ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ನಿಲ್ದಾಣ ತಲುಪಲು ಪಡಬೇಕು ಸಾಹಸ!

‘ಅಪಘಾತ ಮಾರ್ಗ’ವಾದ ಬಳ್ಳಾರಿ ರಸ್ತೆ: ವರ್ಷದಿಂದ ವರ್ಷಕ್ಕೆ ಅಪಘಾತ ಪ್ರಕರಣಗಳು ಹೆಚ್ಚಳ
Published 15 ಮೇ 2024, 22:36 IST
Last Updated 15 ಮೇ 2024, 22:36 IST
ಅಕ್ಷರ ಗಾತ್ರ

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಬಳ್ಳಾರಿ ರಸ್ತೆಯು ‘ಅಪಘಾತ ಮಾರ್ಗ’ವಾಗಿ ಬದಲಾಗಿದೆ.

ಈ ರಸ್ತೆಯಲ್ಲಿ ಬರೀ ವಾಹನ ದಟ್ಟಣೆ ಮಾತ್ರ ಇರುವುದಿಲ್ಲ. ದಿನದಿಂದ ದಿನಕ್ಕೆ ಅಪಘಾತ ಪ್ರಕರಣಗಳೂ ಹೆಚ್ಚುತ್ತಿವೆ. ಸಾವಿನ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಎಂದು ಸಂಚಾರ ಪೊಲೀಸರು ಆತಂಕ ವ್ಯಕ್ತಪಡಿಸಿದ್ದಾರೆ. ಮಾರ್ಗದ ಕೆಲವು ಜಂಕ್ಷನ್‌ಗಳಲ್ಲಿ ವಾಹನ ಚಾಲನೆಯು ಸವಾಲಿನಿಂದ ಕೂಡಿದೆ.

ದಟ್ಟಣೆ ನಿಯಂತ್ರಣಕ್ಕೆ ಸಂಚಾರ ಪೊಲೀಸರು ಬಿಗಿ ಕ್ರಮ ಕೈಗೊಂಡಿದ್ದರೂ ಅಪಘಾತ ಪ್ರಕರಣಗಳು ತಗ್ಗುತ್ತಿಲ್ಲ. ವಿಮಾನ ನಿಲ್ದಾಣವು ಮೆಜೆಸ್ಟಿಕ್‌ನಿಂದ 34 ಕಿ.ಮೀ ದೂರವಿದ್ದು ಈ ಮಾರ್ಗದ ಹಲವು ಜಂಕ್ಷನ್‌ಗಳಲ್ಲಿ ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿವೆ.

ಹೆಬ್ಬಾಳ ರಸ್ತೆಯಲ್ಲಿ ವಾಹನಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ವಿಮಾನ ನಿಲ್ದಾಣ ಹಾಗೂ ಈ ಮಾರ್ಗದ ಅಕ್ಕಪಕ್ಕದ ತಮ್ಮ ವಾಸದ ಬಡಾವಣೆಗಳಿಗೆ ತಲುಪುವುದೇ ಸಾಹಸವಾಗುತ್ತಿದೆ! ಕೃಷಿ ವಿಶ್ವವಿದ್ಯಾಲಯ, ಯಲಹಂಕ ಉಪನಗರ, ಬಳ್ಳಾರಿ ಕಡೆಗೆ ತೆರಳವುದೂ ಕಷ್ಟವಾಗಿದೆ.

ವಾಹನಗಳು ಅತಿವೇಗವಾಗಿ ಚಲಿಸುತ್ತಿದ್ದು ಅಪಘಾತಕ್ಕೆ ಕಾರಣವೆಂದು ಪೊಲೀಸರು ಹೇಳಿದ್ದಾರೆ. ಅತಿವೇಗವಾಗಿ ತೆರಳುವ ವಾಹನಗಳನ್ನು ಪತ್ತೆಹಚ್ಚಲು 8 ಸ್ಥಳಗಳಲ್ಲಿ ಸ್ವಯಂ ಚಾಲಿತ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅತಿವೇಗವಾಗಿ ಸಂಚರಿಸುವ ವಾಹನಗಳನ್ನು ಕ್ಯಾಮೆರಾಗಳೇ ಪತ್ತೆಹಚ್ಚುತ್ತಿವೆ. ಅಲ್ಲದೇ ದಟ್ಟಣೆ ನಿಯಂತ್ರಣಕ್ಕೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ಹೇಳಿದರು.

2021ರಲ್ಲಿ ಹೆಬ್ಬಾಳ ರಸ್ತೆಯಲ್ಲಿ 43 ಮಂದಿ ಮೃತಪಟ್ಟಿದ್ದರು. ಅದೇ 2023ರಲ್ಲಿ 87 ಸವಾರರು ಮೃತಪಟ್ಟಿದ್ದಾರೆ. ಈ ವರ್ಷ ನಾಲ್ಕು ತಿಂಗಳ ಅವಧಿಯಲ್ಲೇ 30 ಮಂದಿ ಮೃತರಾಗಿದ್ದಾರೆ.

ಹೆಬ್ಬಾಳ ಮಾರ್ಗದಲ್ಲಿ ಮೆಟ್ರೊ ಕಾಮಗಾರಿಯು ನಿಧಾನಗತಿಯಲ್ಲಿ ಸಾಗುತ್ತಿದ್ದು, ಅಲ್ಲಲ್ಲಿ ಬ್ಯಾರಿಕೇಡ್‌ ಹಾಕಲಾಗಿದೆ. ಗುಂಡಿಗಳು ಬಿದ್ದು ರಸ್ತೆಯೂ ಅಧ್ವಾನ ಸ್ಥಿತಿಯಲ್ಲಿದೆ. ಇದು ಸಹ ಅಪಘಾತಕ್ಕೆ ಕಾರಣವಾಗುತ್ತಿದೆ ಎಂದು ಸವಾರರು ದೂರಿದ್ದಾರೆ.

ಸರಿಯಾದ ಸಮಯಕ್ಕೆ ದೇವನಹಳ್ಳಿ ವಿಮಾನ ನಿಲ್ದಾಣ ತಲುಪಬೇಕಿದ್ದರೆ ಪ್ರಯಾಣದ ಅವಧಿ ಹೊರತು ಪಡಿಸಿ ಎರಡು ತಾಸು ಮೊದಲೇ ಮನೆಯಿಂದ ಹೊರಡಬೇಕಿದೆ ಎಂದು ಪ್ರಯಾಣಿಕರೊಬ್ಬರು ಅಳಲು ತೋಡಿಕೊಳ್ಳುತ್ತಾರೆ.

ಕಾಮಗಾರಿ ತಂದ ಫಜೀತಿ:

ಹೆಬ್ಬಾಳ–ಕೆ.ಆರ್.ಪುರ ಮೇಲ್ಸೇತುವೆಗೆ ಎರಡು ಹೊಸ ಟ್ರ್ಯಾಕ್‌ ಅಳವಡಿಸುವ ಕಾಮಗಾರಿಯನ್ನು ಬಿ.ಡಿ.ಎ ಕೈಗೆತ್ತಿಕೊಂಡಿದ್ದು, ಹೆಬ್ಬಾಳ ಮೇಲ್ಸೇತುವೆಯ ಕೆಆರ್‌ ಪುರ ಅಪ್‌ ರ್‍ಯಾಂಪ್‌ ಸಂಪೂರ್ಣ ಮುಚ್ಚಲಾಗಿದೆ. ಇದರಿಂದ ಸಮಸ್ಯೆ ಮತ್ತಷ್ಟು ತೀವ್ರವಾಗಿದೆ. ಕಾಮಗಾರಿ ಮುಕ್ತಾಯವಾಗಲು ನಾಲ್ಕರಿಂದ ಐದು ತಿಂಗಳು ಬೇಕಿದ್ದು ಅಲ್ಲಿಯವರೆಗೂ ಇದೇ ರೀತಿಯ ಸಮಸ್ಯೆ ಎದುರಿಸಬೇಕಾಗಿದೆ ಎಂದು ಚಾಲಕರು ಅಳಲು ತೋಡಿಕೊಳ್ಳುತ್ತಾರೆ.

ಈ ಮಾರ್ಗದಲ್ಲಿ ಹಲವು ಟ್ರಾವೆಲ್‌ ಕಂಪನಿಗಳ ಬಸ್‌ಗಳು ಪ್ರಮುಖ ರಸ್ತೆಯನ್ನೇ ಪ್ಲ್ಯಾಟ್‌ಫಾರ್ಮ್‌ನಂತೆ ಬಳಸುತ್ತಿವೆ. ಇದರಿಂದಲೂ ಸಮಸ್ಯೆ ಆಗುತ್ತಿದೆ. ವಿಂಡ್ಸರ್‌ ಮ್ಯಾನರ್‌ ಸೇತುವೆ, ಕಾವೇರಿ ಥಿಯೇಟರ್‌, ಗುಟ್ಟಹಳ್ಳಿ ಪ್ಯಾಲೇಸ್‌ ಸಮೀಪದಿಂದ ಮೇಖ್ರಿ ವೃತ್ತ ಮತ್ತು ಹೆಬ್ಬಾಳದವರೆಗೆ ಸಂಚಾರ ದಟ್ಟಣೆ ಸಾಮಾನ್ಯವಾಗಿದೆ.

ಕಳೆದ ಕೆಲವು ತಿಂಗಳಿಂದ ಮೇಖ್ರಿ ವೃತ್ತದಲ್ಲಿ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳ ನಿಲುಗಡೆಗೆ ಅವಕಾಶ ನೀಡುತ್ತಿಲ್ಲ. ಮೇಖ್ರಿ ವೃತ್ತದಿಂದ ಮುಂದಿರುವ ನಿಲ್ದಾಣಗಳಲ್ಲಿ ಬಸ್ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಈ ವೃತ್ತದ ಸುತ್ತಮುತ್ತ ತುಸು ಸಮಸ್ಯೆ ತಗ್ಗಿದೆ. ಆದರೆ, ಅರಮನೆ ಮೈದಾನದಲ್ಲಿ ಯಾವುದಾದರೂ ಪಕ್ಷದ ರಾಜಕೀಯ ಸಮಾವೇಶ ನಡೆದರೆ ವಾಹನ ದಟ್ಟಣೆಗೆ ಕಾರಣವಾಗುತ್ತಿದೆ.

ಎಂ.ಎನ್. ಅನುಚೇತ್‌
ಎಂ.ಎನ್. ಅನುಚೇತ್‌

ವಿಮಾನ ನಿಲ್ದಾಣ ರಸ್ತೆಯಲ್ಲಿ ವಾಹನಗಳಿಗೆ ವೇಗದ ಮಿತಿ ನಿಗದಿ ಪಡಿಸಲಾಗಿದೆ. ಪ್ರತಿ ಗಂಟೆಗೆ 80 ಕಿ.ಮೀಗಿಂತ ಹೆಚ್ಚಿನ ವೇಗದಲ್ಲಿ ವಾಹನ ಚಲಾಯಿಸಿದರೆ ಸ್ವಯಂ ಚಾಲಿತವಾಗಿ ದಂಡ ಬೀಳಲಿದೆ. ಎಂ.ಎನ್‌.ಅನುಚೇತ್‌ ಜಂಟಿ ಪೊಲೀಸ್‌ ಆಯುಕ್ತ ಸಂಚಾರ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT