ಗುರುವಾರ , ಜುಲೈ 7, 2022
20 °C

ಗಾಂಧಿ ತತ್ವಗಳಿಗೆ ಜೈನ ಧರ್ಮ ಪ್ರೇರಕ: ವೂಡೇ ಪಿ.ಕೃಷ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆಂಗೇರಿ: ‘ಮಹಾತ್ಮ ಗಾಂಧೀಜಿ ಅವರು ತಮ್ಮ ಜೀವನದುದ್ದಕ್ಕೂ ಪ್ರತಿಪಾದಿಸಿದ ಸತ್ಯ ಹಾಗೂ ಅಹಿಂಸೆಗೆ ಜೈನ ಧರ್ಮದ ತತ್ವ ಮತ್ತು ಆದರ್ಶಗಳೇ ಪ್ರೇರಕ ಶಕ್ತಿಯಾಗಿದ್ದವು’ ಎಂದು ಶೇಷಾದ್ರಿಪುರ ಶಿಕ್ಷಣ ದತ್ತಿಯ ಗೌರವ ಕಾರ್ಯದರ್ಶಿ ವೂಡೇ ಪಿ.ಕೃಷ್ಣ ತಿಳಿಸಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಜೈನ ಸಾಹಿತ್ಯ ಸಂಸ್ಕೃತಿ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಕೆಂಗೇರಿ ಉಪನಗರದ ಶೇಷಾದ್ರಿಪುರ ಪದವಿ ಕಾಲೇಜಿನಲ್ಲಿ  ಆಯೋಜಿಸಿದ್ದ ‘ಜೈನ ಧರ್ಮದಲ್ಲಿ ಲೌಕಿಕ ಮತ್ತು ಬದುಕಿನ ಪರಿಕಲ್ಪನೆ’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಜೈನ ಧರ್ಮದ ಮೂಲ ತತ್ವವಾದ ಅಹಿಂಸಾ ಭಾವದ ಅಚರಣೆಯಿಂದಲೇ ಗಾಂಧೀಜಿ ರಾಜಕೀಯ ಸಂತನಾಗಲು ಸಾಧ್ಯವಾಯಿತು’ ಎಂದರು.

ಸಾಹಿತಿ ಹಂಪ ನಾಗರಾಜಯ್ಯ,‘ರನ್ನ, ಪೊನ್ನ, ಜನ್ನ ಸೇರಿದಂತೆ ಹಲವಾರು ಜೈನ ಕವಿಗಳು ಕನ್ನಡ ಸಾಹಿತ್ಯ ಪ್ರಾಕಾರಕ್ಕೆ ಅಮೂಲಾಗ್ರ ಕೊಡುಗೆ ನೀಡಿದ್ದಾರೆ. ಎಲ್ಲ ಜೀವಿಗೂ ಸ್ವತಂತ್ರವಾಗಿ, ನೆಮ್ಮದಿಯಿಂದ ಜೀವಿಸುವ ಅವಕಾಶ ನೀಡುವ ಜೈನ ಧರ್ಮ ನಿಜವಾದ ಅರ್ಥದಲ್ಲಿ ಪರಿಸರ ಸ್ನೇಹಿ ಧರ್ಮ’ ಎಂದರು.

‘ಎಲ್ಲ ಧರ್ಮಗಳಲ್ಲೂ ಒಳ್ಳೆಯ ಅಂಶಗಳಿರುತ್ತದೆ. ಧಾರ್ಮಿಕ ಜಿಜ್ಞಾಸೆಗಳನ್ನು ಬದಿಗಿಟ್ಟು, ಧರ್ಮದ ಸಾರವನ್ನು ಮಾತ್ರ ಗ್ರಹಿಸಬೇಕು ಎಂದು ಹೇಳುವ ಮೂಲಕ ಗಾಂಧಿ ಅವರಲ್ಲಿ ಹಿಂದೂ ಧರ್ಮದ ಬಗ್ಗೆ ಮೂಡಿದ್ದ ಗೊಂದಲಕ್ಕೆ ತೆರೆ ಎಳೆದಿದ್ದು ಜೈನ ಮುನಿಗಳು’ ಎಂದು ಸಾಹಿತಿ ಕಮಲಾ ಹಂಪನಾ ಹೇಳಿದರು.

ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಕುಲಪತಿ ಸ.ಚಿ.ರಮೇಶ್,‘ಜೈನ ಧರ್ಮ ಸ್ವಚ್ಛತೆ, ಶಾಂತಿ, ಅಹಿಂಸೆಯಿಂದ ಕೂಡಿದ ಜೀವನ ಕ್ರಮ ಪ್ರತಿಪಾದಿಸುತ್ತದೆ. ಜೈನ ತತ್ವಾದರ್ಶಗಳನ್ನು ಅರಿತು ಪಾಲಿಸಿದರೆ, ಗಾಂಧಿ ಮತ್ತು ಲೋಹಿಯಾ ಕಂಡ ಸಮ ಸಮಾಜ ನಿರ್ಮಾಣ ಸಾಧ್ಯ’ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು