ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯ ಸೀಟು ಹಂಚಿಕೆಯಲ್ಲಿ ₹ 402 ಕೋಟಿ ಅಕ್ರಮ ಪತ್ತೆ

₹ 15 ಕೋಟಿ, 81 ಕೆ.ಜಿ. ಚಿನ್ನ ವಶ
Last Updated 18 ಫೆಬ್ರುವರಿ 2021, 22:07 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ವೈದ್ಯಕೀಯ ಕಾಲೇಜುಗಳನ್ನು ನಡೆಸುತ್ತಿರುವ ಒಂಬತ್ತು ಸಂಸ್ಥೆಗಳಲ್ಲಿ ನಡೆಸಿರುವ ಶೋಧದಲ್ಲಿ ₹ 15.09 ಕೋಟಿ ನಗದು ಮತ್ತು ₹30 ಕೋಟಿ ಮೌಲ್ಯದ 81 ಕೆ.ಜಿ. ಚಿನ್ನ ವಶಕ್ಕೆ ಪಡೆಯಲಾಗಿದೆ. ಅಕ್ರಮವಾಗಿ ವೈದ್ಯಕೀಯ ಸೀಟುಗಳನ್ನು ಹಂಚಿಕೆ ಮಾಡಿ ₹ 402.78 ಕೋಟಿಯನ್ನು ನಗದು ರೂಪದಲ್ಲಿ ‘ಕ್ಯಾಪಿಟೇಷನ್‌ ಶುಲ್ಕ’ ಪಡೆದಿರುವುದು ಪತ್ತೆಯಾಗಿದೆ ಎಂದು ಆದಾಯ ತೆರಿಗೆ (ಐ.ಟಿ) ಇಲಾಖೆ ತಿಳಿಸಿದೆ.

ವೈದ್ಯಕೀಯ ಸೀಟುಗಳ ಹಂಚಿಕೆಯಲ್ಲಿ ಅಕ್ರಮ ನಡೆಯುತ್ತಿರುವ ಶಂಕೆ ಮೇಲೆ ಬೆಂಗಳೂರು ಮತ್ತು ಮಂಗಳೂರಿನಲ್ಲಿ ನೋಂದಣಿಯಾಗಿರುವ ಒಂಬತ್ತು ಟ್ರಸ್ಟ್‌ಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಹಾಗೂ ಕೇರಳದ 56 ಸ್ಥಳಗಳಲ್ಲಿ ಬುಧವಾರದಿಂದ ಶೋಧ ನಡೆಸಲಾಗಿದೆ. ನೀಟ್‌ ಪರೀಕ್ಷೆಯಲ್ಲಿ ಹೆಚ್ಚಿನ ರ‍್ಯಾಂಕ್‌ ಗಳಿಸಿದ ವಿದ್ಯಾರ್ಥಿಗಳನ್ನು ಬಳಸಿಕೊಂಡು ವೈದ್ಯಕೀಯ ಸೀಟುಗಳನ್ನು ಕಾಯ್ದಿರಿಸಿ ನಂತರ ದುಬಾರಿ ದರಕ್ಕೆ ಮಾರಾಟ ಮಾಡಿರುವುದು ಪತ್ತೆಯಾಗಿದೆ. ವಿದ್ಯಾರ್ಥಿಗಳಿಂದ ‘ಕ್ಯಾಪಿಟೇಶನ್‌ ಶುಲ್ಕ’ ಸಂಗ್ರಹಿಸಲು ಈ ಟ್ರಸ್ಟ್‌ಗಳ ಪ್ರಮುಖರು ಮತ್ತು ಟ್ರಸ್ಟಿಗಳು ಮಧ್ಯವರ್ತಿಗಳನ್ನು ಇರಿಸಿಕೊಂಡಿರುವುದೂ ಕಾರ್ಯಾಚರಣೆಯಲ್ಲಿ ಬೆಳಕಿಗೆಬಂದಿದೆ ಎಂದು ಆದಾಯ ತೆರಿಗೆ ಇಲಾಖೆಯ ಕೇಂದ್ರ ಕಚೇರಿಯ ಪ್ರಕಟಣೆ ತಿಳಿಸಿದೆ.

ದಾಳಿಗೊಳಗಾದ ಸಂಸ್ಥೆಗಳ ಟ್ರಸ್ಟಿಗಳು ಮತ್ತು ಪ್ರಮುಖರ ಮನೆಗಳಿಂದ 40 ಕೆ.ಜಿ. ಬೆಳ್ಳಿ, 50 ಕ್ಯಾರಟ್‌ ವಜ್ರ, ಬೇನಾಮಿ ಹೆಸರಿನಲ್ಲಿ ಖರೀದಿಸಿರುವ 35 ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ. ಘಾನಾದಲ್ಲಿ ಮಾಡಿರುವ ₹ 2.39 ಕೋಟಿ ಮೊತ್ತದ ಅಘೋಷಿತ ವಿದೇಶಿ ಹೂಡಿಕೆಯನ್ನೂ ಪತ್ತೆಹಚ್ಚಲಾಗಿದೆ. ಆರೋಪಿತ ಸಂಸ್ಥೆಗಳು ಮತ್ತು ವ್ಯಕ್ತಿಗಳು ಭಾರಿ ಪ್ರಮಾಣದ ಆದಾಯವನ್ನು ಘೋಷಣೆ ಮಾಡದೇ ತೆರಿಗೆ ವಂಚಿಸಿರುವುದಕ್ಕೂ ಸಾಕ್ಷ್ಯಗಳು ಲಭಿಸಿವೆ ಎಂಬ ಮಾಹಿತಿಯನ್ನು ಐ.ಟಿ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.

ಪ್ರವೇಶ ಪ‍್ರಕ್ರಿಯೆಯಲ್ಲೇ ಅಕ್ರಮ: ಹೆಚ್ಚಿನ ರ‍್ಯಾಂಕಿಂಗ್‌ ಪಡೆದ ವಿದ್ಯಾರ್ಥಿಗಳನ್ನು ಬಳಸಿಕೊಂಡು ಸೀಟು ಕಾಯ್ದಿರಿಸಿ, ಅವುಗಳನ್ನು ಕಡಿಮೆ ರ‍್ಯಾಂಕಿಂಗ್‌ ಪಡೆದ ವಿದ್ಯಾರ್ಥಿಗಳಿಗೆ ಮಾರಾಟ ಮಾಡಲಾಗುತ್ತಿತ್ತು. ಎಂಬಿಬಿಎಸ್‌, ದಂತ ವೈದ್ಯಕೀಯ ಮತ್ತು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶದಲ್ಲಿ ಹಣ ಪಡೆದು ಸೀಟು ಹಂಚಿಕೆ ಮಾಡಿರುವುದು ದೃಢಪಟ್ಟಿದೆ. ವಿದ್ಯಾರ್ಥಿಗಳಿಂದ ನಗದು ಪಡೆದಿರುವುದಕ್ಕೆ ಸಂಬಂಧಿಸಿದ ಮಾಹಿತಿಯುಳ್ಳ ನೋಟ್‌ ಪುಸ್ತಕಗಳು, ಡೈರಿಗಳು, ಎಕ್ಸೆಲ್‌ ಶೀಟ್‌ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಹೀಗೆ ಸಂಗ್ರಹಿಸಿದ ಭಾರಿ ಮೊತ್ತದ ಹಣವನ್ನು ಸ್ಥಿರಾಸ್ತಿಗಳ ಮೇಲೆ ಹೂಡಿಕೆ ಮಾಡಿರುವುದು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.

ಪರೀಕ್ಷೆಗೂ ‘ಪ್ಯಾಕೇಜ್‌’: ಒಂದು ಸಂಸ್ಥೆಯಲ್ಲಿ ಆಡಳಿತ ಮಂಡಳಿ ಕೋಟಾದಲ್ಲಿ ಸೀಟು ಪಡೆದ ವಿದ್ಯಾರ್ಥಿಗಳನ್ನು ಪರೀಕ್ಷೆಯಲ್ಲಿ ಪಾಸು ಮಾಡಿಸುವುದಕ್ಕೆ ‘ಪ್ಯಾಕೇಜ್‌’ ವ್ಯವಸ್ಥೆ ಇರುವುದೂ ಪತ್ತೆಯಾಗಿದೆ. ₹ 1 ಲಕ್ಷದಿಂದ ₹ 2 ಲಕ್ಷದವರೆಗೂ ‘ಪ್ಯಾಕೇಜ್‌’ ದರವಿದೆ. ಈ ಮೊತ್ತ ನೀಡಿದ ವಿದ್ಯಾರ್ಥಿಗಳನ್ನು ಲಿಖಿತ ಮತ್ತು ಮೌಖಿಕ ಪರೀಕ್ಷೆಗಳಲ್ಲಿ ಪಾಸು ಮಾಡುವ ವ್ಯವಸ್ಥೆಗೆ ಸಂಬಂಧಿಸಿದ ದಾಖಲೆಗಳೂ ಪತ್ತೆಯಾಗಿವೆ ಎಂದು ಇಲಾಖೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT