ಗುರುವಾರ , ಅಕ್ಟೋಬರ್ 28, 2021
18 °C
ಮರಗಳ ಹೆಸರಿನಲ್ಲಿ ರಸ್ತೆಗಳನ್ನು ಅಭಿವೃದ್ಧಿ ಪಡಿಸುವಂತೆ ಒತ್ತಾಯ

ಬೆಂಗಳೂರು: ‘ಜೀಡಿ ಮರ’ ಜಂಕ್ಷನ್‌ಗೆ ಮತ್ತೆ ಜೀವಂತಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬನ್ನೇರುಘಟ್ಟ ರಸ್ತೆಯಲ್ಲಿ ಜೀಡಿ ಮರ ಜಂಕ್ಷನ್‌ ಹೆಸರುವಾಸಿ. ಇಲ್ಲಿ ಗೇರುಹಣ್ಣಿನ ಮರಗಳಿದ್ದ ಕಾರಣಕ್ಕೆ (ಈ ಮರಗಳಿಗೆ ಜೀಡಿ ಮರ ಎಂದು ಕರೆಯುತ್ತಾರೆ) ಈ ಹೆಸರು ಬಂದಿದೆ. ಕಾಲಕ್ರಮೇಣ ಇಲ್ಲಿದ್ದ ಜೀಡಿ ಮರಗಳು ನಾಶವಾಗಿದ್ದು, ಒಂದು ಮರ ಮಾತ್ರ ಉಳಿದುಕೊಂಡಿದೆ. ಇಲ್ಲಿ ಮತ್ತೆ ಗೇರು ಹಣ್ಣಿನ ಗಿಡಗಳನ್ನು ಬೆಳೆಸಿ ಈ ಹೆಸರನ್ನು ಅಜರಾಮರಗೊಳಿಸುವ ಪ್ರಯತ್ನಕ್ಕೆ ಭಾನುವಾರ ನಾಂದಿ ಹಾಡಲಾಯಿತು.

ಪ್ರಾಜೆಕ್ಟ್‌ ವೃಕ್ಷಾ ಫೌಂಡೇಷನ್‌ ಬಿಬಿಎಂಪಿಯ ಅರಣ್ಯ ಘಟಕದ ಜೊತೆ ಸೇರಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಹಾಗೂ ಬಿಬಿಎಂಪಿ ವಿಶೇಷ ಆಯುಕ್ತ ರೆಡ್ಡಿ ಶಂಕರ ಬಾಬು ಅವರು ಗಿಡಗಳನ್ನು ನೆಡುವ ಮೂಲಕ ನಗರದ ಮರಗಳ ಪರಂಪರೆಯನ್ನು ಮುಂದುವರಿಸುವ ಕಾರ್ಯದಲ್ಲಿ ಕೈಜೋಡಿಸಿದರು.

‘ಮಲ್ಲೇಶ್ವರದಲ್ಲಿ ಸಂಪಿಗೆ ರಸ್ತೆ ಇದೆ, ಮಾರ್ಗೋಸಾ (ಬೇವಿನ ಮರ) ರಸ್ತೆ ಇದೆ. ವಿದ್ಯಾರಣ್ಯಪುರದಲ್ಲಿ ಈಚಲಮರ ನಿಲ್ದಾಣ ಇದೆ. ಬನಶಂಕರಿಯಲ್ಲಿ ಹುಣಸೇಮರ ನಿಲ್ದಾಣವಿದೆ. ಅಂದರೆ ಮರಗಳ ಹೆಸರಿನಲ್ಲಿ ನಿರ್ದಿಷ್ಟ ಜಾಗವನ್ನು ಗುರುತಿಸುವ ಪರಂಪರೆ ಈ ನಗರದಲ್ಲಿ ಹಿಂದಿನಿಂದಲೂ ಬೆಳೆದುಬಂದಿದೆ. ಅನೇಕ ಕಡೆ ಮರಗಳನ್ನು ಕಳೆದುಕೊಂಡಿದ್ದರಿಂದ ಅವುಗಳ ಜೊತೆಗೆ ಬೆಸೆದುಕೊಂಡಿದ್ದ ಹೆಸರುಗಳ ಬಳಕೆಯೂ ನಿಂತಿದೆ. ಮರಗಳ ಹೆಸರಿನಲ್ಲಿ ಸ್ಥಳಗಳನ್ನು ಗುರುತಿಸುವ ಪರಂಪರೆಯ ಪುನರುಜ್ಜೀವನಕ್ಕಾಗಿ ನಾವು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಇಲ್ಲೀ ಸದ್ಯಕ್ಕೆ ಸಾಂಕೇತಿಕವಾಗಿ 10 ಗೇರುಹಣ್ಣಿನ ಗಿಡಗಳನ್ನು ನೆಟ್ಟಿದ್ದೇವೆ’ ಎಂದು ಪ್ರಾಜೆಕ್ಟ್‌ ವೃಕ್ಷಾ ಫೌಂಡೇಷನ್‌ನ ವಿಜಯ್‌ ನಿಶಾಂತ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಇನ್ನು ಮುಂದೆ ರಸ್ತೆಗಳನ್ನು, ವೃತ್ತಗಳನ್ನು ಅಭಿವೃದ್ಧಿಪಡಿಸುವಾಗ, ಅಲ್ಲಿ ನಿರ್ದಿಷ್ಟ ಜಾತಿಯ ಸಸಿಗಳನ್ನು ನೆಟ್ಟು ಬೆಳೆಸಬೇಕು. ಅವುಗಳ ಹೆಸರನ್ನೇ ರಸ್ತೆಗೆ ಅಥವಾ ವೃತ್ತಗಳಿಗೆ ಇಡಬೇಕು ಎಂದು ಬಿಬಿಎಂಪಿ ಹಾಗೂ ಜಿಲ್ಲಾಡಳಿತ ಅಧಿಕಾರಿಗಳನ್ನು ಕೋರಿದ್ದೇವೆ. ಉದಾಹರಣೆಗೆ ಹೊಂಗೆ ಮರಗಳನ್ನು ರಸ್ತೆ ಪಕ್ಕ ನೆಟ್ಟರೆ, ಆ ರಸ್ತೆಯನ್ನು ಹೊಂಗೆ ಮರ ರಸ್ತೆ ಎಂದೇ ಕರೆಯಬೇಕೆಂಬುದು ನಮ್ಮ ಕೋರಿಕೆ. ಇದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ’ ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಿರಿಯರೊಬ್ಬರು ಈ ಜಂಕ್ಷನ್‌ನಲ್ಲಿ ಒಂದು ಭಾರಿ ಗಾತ್ರದ ಜೀಡಿಮರವೂ ಸೇರಿ ಅನೇಕ ಜೀಡಿಮರಗಳು ಇದ್ದುದನ್ನು ಮೆಲುಕು ಹಾಕಿದರು. ಸಸಿಗಳನ್ನು ನೆಟ್ಟ ಬಳಿಕ ಅಲ್ಲಿ ಸೇರಿದ್ದವರಿಗೆಲ್ಲ ‘ಗೋಡಂಬಿ’ಯನ್ನು ಹಂಚಿ ಸಂಭ್ರಮ ಆಚರಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.