ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಸ್ಪಂದನ: ಸೌಕರ್ಯ ಕೊರತೆ: ಪರಿಹಾರದ ಆಶಾಕಿರಣ

ಅಹವಾಲು ತೋಡಿಕೊಂಡ ಜನ: ಸಚಿವ ಎಸ್.ಟಿ. ಸೋಮಶೇಖರ್ ಸಮಾಧಾನದ ಉತ್ತರ
Last Updated 4 ಫೆಬ್ರುವರಿ 2023, 19:31 IST
ಅಕ್ಷರ ಗಾತ್ರ

ಬೆಂಗಳೂರು: ಬಡಾವಣೆಗೆ ರಸ್ತೆಯೇ ಇಲ್ಲ, ಇದ್ದರೂ ಡಾಂಬರ್ ಕಂಡಿಲ್ಲ, ಬೀದಿ ದೀಪಗಳಿಲ್ಲ, ಹಾವುಗಳ ಕಾಟ ತಪ್ಪಿಲ್ಲ... ಹೀಗೆ ಹತ್ತು ಹಲವು ದೂರು–ದುಮ್ಮಾನಗಳನ್ನು ಹೊತ್ತು ಬಂದಿದ್ದ ಯಶವಂತಪುರ ವಿಧಾನಸಭಾ ಕ್ಷೇತ್ರದ ಜನರಿಗೆ ಕೊಂಚ ಸಮಾಧಾನ ದೊರೆಯಿತು.

‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್‌’ ಪತ್ರಿಕೆಗಳು ‘ಚೇಂಜ್ ಮೇಕರ್ಸ್ ಆಫ್ ಕನಕಪುರ ರೋಡ್’ ಸಹಯೋಗದಲ್ಲಿ ತುರಹಳ್ಳಿ ರಸ್ತೆಯಲ್ಲಿರುವ ಶೋಭ ಫಾರೆಸ್ಟ್‌ ವ್ಯೂ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ಶನಿವಾರ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮವು ಸರ್ಕಾರಿ ಕಚೇರಿಗಳಿಗೆ ಅಲೆದು ಸುಸ್ತಾಗಿದ್ದ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಸತ್ತಿದ್ದ ಜನರಲ್ಲಿ ಆಶಾಭಾವ ಮೂಡಿಸಿತು.

ಹೆಮ್ಮಿಗೆಪುರ, ತುರಹಳ್ಳಿ, ವಾಜರಹಳ್ಳಿ, ಬನಶಂಕರಿ 6ನೇ ಹಂತ, ಮಲ್ಲಸಂದ್ರ ಮತ್ತು ಸುತ್ತಮುತ್ತಲ ನಿವಾಸಿಗಳು ತಮ್ಮ ಅಹವಾಲು ಹಿಡಿದು ಬಂದಿದ್ದರು. ನಾಗರಿಕರು ಹೊತ್ತು ಬಂದಿದ್ದ ಸಮಸ್ಯೆಗಳನ್ನು ಮೂರು ಗಂಟೆಗಳಿಗೂ ಹೆಚ್ಚು ಕಾಲ ತಾಳ್ಮೆಯಿಂದ ಆಲಿಸಿದ ಈ ಕ್ಷೇತ್ರದ ಶಾಸಕರೂ ಆಗಿರುವ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಕೆಲ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸುವ ಪ್ರಯತ್ನ ಮಾಡಿದರು.

ಗಂಭೀರ ಸಮಸ್ಯೆಗಳನ್ನು ಜನ ಹಂಚಿಕೊಂಡಾಗ, ಅವುಗಳನ್ನು ಪರಿಹರಿಸದ ಅಧಿಕಾರಿಗಳನ್ನು ಬಹಿರಂಗವಾಗಿಯೇ ತರಾಟೆಗೆ ತೆಗೆದುಕೊಂಡರು. ಸಭೆ ಮುಗಿದ ಕೂಡಲೇ ಸ್ಥಳಕ್ಕೆ ಹೋಗಿ ಸಮಸ್ಯೆ ಬಗೆಹರಿಸಿದ ವರದಿ ನೀಡಬೇಕು ಎಂದು ತಾಕೀತು ಮಾಡಿದರು.

ಬನಶಂಕರಿ 6ನೇ ಹಂತದಲ್ಲಿ ಮೂಲಸೌಕರ್ಯ ಕೊರತೆ, ಬಿಡಿಎ ಅನುಮೋದಿತ ಬಡಾವಣೆಗಳಲ್ಲಿ ಯಾವುದೇ ಸೌಕರ್ಯ ಇಲ್ಲದಿರುವುದು, ಬಿಡಿಎ ಮತ್ತು ಬಿಬಿಎಂಪಿ ನಡುವಿನ ಸಮನ್ವಯದ ಕೊರತೆಯಿಂದ ರೋಸಿ ಹೋಗಿರುವ ನಿವಾಸಿಗಳು ತಮ್ಮ ಅಸಮಾಧಾನ ಹೊರ ಹಾಕಿದರು. ಎಲ್ಲರನ್ನೂ ಸಮಾಧಾನಪಡಿಸಿ ಹಂತ–ಹಂತವಾಗಿ ಸಮಸ್ಯೆಗಳನ್ನು ಬಗೆಹರಿಸುವ ಭರವಸೆಯನ್ನು ಸಚಿವರು ನೀಡಿದರು.

ಜನಸ್ಪಂದನ ಸಭೆ ಪೂರ್ಣಗೊಳ್ಳುವ ಮುನ್ನ ಪಕ್ಷದ ಪ್ರಮುಖ ಸಭೆಯಲ್ಲಿ ಭಾಗವಹಿಸಬೇಕಿದ್ದ ಕಾರಣಕ್ಕೆ ಹೊರಡಲು ಸಚಿವರು ಸಿದ್ಧರಾದರು. ಆದರೆ, ಜನರ ಮನವಿಗೆ ಸ್ಪಂದಿಸಿ ಮತ್ತೊಂದು ಗಂಟೆ ಕುಳಿತು ಎಲ್ಲರ ಪ್ರಶ್ನೆಗಳಿಗೆ ಕಿವಿಯಾದರು.

ಹಂತಹಂತವಾಗಿ ಮೂಲ ಸೌಕರ್ಯಗಳ ಅನುಷ್ಠಾನ

ಕೋವಿಡ್‌ ಅವಧಿಯಲ್ಲಿನ ಹಣಕಾಸು ಸಮಸ್ಯೆಗಳಿಂದಾಗಿ ವಿವಿಧ ಬಡಾವಣೆಗಳ ಅಭಿವೃದ್ಧಿ ಕಾರ್ಯಗಳು ವಿಳಂಬವಾಗಿವೆ. ಈಗ ಸಾಕಷ್ಟು ಅನುದಾನ ದೊರಕುತ್ತಿದ್ದು, ಹಂತಹಂತವಾಗಿ ಮೂಲಸೌಕರ್ಯಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ಸಚಿವ ಎಸ್‌.ಟಿ.ಸೋಮಶೇಖರ್ ಭರವಸೆ ನೀಡಿದರು.

‘ಜನರ ಸಮಸ್ಯೆಗಳಿಗೆ ವೇದಿಕೆ ಒದಗಿಸಿರುವ ‘ಪ್ರಜಾವಾಣಿ’ ಕಾರ್ಯ ಅನನ್ಯ. ನಿತ್ಯವೂ ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗುವ ಕುಂದುಕೊರತೆ, ಜನಪರ ಸುದ್ದಿಗಳನ್ನು ನೋಡಿಯೇ ಹಲವು ಸಮಸ್ಯೆಗಳನ್ನು ಬಗೆಹರಿಸಿದ್ದೇವೆ. ಅಧಿಕಾರಿಗಳು ಪ್ರತಿ ವಾರ್ಡ್‌ಗೂ ಭೇಟಿ ನೀಡಿ, ಅಲ್ಲಿನ ನಾಗರಿಕ ಸಂಘಟನೆಗಳ ಜತೆಗೆ ಚರ್ಚಿಸಬೇಕು. ಸಮಸ್ಯೆಗಳನ್ನು ಆಲಿಸಬೇಕು. ಎಲ್ಲವನ್ನೂ ಶಾಸಕರು, ಸಚಿವರು ಗಮನಿಸುವವರೆಗೆ ಸುಮ್ಮನಿರಬಾರದು. ಅಧಿಕಾರಿಗಳು ತಮ್ಮ ಕಾರ್ಯದಲ್ಲಿ ವಿಫಲವಾದಾಗ ಸಮಸ್ಯೆಗಳು ಬೆಳೆಯುತ್ತಾ ಹೋಗುತ್ತವೆ’ ಎಂದರು.

ವಾರ್ಡ್‌ಗಳ ಅಭಿವೃದ್ಧಿಗೆ ಮುಖ್ಯಮಂತ್ರಿ ಅನುದಾನದಲ್ಲಿ ₹ 200 ಕೋಟಿ ದೊರೆತಿದೆ. ತೀವ್ರ ಸಮಸ್ಯೆ ಇರುವ ಬಡಾವಣೆಗಳಿಗೆ ಆದ್ಯತೆಯ ಮೇಲೆ ಹಂಚಿಕೆ ಮಾಡಲಾಗಿದೆ. ಇನ್ನೂ ₹ 200 ಕೋಟಿ ದೊರೆಯುತ್ತದೆ. ಕನಕಪುರ ರಸ್ತೆ, ಮಾಗಡಿ ರಸ್ತೆ ಸೇರಿ ಕ್ಷೇತ್ರದ ಹಲವು ಬಡಾವಣೆಗಳಲ್ಲಿ ಕಾಮಗಾರಿಗಳು ನಡೆಯುತ್ತಿವೆ. ಯುಜಿಡಿಗೆ ₹ 108 ಕೋಟಿ ಬಳಸಲಾಗುತ್ತಿದೆ. ಕೆಲ ಗ್ರಾಮೀಣ, ನಗರ, ಪಟ್ಟಣ ಪ್ರದೇಶಗಳವರೆಗೂ ಮೆಟ್ರೊ ಸೇವೆ ವಿಸ್ತರಣೆಯಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕಾವೇರಿ ನೀರು ಪೂರೈಕೆ ಪೈಪ್‌ಲೈನ್‌ ಕಾಮಗಾರಿ ಸಾಗುವ ಮಾರ್ಗದಲ್ಲಿನ ಸಂಚಾರಕ್ಕೆ ಅಡ್ಡಿಯಾಗಿದೆ. ಗುಂಡಿ, ದೂಳುಗಳಿಂದ ಸಾಕಷ್ಟು ಕಿರಿಕಿರಿಯಾಗಿದೆ. ಫೆಬ್ರುವರಿ ಅಂತ್ಯದ ಒಳಗೆ ಯೋಜನೆ ಪುರ್ಣಗೊಳಿಸಲಾಗುವುದು. ನಂತರ ಆ ಮಾರ್ಗದ ರಸ್ತೆಗಳನ್ನು ಸರಿಪಡಿಸಲಾಗುವುದು. ಅಲ್ಲಿಯವರೆಗೆ ಸಂಚಾರ ದಟ್ಟಣೆಯಾಗುವ ಸ್ಥಳಗಳಲ್ಲಿ ಸಂಚಾರ ಪೊಲೀಸರು ನಿಗಾವಹಿಸಬೇಕು ಎಂದು ಸೂಚಿಸಿದರು.

ಹೋರಾಟಗಾರರ ಪ್ರಕರಣ ವಾಪಸ್‌: ನಾಗರಿಕ ಸಮಸ್ಯೆಗಳ ವಿರುದ್ಧ ಧ್ವನಿಯೆತ್ತಿ, ಹೋರಾಟ ಮಾಡಿದವರ ಮೇಲೆ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ತಕ್ಷಣ ಅಂತಹ ಪ್ರಕರಣಗಳನ್ನು ವಾಪಸ್‌ ಪಡೆಯಬೇಕು ಎಂದು ಸಚಿವ ಸೋಮಶೇಖರ್ ಸೂಚಿಸಿದರು.

ಮೂರು ನಾಮದ ಮಲ್ಲಸಂದ್ರ

2007ರಲ್ಲಿ ‌ಬಿಬಿಎಂಪಿಗೆ ಸೇರ್ಪಡೆಯಾದ 110 ಹಳ್ಳಿಗಳ ಪಟ್ಟಿಯಲ್ಲಿ ಕೈಬಿಟ್ಟಿದ್ದ ಮಲ್ಲಸಂದ್ರ ಗ್ರಾಮವನ್ನು ಈಗ ಬಿಬಿಎಂಪಿಗೆ ಸೇರಿಸುವ ಮೂಲಕ 111 ಹಳ್ಳಿಗಳನ್ನು ಸೇರ್ಪಡೆ ಮಾಡಿದಂತಾಗಿದೆ. ಮೂಲ ಸೌಕರ್ಯದ ವಿಷಯದಲ್ಲಿ ಮೂರು ನಾಮ(111) ಆಗಬಾರದು ಎಂದು ನಿವಾಸಿ ಉಪೇಂದ್ರ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎಸ್‌.ಟಿ.ಸೋಮಶೇಖರ್ ಅವರು, ‘111 ಹಳ್ಳಿಗಳನ್ನು ಸೇರ್ಪಡೆ ಮಾಡಿದರೆ ಮೂರು ನಾಮ ಆಗಲಿದೆ ಎಂಬ ಕಾರಣಕ್ಕೆ ಹಿಂದೆ ಆಡಳಿತ ನಡೆಸಿದವರು ಮಲ್ಲಸಂದ್ರವನ್ನು ಕೈಬಿಟ್ಟಿದ್ದರು. ಈಗ ಸೇರ್ಪಡೆ ಮಾಡಲಾಗಿದೆ. ಒಳಚರಂಡಿ, ಕಾವೇರಿ ನೀರು ಪೂರೈಸುವ ಕಾಮಗಾರಿ ಈಗ ಆರಂಭವಾಗಿದೆ. ಕಾಮಗಾರಿ ಪೂರ್ಣಗೊಳ್ಳುವ ತನಕ ಜನ ಸಹಿಸಿಕೊಳ್ಳಬೇಕು’ ಎಂದು ಮನವಿ ಮಾಡಿದರು.

ಜನಸ್ಪಂದನದಲ್ಲಿ ಕೇಳಿಬಂದ ಕೆಲವು ಅಹವಾಲುಗಳು

ಅಂಬುಜಾ, ಎಲ್‌ಐಸಿ ಲೇಔಟ್‌

* ನಮ್ಮ ಬಡಾವಣೆಯಲ್ಲಿ ನಿರ್ಮಿಸಿರುವ ಕಾಂಕ್ರೀಟ್ ನಾಲೆಗೆ ರಸ್ತೆ ಪಕ್ಕದ ಚರಂಡಿಗಳಿಂದ ನೀರು ಹರಿದುಹೋಗಲು ಜಾಗವನ್ನೇ ಬಿಟ್ಟಿಲ್ಲ. ಮಳೆ ಬಂದರೆ ನೀರು ಬಡಾವಣೆಗೆ ತುಂಬಿಕೊಳ್ಳುವ ಆತಂಕ ಇದೆ.

ಬಿಡಿಎ ಅಧಿಕಾರಿ: ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸಲಾಗುವುದು.

***

ಧನಂಜಯ ಪದ್ಮನಾಭಾಚಾರ್, ಅಧ್ಯಕ್ಷ, ಕರ್ನಾಟಕ ಮನೆ ಗ್ರಾಹಕರ ವೇದಿಕೆ.

* ಅಪಾರ್ಟ್‌ಮೆಂಟ್‌ ಬಳಸುವ ಗ್ರಾಹಕರ ಸಂಖ್ಯೆ 10 ಲಕ್ಷವಿದೆ. ದೊಡ್ಡ ಮೊತ್ತದ ಹಣ ಪಾವತಿಸಿ, ಅಪಾರ್ಟ್‌ಮೆಂಟ್‌ ಖರೀದಿಸಿದರೂ, ಭೂಮಿಯ ಹಕ್ಕು ಮಾಲೀಕರಿಗೇ ಸೇರಿರುತ್ತದೆ. ಈ ಬಗ್ಗೆ ಸೂಕ್ತ ಕಾನೂನು ರಚಿಸಬೇಕು.

ಸಚಿವ ಸೋಮಶೇಖರ್: ಈ ಸಮಸ್ಯೆ ಐದು ದಶಕಗಳಿಂದ ಇದೆ. ಸರ್ಕಾರ ಕಾನೂನಿಗೆ ತಿದ್ದಿಪಡಿ ತರಲಿದೆ.

******
ವಾಣಿ ಕಿಶೋರ್, ತಲಘಟ್ಟಪುರ.

* ಮನೆಗಳಿಗೆ ಖಾತೆ ಕೊಡಲು ಸತಾಯಿಸುತ್ತಾರೆ. ಆದರೆ, ವಾಣಿಜ್ಯ ಮಳಿಗೆಗಳಿಗೆ ಪರವಾನಗಿ ನೀಡುತ್ತಾರೆ. ಮೂಲ ಸೌಕರ್ಯಗಳೂ ಇಲ್ಲ.

ಸಚಿವ ಸೋಮಶೇಖರ್: ಕೆಲ ಬಡಾವಣೆಗಳಲ್ಲಿ ತಕರಾರು ಇದೆ. ಹಾಗಾಗಿ, ಸಮಸ್ಯೆಯಾಗಿದೆ. ಬಿಡಿಎಯಿಂದ ಬಿಬಿಎಂಪಿಗೆ ಹಸ್ತಾಂತರವಾದ ನಂತರ ಖಾತೆಗಳು ಆಗಲಿವೆ. ತಕರಾರು ಇಲ್ಲದ ರಸ್ತೆಗಳನ್ನು ಪೂರ್ಣಗೊಳಿಸಲು ಸೂಚಿಸಲಾಗಿದೆ.

*****
ರಾಮೇಗೌಡ, ಬಾಲಾಜಿ ಲೇಔಟ್

* ಎಂಟು ತಿಂಗಳ ಹಿಂದೆಯೇ ಹಣ ಕಟ್ಟಿಸಿಕೊಂಡಿದ್ದಾರೆ. ನೀರಿನ ಕಂದಾಯವನ್ನೂ ಕಟ್ಟುತ್ತಿದ್ದೇವೆ. ವಾರದಲ್ಲಿ ಒಂದು ದಿನವೂ ನೀರು ಸಿಗುತ್ತಿಲ್ಲ.

ವಿನಯ್‌, ಎಂಜಿನಿಯರ್: ಸದ್ಯ ವಾರದಲ್ಲಿ ಒಂದು ದಿನ ಸಮರ್ಪಕವಾಗಿ ನೀರು ಪೂರೈಸಲಾಗುವುದು. ಎರಡು ತಿಂಗಳ ಒಳಗೆ ಸಮಸ್ಯೆ ಸಂಪೂರ್ಣ ಬಗೆಹರಿಸಲಾಗುವುದು.

********
ಗಾಯತ್ರಿ, ಪೂರ್ವ ಐಸ್‌ಲ್ಯಾಂಡ್ ಅಪಾರ್ಟ್‌ಮೆಂಟ್

* ರಸ್ತೆ ಗುಂಡಿಯಲ್ಲಿ ಬಿದ್ದು ಆಸ್ಪತ್ರೆಗೆ ₹1.50 ಲಕ್ಷ ಖರ್ಚು ಮಾಡಿದ್ದೇನೆ. ನನ್ನದಲ್ಲದ ತಪ್ಪಿಗೆ ಆದ ತೊಂದರೆಗೆ ಪರಿಹಾರ ಕೊಡುವವರು ಯಾರು?

ಸಚಿವ ಎಸ್.ಟಿ.ಸೋಮಶೇಖರ್: ಬಿಪಿಎಲ್ ಕಾರ್ಡ್ ಇದ್ದರೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಕೊಡಿಸುತ್ತೇನೆ. ನೀವು ತೀವ್ರ ತೊಂದರೆಯಲ್ಲಿದ್ದ ಕಾರ್ಡ್ ಇಲ್ಲದಿದ್ದರೂ ನನ್ನ ಸ್ವಂತ ಹಣ ನೀಡುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT