ಸೋಮವಾರ, ಜುಲೈ 26, 2021
27 °C
ಕೋವಿಡ್‌: ಕ್ಷಿಪ್ರ ಪರೀಕ್ಷೆಗಾಗಿ ಪಿಎಚ್‌ಸಿಗಳಿಗೆ ಮುಗಿಬೀಳುತ್ತಿರುವ ಜನ

ಕೊರೊನಾ ಸೋಂಕು ಹರಡುವ ತಾಣವಾಗಲಿದೆಯೇ ಪಿಎಚ್‌ಸಿ?

ಪ್ರವೀಣ್‌ ಕುಮಾರ್‌ ಪಿ.ವಿ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ (ಪಿಎಚ್‌ಸಿ) ಸೋಮವಾರದಿಂದ ಕೋವಿಡ್‌ ಪತ್ತೆಗೆ ಪ್ರತಿಜನಕ (ಆ್ಯಂಟಿಜೆನ್‌) ಪರೀಕ್ಷೆ ನಡೆಸಲಾಗುತ್ತಿದೆ. ಕೋವಿಡ್‌ ಪರೀಕ್ಷೆಗೆ ಒಳಗಾಗಲು ಬರುವವರಿಗೆ ಪ್ರತ್ಯೇಕ ವ್ಯವಸ್ಥೆ ಇಲ್ಲದ ಕಾರಣ ಕೆಲವು ಪಿಎಚ್‌ಸಿಗಳ ಮೂಲಕವೂ ಸೋಂಕು ಹರಡುವ ಅಪಾಯ ಎದುರಾಗಿದೆ.

ನಗರದ ಪಿಎಚ್‌ಸಿಗಳಲ್ಲಿ ಗುರುವಾರ 829 ಮಂದಿಯನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿದ್ದು, 175 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

‘ಪಿಎಚ್‌ಸಿಗಳಲ್ಲಿ ಜ್ವರ ತಪಾಸಣೆ, ಗರ್ಭಿಣಿಯರ ಹಾಗೂ ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಗುತ್ತಿತ್ತು. ಮಕ್ಕಳಿಗೆ ಚುಚ್ಚುಮದ್ದು ನೀಡುವ ಕಾರ್ಯಗಳೂ ನಿಯಮಿತವಾಗಿ ನಡೆಯುತ್ತಿದ್ದವು. ಈಗ ಇಲ್ಲೇ ಕೋವಿಡ್‌ ಪರೀಕ್ಷೆ ನಡೆಸಲು ಸರ್ಕಾರ ತೀರ್ಮಾನ ಕೈಗೊಂಡಿದೆ. ಅನೇಕ ಪಿಎಚ್‌ಸಿ ಕಟ್ಟಡಗಳಲ್ಲಿ ಒಂದೇ ಬಾಗಿಲು ಇದೆ. ಕೋವಿಡ್‌ ಪರೀಕ್ಷೆಗೆ ಬರುವವರನ್ನು ಹಾಗೂ ಇತರರನ್ನು ಪ್ರತ್ಯೇಕಿಸುವುದಕ್ಕೆ ಯಾವುದೇ ವ್ಯವಸ್ಥೆ ಇಲ್ಲ. ಪಿಎಚ್‌ಸಿಗಳೇ ಕೊರೊನಾ ಸೋಂಕು ಹರಡುವ ಕೇಂದ್ರಗಳಾಗುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ’ ಎಂದು ವೈದ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಿಎಚ್‌ಸಿಗಳಲ್ಲಿರುವ ಲ್ಯಾಬ್‌ ಟೆಕ್ನಿಷಿಯನ್‌ಗಳೇ ಆ್ಯಂಟಿಜೆನ್‌ ಪರೀಕ್ಷೆ ನಡೆಸುತ್ತಾರೆ. ಕೋವಿಡ್‌ ಪರೀಕ್ಷೆಗೆ ವ್ಯಕ್ತಿಯ ಗಂಟಲ ದ್ರವ ತೆಗೆಯುವ ಕಾರ್ಯವನ್ನೂ ಅವರೇ ಮಾಡಬೇಕು. ಒಂದು ಪಿಎಚ್‌ಸಿಗೆ ಒಬ್ಬರೇ ವೈದ್ಯರು. ಅವರು ಜನರ ಆರೋಗ್ಯ ತಪಾಸಣೆಯ ನಡುವೆ, ಕೋವಿಡ್‌ ಟೆಸ್ಟ್‌ನ ಮಾಹಿತಿಗಳನ್ನು ವೆಬ್‌ಪೋರ್ಟಲ್‌ಗಳಿಗೆ ಹಾಗೂ ಆ್ಯಪ್‌ಗಳಿಗೆ ಅಪ್‌ಲೋಡ್‌ ಮಾಡುವ ಕಾರ್ಯವನ್ನೂ ನಿಭಾಯಿಸಬೇಕು’ ಎಂದು ಇನ್ನೊಬ್ಬ ವೈದ್ಯೆ ಪರಿಸ್ಥಿತಿಯನ್ನು ವಿವರಿಸಿದರು.

‘ಇತ್ತೀಚೆಗೆ ಖಾಸಗಿ ಆಸ್ಪತ್ರೆಗಳು ಜನರ ಆರೋಗ್ಯ ತಪಾಸಣೆಗೆ ಹಿಂದೇಟು ಹಾಕುತ್ತಿವೆ. ಹಾಗಾಗಿ ಸರ್ಕಾರಿ ಆರೋಗ್ಯ ಕೇಂದ್ರಗಳಿಗೆ ಬರುವವರ ಸಂಖ್ಯೆ ದುಪ್ಪಟ್ಟಾಗಿದೆ. ಆ್ಯಂಟಿಜೆನ್ ಪರೀಕ್ಷೆ ಆರಂಭಿಸಿದ ಬಳಿಕ ಈ ಸಂಖ್ಯೆ ಮತ್ತಷ್ಟು ಹೆಚ್ಚಿದೆ. ಜನದಟ್ಟಣೆ ಜಾಸ್ತಿಯಾದರೆ ಅಂತರ ಕಾಪಾಡುವಷ್ಟು ಸ್ಥಳಾವಕಾಶಗಳೂ ಪಿಎಚ್‌ಸಿಗಳಲ್ಲಿಲ್ಲ’ ಎಂದರು.

ಭದ್ರತಾ ಸಿಬ್ಬಂದಿ ಕೊಡಿ: ವೈದ್ಯರಿಂದ ಬೇಡಿಕೆ
‘ನಮಗೆ ಒದಗಿಸಿರುವ ಕಿಟ್‌ಗಳಲ್ಲಿ ಪಿಎಚ್‌ಸಿಯಲ್ಲಿ ದಿನಕ್ಕೆ ಹೆಚ್ಚೆಂದರೆ 25ರಿಂದ 30 ಮಂದಿಗೆ ಪರೀಕ್ಷೆ ನಡೆಸಬಹುದು. ಕೆಮ್ಮು ಶೀತ ಜ್ವರದ (ಐಎಲ್‌ಐ) ಲಕ್ಷಣ ಇರುವವರಿಗೆ  ಹಾಗೂ ಉಸಿರಾಟದ ತೊಂದರೆ (ಸಾರಿ) ಇರುವವರನ್ನು ಮಾತ್ರ ಪರೀಕ್ಷೆಗೆ ಒಳಪಡಿಸಲು ಸೂಚನೆ ನೀಡಲಾಗಿದೆ. ಆದರೆ, ನಿತ್ಯ ನೂರಾರು ಮಂದಿ ಕೋವಿಡ್‌ ಪರೀಕ್ಷೆ ನಡೆಸುವಂತೆ ದುಂಬಾಲು ಬೀಳುತ್ತಿದ್ದಾರೆ’ ಎಂದು ಪೂರ್ವ ವಲಯದ ಪಿಎಚ್‌ಸಿಯ ವೈದ್ಯರೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.

ಸುಲ್ತಾನ್‌ಪಾಳ್ಯದ ಪಿಎಚ್‌ಸಿಯಲ್ಲಿ ಕೋವಿಡ್‌ ದೃಢಪಟ್ಟ ವ್ಯಕ್ತಿಯೊಬ್ಬರು ಸಿಬ್ಬಂದಿ ಮೇಲೆ ರೇಗಿ ಗುರುವಾರ ರಂಪಾಟ ಮಾಡಿದ್ದರು.

‘ನಾವು ಎಷ್ಟೇ ಸಮಾಧಾನದಿಂದ ಪರಿಸ್ಥಿತಿಯನ್ನು ವಿವರಿಸಿದರೂ ಜನರು ಕೇಳುತ್ತಿಲ್ಲ. ಕೆಲವರು ಅಂತರ ಕಾಪಾಡುತ್ತಿಲ್ಲ. ಮಾಸ್ಕ್‌ ಕೂಡಾ ಧರಿಸುತ್ತಿಲ್ಲ. ಪೂರ್ವ ವಲಯದ ಆರೋಗ್ಯ ಕೇಂದ್ರಗಳಲ್ಲಿ ಭದ್ರತಾ ಸಿಬ್ಬಂದಿ ಇಲ್ಲ. ಎಲ್ಲ ಪಿಎಚ್‌ಸಿಗಳಿಗೂ ಭದ್ರತಾ ಸಿಬ್ಬಂದಿ ಒದಗಿಸಬೇಕು’ ಎಂದು ವೈದ್ಯರು ಒತ್ತಾಯಿಸಿದ್ದಾರೆ.

ಮಹದೇವಪುರ ವಲಯ: ಕಮಾಂಡ್‌ ಕೇಂದ್ರ
ಕೊರೊನಾ ಸೋಂಕು ಹರಡುವಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಮಹದೇವಪುರ ವಲಯದ ಎ.ನಾರಾಯಣಪುರದ ರೈಲು ನಿಲ್ದಾಣದ ಬಳಿಯ ಲೌರಿ ಮೆಮೊರಿಯಲ್‌ ಕಾಲೇಜಿನಲ್ಲಿ ಕೋವಿಡ್‌ ಕಮಾಂಡ್‌ ಕೇಂದ್ರ ಆರಂಭಿಸಲಾಗಿದೆ.

ವಲಯದ ಜಂಟಿ ಆಯುಕ್ತ ಆರ್‌.ವೆಂಕಟಾಚಲಪತಿ ಅವರು ಕಮಾಂಡ್‌ ಕೇಂದ್ರದ ಮುಖ್ಯಸ್ಥರಾಗಿರುತ್ತಾರೆ. ಮುಖ್ಯ ಎಂಜಿನಿಯರ್‌ ಪರಮೇಶ್ವರಯ್ಯ ಅವರನ್ನು ನೋಡಲ್‌ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.

ರೋಗಿಗಳಿಗೆ ಆಂಬುಲೆನ್ಸ್‌ ಮತ್ತು ಆಸ್ಪತ್ರೆಗಳಲ್ಲಿ ಹಾಸಿಗೆ ಒದಗಿಸುವುದಕ್ಕೆ, ಹೋಂ ಕ್ವಾರಂಟೈನ್‌ ಪರಿಣಾಮಕಾರಿ ಜಾರಿಗೆ ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕಮಾಂಡ್ ಕೇಂದ್ರದ ಸಹಾಯವಾಣಿ: 080–23010101/02

ಪ್ರತ್ಯೇಕ ಮಾದರಿ ಸಂಗ್ರಹಕ್ಕೆ ಸೂಚನೆ
ಬಿಬಿಎಂಪಿ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ (ಪಿಎಚ್‌ಸಿ) ಜ್ವರ ಚಿಕಿತ್ಸಾಲಯಗಳಲ್ಲಿ ಶೀತ ಜ್ವರ ಮತ್ತು ಉಸಿರಾಟ ಸ೦ಬ೦ಧಿ ಕಾಯಿಲೆಗಳಿಂದ ಬಳಲುತ್ತಿರುವವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸುವಾಗ ರೋಗ ಲಕ್ಷಣ ಇರುವವರ ಹಾಗೂ ಹೊಂದಿಲ್ಲದವರ ಗ೦ಟಲು ದ್ರವದ ಮಾದರಿಯನ್ನು ಪ್ರತ್ಯೇಕವಾಗಿ ಸಂಗ್ರಹಿಸುವಂತೆ ಸೂಚಿಸಿ ವಿಶೇಷ ಆಯುಕ್ತರು (ಆರೋಗ್ಯ) ಆದೇಶ ಹೊರಡಿಸಿದ್ದಾರೆ.

ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಕಂಟೈನ್‌ಮೆಂಟ್‌ ಪ್ರದೇಶಗಳಲ್ಲಿ ಕೋವಿಡ್‌ ಲಕ್ಷಣಗಳ ಜೊತೆಗೆ ಅನ್ಯಕಾಯಿಲೆಗಳನ್ನು ಹೊಂದಿರುವವರ ಪಟ್ಟಿ ಸಿದ್ಧಪಡಿಸಿಕೊಳ್ಳಬೇಕು. ಅವರು ಇರುವಲ್ಲಿಗೆ ವಾಹನಗಳಲ್ಲಿ ತೆರಳಿ ಅವರನ್ನು ಆ್ಯಂಟಿಜೆನ್‌ ಪರೀಕ್ಷೆಗೆ ಅಥವಾ ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಪಡಿಸಬೇಕು. ಪ್ರತಿ ಪಿಎಚ್‌ಸಿಗೆ ಒದಗಿಸಿರುವ ಶೇ 30ರಷ್ಟು ಕಿಟ್‌ಗಳನ್ನು ಕೇಂದ್ರದಲ್ಲೇ ಉಳಿಸಿಕೊಳ್ಳಲು ತಿಳಿಸಲಾಗಿದೆ.

ಅಂಕಿ ಅಂಶ
133: 
ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಪಿಎಚ್‌ಸಿಗಳು
50 ಸಾವಿರ: ಬಿಬಿಎಂಪಿಗೆ ಪೂರೈಸಿರುವ ಆ್ಯಂಟಿಜೆನ್‌ ಪರೀಕ್ಷಾ ಕಿಟ್‌
200: ಪ್ರತಿ ಪಿಎಚ್‌ಸಿಗೆ ಒದಗಿಸಿರುವ ಪರೀಕ್ಷಾ ಕಿಟ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು