ಮೆಟ್ರೊ ಕಾಮಗಾರಿ | ಜಯದೇವ ಮೇಲ್ಸೇತುವೆ; 15ರಿಂದ ವಾಹನ ಸಂಚಾರ ಭಾಗಶಃ ನಿರ್ಬಂಧ

ಶುಕ್ರವಾರ, ಜೂಲೈ 19, 2019
24 °C

ಮೆಟ್ರೊ ಕಾಮಗಾರಿ | ಜಯದೇವ ಮೇಲ್ಸೇತುವೆ; 15ರಿಂದ ವಾಹನ ಸಂಚಾರ ಭಾಗಶಃ ನಿರ್ಬಂಧ

Published:
Updated:
Prajavani

ಬೆಂಗಳೂರು: ನೀವು ಜಯದೇವ ಮೇಲ್ಸೇತುವೆ ಬಳಸಿ ಬನ್ನೇರುಘಟ್ಟ ರಸ್ತೆ–ಸಿಲ್ಕ್‌ ಬೋರ್ಡ್‌ ರಸ್ತೆಯಲ್ಲಿ ಪ್ರಯಾಣಿಸುತ್ತೀರಾ? ಹಾಗಾದರೆ ನಿಮ್ಮ ಪ್ರಯಾಣದ‌ಲ್ಲಿ ತುಸು ಮಾರ್ಪಾಡು ಮಾಡಿಕೊಳ್ಳಬೇಕಾದೀತು.

‘ನಮ್ಮ ಮೆಟ್ರೊ’ ಎರಡನೇ ಹಂತದ ಯೋಜನೆಯಲ್ಲಿ ಆರ್‌.ವಿ.ರಸ್ತೆ– ಬೊಮ್ಮಸಂದ್ರ (ರೀಚ್‌–5) ಮಾರ್ಗದ  ಕಾಮಗಾರಿ ಸಲುವಾಗಿ ಜಯದೇವ ಮೇಲ್ಸೇತುವೆಯಲ್ಲಿ ಬನ್ನೇರುಘಟ್ಟ ರಸ್ತೆ ಮತ್ತು ಸಿಲ್ಕ್‌ಬೋರ್ಡ್‌ ರಸ್ತೆಯನ್ನು ಸಂಪರ್ಕಿಸುವ ಲೂಪ್‌ನಲ್ಲಿ ವಾಹನ ಸಂಚಾರವನ್ನು ಇದೇ 15 ರಿಂದ ಸಂಪೂರ್ಣ ನಿರ್ಬಂಧಿಸಲಾಗಿದೆ.

ಈ ಮಾರ್ಗವನ್ನು ಬಳಸುವ ವಾಹನ ಸವಾರರು ಪರ್ಯಾಯ ಮಾರ್ಗದಲ್ಲಿ ಸಂಚರಿಸಬಹುದು. ಇಲ್ಲಿನ ಹಾಗೂ ಇಲ್ಲಿನ ಸರ್ವಿಸ್‌ ರಸ್ತೆಯಲ್ಲೂ ವಾಹನ ಸಂಚಾರವನ್ನು ಭಾಗಶಃ ನಿರ್ಬಂಧಿಸಲಾಗಿದೆ. ಜಯದೇವ ಮೇಲ್ಸೇತುವೆ ಬಳಿ ಮನೆ ಅಥವಾ ಕಚೇರಿಗಳನ್ನು ಹೊಂದಿರುವವರು ಮಾತ್ರ ಈ ಸರ್ವಿಸ್‌ ರಸ್ತೆಯನ್ನು ಬಳಸಬಹುದು ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಪ್ರಕಟಣೆಯಲ್ಲಿ ತಿಳಿಸಿದೆ.

ಜಯದೇವ ಅಂಡರ್‌ಪಾಸ್‌ನ ಎರಡು ಬದಿಗಳ ಸಂಚಾರ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಜಯದೇವ ಮೇಲ್ಸೇತುವೆಯ ಬನಶಂಕರಿ–ಸಿಲ್ಕ್‌ ಬೋರ್ಡ್‌ ರಸ್ತೆಯಲ್ಲಿ ವಾಹನ ಸಂಚಾರ ವ್ಯವಸ್ಥೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಎಲ್‌.ಯಶವಂತ ಚೌಹಾಣ್‌ ತಿಳಿಸಿದ್ದಾರೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ₹ 21 ಕೋಟಿ ವೆಚ್ಚದಲ್ಲಿ ಈ ಮೇಲ್ಸೇತುವೆಯನ್ನು ನಿರ್ಮಿಸಿತ್ತು. 12 ವರ್ಷಗಳಷ್ಟು ಹಳೆಯದಾದ ಈ ಮೇಲ್ಸೇತುವೆಯನ್ನು ಕೆಡವಿ ಅಲ್ಲಿ ನಮ್ಮ ಮೆಟ್ರೊ ಇಂಟರ್‌ಚೇಂಜ್‌ ನಿಲ್ದಾಣವನ್ನು ನಿರ್ಮಿಸಲಾಗುತ್ತದೆ. ಗೊಟ್ಟಿಗೆರೆ– ನಾಗವಾರ ಮಾರ್ಗ ಹಾಗೂ ಆರ್‌.ವಿ.ರಸ್ತೆ – ಸಿಲ್ಕ್‌ಬೋರ್ಡ್‌ ಮೆಟ್ರೊ ಮಾರ್ಗಗಳು ಇಲ್ಲಿ ಪರಸ್ಪರ ಸಂಧಿಸಲಿವೆ. ಈ ಎರಡು ಎತ್ತರಿಸಿದ ಮಾರ್ಗಗಳು ಹಾಗೂ ಮೂರು ಗ್ರೇಡ್‌ ಸಪರೇಟರ್‌ಗಳನ್ನು ಒಳಗೊಂಡ ಐದು ಹಂತಗಳ ಸಂಚಾರ ವ್ಯವಸ್ಥೆ ಇಲ್ಲಿ ನಿರ್ಮಾಣವಾಗಲಿದೆ.

ಸದ್ಯಕ್ಕೆ ಜಯದೇವ ಮೇಲ್ಸೇತುವೆ ನೆಲಸಮ ಇಲ್ಲ
‘ಜಯದೇವ ಮೇಲ್ಸೇತುವೆಯನ್ನು ಸದ್ಯಕ್ಕೆ ಪೂರ್ತಿ ನೆಲಸಮ ಮಾಡುವುದಿಲ್ಲ. ಮೊದಲು ಈ ಮೇಲ್ಸೇತುವೆಯಲ್ಲಿರುವ ಬನ್ನೇರುಘಟ್ಟ ರಸ್ತೆ–ಸಿಲ್ಕ್‌ಬೋರ್ಡ್‌ ರಸ್ತೆಗಳನ್ನು ಸಂಪರ್ಕಿಸುವ ಲೂಪ್‌ ಅನ್ನು ಕೆಡಹುತ್ತೇವೆ. ಗೊಟ್ಟಿಗೆರೆ–ನಾಗವಾರ ಎತ್ತರಿಸಿದ ಮಾರ್ಗದ ಕಾಂಕ್ರೀಟ್‌ ಪಿಲ್ಲರ್‌ಗಳನ್ನು ಅಳವಡಿಸಲು ಈ ಲೂಪ್‌ ಅಡ್ಡಿಯಾಗುತ್ತದೆ. ರಸ್ತೆಯ ಎರಡು ಅಂಚುಗಳಲ್ಲಿ ಕಾಂಕ್ರೀಟ್‌ ಪಿಲ್ಲರ್‌ಗಳನ್ನು ನಿರ್ಮಿಸಿ ಅವುಗಳ ಮೇಲೆ ಕಾಂಕ್ರೀಟ್‌ ತೊಲೆ ಅಳವಡಿಸಬೇಕಿದೆ’ ಎಂದು ಚೌಹಾಣ್‌ ತಿಳಿಸಿದರು.

‘ಮೇಲ್ಸೇತುವೆಯಲ್ಲಿನ ಬನಶಂಕರಿ– ಸಿಲ್ಕ್‌ಬೋರ್ಡ್‌ ರಸ್ತೆಯನ್ನು ಸದ್ಯಕ್ಕೆ ಕೆಡಹುವುದಿಲ್ಲ. ರೀಚ್‌–5 ಮಾರ್ಗದಲ್ಲಿ ಸಿಲ್ಕ್‌ಬೋರ್ಡ್‌ ಕಡೆಯಿಂದ ಹಾಗೂ ರಾಗಿಗುಡ್ಡ ಕಡೆಯಿಂದ ಮೇಲ್ಸೇತುವೆವರೆಗೆ ಎತ್ತರಿಸಿದ ಮಾರ್ಗ ನಿರ್ಮಾಣದ ಕೆಲಸ ಮುಗಿದ ಬಳಿಕ ಮೇಲ್ಸೇತುವೆಯನ್ನು ಕೆಡವಿ ಬಳಿಕವೇ ಇಲ್ಲಿ ಇಂಟರ್‌ಚೇಂಜ್‌ ನಿಲ್ದಾಣದ ಕಾಮಗಾರಿ ಆರಂಭಿಸುತ್ತೇವೆ. ಕಾಮಗಾರಿ ಸಲುವಾಗಿ ಬನ್ನೇರುಘಟ್ಟ–ಡೇರಿ ವೃತ್ತವನ್ನು ಸಂಪರ್ಕಿಸುವ ಅಂಡರ್‌ ಪಾಸ್‌ ಕೆಡಹುವ ಅಗತ್ಯವಿಲ್ಲ’ ಎಂದು ಅವರು ವಿವರಿಸಿದರು.

‘ಕಾಮಗಾರಿ ಪೂರ್ಣಗೊಳ್ಳಲು ಮೂರು ವರ್ಷ ಬೇಕು’
‘ಜಯದೇವ ಇಂಟರ್‌ಚೇಂಜ್‌ ನಿಲ್ದಾಣ ನಿರ್ಮಾಣವಾಗಲು ಕನಿಷ್ಠ ಮೂರು ವರ್ಷಗಳಾದರೂ ಬೇಕು’ ಎಂದು ಹೆಸರು ಹೇಳಲು ಬಯಸದ ನಿಗಮದ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಿಲ್ಕ್‌ ಬೋರ್ಡ್‌ ಹಾಗೂ ಆರ್‌.ವಿ.ರಸ್ತೆ ಕಡೆಯಿಂದ ಎತ್ತರಿಸಿದ ಮಾರ್ಗ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಅದು ಜಯದೇವ ಮೇಲ್ಸೇತುವೆವರೆಗೆ ತಲುಪುವುದಕ್ಕೆ ಇನ್ನೂ ಸಾಕಷ್ಟು ಸಮಯ ಬೇಕು. ಆ ಬಳಿಕ ಇಂಟರ್‌ ಚೇಂಜ್‌ ನಿಲ್ದಾಣದ ಕಾಮಗಾರಿ ನಡೆಸಲು ಕನಿಷ್ಠ ಎರಡು ವರ್ಷಗಳಾದರೂ ಬೇಕು’ ಎಂದು ಅವರು ತಿಳಿಸಿದರು.

ಪರ್ಯಾಯ ಮಾರ್ಗಗಳು ಯಾವುವು?
ಬನ್ನೇರುಘಟ್ಟ ಕಡೆಯಿಂದ ಸಿಲ್ಕ್‌ ಬೋರ್ಡ್‌ ಕಡೆಗೆ
ಮಾರ್ಗ–1:
 ಜೆ.ಡಿ.ಮರ ಜಂಕ್ಷನ್‌, 9ನೇ ಅಡ್ಡ ರಸ್ತೆ, ಈಸ್ಟ್‌ ಎಂಡ್‌ ಮುಖ್ಯರಸ್ತೆ , ಮಾರೇನಹಳ್ಳಿ ಮುಖ್ಯರಸ್ತೆ ಸಿಲ್ಕ್‌ ಬೋರ್ಡ್‌ ಕಡೆಗೆ

ಮಾರ್ಗ–2: ಬನ್ನೇರುಘಟ್ಟ ರಸ್ತೆ, 6ನೇ ಅಡ್ಡ ರಸ್ತೆ ಜಂಕ್ಷನ್‌, 29ನೇ ಮುಖ್ಯರಸ್ತೆ, 6ನೇ ಮುಖ್ಯರಸ್ತೆ ,  ಮಾರೇನಹಳ್ಳಿ ಮುಖ್ಯರಸ್ತೆ , ಸಿಲ್ಕ್‌ ಬೋರ್ಡ್‌ ಕಡೆಗೆ

ಸಿಲ್ಕ್ ಬೋರ್ಡ್‌ ಕಡೆಯಿಂದ– ಬನ್ನೇರುಘಟ್ಟ ಕಡೆಗೆ
ಮಾರೇನಹಳ್ಳಿ ಮುಖ್ಯರಸ್ತೆ, 29ನೇ ಮುಖ್ಯರಸ್ತೆ , 7ನೇ ಅಡ್ಡ ರಸ್ತೆ, ಬನ್ನೇರುಘಟ್ಟ ರಸ್ತೆ ಕಡೆಗೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !