೇಔಟ್‌, ಸೀಗೇಹಳ್ಳಿ, ದೊಡ್ಡಕನ್ನೇಲಿ, ಜುನ್ನಸಂದ್ರ, ಕೂಕ್ಸ್‌ ಟೌನ್‌, ನ್ಯೂ ಪಾಟೆರಿ ಟೌನ್‌, ಆರ್‌ಎಂವಿ 2ನೇ ಘಟ್ಟ, ಮಾಗಡಿ ರಸ್ತೆ, ಮಹಾಗಣಪತಿನಗರ, ಗವಿಪುರ ಹೌಸಿಂಗ್‌ ಸೊಸೈಟಿ, ಕೃಷ್ಣ ಗಾರ್ಡನ್‌, ಕೋಣನಕುಂಟೆ, ಅರೆಹಳ್ಳಿ, ಹನುಮನಬೆಟ್ಟ, ನಾಯ್ಡು ಲೇಔಟ್‌, ಪೂರ್ಣಪ್ರಜ್ಞ ಲೇಔಟ್‌ಗಳಲ್ಲಿ ಅನುಮತಿ ಇಲ್ಲದೆ ಕೊಳವೆಬಾವಿ ಕೊರೆಯಲಾಗಿದೆ. ಆಯಾ ಮಾಲೀಕರು ಹಾಗೂ ಸಂಸ್ಥೆಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದರು.

ಅವೈಜ್ಞಾನಿಕವಾಗಿ ಕೊಳವೆಬಾವಿಗಳನ್ನು ಕೊರೆಯುತ್ತಿರುವುದು ಮತ್ತು ಅನುಮತಿ ಪಡೆಯದೆ ಕೊಳವೆಬಾವಿ ಕೊರೆಸಲಾಗುತ್ತಿದೆ. ವೈಯಕ್ತಿಕ ಅಥವಾ ಇನ್ನಿತರೆ ಬಳಕೆಗೆ ಕೊಳವೆಬಾವಿಗಳನ್ನು ಕೊರೆಯುವ ಮುನ್ನ ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆ ವಿನಿಯಮ ಹಾಗೂ ನಿಯಂತ್ರಣ) ಕಾಯ್ದೆಯಂತೆ ಪ್ರಾಧಿಕಾರಗಳಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಅನುಮತಿ ಪಡೆಯದಿದ್ದರೆ ಕಾಯ್ದೆಯಂತೆ ರಿಗ್‌ ಪಡೆಯಲು ನೀಡಿರುವ ಅನುಮತಿಯನ್ನು ರದ್ದುಪಡಿಸಿ, ಕಾನೂನುಕ್ರಮ ಕೈಗೊಳ್ಳಲಾಗುತ್ತದೆ. ಕೊಳವೆಬಾವಿ ಕೊರೆಸುವ ಮಾಲೀಕರ ವಿರುದ್ಧ ನಿಯಮ ಉಲ್ಲಂಘನೆ ದೂರು ದಾಖಲಿಸಿ, ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಜಲಮಂಡಳಿ ಅಧ್ಯಕ್ಷ ರಾಮ್‌ ಪ್ರಸಾತ್‌ ಮನೋಹರ್‌ ಆದೇಶದಲ್ಲಿ ತಿಳಿಸಿದ್ದರು.

ಮಾರ್ಚ್‌ 15ರಿಂದ ಈ ಆದೇಶ ಜಾರಿಗೆ ಬಂದಿದೆ. ಕೊಳವೆಬಾವಿ ಕೊರೆಯಿಸಲು ಅನುಮತಿಗೆ ಅರ್ಜಿ ಸಲ್ಲಿಸಬಹುದು. ಅಗತ್ಯ ಹಾಗೂ ತಜ್ಞರ ವರದಿ ಆಧರಿಸಿ, ಸಂಬಂಧಪ‍ಟ್ಟವರಿಂದ ಸ್ಥಳ ಪರಿಶೀಲಿಸಿ ನಿಯಮಾನುಸಾರ ಅನುಮತಿ ನೀಡಲಾಗುವುದು. ಅನುಮತಿ ಇಲ್ಲದೆ ಕೊಳವೆಬಾವಿ ಕೊರೆಯುವುದು ಕಂಡುಬಂದರೆ ನಾಗರಿಕರು 1916ಗೆ ಕರೆ ಮಾಡಿ ತಿಳಿಸಬಹುದು ಜಲಮಂಡಳಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT