ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರರ ಅಡಗುತಾಣ: ಏಜೆನ್ಸಿ ಜೊತೆಗೂಡಿ ಹದ್ದಿನಗಣ್ಣು

ರಾಷ್ಟ್ರೀಯ ತನಿಖಾದಳದ ಅಧಿಕಾರಿಗಳ ಸಮಾವೇಶದಲ್ಲಿ ಬಹಿರಂಗ * ವರ್ಷದ ಹಿಂದಿನ ಮಾಹಿತಿ ಎಂದ ಪೊಲೀಸರು
Last Updated 14 ಅಕ್ಟೋಬರ್ 2019, 20:40 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಜಮಾತ್‌ ಉಲ್‌ ಮುಜಾಹಿದೀನ್‌ ಬಾಂಗ್ಲಾದೇಶ (ಜೆಎಂಬಿ) ಉಗ್ರಗಾಮಿ ಸಂಘಟನೆಯ ಅಡಗುತಾಣಗಳಿರುವ ಮಾಹಿತಿಯನ್ನು ರಾಷ್ಟ್ರೀಯ ತನಿಖಾದಳ (ಎನ್‌ಐಎ) ಅಧಿಕಾರಿಗಳು ಬಹಿರಂಗಪಡಿಸುತ್ತಿದ್ದಂತೆ ಜನ ಆತಂಕಕ್ಕೆ ಒಳಗಾಗಿದ್ದಾರೆ.

ರಾಜ್ಯದಲ್ಲಿದ್ದಶಂಕಿತ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿದ್ದ ಎನ್‌ಐಎ ಅಧಿಕಾರಿಗಳು, ಅದರ ವಿವರವನ್ನು ದೆಹಲಿಯಲ್ಲಿ ಸೋಮವಾರ ನಡೆದ ಸಮಾವೇಶದಲ್ಲಿ ಬಿಚ್ಚಿಟ್ಟರು. ಅದರಿಂದ ಎಚ್ಚೆತ್ತ ನಗರದ ಪೊಲೀಸರು, ಗುಪ್ತದಳ ಸೇರಿದಂತೆ ಹಲವು ಏಜೆನ್ಸಿಗಳ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದುಕೊಂಡರು.

ಎನ್‌ಐಎ ಅಧಿಕಾರಿಗಳು ಹೇಳಿರುವಂತೆ ಉಗ್ರರ ಅಡಗು ತಾಣಗಳು ಎಲ್ಲಿವೆ? ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕಿದರು. ಎನ್‌ಐಎ ಅಧಿಕಾರಿಗಳು, ವರ್ಷದ ಹಿಂದಿನ ಅಡಗುತಾಣಗಳ ಬಗ್ಗೆ ಹಾಗೂ ಅಲ್ಲಿದ್ದ ಉಗ್ರರನ್ನು ಬಂಧಿಸಿದ್ದ ಬಗ್ಗೆ ಸಮಾವೇಶದಲ್ಲಿ ಮಾಹಿತಿ ನೀಡಿದ್ದರು ಎಂಬುದು ಪೊಲೀಸರಿಗೆ ತಿಳಿಯಿತು.

‘ಸ್ಲೀಪರ್‌ ಸೆಲ್‌ಗಳು ವೈಯಕ್ತಿಕವಾಗಿ ಇರುತ್ತವೆ. ಅವುಗಳ ವಿರುದ್ಧ ಕಾರ್ಯಾಚರಣೆ ನಡೆಯುತ್ತಲೇ ಇರುತ್ತದೆ. ಎನ್‌ಐಎ ಅಧಿಕಾರಿಗಳು ಹೇಳಿದ ರೀತಿಯ ಅಡಗುತಾಣಗಳು ನಗರದಲ್ಲಿ ಇಲ್ಲ. ಇದು ಹಳೆಯ ಮಾಹಿತಿ’ ಎಂದು ನಗರದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆಲ ತಿಂಗಳ ಹಿಂದಷ್ಟೇ ಎನ್‌ಐಎ ಅಧಿಕಾರಿಗಳು ರಾಜ್ಯದಲ್ಲಿ ದೊಡ್ಡಮಟ್ಟದ ಕಾರ್ಯಾಚರಣೆ ನಡೆಸಿದ್ದರು. ರಾಮನಗರ ಹಾಗೂ ದೊಡ್ಡಬಳ್ಳಾಪುರದಲ್ಲಿದ್ದ ಉಗ್ರರ ಅಡಗುತಾಣಗಳನ್ನು ಪತ್ತೆ ಮಾಡಿ ಶಂಕಿತರನ್ನು ಬಂಧಿಸಿದ್ದರು. ಅದೇ ಕೊನೆಯ ಅಡಗುತಾಣ. ಅದಾದ ನಂತರ ಯಾವುದೇ ಅಡಗುತಾಣಗಳ ಬಗ್ಗೆ ಮಾಹಿತಿ ಸಿಕ್ಕಿಲ್ಲ’ ಎಂದು ಹೇಳಿದರು.

‘ಭದ್ರತೆ ವಿಷಯದಲ್ಲಿ ಸದಾಕಾಲ ಎಚ್ಚರಿಕೆ ವಹಿಸಲಾಗುತ್ತದೆ. ನಿತ್ಯವೂ ಕಟ್ಟೆಚ್ಚರ ಇದ್ದೇ ಇರುತ್ತದೆ. ರಾಜ್ಯ ಹಾಗೂ ಕೇಂದ್ರದಲ್ಲಿರುವ ಏಜೆನ್ಸಿಯ ಅಧಿಕಾರಿಗಳ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ. ಅವರು ನೀಡುವ ಮಾಹಿತಿಯನ್ವಯ ನಗರದ ಪ್ರತಿಯೊಂದು ಪ್ರದೇಶದ ಮೇಲೂ ಹದ್ದಿನ ಕಣ್ಣಿಡಲಾಗಿದೆ’ ಎಂದು ಅವರು ತಿಳಿಸಿದರು.

ಅಡಗುತಾಣಗಳ ಮೇಲೂ ನಿಗಾ?
‘ಎನ್‌ಐಎ ಅಧಿಕಾರಿಗಳು ನೀಡಿರುವ ಮಾಹಿತಿ ವರ್ಷದ ಹಿಂದಿನದ್ದಾದರೂ ಆ ಅಡಗುತಾಣಗಳು ಯಾವುವು ಎಂಬುದನ್ನು ತಿಳಿದುಕೊಳ್ಳುತ್ತಿದ್ದೇವೆ. ಈ ಸಂಬಂಧ ಎನ್‌ಐಎ ಅಧಿಕಾರಿಗಳನ್ನೂ ಸಂಪರ್ಕಿಸಲಾಗುವುದು’ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದರು.

‘ಅಡಗುತಾಣಗಳು ಯಾವ ಠಾಣೆ ವ್ಯಾಪ್ತಿಯಲ್ಲಿ ಬರುತ್ತವೆ ಎಂಬ ಮಾಹಿತಿಯನ್ನೂ ಕಲೆಹಾಕುತ್ತಿವೆ. ಆಯಾ ಠಾಣೆ ಪೊಲೀಸರು, ಅಂಥ ತಾಣಗಳ ಮೇಲೆ ನಿಗಾ ವಹಿಸಲಿದ್ದಾರೆ. ಯಾವುದೇ ಅನುಮಾನ ಬಂದರೂ ತ್ವರಿತವಾಗಿ ಕ್ರಮ ಕೈಗೊಳ್ಳಿದ್ದಾರೆ’ ಎಂದು ತಿಳಿಸಿದರು.

ದೊಡ್ಡಬಳ್ಳಾಪುರದಲ್ಲಿ ಸಿಕ್ಕಿಬಿದ್ದಿದ್ದ ಶಂಕಿತ ಉಗ್ರ
ಪಶ್ಚಿಮ ಬಂಗಾಳದಲ್ಲಿ 2014ರಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಶಂಕಿತ ಹಬೀಬುರ್‌ ರೆಹಮಾನ್‌ (30) ಎಂಬಾತ ಎನ್‌ಐಎ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದ.

ಆತ ನೀಡಿದ್ದ ಮಾಹಿತಿಯಂತೆ ಶಂಕಿತರಾದ ನಜೀರ್ ಶೇಖ್ ಅಲಿಯಾಸ್ ಪಟ್ಲಾ ಅನಾಸ್, ನಜ್ರುಲ್ ಇಸ್ಲಾಂ ಅಲಿಯಾಸ್ ಮೋಟಾ ಅನಾಸ್, ಆಸಿಫ್ ಇಕ್ಬಾಲ್ ಅಲಿಯಾಸ್ ನದೀಮ್,ಆರಿಫ್ ಹಾಗೂ ಜಾಹೀದುಲ್ಲಾ ಇಸ್ಲಾಂ ಅಲಿಯಾಸ್ ಕೌಸರ್‌ನನ್ನೂ ಬಂಧಿಸಲಾಗಿತ್ತು.

ಜಮಾತ್‌ ಉಲ್‌ ಮುಜಾಹಿದೀನ್‌ ಬಾಂಗ್ಲಾದೇಶ (ಜೆಎಂಬಿ) ಸಂಘಟನೆಯವರಾದ ಇವರೆಲ್ಲರೂ ದೊಡ್ಡಬಳ್ಳಾಪುರದಲ್ಲಿದ್ದ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಅದೇ ಮನೆಯಲ್ಲೇ ಗ್ರೆನೇಡ್ ಶೆಲ್‌ಗಳು ಸೇರಿ ಸುಧಾರಿತ ಸ್ಫೋಟಕಗಳು ಸಿಕ್ಕಿದ್ದವು. ಈ ಶಂಕಿತರ ವಿರುದ್ಧ ಅಪರಾಧ ಸಂಚು (ಐಪಿಸಿ 34),ದೇಶದ್ರೋಹ (121ಎ),ಹತ್ಯೆಯ ಸಂಚು (ಐಪಿಸಿ 120ಬಿ) ಹಾಗೂ ಕಾನೂನುಬಾಹಿರ ಚಟುವಟಿಕೆ ಪ್ರತಿಬಂಧಕ ಕಾಯ್ದೆ ಅಡಿ ಪ್ರಕರಣ ಎಫ್‌ಐಆರ್‌ ದಾಖಲಾಗಿತ್ತು.

ಗೃಹ ಸಚಿವರ ಸಭೆ ಇಂದು
ಅಪರಾಧ ಚಟುವಟಿಕೆ ನಿಯಂತ್ರಿಸಲು ಕೈಗೊಳ್ಳಬೇಕಾದ ಕ್ರಮ ಹಾಗೂ ಭದ್ರತೆ ಸಂಬಂಧ ಚರ್ಚಿಸಲು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ (ಅ. 15) ಬೆಂಗಳೂರು ನಗರ ಪೊಲೀಸ್ ಅಧಿಕಾರಿಗಳ ಸಭೆ ನಡೆಸಲಿದ್ದಾರೆ. ಶಂಕಿತ ಉಗ್ರರ ಅಡಗುತಾಣಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT