ಭಾನುವಾರ, ಅಕ್ಟೋಬರ್ 24, 2021
21 °C

ಆದ್ಯತಾ ಪಥ: ಐ.ಟಿ ಕಂಪನಿ ಬಸ್‌ಗಳಿಗೂ ಅನುಮತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಹೊರವರ್ತುಲ ರಸ್ತೆಯಲ್ಲಿನ ಬಸ್ ಆದ್ಯತಾ ಪಥದಲ್ಲಿ ಮಾಹಿತಿ ತಂತ್ರಜ್ಞಾನ (ಐ.ಟಿ) ಕಂಪನಿಗಳ ಬಸ್‌ಗಳ ಸಂಚಾರಕ್ಕೂ ನಗರ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್) ಅನುಮತಿ ನೀಡಿದೆ.

ಸಿಲ್ಕ್‌ ಬೋರ್ಡ್‌ನಿಂದ ಟಿನ್ ಫ್ಯಾಕ್ಟರಿ ತನಕ ಒಟ್ಟು 16 ಕಿಲೋ ಮೀಟರ್‌ನಲ್ಲಿ ಆರು ಪಥದ ರಸ್ತೆ ಇದೆ. ಎರಡೂ ಕಡೆ ತಲಾ ಮೂರು ಪಥದ ರಸ್ತೆ ಇದ್ದು, ಇದರಲ್ಲಿ ಒಂದನ್ನು ಬಸ್ ಆದ್ಯತಾ ಪಥವಾಗಿ ಪರಿವರ್ತಿಸಲಾಗಿದೆ. ಉಳಿದ ಎರಡು ಪಥದಲ್ಲಿ ಬಹುತೇಕ ಒಂದು ಪಥದಲ್ಲಿ ಮೆಟ್ರೊ ಮಾರ್ಗದ(ರೀಚ್2ಎ) ಕಾಮಗಾರಿಗೆ ಬ್ಯಾರಿಕೇಡ್ ಜೋಡಿಸಲಾಗಿದೆ. ಉಳಿದ ಒಂದು ಪಥದಲ್ಲಿ ಲಾರಿ, ಕಾರು, ಆಟೋರಿಕ್ಷಾ, ದ್ವಿಚಕ್ರ ವಾಹನ, ಖಾಸಗಿ ಬಸ್‌ಗಳು ಸಂಚರಿಸಬೇಕಿದೆ.

ಈ ರಸ್ತೆಯ ಉದ್ದಕ್ಕೂ ಇರುವ ಐ.ಟಿ ಕಂಪನಿಗಳು ಲಾಕ್‌ಡೌನ್ ತೆರವಾದ ಬಳಿಕ ನಿಧಾನವಾಗಿ ಕಚೇರಿಯಿಂದ ಕೆಲಸ ಆರಂಭಿಸುತ್ತಿವೆ. ಈ ಕಂಪನಿಗಳ ಸುಮಾರು 1,500 ಬಸ್‌ಗಳು ಪ್ರತಿನಿತ್ಯ ಸಂಚರಿಸಲಿವೆ ಎಂದು ಅಂದಾಜಿಸಲಾಗಿದೆ. ಬಸ್ ಆದ್ಯತಾ ಪಥದಲ್ಲಿ ಈ ಬಸ್‌ಗಳ ಸಂಚಾರಕ್ಕೆ ಅನುಮತಿ ನೀಡಿರುವುದುಐ.ಟಿ ಕಂಪನಿ ಉದ್ಯೋಗಿಗಳಿಗೆ ಮಾತ್ರವಲ್ಲದೇ, ಸಾಮಾನ್ಯ ವಾಹನಗಳ ಸಂಚಾರಕ್ಕೆ ಉಳಿದಿದ್ದ ಒಂದೇಒಂದು ಪಥದಲ್ಲೂ ದಟ್ಟಣೆ ಕಡಿಮೆ ಮಾಡಲಿದೆ.

‘ಕಂಪನಿ ಬಸ್‌ಗಳು ಅಲ್ಲಲ್ಲಿ ನಿಲ್ಲಿಸಲು ಅನುಮತಿ ನೀಡಲಾಗಿದ್ದು, ಈ ಸಂಬಂಧ ಜಂಟಿ ಪೊಲೀಸ್ ಆಯುಕ್ತ(ಸಂಚಾರ) ರವಿಕಾಂತೇಗೌಡ ಅವರೊಂದಿಗೆ ಚರ್ಚೆ ನಡೆಸಲಾಗಿದೆ’ ಎಂದು ಡಲ್ಟ್ ಆಯುಕ್ತೆ ವಿ. ಮಂಜುಳಾ ತಿಳಿಸಿದರು.

‘ಆದ್ಯತಾ ಪಥದಲ್ಲಿ ಸಂಚರಿಸುವ ಬಸ್‌ಗಳು ತಮ್ಮ ಕಂಪನಿಯ ಹೆಸರು ಮತ್ತು ಲಾಂಛನವನ್ನು ಪ್ರದರ್ಶಿಸಬೇಕು. ಟ್ಯಾಕ್ಸಿಯಲ್ಲಿ ಸಂಚರಿಸುವ ಉದ್ಯೋಗಿಗಳು ಬಸ್ ಆದ್ಯತಾ ಪಥದಲ್ಲಿ ಸಂಚರಿಸಲು ಅವಕಾಶ ಇರುವುದಿಲ್ಲ’ ಎಂದು ಹೇಳಿದರು.

ಡಲ್ಟ್‌ ನೀಡಿರುವ ಈ ಅನುಮತಿಯನ್ನು ಹೊರ ವರ್ತುಲ ರಸ್ತೆ ಕಂಪನಿಗಳ ಸಂಘ(ಒಆರ್‌ಆರ್‌ಸಿಎ) ಸ್ವಾಗತಿಸಿದೆ. ‘ನಾವು ನೀಡಿದ್ದ ಮನವಿಗೆ ಡಲ್ಟ್ ಸ್ಪಂದಿಸಿದೆ. ಉದ್ಯೋಗಿಗಳು ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗಲು ಇದು ಸಹಾಯ ಆಗಲಿದೆ’ ಎಂದು ಸಂಘದ ಕಾರ್ಯನಿರ್ವಾಹಕ ವ್ಯವಸ್ಥಾಪಕ ಕೃಷ್ಣಕುಮಾರ್ ಗೌಡ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು