ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಮೆಜೆಸ್ಟಿಕ್ ಸುತ್ತಮುತ್ತ ಖಾಸಗಿ ಬಸ್‌ಗಳ ಅಕ್ರಮ ನಿಲುಗಡೆ

* ಸಾರಿಗೆ ನಿಗಮಗಳ ಬಸ್, ಜನರ ವಾಹನ ಓಡಾಟಕ್ಕೆ ತೊಂದರೆ * ದೂರು ನೀಡಿದರೂ ಪೊಲೀಸರು ಮೌನ
Published 14 ಏಪ್ರಿಲ್ 2024, 0:30 IST
Last Updated 14 ಏಪ್ರಿಲ್ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಮೆಜೆಸ್ಟಿಕ್ ಕೇಂದ್ರ ಬಸ್ ನಿಲ್ದಾಣ ಹಾಗೂ ಮೈಸೂರು ರಸ್ತೆಯ ಸ್ಯಾಟ್‌ಲೈಟ್‌ ಬಸ್‌ ನಿಲ್ದಾಣ ಸುತ್ತಮುತ್ತಲ ಖಾಸಗಿ ಬಸ್‌ಗಳನ್ನು ಅಕ್ರಮವಾಗಿ ನಿಲುಗಡೆ ಮಾಡಲಾಗುತ್ತಿದ್ದು, ಇದರಿಂದಾಗಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ.

ಬೆಂಗಳೂರಿನಿಂದ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ನಿತ್ಯವೂ ನೂರಾರು ಸಂಖ್ಯೆಯಲ್ಲಿ ಖಾಸಗಿ ಬಸ್‌ಗಳು ಸಂಚರಿಸುತ್ತಿವೆ. ಬಹುತೇಕ ಖಾಸಗಿ ಬಸ್‌ಗಳನ್ನು ಪ್ರಮುಖ ರಸ್ತೆಗಳ ಬದಿಯಲ್ಲಿ ಅಕ್ರಮವಾಗಿ ನಿಲ್ಲಿಸಲಾಗುತ್ತಿದ್ದು, ಈ ಬಗ್ಗೆ ದೂರು ನೀಡಿದರೂ ಸಂಚಾರ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲವೆಂಬ ಆರೋಪ ವ್ಯಕ್ತವಾಗಿದೆ.

ಮೆಜೆಸ್ಟಿಕ್ ಬಳಿಯ ಪ್ಲಾಟ್‌ಫಾರ್ಮ್‌ ರಸ್ತೆ, ಧನ್ವಂತರಿ ರಸ್ತೆ, ಜೆಡಿಎಸ್ ಕಚೇರಿ ರಸ್ತೆ, ಸುಬೇದಾರ್ ಛತ್ರ ರಸ್ತೆ ಹಾಗೂ ಸುತ್ತಮುತ್ತ ರಸ್ತೆಗಳಲ್ಲಿ ನಿತ್ಯವೂ ಖಾಸಗಿ ವಾಹನಗಳಿಂದ ದಟ್ಟಣೆ ಉಂಟಾಗುತ್ತಿರುವುದಾಗಿ ಸ್ಥಳೀಯರು ದೂರುತ್ತಿದ್ದಾರೆ.

‘ಬೆಂಗಳೂರಿನ ಹೃದಯ ಭಾಗ ಮೆಜೆಸ್ಟಿಕ್. ನಗರಕ್ಕೆ ಬರುವ ಹಾಗೂ ಇಲ್ಲಿಂದ ಹೊರ ಜಿಲ್ಲೆ–ಹೊರ ರಾಜ್ಯಕ್ಕೆ ಹೋಗುವ ಬಹುತೇಕರು, ಮೆಜೆಸ್ಟಿಕ್‌ ನಿಲ್ದಾಣದ ಮೂಲಕ ಸಂಚರಿಸುತ್ತಿದ್ದಾರೆ. ಇದೇ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳ ರಸ್ತೆಗಳಲ್ಲಿ ಖಾಸಗಿ ಬಸ್‌ಗಳನ್ನು ನಿಲುಗಡೆ ಮಾಡಲಾಗುತ್ತಿದ್ದು, ಇದರಿಂದ ಸಾರಿಗೆ ನಿಗಮಗಳ ಬಸ್‌ಗಳು ಹಾಗೂ ಸಾರ್ವಜನಿಕರ ವಾಹನಗಳ ಸಂಚಾರಕ್ಕೆ ಕಿರಿಕಿರಿ ಉಂಟಾಗುತ್ತಿದೆ’ ಎಂದು ಗಾಂಧಿನಗರದ ವ್ಯಾಪಾರಿ ಎಂ. ರಂಗನಾಥ್ ಅಳಲು ತೋಡಿಕೊಂಡರು.

‘ಬಹುತೇಕ ಖಾಸಗಿ ಬಸ್‌ಗಳು ರಾತ್ರಿ ಹೊತ್ತು ಸಂಚರಿಸುತ್ತವೆ. ಬೆಳಿಗ್ಗೆಯಿಂದ ಸಂಜೆಯವರೆಗೂ ಪ್ರಮುಖ ರಸ್ತೆ ಬದಿಯಲ್ಲಿ ಬಸ್‌ ನಿಲ್ಲಿಸಲಾಗುತ್ತಿದೆ. ಇಂಥ ಬಸ್‌ಗಳ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೂ ದೂರು ನೀಡಲಾಗಿದೆ. ಆದರೆ, ಯಾವುದೇ ಕ್ರಮ ಜರುಗಿಸಿಲ್ಲ’ ಎಂದರು.

ಮೆಜೆಸ್ಟಿಕ್‌ ಬಳಿಯ ಹೋಟೆಲ್‌ವೊಂದರ ಮಾಲೀಕ, ‘ಮೆಜೆಸ್ಟಿಕ್ ಸುತ್ತಮುತ್ತ ಖಾಸಗಿ ಬಸ್‌ ಬುಕ್ಕಿಂಗ್ ಏಜೆನ್ಸಿಗಳು ಹೆಚ್ಚಿವೆ. ಅವರೇ ತಮ್ಮ ಕಂಪನಿ ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸುತ್ತಿದ್ದಾರೆ. ಇದು ದಟ್ಟಣೆಗೆ ಕಾರಣವಾಗುತ್ತಿದೆ’ ಎಂದರು.

‘ಬಸ್ ನಿಲ್ದಾಣಕ್ಕೆ ಬಂದು ಹೋಗಲು ಯಾರ ಆಕ್ಷೇಪವೂ ಇಲ್ಲ. ಆದರೆ, ಬೆಳಿಗ್ಗೆಯಿಂದ ಸಂಜೆಯವರೆಗೂ ರಸ್ತೆಯಲ್ಲಿ ನಿಲ್ಲಿಸಿದರೆ ಜನರಿಗೆ ತೊಂದರೆ’ ಎಂದು ಹೇಳಿದರು.

ಪೊಲೀಸರಿಗೆ ಲಂಚ, ಮಾಲೀಕರ ಬೆದರಿಕೆ: ‘ಬಸ್ ನಿಲುಗಡೆ ಪ್ರಶ್ನಿಸುವ ಜನರನ್ನು ಮಾಲೀಕರು ಬೆದರಿಸುತ್ತಿದ್ದಾರೆ. ‘ಪೊಲೀಸರಿಗೆ ನಾವು ಲಂಚ ಕೊಡುತ್ತೇವೆ. ರಸ್ತೆಯಲ್ಲಿಯೇ ಬಸ್ ನಿಲ್ಲಿಸುತ್ತೇವೆ. ನಮ್ಮನ್ನು ಯಾರೂ ಏನು ಮಾಡುವುದಿಲ್ಲ’ ಎಂಬುದಾಗಿ ಮಾಲೀಕರು ಹೇಳುತ್ತಿದ್ದಾರೆ. ಬಸ್ ನಿಲುಗಡೆ ವಿಚಾರಕ್ಕೆ ಆಗಾಗ ಗಲಾಟೆಯೂ ಆಗುತ್ತಿದೆ’ ಎಂದು ಸಾರ್ವಜನಿಕರು ದೂರಿದರು.

ಮೈಸೂರು ರಸ್ತೆಯಲ್ಲೂ ದಟ್ಟಣೆ: ‘ಸ್ಯಾಟ್‌ಲೈಟ್ ಬಸ್‌ ನಿಲ್ದಾಣ ಬಳಿಯೂ ಖಾಸಗಿ ಬಸ್‌ಗಳನ್ನು ಅಕ್ರಮವಾಗಿ ನಿಲುಗಡೆ ಮಾಡಲಾಗುತ್ತಿದೆ. ಇದರಿಂದ ಮೈಸೂರು ರಸ್ತೆಯಲ್ಲಿ ದಟ್ಟಣೆ ಉಂಟಾಗುತ್ತಿದೆ. ಪೊಲೀಸರು ಖಾಸಗಿ ಬಸ್‌ಗಳನ್ನು ರಸ್ತೆಯಿಂದ ತೆರವು ಮಾಡಬೇಕು’ ಎಂದು ಸ್ಥಳೀಯರು ಆಗ್ರಹಿಸಿದರು.

‘ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿ’

‘ಖಾಸಗಿ ಬಸ್‌ಗಳಿಂದ ಪ್ರಯಾಣಿಕರಿಗೆ ಅನುಕೂಲ ಆಗುತ್ತಿದೆ. ಬಸ್ ನಿಲುಗಡೆ ಮಾಡಲು ಮಾತ್ರ ನಗರದಲ್ಲಿ ಸೂಕ್ತ ಜಾಗವಿಲ್ಲ. ಸೂಕ್ತ ಜಾಗ ಒದಗಿಸಿದರೆ ರಸ್ತೆಯಲ್ಲಿ ಬಸ್‌ ನಿಲ್ಲಿಸುವುದಿಲ್ಲ’ ಎಂದು ಖಾಸಗಿ ಬಸ್‌ ಕಂಪನಿಯೊಂದರ ಮಾಲೀಕ ಹೇಳಿದರು. ಬಸ್ ಅಕ್ರಮ ನಿಲುಗಡೆ ಬಗ್ಗೆ ಪ್ರತಿಕ್ರಿಯಿಸಿದ ಅವರು ‘ಬಹುತೇಕ ಪ್ರಯಾಣಿಕರು ಮೆಜೆಸ್ಟಿಕ್ ನಿಲ್ದಾಣದಲ್ಲಿ ಬಸ್‌ ಹತ್ತುತ್ತಾರೆ. ಮೆಜೆಸ್ಟಿಕ್ ಸುತ್ತಮುತ್ತ ಖಾಸಗಿ ಬಸ್‌ಗಳ ನಿಲುಗಡೆಗೆ ಯಾವುದೇ ಜಾಗವಿಲ್ಲ. ಹೀಗಾಗಿ ರಸ್ತೆಯಲ್ಲಿ ನಿಲ್ಲಿಸುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT