ಬುಧವಾರ, ಜನವರಿ 27, 2021
27 °C
ಕೊರೊನಾ ಯೋಧರಿಗೆ ಗೌರವ ಸಮರ್ಪಣೆ * ಸಾಂಸ್ಕೃತಿಕ ಕಾರ್ಯಕ್ರಮಗಳ ಅಬ್ಬರವಿಲ್ಲ

ಬೆಂಗಳೂರು: ಸರಳ, ಸುರಕ್ಷಿತ ಸ್ವಾತಂತ್ರ್ಯ ದಿನಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್ ನಡುವೆಯೂ ನಗರದ ಜನತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳ ಅಬ್ಬರ ಇಲ್ಲದಿದ್ದರೂ ದೇಶಭಕ್ತಿಯ ಸಡಗರಕ್ಕೆ ಕೊರತೆ ಇರಲಿಲ್ಲ. ವಿವಿಧ ಕಡೆಗಳಲ್ಲಿ ಕೊರೊನಾ ಯೋಧರನ್ನು ಗೌರವಿಸಲಾಯಿತು.

ವಿವಿಧ ಸಂಘ–ಸಂಸ್ಥೆಗಳು ಸರ್ಕಾರದ ಮಾರ್ಗಸೂಚಿ ಅನುಸಾರ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದವು. ಕೋವಿಡ್‌ ವ್ಯಾಪಿಸಿರುವ ಕಾರಣದಿಂದ ನಗರದ ಮಾಣೆಕ್‌ ಷಾ ಪರೇಡ್‌ ಮೈದಾನ ಸೇರಿದಂತೆ ವಿವಿಧೆಡೆ ಪರಸ್ಪರ ಅಂತರ ಕಾಯ್ದುಕೊಳ್ಳುವ ಮೂಲಕ ಸ್ವಾತಂತ್ರ್ಯೋತ್ಸವ  ಕಾರ್ಯಕ್ರಮವನ್ನು ನಡೆಸಲಾಯಿತು. ಶಾಲಾ–ಕಾಲೇಜುಗಳಲ್ಲಿ ಆನ್‌ಲೈನ್ ಮೂಲಕವೇ ಕಾರ್ಯಕ್ರಮ ವೀಕ್ಷಣೆಗೆ ವ್ಯವಸ್ಥೆ ಮಾಡಿದ್ದವು.

ಆಟೊ ರಿಕ್ಷಾ ಸೇರಿದಂತೆ ವಿವಿಧ ವಾಹನಗಳಲ್ಲಿ ತ್ರಿವರ್ಣ ಧ್ವಜಗಳು ರಾರಾಜಿಸಿದವು. ವಿವಿಧ ಸಾಂಸ್ಕೃತಿಕ ಸಂಘ–ಸಂಸ್ಥೆಗಳು ದೇಶ ಭಕ್ತಿಗೀತೆಗಳ ಗಾಯನದ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದವು. 

ರಾಜಭವನಲ್ಲಿ ರಾಜ್ಯಪಾಲ  ವಜುಭಾಯಿ ವಾಲ ಅವರು ಧ್ವಜಾರೋಹಣ ನೆರವೇರಿಸಿ, ರಾಜ್ಯದ ಜನತೆಗೆ ಶುಭಹಾರೈಸಿದರು. ಕೋವಿಡ್‌ ಕಾರ್ಯದಲ್ಲಿ ನಿರತಾಗಿರುವ ವೈದ್ಯರು, ಶುಶ್ರೂಷಕರು, ಪೊಲೀಸರು ಸೇರಿ ಬೆರಳೆಣಿಕೆಯ ಸಿಬ್ಬಂದಿ ಮಾತ್ರ ಭಾಗವಹಿಸಿದರು. 

ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ಕುಲಪತಿ ಪ್ರೊ.ಎಸ್. ಜಾಫೆಟ್, ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಕುಲಪತಿ ಡಾ.ಎಸ್. ಸಚ್ಚಿದಾನಂದ ಧ್ವಜಾರೋಹಣವನ್ನು ನೆರವೇರಿಸಿದರು. ಕೋವಿಡ್‌ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಜಯನಗರ ಸಾರ್ವಜನಿಕ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಕಿರಣ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಕೃಷಿ ವಿಶ್ವವಿದ್ಯಾಲಯದಲ್ಲಿ ಕುಲಪತಿ ಡಾ.ಎಸ್. ರಾಜೇಂದ್ರ ಪ್ರಸಾದ್ ಅವರು ಧ್ವಜಾರೋಹಣ ಮಾಡಿದರು. 

ಕಬ್ಬನ್ ಉದ್ಯಾನದಲ್ಲಿ ಕೃಷಿ ಮತ್ತು ತೋಟಗಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಸತೀಶ್ ಕುಮಾರ್ ಹೊಸಮನಿ ಹಾಗೂ ಕಬ್ಬನ್‌ ಉದ್ಯಾನದ ನಡಿಗೆದಾರರ ಸಂಘದ ಅಧ್ಯಕ್ಷ ಎಸ್‌. ಉಮೇಶ್ ಅವರು ಉಚಿತವಾಗಿ ಮಾಸ್ಕ್‌ ಹಾಗೂ ಸ್ಯಾನಿಟೈಸರ್ ವಿತರಿಸಿದರು. ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯಲ್ಲಿ ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಶ್ರಮಿಸುತ್ತಿರುವ ಶುಶ್ರೂಷಕರನ್ನು ಗೌರವಿಸಲಾಯಿತು. ಆಸ್ಪತ್ರೆಯ ನಿರ್ದೇಶಕ ಡಾ. ಮನೀಶ್ ರೈ ಸೇರಿದಂತೆ ವೈದ್ಯರು ಹಾಗೂ ಶುಶ್ರೂಷಕರು ಕೈಯಲ್ಲಿ ಧ್ವಜ ಹಿಡಿದು, ಆಸ್ಪತ್ರೆಯ ಆವರಣದಲ್ಲಿ ಸಂಭ್ರಮಿಸಿದರು. ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯಲ್ಲಿ (ಎಫ್‍ಕೆಸಿಸಿಐ) ಸಂಸ್ಥೆಯ ನಿರ್ದೇಶಕ ಆರ್‌. ಜನಾರ್ದನ್ ಧ್ವಜಾರೋಹಣ ಮಾಡಿದರು. 

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಗೌರವ ಕೋಶಾಧ್ಯಕ್ಷ ಪಿ. ಮಲ್ಲಿಕಾರ್ಜುನಪ್ಪ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಪರಿಷತ್ತಿನ ಸರಸ್ವತಿ ಗ್ರಂಥ ಭಂಡಾರದಲ್ಲಿ 40 ವರ್ಷ ಸೇವೆ ಸಲ್ಲಿಸಿ, ನಿವೃತ್ತಿಯಾದ ಜಯಂತಿ ಅವರಿಗೆ ‘ವಿ. ಗೌರಮ್ಮ ಗಂಗಾಧರಯ್ಯ ಮಕ್ಕಳ ದತ್ತಿ’ ಪ್ರಶಸ್ತಿ ನೀಡಿ, ಬೀಳ್ಕೊಡಲಾಯಿತು. ಕಮ್ಯುನಿಷ್ಟ್ ಪಾರ್ಟಿ ಆಫ್ ಇಂಡಿಯಾದ ಬೆಂಗಳೂರು ಜಿಲ್ಲಾ ಮಂಡಳಿಯು ಘಾಟೆ ಭವನದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿತು. ವಿವಿಧ ಕಾರ್ಖಾನೆಗಳ ಕಾರ್ಮಿಕರು ಪಾಲ್ಗೊಂಡಿದ್ದರು. ಎಐಟಿಯುಸಿಯ ಪ್ರಧಾನ ಕಾರ್ಯದರ್ಶಿ ಎಂ.ಡಿ. ಹರಿಗೋವಿಂದ ಅವರು ಧ್ವಜಾರೋಹಣ ಮಾಡಿದರು. 

ಕೊರೊನಾ ಯೋಧರಿಗೆ ಗೌರವ: ಕರ್ನಾಟಕ ಲೋಕಾಯುಕ್ತ ಪ್ರಧಾನ ಕಚೇರಿಯಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಧ್ವಜಾರೋಹಣ ನೆರವೇರಿಸಿದರು. ಬೌರಿಂಗ್ ಆಸ್ಪತ್ರೆಯ ವೈದ್ಯರಾದ ಡಾ. ಮಮ್ತಾಜ್ ಆಲಿ ಖಾನ್, ಡಾ. ಅನುರಾಧ, ಬಿಬಿಎಂಪಿ ಕಿರಿಯ ಆರೋಗ್ಯ ಸಹಾಯಕಿ ಸುಧಾ ಹಾಗೂ ಸೋಂಕು ನಿವಾರಕ ಸಿಂಪಡಣಾ ಸಿಬ್ಬಂದಿ ವೀರಣ್ಣ ಅವರ ಕೋವಿಡ್‌ ಸೇವೆಯನ್ನು ಪರಿಗಣಿಸಿ, ಗೌರವಿಸಲಾಯಿತು. 

ಯಲಹಂಕದ ವಿಶ್ವವಿದ್ಯಾಪೀಠ ಶಾಲೆಯಲ್ಲಿ ಸ್ವಚ್ಛತಾ ಸಿಬ್ಬಂದಿ, ಭದ್ರತಾ ಸಿಬ್ಬಂದಿ, ವಾಹನ ಚಾಲಕರನ್ನು ಗೌರವಿಸುವ ಮೂಲಕ ಸ್ವಾತಂತ್ರ್ಯ ದಿನಾಚರಣೆಯನ್ನು ವಿನೂತನವಾಗಿ ಆಚರಿಸಲಾಯಿತು. ಅಖಿಲ ಕರ್ನಾಟಕ ಪ್ರಾಣಿ ದಯಾ ಸಂಘದ ಸಂಸ್ಥಾಪಕರಾಗಿರುವ ಉತ್ತಮ್‌ಚಂದ್ ಜೈನ್ ಅತಿಥಿಯಾಗಿ ಪಾಲ್ಗೊಂಡಿದ್ದರು. ಶಾಲೆಯ ಮುಖ್ಯಸ್ಥರು, ಶಿಕ್ಷಕರು, ಆಡಳಿತ ಸಿಬ್ಬಂದಿ, ಬಾಣಸಿಗರು ಮತ್ತು ಇತರೆ ಸಹಾಯಕ ಸಿಬ್ಬಂದಿ ಆಕರ್ಷಕವಾಗಿ ಪಥ ಸಂಚಲನ ನಡೆಸಿದರು. 

ಕೆಂಗೇರಿ ಉಪನಗರದ ಅಂಧ ಮತ್ತು ಬಡ ಮಕ್ಕಳ ಅನಾಥ ಆಶ್ರಮದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ವಿಶೇಷವಾಗಿ ಆಚರಣೆ ಮಾಡಲಾಯಿತು. ರಂಗಭೂಮಿ ಮತ್ತು ಚಲನಚಿತ್ರ ಕಲಾವಿದ ಡಾ. ರಾಧಾಕೃಷ್ಣ ಉರಾಳ ನಿರ್ದೇಶನದಲ್ಲಿ ನಡೆಯುತ್ತಿರುವ ಕಲಾಕದಂಬ ಆರ್ಟ್‌ ಸೆಂಟರ್‌ ಸಹಯೋಗದಲ್ಲಿ ಆಶ್ರಮದ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿದರು. ಚಂದನ ಲಯನ್ಸ್‌ ಕ್ಲಬ್ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಸ್ವಾತಂತ್ರ್ಯೋತ್ಸವ ಸೈಕಲ್ ಓಟ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕ್ಲಬ್‌ನ ಅಧ್ಯಕ್ಷ  ಲಯನ್ ಎಸ್. ಭಗೀರಥ ಅವರು ಧ್ವಜಾರೋಹಣ ನೆರವೇರಿಸಿ, ಸೈಕಲ್ ಓಟಕ್ಕೆ ಚಾಲನೆ ನೀಡಿದರು. 

ರೌಂಡ್‌ ಟೇಬಲ್ ಇಂಡಿಯಾ ಮತ್ತು ಲೇಡಿಸ್ ಸರ್ಕಲ್ ಇಂಡಿಯಾ ಆಯೋಜಿಸಿದ್ದ ‘ಫ್ರೀಡಂ ಡ್ರೈವ್‌’ನ 10ನೇ ಆವೃತ್ತಿಗೆ ಮೇಯರ್ ಎಂ. ಗೌತಮ್ ಕುಮಾರ್ ಚಾಲನೆ ನೀಡಿದರು. ಇದರಲ್ಲಿ 30ಕ್ಕೂ ಹೆಚ್ಚು ಕಾರುಗಳು ಪಾಲ್ಗೊಂಡವು.

ಅಖಿಲ ಕರ್ನಾಟಕ ಮಹಮ್ಮದೀಯರ ಕನ್ನಡ ವೇದಿಕೆ ಮತ್ತು ಮತ್ತಿಕೆರೆ ಮಜೀದ್–ಎ–ತಾಹ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಧರ್ಮಗುರು ಮೌಲನಾ ಮನಾವರ್ ಹುಸೇನ್ ರಷಾದಿ ಧ್ವಜಾರೋಹಣ ನೆರವೇರಿಸಿದರು. ‘ಎಲ್ಲರೂ ಶಾಂತಿ, ಸಹಬಾಳ್ವೆ ಮೈಗೂಡಿಸಿಕೊಳ್ಳಬೇಕು’ ಎಂದರು. 

ಕೋವಿಡ್ ಜಯಿಸಿದವರು ಭಾಗಿ
ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ನಡೆದ ರಾಜ್ಯ ಮಟ್ಟದ ಸ್ವಾತಂತ್ರ್ಯೋತ್ಸವದಲ್ಲಿ ಈ ಬಾರಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿಲ್ಲ. 75 ಮಂದಿ ಕೊರೊನಾ ಯೋಧರು ಹಾಗೂ ಕೋವಿಡ್‌ನಿಂದ ಗುಣಮುಖರಾದ 25 ಮಂದಿ ಸಮಾರಂಭದಲ್ಲಿ ಭಾಗವಹಿಸಿದ್ದರು‌. ಜನಪ್ರತಿನಿಧಿಗಳು, ಅಧಿಕಾರಿಗಳು, ರಕ್ಷಣಾ ಇಲಾಖೆ ಅಧಿಕಾರಿಗಳು ಸೇರಿ 500 ಜನರಿಗೆ ಮಾತ್ರ ಆಸನಗಳ ವ್ಯವಸ್ಥೆ ಕಲ್ಪಿಸಲಾಗಿತ್ತು.

ಬೆಳಿಗ್ಗೆ 9 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಧ್ವಜಾರೋಹಣ ನೆರವೇರಿಸಿದರು. ಗೌರವ ವಂದನೆ ಸ್ವೀಕರಿಸಿ, ನಾಡಿನ ಜನರಿಗೆ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು. ದೂರದರ್ಶನ ಮತ್ತು ವೆಬ್‌ ಕಾಸ್ಟಿಂಗ್‌ ಮೂಲಕ ಕಾರ್ಯಕ್ರಮ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಕೆಎಸ್ಆರ್‌ಪಿ, ಮಹಿಳಾ ಪೊಲೀಸ್, ಬಿಎಸ್‌ಎಫ್‌ ಸೇರಿ 16 ತುಕಡಿಗಳು, 4 ಬ್ಯಾಂಡ್ ಸೇರಿ 20 ತಂಡಗಳು ಕವಾಯತು ನಡೆಸಿದವು. ದಕ್ಷಿಣ ವಲಯದ ಡಿಸಿಪಿ ಗಿರೀಶ್ ಉಸ್ತುವಾರಿ ವಹಿಸಿದ್ದರು.

ಆನ್‌ಲೈನ್ ಮೂಲಕ ಸ್ವಾತಂತ್ರೋತ್ಸವ
ಟೆಕ್ ಅವಂತ್ ಗಾರ್ಡ್‌ ಕಂಪನಿಯು ಮೈಕ್ರೋಸಾಫ್ಟ್‌ ಲೈವ್‌ ಮೀಟಿಂಗ್ ಮೂಲಕ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ನಡೆಸಿತು. ಇದರಲ್ಲಿ ದೇಶದ ಸುಮಾರು 70 ಶಾಲೆಗಳು ನೋಂದಾಯಿಸಿಕೊಂಡಿದ್ದವು. ಸುಮಾರು 2ಸಾವಿರ ಮಂದಿ ನೇರಪ್ರಸಾರದಲ್ಲಿ ಪಾಲ್ಗೊಂಡಿದ್ದರು. ಕೆಲ ಶಾಲೆಗಳ ವಿದ್ಯಾರ್ಥಿಗಳು ಆನ್‌ಲೈನ್‌ ಮೂಲಕವೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ನಗರದಲ್ಲಿ 18 ಶಾಲೆಗಳು ಈ ವೇದಿಕೆಯ ಮೂಲಕ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದವು.

ರೇವಾ ವಿಶ್ವವಿದ್ಯಾಲಯವು ಆನ್‌ಲೈನ್‌ ವೇದಿಕೆಯ ಮೂಲಕ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ವೀಕ್ಷಣೆಗೆ ವ್ಯವಸ್ಥೆ ಮಾಡಿತ್ತು. ವಿಶ್ವವಿದ್ಯಾಲಯದ ಡಾ.ಪಿ. ಶ್ಯಾಮರಾಜು ಧ್ವಜಾರೋಹಣ ಮಾಡಿದರು. ರೇವಾ ಸ್ಕೂಲ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಆ್ಯಂಡ್ ಇಂಡಿಕ್ ಸ್ಟಡೀಸ್ ವಿಭಾಗದ ವಿದ್ಯಾರ್ಥಿಗಳಿಂದ ಸಂಗೀತ ಮತ್ತು ನೃತ್ಯ ಕಾರ್ಯಕ್ರಮ ನಡೆಯಿತು. 

ಪಿಇಎಸ್ ವಿಶ್ವವಿದ್ಯಾಲಯದಲ್ಲಿ ಉಪ ಕುಲಪತಿ ಪ್ರೊ.ಡಿ. ಜವಾಹರ್ ಅವರು ಧ್ವಜಾರೋಹಣ ಮಾಡಿದರು. ಈ ಕಾರ್ಯಕ್ರಮವನ್ನು ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ವೀಕ್ಷಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು