ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಸಂಪರ್ಕ ಅಭಿಯಾನ ಪ್ರಾರಂಭ

ಮರ ಆಧಾರಿತ ಕೃಷಿ ಉತ್ತೇಜನಕ್ಕೆ ಈಶ ಪ್ರತಿಷ್ಠಾನದ ಯೋಜನೆ
Last Updated 2 ಆಗಸ್ಟ್ 2021, 23:05 IST
ಅಕ್ಷರ ಗಾತ್ರ

ಬೆಂಗಳೂರು: ‘ಕಾವೇರಿ ಕೂಗು‘ ಅಭಿಯಾನದ ಪ್ರಗತಿಯ ನಡುವೆಯೇ, ಜಗ್ಗಿ ವಾಸುದೇವ್ ನೇತೃತ್ವದ ಈಶ ಪ್ರತಿಷ್ಠಾನವು ಗ್ರಾಮ ಸಂಪರ್ಕ ಅಭಿಯಾನವನ್ನು ಸೋಮವಾರದಿಂದ ಪ್ರಾರಂಭಿಸಿದೆ. ಮರ ಆಧಾರಿತ ಕೃಷಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ.

‘ರಾಜ್ಯದ ಕಾವೇರಿ ಜಲಾನಯನ ಪ್ರದೇಶದುದ್ದಕ್ಕೂ ಬರುವ ಒಂಬತ್ತು ಜಿಲ್ಲೆಗಳಲ್ಲಿನ 1,785 ಗ್ರಾಮ ಪಂಚಾಯಿತಿಗಳಲ್ಲಿ 24 ಲಕ್ಷ ರೈತರನ್ನು ತಲುಪುವ ಗುರಿಯನ್ನು ಹೊಂದಲಾಗಿದೆ’ ಎಂದು ಸದ್ಗುರು ಜಗ್ಗಿ ವಾಸುದೇವ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘2020ರಲ್ಲಿ ಪ್ರಾರಂಭಿಸಲಾಗಿರುವ ‘ಕಾವೇರಿ ಕೂಗು’ ಅಭಿಯಾನದ ಅಡಿ ಕರ್ನಾಟಕ ಮತ್ತು ತಮಿಳುನಾಡು ಸೇರಿದಂತೆ ಜಲಾನಯನ ಪ್ರದೇಶದಲ್ಲಿ ಅಂದಾಜು 1.10 ಕೋಟಿ ಸಸಿಗಳನ್ನು ನೆಡುವಲ್ಲಿ ಯಶಸ್ವಿಯಾಗಿದ್ದೇವೆ. ಕಾವೇರಿ ಕೊಳ್ಳದ 28 ಜಿಲ್ಲೆಗಳ 189 ತಾಲ್ಲೂಕುಗಳಲ್ಲಿ 33 ಸಾವಿರ ರೈತರು ಅಭಿಯಾನಕ್ಕೆ ಕೈಜೋಡಿಸಿದ್ದಾರೆ’ ಎಂದರು.

‘ಇದರ ಮುಂದುವರಿದ ಭಾಗವಾಗಿ ‘ಮರ ಆಧಾರಿತ ಕೃಷಿ’ ಅಭಿಯಾನದಡಿ ಐದುಪಟ್ಟು ಅಂದರೆ 5 ಕೋಟಿ ಸಸಿಗಳನ್ನು ನೆಡುವ ಗುರಿ ಇದೆ. ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಅರಣ್ಯ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಸಹಯೋಗದಲ್ಲಿ ಇದನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.

‘ಮರ ಮಿತ್ರರ’ ನೇಮಕ: ಇದಕ್ಕಾಗಿ 890 ‘ಮರ ಮಿತ್ರ’ರನ್ನು ನೇಮಿಸಲಾಗಿದ್ದು, ಪಂಚಾಯಿತಿ ಮಟ್ಟದಲ್ಲಿ ಇವರು ರೈತರನ್ನು ಉತ್ತೇಜಿಸಲಿದ್ದಾರೆ. ಈಗಾಗಲೇ ವಿವಿಧ ಪಂಚಾಯಿತಿಗಳಲ್ಲಿ ಮರ ಆಧಾರಿತ ಕೃಷಿ ಅಭಿಯಾನಕ್ಕೆ ಸಂಬಂಧಿಸಿದ1,800 ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಉತ್ತಮ ಸ್ಪಂದನೆಯೂ ದೊರಕಿದೆ. ಈ ಅಭಿಯಾನದಿಂದ ರೈತರ ಆದಾಯ ಶೇ 300ರಿಂದ ಶೇ 800ರಷ್ಟು ಹೆಚ್ಚಾಗಲಿದೆ ಎಂದು ಜಗ್ಗಿ ವಾಸುದೇವ್ ಹೇಳಿದರು.

‘ಸ್ಟೇಟ್ ಆಫ್ ದಿ ಆರ್ಟ್’ ಮೊಬೈಲ್ ಆ್ಯಪ್‌ವೊಂದನ್ನು ಅಭಿವೃದ್ಧಿಪಡಿಸಿದ್ದು, ಇದರಲ್ಲಿ ಹೆಸರು ನೋಂದಾಯಿಸಿಕೊಳ್ಳುವ ರೈತರ ಮನೆ ಬಾಗಿಲಿಗೇ ‘ಮರ ಮಿತ್ರ’ರು ಸಸಿಗಳನ್ನು ತಲುಪಿಸಲಿದ್ದಾರೆ ಎಂದೂ ಅವರು ಮಾಹಿತಿ ನೀಡಿದರು.

‘ಸರ್ಕಾರಿ ಜಾಗದಲ್ಲಿ ಒಂದೇ ಒಂದು ಸಸಿಯನ್ನು ನಾವು ನೆಟ್ಟಿಲ್ಲ. ರೈತರ ಖಾಸಗಿ ಭೂಮಿಯಲ್ಲಿ, ಅವರ ಒಪ್ಪಿಗೆ ಪಡೆದೇ ಸಸಿಗಳನ್ನು ನೆಟ್ಟಿದ್ದೇವೆ. ಅಲ್ಲದೆ, ಅವರಿಗೆ ಯಾವುದೇ ಬಲವಂತ ಮಾಡಿ ಈ ಅಭಿಯಾನದಲ್ಲಿ ತೊಡಗಿಸಿಕೊಳ್ಳುತ್ತಿಲ್ಲ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಹಿರಿಯ ವಿಜ್ಞಾನಿ ಎ.ಎಸ್. ಕಿರಣ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT