ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ಉಲ್ಲಾಸ ನೀಡಿದ ಯೋಗಾಭ್ಯಾಸ

ನಗರದ ವಿವಿಧೆಡೆ ಅಂತರರಾಷ್ಟ್ರೀಯ ಯೋಗ ದಿನ ಆಚರಣೆ *ಗಮನ ಸೆಳೆದ ಯೋಗ ಪಟುಗಳು
Published 21 ಜೂನ್ 2024, 16:24 IST
Last Updated 21 ಜೂನ್ 2024, 16:24 IST
ಅಕ್ಷರ ಗಾತ್ರ

ಬೆಂಗಳೂರು: ನಸುಕಿನಲ್ಲಿಯೇ ಯೋಗಾಭ್ಯಾಸಕ್ಕಾಗಿ ನಗರದ ವಿವಿಧ ಮೈದಾನ ಹಾಗೂ ಉದ್ಯಾನಗಳನ್ನು ತಲುಪಿದ ಶ್ವೇತವಸ್ತ್ರಧಾರಿಗಳು, ಯೋಗಪಟುಗಳ ಮಾರ್ಗದರ್ಶನದಲ್ಲಿ ವಿವಿಧ ಆಸನಗಳನ್ನು ಮಾಡುವ ಮೂಲಕ ಸಂಭ್ರಮಿಸಿದರು. 

ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ವಿವಿಧ ಸಂಘ–ಸಂಸ್ಥೆಗಳು, ಯೋಗ ತರಬೇತಿ ಕೇಂದ್ರಗಳು, ಶಾಲಾ–ಕಾಲೇಜುಗಳು ಶುಕ್ರವಾರ ಸಾಮೂಹಿಕ ಯೋಗಾಸನ ಹಮ್ಮಿಕೊಂಡಿದ್ದವು. ಸೂರ್ಯ ರಶ್ಮಿ ನೆಲ ಮುಟ್ಟುವ ಮುನ್ನವೇ ಮನೆಯಿಂದ ಹೊರಬಂದ ಜನರು, ಉತ್ತಮ ಆರೋಗ್ಯಕ್ಕಾಗಿ ವಿವಿಧ ಆಸನ, ಸೂರ್ಯ ನಮಸ್ಕಾರ, ಪ್ರಾಣಾಯಾಮ ಮಾಡಿದರು. 

ಆಯುಷ್ ಹಾಗೂ ಆರೋಗ್ಯ ಇಲಾಖೆ ವಿಧಾನಸೌಧದ ಮುಂಭಾಗ ಸಾಮೂಹಿಕ ಯೋಗಾಸನ ಹಮ್ಮಿಕೊಂಡಿತ್ತು. ರಾಜ್ಯಪಾಲ ಥಾವರಚಂದ್‌ ಗೆಹಲೋತ್ ಉದ್ಘಾಟಿಸಿದರು. ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ವಿಧಾನ ಪರಿಷತ್‌ ಸದಸ್ಯ ಶರವಣ, ಕ್ರಿಕೆಟ್‌ ಆಟಗಾರ ಮನೀಷ್‌ ಪಾಂಡೆ, ನಟ ಶರಣ್, ನಟಿ ಅನುಪ್ರಭಾಕರ್‌, ಕ್ರೀಡಾಪಟು ಅಶ್ವಿನಿ ನಾಚಪ್ಪ ಸೇರಿ ಎರಡು ಸಾವಿರಕ್ಕೂ ಅಧಿಕ ಮಂದಿ ಯೋಗಾಸನ ಮಾಡಿದರು. 

‘ದೇಹ, ಮನಸ್ಸು ಮತ್ತು ಭಾವನೆಗಳನ್ನು ಸಮತೋಲನಗೊಳಿಸಲು ಯೋಗ ಉತ್ತಮ ಮಾರ್ಗ. ಯೋಗ ಪ್ರಾಚೀನ ಕಾಲದಿಂದಲೂ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳಲ್ಲಿ ಹಾಸುಹೊಕ್ಕಾಗಿದೆ.‌ ಇಡೀ ಪ್ರಪಂಚದ ಭಾಗವಾಗಿರುವ ನಮ್ಮ ಗ್ರಂಥಗಳಲ್ಲಿ ಯೋಗದ ಮಹತ್ವವನ್ನು ಉಲ್ಲೇಖಿಸಲಾಗಿದೆ. ಅದಕ್ಕಾಗಿಯೇ ಭಾರತವನ್ನು ಯೋಗ ಗುರುವೆಂದು ಪರಿಗಣಿಸಲಾಗಿದೆ’ ಎಂದು ರಾಜ್ಯಪಾಲ ಥಾವರಚಂದ್‌ ಗೆಹಲೋತ್ ತಿಳಿಸಿದರು. 

ಡಿ.ಕೆ. ಶಿವಕುಮಾರ್, ‘ಯೋಗಕ್ಕೆ ಐದು ಸಾವಿರ ವರ್ಷಗಳ ಇತಿಹಾಸವಿದ್ದು, ದೇಶ ಮಾತ್ರವಲ್ಲದೆ ಇಡೀ ವಿಶ್ವ ನಮ್ಮ ಧರ್ಮ, ಸಂಸ್ಕೃತಿ, ಪದ್ಧತಿಯಾಗಿರುವ ಯೋಗವನ್ನು ಒಪ್ಪಿದೆ. ಯೋಗಕ್ಕೆ ಯಾವುದೇ ಜಾತಿ, ಕುಲ, ಧರ್ಮದ ಎಲ್ಲೆ ಇಲ್ಲ. ಯೋಗ ಈ ದೇಶದ ಆಸ್ತಿ. ಯೋಗಕ್ಕೆ ಪ್ರೋತ್ಸಾಹ ಹಾಗೂ ಪ್ರಚಾರ ನೀಡಬೇಕಾಗಿರುವುದು ನಮ್ಮ ಕರ್ತವ್ಯ’ ಎಂದು ಹೇಳಿದರು. 

ಶಾಸಕ ಗೋಪಾಲಯ್ಯ ಅವರ ನೇತೃತ್ವದಲ್ಲಿ ಶಂಕರಮಠ ಸರ್ಕಲ್‌ನ ಅಂಬೇಡ್ಕರ್ ಆಟದ ಮೈದಾನದಲ್ಲಿ ಯೋಗಾಭ್ಯಾಸ ಮಾಡಲಾಯಿತು. ನೆಮ್ಮದಿ ಯೋಗ ಶಾಲೆಯ ಯೋಗಾಚಾರ್ಯ ಪಿ.ಸಿ. ಮುಕುಂದ ರಾವ್ ಮಾರ್ಗದರ್ಶನ ನೀಡಿದರು. ಪಿಇಎಸ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಯೋಗಾಭ್ಯಾಸ ಮಾಡಿದರು. 

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದ ಜಗನ್ನಾಥ ಭವನದಲ್ಲಿ ಯೋಗ ದಿನ ಆಚರಿಸಲಾಯಿತು. ‘ಯೋಗವನ್ನು ಒಂದು ದಿನ ಮಾಡಿದರೆ ಸಾಲದು. ದಿನನಿತ್ಯ ನಮ್ಮ ಜೀವನದಲ್ಲಿ ಯೋಗಾಭ್ಯಾಸವನ್ನು ಅಳವಡಿಸಿಕೊಳ್ಳಬೇಕು. ಇದರಿಂದ ನಾವು ಆರೋಗ್ಯ ಕಾಪಾಡಿಕೊಂಡು, ಮಾನಸಿಕ ನೆಮ್ಮದಿಯಿಂದ ಬದುಕಬಹುದು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು. ಮಲ್ಲೇಶ್ವರದ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಹಾಗೂ ಬಿಜೆಪಿ ರಾಜ್ಯ ಘಟಕದ ಪದಾಧಿಕಾರಿಗಳು ಪಾಲ್ಗೊಂಡು, ಯೋಗಾಸನ ಮಾಡಿದರು.

ಬೆಂಗಳೂರು ನಗರ ವಿಶ್ವವಿದ್ಯಾನಿಲಯವು ಸೆಂಟ್ರಲ್ ಕಾಲೇಜಿನ ಆವರಣದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಲಿಂಗರಾಜ ಗಾಂಧಿ, ‘ಭಾರತೀಯ ಯೋಗ ಪರಂಪರೆ ದೈಹಿಕ ಆರೋಗ್ಯ ಮತ್ತು ಮಾನಸಿಕ ಶಾಂತಿಯ ನಿರ್ವಹಣೆಗೆ ಪರಿಣಾಮಕಾರಿಯಾದ ಸಾಧನವಾಗಿದೆ’ ಎಂದು ಪ್ರತಿಪಾದಿಸಿದರು.

ಆರೋಗ್ಯ ಮಂದಿರ ಟ್ರಸ್ಟ್, ಆರ್ಟ್ ಆಫ್ ಲಿವಿಂಗ್ ಸೇರಿ ವಿವಿಧ ಸಂಘ ಸಂಸ್ಥೆಗಳು ಯೋಗ ದಿನ ಆಚರಿಸಿದವು. 

ಅಕ್ಷರ ಯೋಗ ಕೇಂದ್ರವು ಅರಮನೆ ಮೈದಾನದಲ್ಲಿ ಹಮ್ಮಿಕೊಂಡ ಯೋಗ ಕಾರ್ಯಕ್ರಮದಲ್ಲಿ ಕೇಂದ್ರದ ಸದಸ್ಯರು ಹಾಗೂ ವಿದ್ಯಾರ್ಥಿಗಳು ಯೋಗಾಭ್ಯಾಸ ಮಾಡಿದರು
–ಪ್ರಜಾವಾಣಿ ಚಿತ್ರ
ಅಕ್ಷರ ಯೋಗ ಕೇಂದ್ರವು ಅರಮನೆ ಮೈದಾನದಲ್ಲಿ ಹಮ್ಮಿಕೊಂಡ ಯೋಗ ಕಾರ್ಯಕ್ರಮದಲ್ಲಿ ಕೇಂದ್ರದ ಸದಸ್ಯರು ಹಾಗೂ ವಿದ್ಯಾರ್ಥಿಗಳು ಯೋಗಾಭ್ಯಾಸ ಮಾಡಿದರು –ಪ್ರಜಾವಾಣಿ ಚಿತ್ರ

ಯೋಗೋತ್ಸವದಲ್ಲಿ 6 ಲಕ್ಷ ಮಂದಿ ಭಾಗಿ

‘ಯೋಗ ದಿನಾಚರಣೆ ಕೇವಲ ಒಂದು ದಿನದ ದಿನಾಚರಣೆ ಆಗಬಾರದು. ಹೀಗಾಗಿ ಆಯುಷ್ ಇಲಾಖೆಯಿಂದ ಈ ಬಾರಿ 10 ದಿನಗಳ ಯೋಗೋತ್ಸವವನ್ನು ಆಚರಿಸಲಾಗಿದೆ.‌ ಕಳೆದ 10 ದಿನಗಳಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಲವು ಸಂಘ ಸಂಸ್ಥೆಗಳು ಯೋಗೋತ್ಸವದಲ್ಲಿ ಪಾಲ್ಗೊಂಡು ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿವೆ. ಈ ಯೋಗೋತ್ಸವದಲ್ಲಿ 6 ಲಕ್ಷ ಮಂದಿ ಭಾಗವಹಿಸಿದ್ದಾರೆ. ಯೋಗಾಭ್ಯಾಸ ಮಾಡುವ ಇಚ್ಚಾಶಕ್ತಿಯನ್ನು ನಾವು ಬೆಳೆಸಿಕೊಳ್ಳಬೇಕು. ಯೋಗವು ಆರೋಗ್ಯ ವೃದ್ಧಿಸುವುದರ ಜತೆಗೆ ಜೀವನೋತ್ಸಾಹ ಬೆಳೆಸುತ್ತದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. 

ಗಿನ್ನಿಸ್ ದಾಖಲೆ ಪ್ರಯತ್ನ 

ಅಕ್ಷರ ಯೋಗ ಕೇಂದ್ರವು ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಯೋಗಾಭ್ಯಾಸ ಹಮ್ಮಿಕೊಂಡಿತ್ತು. 7 ಗಿನ್ನಿಸ್ ದಾಖಲೆ ನಿರ್ಮಿಸುವ ಗುರಿಯನ್ನು ಕೇಂದ್ರ ಹಮ್ಮಿಕೊಂಡಿತ್ತು. ಬೆಳಿಗ್ಗೆ 9ರಿಂದ ಮಧ್ಯಾಹ್ನದವರೆಗೆ ನಡೆದ ಯೋಗಾಭ್ಯಾಸದಲ್ಲಿ ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.  ಚಕ್ರಾಸನ ಸೂರ್ಯನಮಸ್ಕಾರ ಸೇರಿ ವಿವಿಧ ಭಂಗಿಗಳಲ್ಲಿ ಐದು ಗಿನ್ನಿಸ್ ದಾಖಲೆ ನಿರ್ಮಾಣವಾಗಿರುವುದಾಗಿ ಯೋಗ ಕೇಂದ್ರವು ಪ್ರಕಟಣೆಯಲ್ಲಿ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT