ಬುಧವಾರ, ಏಪ್ರಿಲ್ 8, 2020
19 °C
ಸಾಂಸ್ಕೃತಿಕ ಕಾರ್ಯಕ್ರಮಗಳ ಮೆರುಗು

ಎಲ್ಲ ಕಲಾವಿದರಿಗೂ ಮಾಸಾಶನ: ಸಚಿವ ಸಿ.ಟಿ.ರವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಅರ್ಜಿ ಸಲ್ಲಿಸಿರುವ ಅರ್ಹ ಕಲಾವಿದರಿಗೆ ಮೇ ಅಂತ್ಯದೊಳಗೆ ಮಾಸಾಶನ ನೀಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ತಿಳಿಸಿದರು.

ಕರ್ನಾಟಕ ಜಾನಪದ ಪರಿಷತ್ತು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಜಾನಪದ ಲೋಕ ಬೆಳ್ಳಿಹಬ್ಬಕ್ಕೆ ನಗರದಲ್ಲಿ ಭಾನುವಾರ ಚಾಲನೆ ನೀಡಿ ಮಾತನಾಡಿದರು.

‘ನಮ್ಮ ಸರ್ಕಾರ ಬಂದ ನಂತರ ₹1,500 ಇದ್ದ ಕಲಾವಿದರ ಮಾಸಾಶನವನ್ನು ₹2 ಸಾವಿರಕ್ಕೆ ಹೆಚ್ಚಿಸಲಾಗಿದೆ. ಏಪ್ರಿಲ್‌ 1ರಿಂದ ಹೊಸ ಬಜೆಟ್‌ ವರ್ಷ ಆರಂಭವಾಗಲಿದೆ. ಅದರಲ್ಲಿ ಹೊಸದಾಗಿ ಅರ್ಜಿ ಹಾಕಿರುವ ಕಲಾವಿದರಿಗೆ ಮಾಸಾಶನ ನೀಡುವುದು ನಮ್ಮ ಆದ್ಯತೆಯ ಕೆಲಸ’ ಎಂದರು.

‘ನಾಡಿನ ಸಂಸ್ಕೃತಿಯ ಪ್ರತೀಕವಾಗಿರುವ ಜಾನಪದ ಲೋಕಕ್ಕೆ ₹10 ಕೋಟಿ ಅನುದಾನ ನೀಡುವಂತೆ ಜಾನಪದ ಪರಿಷತ್ತು ಕೋರಿದೆ. ಈ ಸಂಬಂಧ ಮುಖ್ಯಮಂತ್ರಿ ಜತೆ ಚರ್ಚಿಸಿ ಅನುದಾನ ಕೊಡಿಸಲು ಪ್ರಯತ್ನ ಮಾಡಲಾಗುವುದು’ ಎಂದು ತಿಳಿಸಿದರು.

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ‘ಗ್ರಾಮೀಣ ಜನರ ಜೀವನದೊಂದಿಗೆ ಬೆರೆತು ಹೋಗಿರುವ ಜಾನಪದವೇ ಈ ಸಂಸ್ಕೃತಿಯ ತಾಯಿಬೇರು. ಬೇರನ್ನು ಉಳಿಸಿಕೊಳ್ಳದೆ ಇದ್ದರೆ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಆಗುವುದಿಲ್ಲ. ಜಾನಪದ ಉಳಿಸುವ ಕೆಲಸ ಮಾಡುತ್ತಿರುವ ಜಾನಪದ ಪರಿಷತ್ತಿನೊಂದಿಗೆ ಆದಿಚುಂಚನಗಿರಿ ಮಠ ಸದಾ ಇದ್ದೇ ಇರುತ್ತದೆ’ ಎಂದರು.

ಜಾನಪದ ಲೋಕದ ಬೆಳ್ಳಿಹಬ್ಬದ ಅಂಗವಾಗಿ ರವೀಂದ್ರ ಕಲಾಕ್ಷೇತ್ರದಲ್ಲಿ ಬೆಳಿಗ್ಗೆಯಿಂದ ಸಂಜೆ ತನಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

₹10 ಕೋಟಿಗೆ ಮನವಿ
‘ಜಾನಪದ ಲೋಕವನ್ನು ರಾಜಸ್ಥಾನದ ಚೌಕಿದಾನಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಸರ್ಕಾರ ₹10 ಕೋಟಿ ಅನುದಾನ ನೀಡಬೇಕು’ ಎಂದು ಜಾನಪದ ಪರಿಷತ್ತಿನ ಅಧ್ಯಕ್ಷ ಟಿ.ತಿಮ್ಮೇಗೌಡ ಮನವಿ ಮಾಡಿದರು.

‘ಜಾನಪದವನ್ನು ಪಠ್ಯದಲ್ಲಿ ಸೇರಿಸುವ ಮೂಲಕ ನಾಡಿನ ಸಂಸ್ಕೃತಿಯನ್ನು ಮುಂದಿನ ‍ಪೀಳಿಗೆಗೆ ತಲುಪಿಸುವ ಕೆಲಸವನ್ನೂ ಸರ್ಕಾರ ಮಾಡಬೇಕು. ಕಲಾವಿದರಿಗೆ ಮಾಸಾಶನ ನೀಡುವ ಜತೆಗೆ ಸಂಕಷ್ಟದಲ್ಲಿ ಇರುವವರಿಗೆ ನೆರವಾಗಲು ಸರ್ಕಾರ ಕ್ಷೇಮ ನಿಧಿ ಸ್ಥಾಪಿಸಬೇಕು’ ಎಂದು ಕೋರಿದರು.

‘ಗ್ರಾಮ ಪ್ರವಾಸ ಯೋಜನೆ’
‘ಪ್ರವಾಸೋದ್ಯಮ ಇಲಾಖೆಯಿಂದ ಗ್ರಾಮ ಪ್ರವಾಸ (ವಿಲೇಜ್ ಟೂರಿಸಂ) ಎಂಬ ಹೊಸ ಯೋಜನೆ ಆರಂಭಿಸಲು ಚಿಂತನೆ ನಡೆಸಲಾಗಿದೆ’ ಎಂದು ಸಿ.ಟಿ.ರವಿ ತಿಳಿಸಿದರು.

‘ಮಹಾರಾಷ್ಟ್ರದಲ್ಲಿ ವಿಲೇಜ್ ಟೂರಿಸಂ ಆರಂಭಿಸಲಾಗಿದೆ. ಅಲ್ಲಿನ ‌48 ಗ್ರಾಮಗಳಿಗೆ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡಿದ್ದಾರೆ. ಅದು ಲಾಭದಾಯಕವೂ ಆಗಿದೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಗ್ರಾಮೀಣ ಜನರ ಬದುಕು ಮತ್ತು ಸಂಸ್ಕೃತಿಯನ್ನು ತಿಳಿಸಿಕೊಡುವ ನಿಟ್ಟಿನಲ್ಲಿ ಚರ್ಚೆ ನಡೆಸಲಾಗಿದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು