ಬುಧವಾರ, ಜುಲೈ 6, 2022
22 °C
ಇ.ಸಿ.ಜಿ, ಹೃದಯ ಬಡಿತ ಸೇರಿ ತುರ್ತು ಆರೋಗ್ಯ ಮಾಹಿತಿ

ಜಯದೇವ ಆಸ್ಪತ್ರೆ: ರೋಗಿಯ ಮೇಲೆ ನಿಗಾಕ್ಕೆ ಸಾಧನ ಅಭಿವೃದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಇ.ಸಿ.ಜಿ (ಎಲೆಕ್ಟ್ರೊಕಾರ್ಡಿಯೊಗ್ರಾಮ್‌), ಹೃದಯ ಬಡಿತ ಸೇರಿದಂತೆ ವಿವಿಧ ಪರೀಕ್ಷೆಗಳಿಗೆ ಸಹಕಾರಿಯಾಗುವ ವೈದ್ಯಕೀಯ ಸಾಧನವನ್ನು ಅಭಿವೃದ್ಧಿಪಡಿಸಿರುವ ಕಾರ್ಡಿಯಾಕ್ ಡಿಸೈನ್ ಲ್ಯಾಬ್ ಎಂಬ ಕಂಪನಿ ಜಯದೇವ ಹೃದ್ರೋಗ ಸಂಸ್ಥೆಗೆ ಕೆಲ ಉಪಕರಣಗಳನ್ನು ಮೌಲ್ವೀಕರಿಸಲು ನೀಡಿದೆ.

‘ಪದ್ಮ ವೈಟಲ್ಸ್’ ಹೆಸರಿನ ಈ ಟೆಲಿಮೆಟ್ರಿಕ್ ಮೇಲ್ವಿಚಾರಣಾ ಸಾಧನವನ್ನು ರೋಗಿಯು ಸುಲಭವಾಗಿ ನಿರ್ವಹಿಸಬಹುದು. ಲ್ಯಾಬ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ ಮದನಗೋಪಾಲ್ ನೇತೃತ್ವದ ತಂಡವು ಈ ಸಾಧನವನ್ನು ಅಭಿವೃದ್ಧಿಪಡಿಸಿದೆ. ಎಲೆಕ್ಟ್ರೋಫಿಜಿಯಾಲಾಜಿಸ್ಟ್ ಡಾ.ಎಸ್. ಜಯಪ್ರಕಾಶ್ ಇದಕ್ಕೆ ಮಾರ್ಗದರ್ಶನ ನೀಡಿದ್ದರು. ಈ ಸಾಧನವನ್ನು ಕೈ, ಹೊಟ್ಟೆಯ ಭಾಗದಲ್ಲಿ ಕಟ್ಟಿಕೊಳ್ಳಬಹುದು. ಇ.ಸಿ.ಜಿ., ಹೃದಯ ಬಡಿತ, ದೇಹದ ಉಷ್ಣಾಂಶ, ರಕ್ತದ ಒತ್ತಡ, ಉಸಿರಾಟ, ಆಮ್ಲಜನಕ ಪ್ರಮಾಣ ಸೇರಿ ವಿವಿಧ ಮಾಹಿತಿ ಪಡೆದುಕೊಳ್ಳಬಹುದು.

ಆಸ್ಪತ್ರೆ ಮತ್ತು ಮನೆಯಲ್ಲಿ ವ್ಯಕ್ತಿಯ ಆರೋಗ್ಯದ ಬಗ್ಗೆ ತಿಳಿದುಕೊಳ್ಳಲು ಈ ಸಾಧನ ನೆರವಾಗಲಿದೆ. ತೀವ್ರ ನಿಗಾ ಘಟಕದಲ್ಲಿ ದಾಖಲಿಸಿದ ರೋಗಿಯ ಮೇಲೆ ನಿಗಾ ಇರಿಸುವಂತೆ ಈ ಸಾಧನವು ಕಾರ್ಯನಿರ್ವಹಿಸಲಿದ್ದು, ಆರೋಗ್ಯದಲ್ಲಿನ ಏರಿಳಿತವನ್ನು ಪತ್ತೆ ಮಾಡಲಿದೆ. ಆಸ್ಪತ್ರೆಯಲ್ಲಿ ಪ್ರಯೋಗ ಮಾಡಲಾಗಿದ್ದು, ದೇಶದ ವಿವಿಧ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೂಡ ಇದನ್ನು ಅಳವಡಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ. 

ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್, ‘ಈ ಸಾಧನವನ್ನು ಆಸ್ಪತ್ರೆಯ ಕೋವಿಡ್ ವಾರ್ಡ್‌ ಮತ್ತು ತೀವ್ರ ನಿಗಾ ಘಟಕದಲ್ಲಿ ಅಳವಡಿಕೆ ಮಾಡಲಾಗಿದೆ. ಇದರಿಂದಾಗಿ ಕೋವಿಡ್ ಪೀಡಿತರು ಹಾಗೂ ಹೃದ್ರೋಗಿಗಳ ಆರೋಗ್ಯದ ಮೇಲೆ ನಿಗಾ ಇಡಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದ್ದಾರೆ. 

‘ಇ.ಸಿ.ಜಿ, ಹೃದಯ ಬಡಿತ ಸೇರಿದಂತೆ ಪ್ರಮುಖ ಐದು ತುರ್ತು ಆರೋಗ್ಯ ಮಾಹಿತಿಯನ್ನು ಕೇಂದ್ರ ಸ್ಥಾನದಿಂದ ಎಲ್ಲ ವೈದ್ಯರು ಹಾಗೂ ಶುಶ್ರೂಷಕರು ತಮ್ಮ ಮೊಬೈಲ್ ದೂರವಾಣಿಯ ಮೂಲಕ ತಿಳಿದುಕೊಂಡು, ಚಿಕಿತ್ಸೆಯ ಬಗ್ಗೆ ನಿರ್ಧರಿಸಬಹುದು’ ಎಂದು ಪ್ರಕಟಣೆಯಲ್ಲಿ ವಿವರಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು