ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸದ ಕೂಪದಲ್ಲಿ ಸಿಲುಕಿಸಿತೇ ಇಂದೋರ್‌ ಮಾದರಿ?

Last Updated 9 ಜನವರಿ 2020, 20:00 IST
ಅಕ್ಷರ ಗಾತ್ರ

ಬೆಂಗಳೂರು: ಪಾಲಿಕೆಯಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ಬಳಿಕ ಇಂದೋರ್‌ ಮಾದರಿಯಲ್ಲಿ ಕಸ ವಿಲೇವಾರಿ ವ್ಯವಸ್ಥೆಯ ಜಪ ಆರಂಭಿಸಿದೆ. ಈ ಸಲುವಾಗಿ ಮನೆ ಮನೆಯಿಂದ ಹಸಿ ಕಸ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸುವ ಟೆಂಡರ್‌ ಜಾರಿಗೊಳಿಸಲು ಹಿಂದೇಟು ಹಾಕಿದ್ದರಿಂದಲೇ ಕಸದ ಸಮಸ್ಯೆ ಉಲ್ಭಣಿಸಿತೇ?

ಹೌದು ಎನ್ನುತ್ತವೆ ಪಾಲಿಕೆ ಮೂಲಗಳು. 160 ವಾರ್ಡ್‌ಗಳ ಕಸ ಸಂಗ್ರಹಣೆಯನ್ನು ಗುತ್ತಿಗೆ ನೀಡಲು ಪಾಲಿಕೆ ಟೆಂಡರ್‌ ಆಹ್ವಾನಿಸಿತ್ತು. ಈ ಟೆಂಡರ್‌ ಪ್ರಕ್ರಿಯೆ ಆರಂಭವಾಗಿ ಇದೇ 18ಕ್ಕೆ ವರ್ಷ ತುಂಬಲಿದೆ. ಆದರೂ ಯಾವೊಬ್ಬ ಗುತ್ತಿಗೆದಾರರಿಗೂ ಇನ್ನೂ ಕಾರ್ಯಾದೇಶ ನೀಡಲಾಗಿಲ್ಲ.

ವಾರ್ಷಿಕ ಟೆಂಡರ್‌ ಮೊತ್ತ ₹ 1 ಕೋಟಿಗಿಂತ ಕಡಿಮೆಯಿದ್ದರೆ ಅದಕ್ಕೆ ಆಯುಕ್ತರ ಒಪ್ಪಿಗೆ ಸಾಕಾಗುತ್ತದೆ. ಟೆಂಡರ್‌ ಮೊತ್ತ ₹ 1 ಕೋಟಿಯಿಂದ ₹ 3 ಕೋಟಿ ನಡುವೆಯಿದ್ದರೆ ಆರೋಗ್ಯ ಸ್ಥಾಯಿಸಮಿತಿಯ ಹಾಗೂ ₹ 3 ಕೋಟಿಗಿಂತ ಹೆಚ್ಚು ಇದ್ದರೆ ಕೌನ್ಸಿಲ್‌ ಸಭೆಯ ಅನುಮೋದನೆ ಅಗತ್ಯ. 45 ವಾರ್ಡ್‌ಗಳಲ್ಲಿ ಟೆಂಡರ್‌ ಮೊತ್ತ ₹ 1 ಕೋಟಿಗಿಂತ ಕಡಿಮೆಯಿದ್ದು, ಇದರ ಜಾರಿಗೆ ಆಯಕ್ತರ ಮಟ್ಟದಲ್ಲೇ ನಿರ್ಧಾರ ಕೈಗೊಳ್ಳಬಹುದು.

‘45 ವಾರ್ಡ್‌ಗಳಲ್ಲಿ 2019ರ ಅಕ್ಟೋಬರ್‌ನಲ್ಲೇ ಜಾರಿಗೆ ತರಬಹುದಿತ್ತು. ಪಾಲಿಕೆಯಲ್ಲಿ ಹೊಸ ಆಡಳಿತವು ಹಳೆ ಟೆಂಡರ್‌ ಜಾರಿಗೊಳಿಸುವ ಬದಲು ಇಂದೋರ್‌ ಮಾದರಿಯಲ್ಲಿ ಕಸ ವಿಲೇವಾರಿ ವ್ಯವಸ್ಥೆ ಜಾರಿಗೊಳಿಸಲು ಹೆಚ್ಚು ಆಸಕ್ತಿ ತೋರಿದೆ. ಹೊಸ ಟೆಂಡರ್‌ ಪ್ರಕಾರ ಕಸ ಸಂಗ್ರಹ ವ್ಯವಸ್ಥೆ ಜಾರಿಯಾಗುತ್ತಿದ್ದರೆ ಮಿಶ್ರ ಕಸದ ಪ್ರಮಾಣ ಕಡಿಮೆಯಾಗುತ್ತಿತ್ತು’ ಎಂದು ಪಾಲಿಕೆ ಅಧಿಕಾರಿಯೊಬ್ಬರು ’ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ನಿತ್ಯ 2,800 ಟನ್‌ ಮಿಶ್ರ ಕಸ ಭೂಭರ್ತಿ ಕೇಂದ್ರವನ್ನು ಸೇರುತ್ತಿದೆ. ಹಸಿ ಕಸ ನಿತ್ಯ 600 ಟನ್‌ಗಳಷ್ಟು ಮಾತ್ರ ಉತ್ಪತ್ತಿಯಾಗುತ್ತಿದೆ. 160 ವಾರ್ಡ್‌ಗಳಲ್ಲೂ ಹೊಸ ಟೆಂಡರ್‌ ಜಾರಿಯಾದರೆ ಹಸಿ ಕಸ ಸಂಗ್ರಹ ಪ್ರಮಾಣ 1,500 ಟನ್‌ಗೆ ಹೆಚ್ಚಲಿದ್ದು, ಮಿಶ್ರ ಕಸದ ಪ್ರಮಾಣ 1,500 ಟನ್‌ಗೆ ಇಳಿಯಲಿದೆ. ಇದರಿಂದ ಮಿಟ್ಟಗಾನಹಳ್ಳಿಯ ಭೂಭರ್ತಿ ಕೇಂದ್ರವನ್ನು ಹೆಚ್ಚು ಕಾಲ ಬಳಸಬಹುದು.

‘ನಿತ್ಯ 350ಕ್ಕೂ ಹೆಚ್ಚು ಕಾಂಪ್ಯಾಕ್ಟರ್‌ಗಳು ಭೂಭರ್ತಿ ಕೇಂದ್ರಕ್ಕೆ ಮಿಶ್ರ ಕಸವನ್ನು ಸೇರಿಸುತ್ತಿವೆ. ಇದನ್ನು ನ್ಯಾಯಾಲಯ ಖಂಡಿತಾ ಪ್ರಶ್ನೆ ಮಾಡಲಿದೆ. ಮಿಶ್ರ ಕಸವನ್ನು ಗಣನೀಯವಾಗಿ ಕಡಿಮೆ ಮಾಡದಿದ್ದರೆ ಉಳಿಗಾಲವಿಲ್ಲ’ ಎಂದು ವಿಶೇಷ ಆಯುಕ್ತ (ಕಸ ವಿಲೇವಾರಿ) ಡಿ.ರಂದೀಪ್‌ ಹೇಳಿದರು.

‘ಆಯುಕ್ತರ ಅನುಮತಿ ಸಿಕ್ಕಿದರೆ 45 ವಾರ್ಡ್‌ಗಳಲ್ಲಿ ಹೊಸ ಟೆಂಡರ್‌ ಪ್ರಕಾರ ಕಸ ಸಂಗ್ರಹ ಶುರು ಮಾಡಬಹುದು. ಕೆಲವು ಗುತ್ತಿಗೆದಾರರು ಒಣ ಕಸವನ್ನೂ ತಾವೇ ಸಂಗ್ರಹಿಸುತ್ತೇವೆ ಎಂದು ಲಿಖಿತವಾಗಿ ಕೊಟ್ಟಿದ್ದಾರೆ. ಈ ಬಗ್ಗೆಯೂ ಪಾಲಿಕೆ ನಿರ್ಧಾರ ತಳೆಯಬೇಕಾಗುತ್ತದೆ’ ಎಂದರು.

ಸ್ವಚ್ಛ ಸರ್ವೇಕ್ಷಣ್‌ ಅಂಕಕ್ಕೆ ಧಕ್ಕೆ?

ಸ್ವಚ್ಛ ಸರ್ವೇಕ್ಷಣ್‌ ಅಭಿಯಾನಕ್ಕೆ ಸಂಬಂಧಿಸಿದಂತೆ ನಗರವನ್ನು ಖುದ್ದಾಗಿ ಪರಿಶೀಲಿಸಲು ಕೇಂದ್ರ ಸರ್ಕಾರದ ಪ್ರತಿನಿಧಿಗಳು ಜನವರಿ ತಿಂಗಳಲ್ಲಿ ನಗರಕ್ಕೆ ಭೇಟಿ ನೀಡಲಿದ್ದಾರೆ. ಕಸ ವಿಲೇವಾರಿ ಸಮಸ್ಯೆ ಉಂಟಾಗಿರುವ ಸಂದರ್ಭದಲ್ಲೇ ಅವರು ಭೇಟಿ ನೀಡಿದರೆ ಈ ಅಭಿಯಾನದಲ್ಲಿ ನಗರಕ್ಕೆ ಸಿಗುವ ಅಂಕ ಕಡಿಮೆಯಾಗುವ ಸಾಧ್ಯತೆ ಇದೆ. 6 ಸಾವಿರ ಅಂಕಗಳ ಪೈಕಿ ನೇರ ಪರಿಶೀಲನೆಗೆ 1,500 ಅಂಕಗಳು ಇವೆ.

‘ಈ ಅಭಿಯಾನದ ಪ್ರತಿನಿಧಿಗಳು ಬಂದಿದ್ದಾರೋ ಇಲ್ಲವೋ ಎಂಬುದು ನಮಗೆ ತಿಳಿಯುವುದಿಲ್ಲ. ನಾಲ್ಕೈದು ದಿನ ನಗರದಲ್ಲಿದ್ದು ಪರಿಶೀಲನೆ ನಡೆಸುವ ಅವರು ಕೊನೆಯ ದಿನ ಪಾಲಿಕೆಯಿಂದ ಮಾಹಿತಿ ಸಂಗ್ರಹ ಮಾಡುತ್ತಾರೆ. ನಾವು ಸಾರ್ವಜನಿಕ ಶೌಚಾಲಯ, ಕಸ ಸಂಗ್ರಹವ ವ್ಯವಸ್ಥೆ ಚೆನ್ನಾಗಿಡಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೇವೆ. ನಮ್ಮ ಅಧಿಕಾರಿಗಳು ಬೆಳಿಗ್ಗೆ 6.30ಕ್ಕೆ ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ’ ಎಂದು ರಂದೀಪ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT