ಸೋಮವಾರ, ಮಾರ್ಚ್ 1, 2021
24 °C

ಜಕ್ಕೂರು ಮಾರ್ಗ: ಮುಖ್ಯರಸ್ತೆಯಲ್ಲೇ ಮೂಗು ಮುಚ್ಚಿ ಓಡಾಡಬೇಕು!

ಮನೋಹರ್‌ ಎಂ. Updated:

ಅಕ್ಷರ ಗಾತ್ರ : | |

ಬೆಂಗಳೂರು: ಚರಂಡಿಗಳಲ್ಲಿ ಹಲವು ದಿನಗಳಿಂದ ಕಟ್ಟಿಕೊಂಡಿರುವ ಕೊಳಕು. ರಸ್ತೆಯ ಎರಡೂ ಬದಿ ಸಾಲುಗಟ್ಟಿ ನಿಲ್ಲುವ ವಾಹನಗಳು. ರಸ್ತೆಯ ಮೇಲೆ ಸದಾ ಹರಿಯುವ ಕೊಳಚೆ ನೀರು. ರಸ್ತೆ ದಾಟಲು ಮೂಗು ಮುಚ್ಚಿಕೊಂಡು ಗುಂಡಿಗಳನ್ನು ಜಿಗಿಯುವ ಪಾದಚಾರಿಗಳು...

ಇದು ಜಕ್ಕೂರು ಮಾರ್ಗವಾಗಿ ಹೆಗಡೆ ನಗರ ಕಡೆಗೆ ಸಾಗುವ ರೈಲ್ವೆ ಸಮಾನಾಂತರ ರಸ್ತೆಯಲ್ಲಿ ಸಂಚರಿಸುವವರ ನಿತ್ಯದ ಗೋಳು.  

ಹೆಗಡೆನಗರ ಮುಖ್ಯ ರಸ್ತೆಯಲ್ಲಿ ಎರಡೂ ಬದಿಯ ಚರಂಡಿಗಳಲ್ಲಿ ಕೊಳಚೆ ನೀರು ಆರು ತಿಂಗಳಿನಿಂದ ಕಟ್ಟಿಕೊಂಡಿದೆ. ಮೂರು ಚರಂಡಿಗಳಲ್ಲಿ ಹರಿಯುವ ಕೊಳಚೆ ನೀರು ರಸ್ತೆಯ ಕೆಳಭಾಗ ಅಳವಡಿಸಿರುವ ಪೈಪ್‌ಲೈನ್ ಮೂಲಕ ಹರಿಯಬೇಕಿತ್ತು. ಆದರೆ, ಪೈಪ್‌ಪೈನ್‌ನಲ್ಲಿ ಕಸ, ಮಣ್ಣು ಭಾರಿ ಪ್ರಮಾಣದಲ್ಲಿ ಸಂಗ್ರಹವಾಗಿರುವ ಕಾರಣ ಕೊಳಚೆ ನೀರು ಹರಿವಿಗೆ ಅಡ್ಡಿಯಾಗಿದೆ.

ಸದಾ ಕೊಳಚೆಯಿಂದ ಕೂಡಿದ ರಸ್ತೆ ದಾಟಲು ಮುಜುಗರ ಪಡುವ ಪಾಡು ಇಲ್ಲಿನ ಪಾದಚಾರಿಗಳದು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಕೊಳಚೆ ನೀರಿನ ಹರಿವಿನಿಂದ ಈ ರಸ್ತೆಯಲ್ಲಿ  ದೊಡ್ಡ ಗುಂಡಿಗಳು ಕಾಣಿಸಿಕೊಂಡಿವೆ. ಯಲಹಂಕ, ಜಕ್ಕೂರು, ಬ್ಯಾಟರಾಯನಪುರ,
ಅಮೃತಹಳ್ಳಿಗಳಿಂದ ಮಾನ್ಯತಾ ಟೆಕ್‌ಪಾರ್ಕ್‌ನಲ್ಲಿರುವ ಕಚೇರಿಗೆ ತೆರಳಲು ಟೆಕಿಗಳು ಇದೇ ಮಾರ್ಗವನ್ನು ಬಳಸುತ್ತಾರೆ.

‘ಮಳೆ ಬಂದರೆ ಸಾಕು ಈ ರಸ್ತೆಯೆಲ್ಲಾ ಕೊಳಚೆಮಯವಾಗಿರುತ್ತದೆ. ಈ ಮಾರ್ಗದಲ್ಲಿ ಸಂಚರಿಸುವುದೇ ಕಷ್ಟಸಾಧ್ಯವಾಗುತ್ತದೆ. ರಸ್ತೆಗುಂಡಿ ಹೆಚ್ಚಾಗಿರುವ ಕಾರಣ ವಾಹನ ಸವಾರರು ನಿಧಾನವಾಗಿ ಚಲಿಸುತ್ತಾರೆ. ಇದರಿಂದ ವಾಹನಗಳು ರೈಲ್ವೆ ಹಳಿಯಿಂದ ರಾಚೇನಹಳ್ಳಿ ಮುಖ್ಯರಸ್ತೆಯವರೆಗೆ ಸಾಲುಗಟ್ಟಿ ನಿಲ್ಲುತ್ತವೆ’ ಎಂದು ಸ್ಥಳೀಯ ಅಂಗಡಿ ವ್ಯಾಪಾರಿ ಕೃಷ್ಣಪ್ಪ ವಿವರಿಸಿದರು.

‘ಪೈಪ್‌ಲೈನ್‌ ಕಟ್ಟಿಕೊಂ‌ಡಿರುವುದರಿಂದ ಈ ಸಮಸ್ಯೆ ಉದ್ಭವಿಸಿದೆ. ಸ್ಥಳೀಯ ನಿವಾಸಿಗಳು ವಾಹನಗಳಲ್ಲಿ ಕಸ ತಂದು ಚರಂಡಿಗಳಲ್ಲಿ ಬಿಸಾಡಿ ಹೋಗುತ್ತಾರೆ. ಕಟ್ಟಡದ ಅವಶೇಷಗಳನ್ನು ರಾತ್ರೋರಾತ್ರಿ ಟ್ರ್ಯಾಕ್ಟರ್‌ಗಳಲ್ಲಿ ತಂದು ಇಲ್ಲೇ ಸುರಿಯುತ್ತಾರೆ. ಇದರಿಂದ ಕೊಳಚೆ ನೀರಿನ ಹರಿವಿಗೆ ಅಡ್ಡಿ ಉಂಟಾಗಿದೆ. ಭಾರಿ ಪ್ರಮಾಣದ ಮಣ್ಣು ಕೊಳವೆಯೊಳಗೆ ಸಂಗ್ರಹವಾಗಿದೆ’ ಎಂದರು.

‘ಹೆಗಡೆನಗರ ಮುಖ್ಯರಸ್ತೆಯಲ್ಲಿ ವಾಹನ ದಟ್ಟಣೆ ಕಡಿಮೆ ಇರುವುದರಿಂದ ಯಲಹಂಕದಿಂದ ಕಂಪನಿಗೆ ನಿತ್ಯ ಇದೇ ಮಾರ್ಗದಲ್ಲಿ ಸಂಚರಿಸುತ್ತೇನೆ. ರೈಲ್ವೆ ಸಮಾನಾಂತರ ರಸ್ತೆ ಬಳಿ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ. ರಸ್ತೆಯಲ್ಲಿರುವ ಗುಂಡಿಗಳು ವಾಹನ ಸವಾರರ ಪಾಲಿಗೂ ಅಪಾಯಕಾರಿಯಾಗಿವೆ. ಸಂಬಂಧಪಟ್ಟವರು ಈ ಸಮಸ್ಯೆಯನ್ನು ಕೂಡಲೇ ಪರಿಹರಿಸಬೇಕು’ ಎಂದು ಖಾಸಗಿ ಕಂಪನಿ ಉದ್ಯೋಗಿ ಮುರಳಿ ಕುಮಾರ್‌ ಮನವಿ ಮಾಡಿದರು.

‘ಭೂ ಸ್ವಾಧೀನ ವಿಳಂಬ’

‘ಈ ರಸ್ತೆ ಸಮೀಪದ ರಾಜಕಾಲುವೆ ಕಾಮಗಾರಿ ಭೂ ಸ್ವಾಧೀನ ವಿಳಂಬವಾಗಿದ್ದರಿಂದ ಆಮೆಗತಿಯಲ್ಲಿ ಸಾಗಿತ್ತು. ಈಗ ಸಮಸ್ಯೆ  ಇತ್ಯರ್ಥವಾಗಿದೆ. 15 ದಿನಗಳಿಂದ ರಾಜಕಾಲುವೆ ಕಾಮಗಾರಿ ಮತ್ತೆ ನಡೆಯುತ್ತಿದೆ. ಕೊಳಚೆ ನೀರು ಹರಿವಿಗೆ ತಾತ್ಕಾಲಿಕ ಕಾಲುವೆ ನಿರ್ಮಿಸಲಾಗಿದೆ’ ಎಂದು ಹೆಸರು ಬಹಿರಂಗ ಪಡಿಸಲು ಬಯಸದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ರಸ್ತೆಯ ಎಡಭಾಗದಲ್ಲಿ ಕಟ್ಟಿಕೊಂಡಿರುವ ಕೊಳವೆಮಾರ್ಗ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ರಾಜಕಾಲುವೆ ಮಾತ್ರ ನಮ್ಮ ವ್ಯಾಪ್ತಿಗೆ ಬರುತ್ತದೆ. ರಾಜಕಾಲುವೆ ಕಾಮಗಾರಿ ಶೀಘ್ರವೇ ಪೂರ್ಣಗೊಳ್ಳಲಿದೆ’ ಎಂದರು.

**

ಕೊಳವೆ ಒಳಗೆ ಸಿಲುಕಿರುವ ಕಸಕಡ್ಡಿ ಹಾಗೂ ಕೆಸರನ್ನು ತೆರವು ಮಾಡಬೇಕು. ಚರಂಡಿಗಳಲ್ಲಿ ಕಸ ಬಿಸಾಡುವವರ ವಿರುದ್ಧ ಬಿಬಿಎಂಪಿ ಕ್ರಮ ಕೈಗೊಳ್ಳಬೇಕು.
– ಹನುಮಂತ, ಸ್ಥಳೀಯ

**

ಬೈಕ್‌ ಸವಾರರಿಗೆ ಈ ರಸ್ತೆ ಮೃತ್ಯುಕೂಪದಂತಿದೆ. ಲಾರಿ ಸಂಚರಿಸುವಾಗ ಕೊಳಚೆ ಬೈಕ್‌ ಸವಾರರಿಗೆ ಸಿಡಿಯು<br/>ತ್ತದೆ. ರಸ್ತೆಗೆ ಡಾಂಬರು ಹಾಕಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಬೇಕು.
– ಬೈಕ್‌ ಸವಾರ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು