ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯೋತ್ಸವ: ಫಲಪುಷ್ಪ ಪ್ರದರ್ಶನಕ್ಕೆ ಜನಸಾಗರ

Last Updated 14 ಆಗಸ್ಟ್ 2022, 21:33 IST
ಅಕ್ಷರ ಗಾತ್ರ

ಬೆಂಗಳೂರು: ಸ್ವಾತಂತ್ರ್ಯೋತ್ಸವದ ಅಂಗವಾಗಿಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ಡಾ.ರಾಜ್‌ಕುಮಾರ್ ಮತ್ತು ಪುನೀತ್‌ರಾಜ್‌ಕುಮಾರ್‌ ಸ್ಮರಣಾರ್ಥ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಭಾನುವಾರ ನಾನಾ ದಿಕ್ಕುಗಳಿಂದ ಜನ ಸಾಗರವೇ ಹರಿದು ಬಂದಿತ್ತು.

ತೋಟಗಾರಿಕೆ ಇಲಾಖೆ ಹಾಗೂ ಮೈಸೂರು ಉದ್ಯಾನ ಕಲಾ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ಪ್ರದರ್ಶನಕ್ಕೆ ಪುಷ್ಪಪ್ರಿಯರು ಹಾಗೂ ಡಾ.ರಾಜ್‌ ಮತ್ತು ಅಪ್ಪು ಅಭಿಮಾನಿಗಳು ಭೇಟಿ ನೀಡಿ ಕಣ್ತುಂಬಿಕೊಂಡರು.

ಜನ ಹೆಚ್ಚಿದ್ದರಿಂದ ಉದ್ಯಾನದ ನಾಲ್ಕೂ ದ್ವಾರಗಳಲ್ಲಿ ಟಿಕೆಟ್‌ ಕೌಂಟರ್‌ ಗಳನ್ನು ಹೆಚ್ಚಿಸಲಾಗಿತ್ತು. ನರ್ಸರಿಗಳ ಬಳಿ ಸಸಿಗಳನ್ನು ಖರೀದಿಸುವಲ್ಲಿ, ಮಾರಾಟ ಮಳಿಗೆಗಳ ಬಳಿ ಜನಸಂದಣಿ ಹೆಚ್ಚಾಗಿತ್ತು.ಪ್ರದರ್ಶನದ ವೇಳೆ ಅವ್ಯವಸ್ಥೆಗಳು ನಡೆಯದಂತೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು
ಕೈಗೊಳ್ಳಲಾಗಿತ್ತು.

ವಾರಾಂತ್ಯದಲ್ಲಿ ಫಲಪುಷ್ಪ ಪ್ರದ ರ್ಶನ ವೀಕ್ಷಿಸಲು ಜನಸಾಗರವೇ ಹರಿದು ಬಂದಿದ್ದರಿಂದ ತೋಟಗಾರಿಕೆ ಇಲಾಖೆ ಮತ್ತು ಪೊಲೀಸ್‌ ಸಿಬ್ಬಂದಿ ಜನರನ್ನು ನಿಯಂತ್ರಿಸಲು ಹರಸಾಹಸ ಪಟ್ಟರು.

ಖರೀದಿಗೆ ಮುಗಿಬಿದ್ದ ಜನ: ಉದ್ಯಾನದ ಆವರಣದಲ್ಲಿರುವ ಅಧಿಕೃತ ಮಾರಾಟ ಮಳಿಗೆಗಳಲ್ಲಿ ಆಟಿಕೆಗಳು, ಗೃಹ ಉಪಯೋಗಿ, ಅಲಂಕಾರಿಕ ಮತ್ತು ಕರಕುಶಲ ವಸ್ತುಗಳು, ಅಡುಗೆ ಪದಾರ್ಥಗಳು, ಬ್ಯಾಗ್, ಪರ್ಸ್ ಇತ್ಯಾದಿಗಳ ಖರೀದಿಗೆ ಜನ ಮುಗಿಬಿದ್ದಿದ್ದರು. ಗಾಜಿನ ಮನೆಯ ಸುತ್ತಮುತ್ತಲು ಜನ ಗಿಜಿಗುಡುತ್ತಿದ್ದರು. ಕೆಲವು ಕಡೆ ಪ್ಲಾಸ್ಟಿಕ್‌ ಮತ್ತು ತ್ಯಾಜ್ಯ ವಸ್ತುಗಳಿಂದ ತುಂಬಿಕೊಂಡಿತ್ತು.

ನಾಲ್ಕು ದ್ವಾರಗಳಲ್ಲಿ ಸಂಚಾರ ದಟ್ಟಣೆ
ಲಾಲ್‌ಬಾಗ್‌ ಉದ್ಯಾನದ ನಾಲ್ಕು ಪ್ರವೇಶ ದ್ವಾರಗಳಲ್ಲಿ ಜನ ಮತ್ತು ವಾಹನಗಳ ಸಂದಣಿ ಹೆಚ್ಚಾಗಿತ್ತು. ಹೊಸೂರು ರಸ್ತೆ, ಆರ್.ವಿ. ರಸ್ತೆ, ಸಿದ್ದಾಪುರ ರಸ್ತೆ, ಜಯನಗರ ಮಾರ್ಗದ ಕೆಲವು ರಸ್ತೆಗಳಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗಿತ್ತು.

ಬೆಳಿಗ್ಗೆಯಿಂದ ರಾತ್ರಿ 8ರವರೆಗೂ ವಾಹನ ದಟ್ಟಣೆ ಇತ್ತು. ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳನ್ನು ನಿಲ್ಲಿಸಲಾಗಿತ್ತು. ಇದರಿಂದ ಸಂಚಾರ ದಟ್ಟಣೆ ಉಂಟಾಯಿತು. ಮೆಜಸ್ಟಿಕ್‌ನಿಂದ ರೇಷ್ಮೆ ಸಂಸ್ಥೆಯ ಕಡೆ ಸಂಪರ್ಕಿಸುವ ಮೆಟ್ರೊ ರೈಲುಗಳಲ್ಲಿ ಜನಜಂಗುಳಿ ಇತ್ತು. ಲಾಲ್‌ಬಾಗ್‌ನ ಮೆಟ್ರೊ ನಿಲ್ದಾಣದಲ್ಲಿ ಟಿಕೆಟ್‌ ವಿತರಿಸಲು ಹೆಚ್ಚಿನ ಸಿಬ್ಬಂದಿಗಳ ವ್ಯವಸ್ಥೆ ಮಾಡಲಾಗಿತ್ತು. ಟಿಕೆಟ್‌ ಪಡೆಯಲು ಹರಸಾಹಸ ಪಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಪ್ರದರ್ಶನ ವೀಕ್ಷಿಸಿದವರು
1.54 ಲಕ್ಷ:ಒಂಬತ್ತು ದಿನಗಳಲ್ಲಿ ಭೇಟಿ ನೀಡಿದ ಜನ
₹1.51 ಕೋಟಿ:ಒಂಬತ್ತು ದಿನಗಳಲ್ಲಿ ಸಂಗ್ರಹವಾದ ಹಣ
1.50 ಲಕ್ಷ:ಭಾನುವಾರ ಭೇಟಿ ನೀಡಿದ ಜನ
₹ 78 ಲಕ್ಷ:ಭಾನುವಾರ ಸಂಗ್ರಹವಾದ ಹಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT