ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಮರ್ಪಕ ತ್ಯಾಜ್ಯ ವಿಲೇವಾರಿಯಿಂದ ಕಾಯಿಲೆ ಪ್ರಮಾಣ ಹೆಚ್ಚಳ: ಪರಿಸರ ವರದಿ

ಸುಸ್ಥಿರ ಅಭಿವೃದ್ಧಿ ಕೇಂದ್ರದ
Last Updated 30 ಆಗಸ್ಟ್ 2022, 21:28 IST
ಅಕ್ಷರ ಗಾತ್ರ

ಬೆಂಗಳೂರು: ತ್ಯಾಜ್ಯಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡದಿದ್ದರಿಂದ ನಗರದ ಜನರನ್ನು ಡೆಂಗಿ, ಚಿಕೂನ್‌ಗುನ್ಯದಂತಹ ಕಾಯಿಲೆಗಳು ಹೆಚ್ಚಾಗಿ ಕಾಡುತ್ತಿವೆ ಎಂದುಸುಸ್ಥಿರ ಅಭಿವೃದ್ಧಿ ಕೇಂದ್ರದ ‘ಪರಿಸರ ವರದಿ’ಯಲ್ಲಿ ತಿಳಿಸಲಾಗಿದೆ.

ನಗರವನ್ನು ಕೇಂದ್ರವಾಗಿರಿಸಿಕೊಂಡು ಕೇಂದ್ರವು 2005, 2012ರಲ್ಲಿ ಸಮೀಕ್ಷೆ ನಡೆಸಿತ್ತು. 2021ರಲ್ಲಿ 3ನೇ ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆಗೆ ನಗರದ 2,244 ಮನೆಗಳು ಒಳಪಟ್ಟಿದ್ದವು. ಸಮೀಕ್ಷೆಯ ವರದಿಯನ್ನು ಕೇಂದ್ರವು ಸರ್ಕಾರಕ್ಕೆ ಸಲ್ಲಿಸಿದೆ.

‘ನಗರದ ವೈದ್ಯಕೀಯ ವ್ಯವಸ್ಥೆಯಲ್ಲಿ ಸುಧಾರಣೆಗಳಾಗುತ್ತಿವೆ. ಆದರೆ, ಇದೇ ಅವಧಿಯಲ್ಲಿ ಜೀವನಶೈಲಿ ಸಂಬಂಧಿ ರೋಗಗಳು ಹೆಚ್ಚುತ್ತಿವೆ. ಗಾಳಿ ಮತ್ತು ನೀರಿನಿಂದ ಹರಡುವ ರೋಗಗಳ ತಡೆಗೂ ಕ್ರಮವಹಿಸಬೇಕಿದೆ. ಆರ್‌.ಆರ್. ನಗರ ವಲಯದಲ್ಲಿ ಹೆಚ್ಚಿನ ಜನರಿಗೆ ಅಶುದ್ಧ ನೀರು ಮತ್ತು ಗಾಳಿಯಿಂದ ಅನಾರೋಗ್ಯ ಸಮಸ್ಯೆಗಳು ಕಾಡಿವೆ. ಬೊಮ್ಮನಹಳ್ಳಿಯ ಕೊಳೆಗೇರಿ ನಿವಾಸಿಗಳಲ್ಲಿಯೂ ಹೆಚ್ಚಿನವರಲ್ಲಿ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿವೆ. ಅಶುದ್ಧ ನೀರು ಸೇವನೆಯಿಂದಲೇ ವಿವಿಧ ಸಾಂಕ್ರಾಮಿಕ ರೋಗಗಳು ಅಲ್ಲಿನ ನಿವಾಸಿಗಳನ್ನು ಕಾಡುತ್ತಿವೆ’ ಎಂದು ಹೇಳಲಾಗಿದೆ.

‘ತ್ಯಾಜ್ಯ ನಿರ್ವಹಣೆ ಬಗ್ಗೆ ಎಲ್ಲ ವಲಯದ ನಿವಾಸಿಗಳೂ ಋಣಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಮಳೆಯಿಂದಾಗಿ ಸೊಳ್ಳೆಗಳ ಕಡಿತದಿಂದ ಹರಡುವ ಸಾಂಕ್ರಾಮಿಕ ರೋಗಗಳು ಸಮುದಾಯದಲ್ಲಿ ಹರಡುವ ಆತಂಕವಿದೆ. ಮಲೇರಿಯಾ, ಡೆಂಗಿ, ಚಿಕೂನ್‌ಗುನ್ಯಾ, ಆನೆಕಾಲು ಮೊದಲಾದ ರೋಗಗಳು ಅಪಾಯ ತಂದೊಡ್ಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕಾಗುತ್ತದೆ’ ಎಂದು ತಿಳಿಸಲಾಗಿದೆ.

ನೀರಿನ ಸಮಸ್ಯೆ: ‘ಹಸಿ ತ್ಯಾಜ್ಯಗಳ ಅವೈಜ್ಞಾನಿಕ ನಿರ್ವಹಣೆ, ಒಳಚರಂಡಿ ವ್ಯವಸ್ಥೆಯಲ್ಲಿನ ಲೋಪಗಳೂ ಸಾಂಕ್ರಾಮಿಕ ರೋಗಗಳ ಹೆಚ್ಚಳಕ್ಕೆ ಕಾರಣವಾಗುತ್ತವೆ. ಶೇ 80ರಷ್ಟು ಜನರು ನೀರಿನ ಪೂರೈಕೆ ಹಾಗೂ ಅದರ ಗುಣಮಟ್ಟದ ಬಗ್ಗೆ ತೃಪ್ತಿ ಹೊಂದಿದ್ದಾರೆ. ಆದರೆ, ಬಹುತೇಕ ಕಡೆ ಬೋರ್‌ವೆಲ್ (ಕೊಳವೆ ಬಾವಿ) ನೀರು ಕುಡಿಯಲು ಯೋಗ್ಯವಾಗಿಲ್ಲ ಎನ್ನುವುದು ಪರೀಕ್ಷೆಗೆ ಒಳಪಡಿಸಿದಾಗ ದೃಢಪಟ್ಟಿದೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಬೊಮ್ಮನಹಳ್ಳಿ ವಲಯದ ಕೊಳೆಗೇರಿ ನಿವಾಸಿಗಳು ಪರಿಸರ ನೈರ್ಮಲ್ಯದ ಬಗ್ಗೆ ಅತೃಪ್ತಿ ಹೊಂದಿದ್ದಾರೆ. ಮಹಾದೇವಪುರ ವಲಯದ ಕೊಳೆಗೇರಿ ನಿವಾಸಿಗಳಲ್ಲಿ ಶೇ 7ರಷ್ಟು ಜನರು ಮಾತ್ರ ಪರಿಸರ ನೈರ್ಮಲ್ಯದ ಬಗ್ಗೆ ತೃಪ್ತಿ ಹೊಂದಿದ್ದಾರೆ. ಆದ್ದರಿಂದ ಬಿಬಿಎಂಪಿ ಪರಿಸರ ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕು. ಸಾಂಕ್ರಾಮಿಕ ರೋಗಗಳ ಹರಡುವಿಕೆ ತಡೆಗೆ ಕ್ರಮವಹಿಸಬೇಕು’ ಎಂದು ಶಿಫಾರಸು ಮಾಡಲಾಗಿದೆ.

‘ಆರ್‌.ಆರ್. ನಗರದಲ್ಲಿ ಪ್ರತಿಕ್ರಿಯಿಸಿದವರಲ್ಲಿ ಶೇ 60ರಷ್ಟು ಮಂದಿ ಶೌಚಾಲಯ ವ್ಯವಸ್ಥೆಯಿಲ್ಲ ಎಂದಿದ್ದಾರೆ. ಆರೋಗ್ಯಯುತ ವಾತಾವರಣ ನಿರ್ಮಾಣಕ್ಕೆ ಅಗತ್ಯ ಕ್ರಮಗಳನ್ನು ಬಿಬಿಎಂಪಿ ಕೈಗೊಳ್ಳಬೇಕು’ ಎಂದು ತಿಳಿಸಲಾಗಿದೆ.

ಅಂಕಿ–ಅಂಶಗಳು

39,696: ಬಿಬಿಎಂಪಿ ವ್ಯಾಪ್ತಿಯಲ್ಲಿನ ಶಂಕಿತ ಡೆಂಗಿ ಪ್ರಕರಣಗಳು

4,999: ಪರೀಕ್ಷಿಸಲಾದ ರಕ್ತದ ಮಾದರಿಗಳು

1,058: ದೃಢಪಟ್ಟ ಡೆಂಗಿ ಪ್ರಕರಣಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT