ಮಕ್ಕಳಲ್ಲಿಯೂ ಹೆಚ್ಚುತ್ತಿದೆ ಹೃದಯ ಸಮಸ್ಯೆ : ಡಾ.ಸಿ.ಎನ್. ಮಂಜುನಾಥ್

ಬೆಂಗಳೂರು: ‘ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಲ್ಲಿಯೂ ಹೃದಯ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಆರಂಭಿಕ ಹಂತದಲ್ಲೇ ಅವರಿಗೆ ಚಿಕಿತ್ಸೆ ಕೊಡಿಸಿದಲ್ಲಿ ಸಮಸ್ಯೆ ಮರುಕಳಿಸುವುದನ್ನು ತಪ್ಪಿಸಬಹುದು’ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ತಿಳಿಸಿದರು.
ಸರ್ಕಾರೇತರ ಸಂಸ್ಥೆಯಾಗಿರುವ ‘ನೀಡಿ ಹಾರ್ಟ್ ಫೌಂಡೇಷನ್’ (ಎನ್‌ಎಚ್‌ಎಫ್), ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದ 10 ಸಾವಿರ ಬಡ ರೋಗಿಗಳಿಗೆ ಶಸ್ತ್ರಚಿಕಿತ್ಸೆಗೆ ನೆರವಾಗುವ ಮೂಲಕ ಹೊಸ ಮೈಲುಗಲ್ಲು ಸ್ಥಾಪಿಸಿದೆ. ಈ ಸಂಬಂಧ ಫೌಂಡೇಷನ್ ಆಯೋಜಿಸಿದ್ದ ವೆಬಿನಾರ್‌ನಲ್ಲಿ ಮಾತನಾಡಿದ ಅವರು, ‘ಕೆಲ ಮಕ್ಕಳಿಗೆ ಹುಟ್ಟುತ್ತಲೇ ಹೃದಯದಲ್ಲಿ ರಂಧ್ರ ಸೇರಿದಂತೆ ವಿವಿಧ ಗಂಭೀರ ಸಮಸ್ಯೆಗಳು ಇರುತ್ತವೆ. ಅಂತಹವರಿಗೆ ಶಸ್ತ್ರಚಿಕಿತ್ಸೆ ಮಾಡುವುದು ಅತ್ಯಗತ್ಯ. ದೊಡ್ಡವರಿಗಿಂತ ಮಕ್ಕಳು ಶಸ್ತ್ರಚಿಕಿತ್ಸೆ ನಂತರ ಬಳಿಕ ಬೇಗ ಚೇತರಿಸಿಕೊಳ್ಳುತ್ತಾರೆ’ ಎಂದರು.
‘11 ವರ್ಷಗಳಿಂದ ನಮ್ಮ ಸಂಸ್ಥೆಯು ಫೌಂಡೇಷನ್ ಜೊತೆಗೆ ಕಾರ್ಯನಿರ್ವಹಿಸುತ್ತಿದೆ. ಎನ್‌ಎಚ್‌ಎಫ್ ಹಾಗೂ ಇಂದಿರಾನಗರ ರೋಟರಿ ಟ್ರಸ್ಟ್ ಸಹಕಾರದಲ್ಲಿ ಆಸ್ಪತ್ರೆಯ ಆವರಣದಲ್ಲಿ ‘ಹೃದ್ರೋಗ ಪುನರ್ವಸತಿ ಕೇಂದ್ರ’ವನ್ನು ಸ್ಥಾಪಿಸಲಾಗಿದೆ. ಈ ಕೇಂದ್ರವು ಹೃದ್ರೋಗ ಶಸ್ತ್ರಚಿಕಿತ್ಸೆ ನಂತರದ ವ್ಯಾಯಾಮ, ದೈಹಿಕ ಚಟುವಟಿಕೆಯ ಸಮಾಲೋಚನೆ, ಶಸ್ತ್ರಚಿಕಿತ್ಸಾ ನಂತರದ ತಪಾಸಣೆಯ ಪ್ರಾಮುಖ್ಯ, ಗಾಯದ ಆರೈಕೆ ಮತ್ತು ನೈರ್ಮಲ್ಯ, ಮಧುಮೇಹ, ಅಧಿಕ ರಕ್ತದೊತ್ತಡದ ನಿರ್ವಹಣೆ, ಆಹಾರ ನಿರ್ವಹಣೆ ಮತ್ತು ಮುನ್ನೆಚ್ಚರಿಕೆಯ ಕ್ರಮಗಳ ಬಗ್ಗೆ ಮಾಹಿತಿ ನೀಡುತ್ತದೆ. ಒಂದೇ ಸೂರಿನಡಿ ಎಲ್ಲಾ ತಪಾಸಣೆಗಳನ್ನು ಮಾಡಲಾಗುತ್ತಿದೆ. ರೋಗಿಗಳ ಸಮಸ್ಯೆಗಳನ್ನು ಪರಿಹರಿಸಲು ನೆರವಾಗಿದೆ’ ಎಂದು ತಿಳಿಸಿದರು.
ಫೌಂಡೇಷನ್ ಅಧ್ಯಕ್ಷ ಒ.ಪಿ. ಖನ್ನಾ ಮಾತನಾಡಿ, ‘ಹೃದಯ ಸೇರಿದಂತೆ ವಿವಿಧ ಮುಂದುವರಿದ ಶಸ್ತ್ರಚಿಕಿತ್ಸೆಗಳ ಆವಿಷ್ಕಾರವಾಗಿದ್ದರೂ ಅದರ ಪ್ರಯೋಜನ ಗ್ರಾಮೀಣ ಜನರಿಗೆ ಸಿಗುತ್ತಿಲ್ಲ. ವಿವಿಧ ಆಸ್ಪತ್ರೆಗಳ ಸಹಕಾರದಿಂದ ಬಡ ಮಕ್ಕಳಿಗೆ ಹೃದಯ ಶಸ್ತ್ರಚಿಕಿತ್ಸೆಯನ್ನು ಮಾಡಿಸುತ್ತಿದ್ದೇವೆ. ಶೇ 50 ರಷ್ಟು ಶಸ್ತ್ರಚಿಕಿತ್ಸೆಗಳನ್ನು ಜಯದೇವ ಹೃದ್ರೋಗ ಸಂಸ್ಥೆಯಲ್ಲಿಯೇ ಮಾಡಿಸಲಾಗಿದೆ. ಹೃದ್ರೋಗ ಸಮಸ್ಯೆ ಎದುರಿಸುತ್ತಿರುವ ಎಲ್ಲ ಮಕ್ಕಳಿಗೂ ಸೂಕ್ತ ಚಿಕಿತ್ಸೆ ದೊರೆಯುವಂತಾಗಬೇಕು ಎನ್ನುವುದು ನಮ್ಮ ಆಶಯ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.