ಭಾನುವಾರ, ಏಪ್ರಿಲ್ 5, 2020
19 °C
ರಸ್ತೆಗಳು ಖಾಲಿ ಖಾಲಿ l ಬಸ್‌, ರೈಲು, ನಮ್ಮ ‌ಮೆಟ್ರೊ ಇಲ್ಲದೇ ಪ್ರಯಾಣಿಕರ ಪಡಿಪಾಟಲು

‘ಜನತಾ ಕರ್ಫ್ಯೂ’; ರಾಜಧಾನಿ ಸ್ತಬ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಿಕೋ ಎನ್ನುತ್ತಿದ್ದ ರಸ್ತೆಗಳು. ಬಾಗಿಲು ಮುಚ್ಚಿದ್ದ ಅಂಗಡಿ– ಮುಂಗಟ್ಟುಗಳು. ಸಂಚಾರ ನಿಲ್ಲಿಸಿದ ಬಸ್‌, ರೈಲು, ನಮ್ಮ ಮೆಟ್ರೊ, ಕ್ಯಾಬ್, ಆಟೊಗಳು... ಜನತಾ ಕರ್ಫ್ಯೂ ಆಚರಣೆಯಿಂದಾಗಿ ಇಡೀ ನಗರ ಭಾನುವಾರ ಅಕ್ಷರಶಃ ಸ್ತಬ್ಧವಾಯಿತು.  

ಕೋಮು– ಗಲಭೆ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದಾಗ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಬಲವಂತದಿಂದ ಕರ್ಫ್ಯೂ ಜಾರಿ ಮಾಡುತ್ತಿದ್ದರು. ಆದರೆ, ಭಾನುವಾರ ‘ಕೊರೊನಾ ವೈರಸ್ ವಿರುದ್ಧ ಹೋರಾಟ’ ಎಂಬ ಘೋಷಣೆಯೊಂದಿಗೆ ಜನರಿಂದ ಜನರಿಗಾಗಿ ಜನರಿಗೋಸ್ಕರವೇ ಕರ್ಫ್ಯೂ ನಡೆಯಿತು. ಬೆಂಗಳೂರಿನ ಬಹುತೇಕ ಜನರು  ಮನೆಯೊಳಗೆ ಉಳಿಯುವ ಮೂಲಕ ಇದಕ್ಕೆ ಬೆಂಬಲ ವ್ಯಕ್ತಪಡಿಸಿದರು. ಚಟುವಟಿಕೆಯೇ ಇಲ್ಲದೆ, ವಾಹನ ಓಡಾಟದ, ಹಾರ್ನ್ಗಳ ಕರ್ಕಶ ಸದ್ದುಗದ್ದಲವಿಲ್ಲದೇ ದಿನವಿಡೀ ನಗರ ಪ್ರಶಾಂತವಾಗಿತ್ತು.   

ವಸತಿ ಪ್ರದೇಶಗಳಲ್ಲಿ, ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲಿ ಕೂಡಾ ಸದ್ದುಗದ್ದಲದ ವಾತಾವರಣ ಇರಲಿಲ್ಲ. ಬಹುತೇಕರು ಸಂಜೆಯವರೆಗೂ ಮನೆಯಲ್ಲೇ ಉಳಿದವರು. ಅಗತ್ಯವಿದ್ದ ಸಂದರ್ಭದಲ್ಲಿ ಮಾತ್ರ ಕೆಲವರು ಬೈಕ್ ಹಾಗೂ ಕಾರುಗಳಲ್ಲಿ ಸಂಚರಿಸಿದರು.

ನಿತ್ಯವೂ ವಾಹನ ದಟ್ಟಣೆಯಿಂದ ಕೂಡಿರುತ್ತಿದ್ದ ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್‌ ನಿಲ್ದಾಣ ಬಸ್‌ ಹಾಗೂ ಸಂಗೊಳ್ಳಿ ರಾಯಣ್ಣ ನಗರ ರೈಲು ನಿಲ್ದಾಣಗಳೂ ಬಿಕೋ ಎನ್ನುತ್ತಿದ್ದವು. ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ, ಮೈಸೂರು ರಸ್ತೆ, ತುಮಕೂರು ರಸ್ತೆ, ಮಾಗಡಿ ರಸ್ತೆ, ಹೊಸೂರು ರಸ್ತೆ, ಕನಕಪುರ ರಸ್ತೆಗಳಲ್ಲೂ ವಾಹನಗಳ ಸಂಚಾರ ಸಂಪೂರ್ಣ ಬಂದ್ ಆಗಿತ್ತು.

ಉದ್ಯಾನಗಳು, ಮಾರುಕಟ್ಟೆಗಳು ಸಹ ಬಂದ್ ಆಗಿದ್ದವು. ಬೇಕರಿಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಸಂಪೂರ್ಣವಾಗಿ ಬಾಗಿಲು ಮುಚ್ಚಿದ್ದವು.

ವ್ಯಾಪಾರದ ಹಬ್‌ಗಳಾದ ಚಿಕ್ಕಪೇಟೆ, ಬಳೇಪೇಟೆ, ಉಪ್ಪಾರಪೇಟೆ, ಕಾಟನ್‌ಪೇಟೆ, ಕೆ.ಆರ್‌.ಮಾರುಕಟ್ಟೆ, ಎಸ್‌.ಪಿ ರಸ್ತೆ ಹಾಗೂ ಸುತ್ತಮುತ್ತಲ ಸ್ಥಳಗಳಲ್ಲೂ ವ್ಯಾಪಾರ–ವಹಿವಾಟು ಸಂಪೂರ್ಣ ಸ್ತಬ್ಧವಾಗಿತ್ತು.

ಜನರಿಗೆ ಹಣ ಲಭ್ಯವಾಗುವ ನಿಟ್ಟಿನಲ್ಲಿ ಪ್ರಮುಖ ಸ್ಥಳಗಳಲ್ಲಿ ಎಟಿಎಂ ಘಟಕಗಳು ತೆರೆದಿದ್ದವು. ಆದರೆ, ಹಣ ಡ್ರಾ ಮಾಡಿಕೊಳ್ಳುವರ ಸಂಖ್ಯೆ ವಿರಳವಾಗಿತ್ತು. ಔಷಧ ಅಂಗಡಿಗಳು ತೆರೆದಿದ್ದವು.

ಮೈಸೂರು ರಸ್ತೆಯ ಬಿಜಿಎಸ್ ಮೇಲ್ಸೇತುವೆಯಲ್ಲಿ ವಾಹನಗಳ ಓಡಾಟ ಇರಲಿಲ್ಲ. ಇದೇ ಸಂದರ್ಭದಲ್ಲಿ ಯುವಕನೊಬ್ಬ ವೇಗವಾಗಿ ಬೈಕ್‌ ಚಲಾಯಿಸಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಮೃತಪಟ್ಟ.

ಇದರಿಂದಾಗಿ ಈ ಮೇಲ್ಸೇತುವೆಯಲ್ಲಿ ವಾಹನ ಸಂಚಾರ ಬಂದ್ ಮಾಡಲಾಯಿತು. ಅದರ ಜೊತೆಗೆ ಆನಂದರಾವ್ ವೃತ್ತದ ಶೇಷಾದ್ರಿ ಮೇಲ್ಸೇತುವೆ ಸೇರಿ ಹಲವು ಮೇಲ್ಸೇತುವೆಗಳಲ್ಲಿ ವಾಹನಗಳ ಓಡಾಟವನ್ನು ನಿರ್ಬಂಧಿಸಲಾಯಿತು. ಪ್ರತಿಯೊಂದು ಕಡೆಯೂ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಯಿತು. 

ದೇವಸ್ಥಾನ, ಚರ್ಚ್‌, ಮಸೀದಿ ಬಂದ್: ನಗರದ ದೇವಸ್ಥಾನ, ಚರ್ಚ್ ಹಾಗೂ ಮಸೀದಿಗಳನ್ನೂ ಬಂದ್ ಮಾಡಲಾಗಿತ್ತು. ಪ್ರಾರ್ಥನೆ ಸಲ್ಲಿಸಲೂ ಜನರ‍್ಯಾರೂ ಚರ್ಚ್‌ಗಳಿಗೆ ಬರಲಿಲ್ಲ. ಅದರ ಬದಲು ಮನೆಯಲ್ಲೇ ಪ್ರಾರ್ಥನೆ ಮಾಡಿದರು.

ಕೇಂದ್ರ ಭಾಗವೂ ಸ್ತಬ್ಧ: ನಗರದ ಕೇಂದ್ರಭಾಗವೂ ಕರ್ಫ್ಯೂನಿಂದಾಗಿ ಸಂಪೂರ್ಣ ಬಂದ್ ಆಯಿತು. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಕಮರ್ಷಿಯಲ್ ಸ್ಟ್ರೀಟ್, ಅಶೋಕನಗರ, ವಿಠ್ಠಲ್ ಮಲ್ಯ ರಸ್ತೆ ಹಾಗೂ ಸುತ್ತಮುತ್ತಲೂ ವ್ಯಾಪಾರ–ವಹಿವಾಟು ಬಂದ್ ಆಗಿತ್ತು. ಅಲ್ಲೆಲ್ಲ` ವಾಹನಗಳ ಓಡಾಟವೂ ಕಡಿಮೆ ಇತ್ತು. 

ಚಹಾ–ಬಿಸ್ಕತ್ ವಿತರಣೆ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ 100ಕ್ಕೂ ಹೆಚ್ಚು ಪ್ರಯಾಣಿಕರು ಜಮಾಯಿಸಿದ್ದರು. ಕರ್ಫ್ಯೂ ಬಗ್ಗೆ ಗೊತ್ತಿರಲಿಲ್ಲವೆಂದು ಅವರೆಲ್ಲ ಹೇಳಿದರು. ಆಹಾರವಿಲ್ಲದೇ ಪರಿತಪಿಸುತ್ತಿದ್ದ ಅವರಿಗೆ ಡಿ.ಜೆ.ಹಳ್ಳಿಯ ಮ್ಯಾಕ್ಟ್‌ ಟ್ರಸ್ಟ್ ಸದಸ್ಯರು, ಚಹಾ ಹಾಗೂ ಬಿಸ್ಕತ್ ವಿತರಿಸಿದರು.

‘ದುಡಿಯಲು ಬಂದ ಜನ ತಮ್ಮೂರಿಗೆ ಹೋಗಲು ಪರದಾಡುತ್ತಿದ್ದಾರೆ. ಅಂಗಡಿಗಳೆಲ್ಲವೂ ಬಂದ್ ಆಗಿರುವುದರಿಂದ ಹಸಿವು ಅವರನ್ನು ಮತ್ತಷ್ಟು ಕಾಡುತ್ತಿತ್ತು. ಹೀಗಾಗಿ ನಾವೇ ಮನೆಯಿಂದ ಚಹಾ ಮಾಡಿಕೊಂಡು ಬಂದು ಉಚಿತವಾಗಿ ವಿತರಿಸುತ್ತಿದ್ದೇವೆ’ ಎಂದು ಟ್ರಸ್ಟ್‌ನ ಮಹಮ್ಮದ್ ‘ಪ್ರಜಾವಾಣಿ’ಗೆ ತಿಳಿಸಿದರು.  

ಪ್ರಯಾಣಿಕರ ಪಡಿಪಾಟಲು: ಕರ್ಫ್ಯೂ ಬಗ್ಗೆ ಮಾಹಿತಿಯೂ ಇಲ್ಲದ ನೂರಾರು ಜನರು ತಮ್ಮೂರಿಗೆ ಹೋಗಲು ಭಾನುವಾರ ಬೆಳಿಗ್ಗೆಯೇ ಮೆಜೆಸ್ಟಿಕ್‌ನ ಬಸ್ ಹಾಗೂ ರೈಲು ನಿಲ್ದಾಣಕ್ಕೆ ಬಂದಿದ್ದರು. ಆದರೆ, ವಾಹನಗಳಿಲ್ಲದೇ ಅವರೆಲ್ಲ  ಸಮಸ್ಯೆ ಎದುರಿಸಿದರು.

ಮುಂಬೈ, ದೆಹಲಿ, ಕೊಲ್ಕತ್ತಾ ಸೇರಿದಂತೆ ಉತ್ತರ ಭಾರತದವರೇ ಇದರಲ್ಲಿ ಹೆಚ್ಚಿದ್ದರು.

ದುಡಿಯಲು ನಗರಕ್ಕೆ ಬಂದಿದ್ದ ಅವರೆಲ್ಲ ಭಾನುವಾರ ರಜೆ ಇದ್ದಿದ್ದರಿಂದ ತಮ್ಮೂರಿಗೆ ಹೋಗಲು ಬಂದಿದ್ದರು. ರಸ್ತೆ ಹಾಗೂ ನಿಲ್ದಾಣದಲ್ಲಿ ಕಾಯುತ್ತಿದ್ದರು. ಮಾ. 31ರವರೆಗೆ ಬಸ್ ಹಾಗೂ ರೈಲು ಸಂಚಾರ ಬಂದ್ ಎಂಬ ಸುದ್ದಿ ಕೇಳಿ ಮತ್ತಷ್ಟು ಆತಂಕಗೊಂಡರು.

‘ನಮ್ಮ ಪರಿಸ್ಥಿತಿ ಏನು ಕೇಳುತ್ತೀರಾ. ನಡುರಸ್ತೆಯಲ್ಲೇ ಸಿಲುಕಿಕೊಂಡಿದ್ದೇವೆ. ಉಳಿಯಲೂ ವಸತಿಗೃಹಗಳೂ ಸಿಗುತ್ತಿಲ್ಲ’ ಎಂದು ದೆಹಲಿಯ ರಿಯಾಜ್ ಪ್ರತಿಕ್ರಿಯಿಸಿದರು.

ತುರ್ತು ಸಾರಿಗೆ ಸೇವೆ: ಕರ್ಫ್ಯೂ ಬಗ್ಗೆ ಮಾಹಿತಿ ಇರದ ಸಾಕಷ್ಟು ವಯೋವೃದ್ಧರು ಮೆಜೆಸ್ಟಿಕ್ ನಿಲ್ದಾಣಕ್ಕೆ ಬಂದಿದ್ದರು. ಬಸ್ ಹಾಗೂ ಆಟೊ ಇಲ್ಲದೇ ನಿಗದಿತ ಸ್ಥಳಕ್ಕೆ ಹೋಗಲು ಸಮಸ್ಯೆ ಎದುರಿಸಿದರು.

ಅಂಥವರಿಗೆ ವನ್ಯಜೀವಿ ಸಂರಕ್ಷಕ ಕಿರಣ್ ಕುಮಾರ್ ಹಾಗೂ ತಂಡದವರು, ಉಚಿತ ತುರ್ತು ಸಾರಿಗೆ ಸೇವೆ ಮಾಡಿದರು. ತಮ್ಮ ಬೈಕ್‌ಗಳಲ್ಲೇ ವೃದ್ಧರನ್ನು ನಿಗದಿತ ಸ್ಥಳಕ್ಕೆ ಕರೆದೊಯ್ದು ಬಿಟ್ಟು ಬಂದರು.

ಖಾಲಿ ರಸ್ತೆಯಲ್ಲೂ ಅಪಘಾತ ಸವಾರ ಸಾವು

ಬೆಂಗಳೂರು: ‘ಜನತಾ ಕರ್ಫ್ಯೂ’ ಹಿನ್ನೆಲೆಯಲ್ಲಿ ಖಾಲಿ ಇದ್ದ ಮೈಸೂರು ರಸ್ತೆಯ ಬಿಜಿಎಸ್‌ ಮೇಲ್ಸೇತುವೆಯಲ್ಲಿ ವೇಗವಾಗಿ ದ್ವಿಚಕ್ರ ವಾಹನ ಚಲಾಯಿಸಿದ್ದರಿಂದ ಅಪಘಾತ ಸಂಭವಿಸಿ, ಸವಾರ ಗಜೇಂದ್ರ ಎಂಬುವರು ಮೃತಪಟ್ಟಿದ್ದಾರೆ. ‘ಹಳೇ ಗುಡ್ಡದಹಳ್ಳಿ ನಿವಾಸಿ ಆಗಿದ್ದ ಗಜೇಂದ್ರ ಬಾಡಿಗೆ ದ್ವಿಚಕ್ರ ವಾಹನದಲ್ಲಿ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ. ಹಿಂಬದಿ ಸವಾರ ಶಿವಕುಮಾರ್ ಅವರಿಗೂ ಗಾಯವಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಮೇಲ್ಸೇತುವೆ ಖಾಲಿ ಇದ್ದಿದ್ದರಿಂದ ಗಜೇಂದ್ರ ವೇಗವಾಗಿ ದ್ವಿಚಕ್ರ ವಾಹನ ಓಡಿಸಿ, ರಸ್ತೆ ವಿಭಜಕಕ್ಕೆ ಗುದ್ದಿಸಿದ್ದ. ತಲೆಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟ’ ಎಂದರು.

ಆತಂಕ ಸೃಷ್ಟಿಸಿದ ಮುದ್ರಾಧಾರಿ ಯುವಕ–ಮಹಿಳೆ

ದುಬೈನಿಂದ ಬೆಂಗಳೂರಿಗೆ ವಿಮಾನದಲ್ಲಿ ಬಂದಿದ್ದ ರಾಜಸ್ಥಾನದ ಯುವಕ ಹಾಗೂ ದೆಹಲಿಯ ಮಹಿಳೆ, ನಗರದ ಮೆಜೆಸ್ಟಿಕ್‌ನ ಬಸ್ ಹಾಗೂ ರೈಲು ನಿಲ್ದಾಣಗಳಲ್ಲಿ ಓಡಾಡಿ ಆತಂಕ ಸೃಷ್ಟಿಸಿದರು.

ನಿಲ್ದಾಣದಲ್ಲಿ ಯುವಕ ಹಾಗೂ ಮಹಿಳೆಯ ಆರೋಗ್ಯ ತಪಾಸಣೆ ನಡೆಸಿದ್ದ ಆರೋಗ್ಯಾಧಿಕಾರಿಗಳು, ಅವರಿಬ್ಬರ ಕೈಗೆ ಮುದ್ರೆ ಹಾಕಿದ್ದರು. ಅದೇ ಸ್ಥಿತಿಯಲ್ಲೇ ಅವರಿಬ್ಬರು ಮೆಜೆಸ್ಟಿಕ್‌ಗೆ ಬಂದಿದ್ದರು. ಮುದ್ರೆ ನೋಡಿದ ಜನರೆಲ್ಲರೂ ಆತಂಕಗೊಂಡರು. ರೈಲ್ವೆ ಪೊಲೀಸರೇ ಅವರಿಬ್ಬರನ್ನು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಯೊಂದಕ್ಕೆ ಕಳುಹಿಸಿಕೊಟ್ಟರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು