ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆ ಡಿ.11ರಂದು

ಬಸವನಗುಡಿಯಲ್ಲಿ ಶನಿವಾರದಿಂದಲೇ ಜಾತ್ರೆ ಸಂಭ್ರಮ
Published 9 ಡಿಸೆಂಬರ್ 2023, 16:23 IST
Last Updated 9 ಡಿಸೆಂಬರ್ 2023, 16:23 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಪಾರಂಪರಿಕ ಕಡಲೆಕಾಯಿ ಪರಿಷೆ ಬಸವನಗುಡಿಯಲ್ಲಿ ಡಿ.11ರಂದು ನಡೆಯಲಿದೆ.

ಕಾರ್ತೀಕ ಮಾಸದ ಕೊನೆ ಸೋಮವಾರ ದೊಡ್ಡ ಬಸವಣ್ಣ ದೇವಸ್ಥಾನದಲ್ಲಿ ಬಸವನಿಗೆ ಕಡಲೆಕಾಯಿ ಹಾಗೂ ಪುಷ್ಪಗಳಿಂದ ಅಲಂಕಾರ ಮಾಡಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಿಗ್ಗೆ ಪರಿಷೆಗೆ ಚಾಲನೆ ನೀಡಲಿದ್ದಾರೆ.

ವಾರಾಂತ್ಯ ಸರ್ಕಾರಿ ರಜೆ ಇದ್ದರಿಂದ ಶನಿವಾರವೇ ಬಸವನಗುಡಿ ಮುಖ್ಯರಸ್ತೆಯಲ್ಲಿ ಕಡಲೆಕಾಯಿ, ತಿನಿಸು ಸೇರಿದಂತೆ ಜಾತ್ರೆಯ ಸಂಭ್ರಮವಿತ್ತು. ಕನಕಪುರ, ದೊಡ್ಡಬಳ್ಳಾಪುರ, ರಾಮನಗರ, ಮಾಗಡಿ, ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಮೈಸೂರು, ಮಂಡ್ಯ, ತುಮಕೂರು ಕಡೆಗಳಿಂದ ತಂದಿದ್ದ ಕಡಲೆಕಾಯಿಯನ್ನು ಇಲ್ಲಿ ಮಾರಾಟ ಮಾಡಲು ವ್ಯಾಪಾರಿಗಳು ಸಜ್ಜಾಗಿದ್ದರು.‌

ಡಿ.11ರ ಸಂಜೆ 6ಕ್ಕೆ ಕೆಂಪಾಬುಧಿ ಕೆರೆಯಲ್ಲಿ ತೆಪ್ಪೋತ್ಸವ ನಡೆಯಲಿದ್ದು, ಕಹಳೆ ಬಂಡೆ ಉದ್ಯಾನದಲ್ಲಿ ಸಂಜೆ ಮೇಖಲಾ ಅಗ್ನಿಹೋತ್ರಿ ತಂಡದಿಂದ ನಾದ–ನಿನಾದ ಕಾರ್ಯಕ್ರಮ ನಡೆಯಲಿದೆ. ನರಸಿಂಹಸ್ವಾಮಿ ಉದ್ಯಾನದಲ್ಲಿ ಸಿರಿಕಲಾ ಮೇಳ ತಂಡದಿಂದ ಯಕ್ಷಗಾನ ಆಯೋಜಿಸಲಾಗಿದೆ.

ಡಿ.12ರ ಮಂಗಳವಾರ ಸಂಜೆ ಕಹಳೆ ಬಂಡೆಯಲ್ಲಿ ನಾಟ್ಯ ಭೈರವಿ ಶಾಲೆ ತಂಡದಿಂದ ನೃತ್ಯ, ನರಸಿಂಹ ಸ್ವಾಮಿ ಉದ್ಯಾನದಲ್ಲಿ ಸೀತಾರಾಮ ಮುನಿಕೋಟಿ ಅವರಿಂದ ಹರಿಕಥೆ ನಡೆಯಲಿದೆ.

ಗ್ರಾಮೀಣ ಸೊಗಡಿನ ಈ ಹಬ್ಬವನ್ನು ಪ್ಲಾಸ್ಟಿಕ್‌ಮುಕ್ತವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಮಾಜಿ ಮೇಯರ್‌ ಕಟ್ಟೆ ಸತ್ಯನಾರಾಯಣ ತಿಳಿಸಿದರು.

ಮೇಯರ್‌ ಆಹ್ವಾನಿತರು!: ‘ಕಡಲೆಕಾಯಿ ಪರಿಷೆಯ ಆಹ್ವಾನ ಪತ್ರಿಕೆಯಲ್ಲಿ ಬಿಬಿಎಂಪಿ ಮಹಾಪೌರರು, ಉಪ ಮಹಾಪೌರರು, ನಗರಸಭಾ ಸದಸ್ಯರು ಆಹ್ವಾನಿತರಾಗಿದ್ದಾರೆ. ಬಿಬಿಎಂಪಿಯಲ್ಲಿ ಚುನಾಯಿತ ಸದಸ್ಯರು ಇಲ್ಲ ಎಂಬುದನ್ನು ಆಹ್ವಾನ ಪತ್ರಿಕೆ ಮುದ್ರಿಸಿದವರು ಮರೆತಿದ್ದಾರೆ’ ಎಂದು ಬಸವನಗುಡಿ ನಿವಾಸಿ ಚಂದ್ರಶೇಖರ್‌ ದೂರಿದರು.

ಬಸವನಗುಡಿ ಕಡಲೆಕಾಯಿ ಪರಿಷೆಗೆ ಸಂಬಂಧಿಸಿದಂತೆ ಮಾಹಿತಿ ಕೊರತೆಯಿದ್ದು, ಬಿಬಿಎಂಪಿ ತನ್ನ ಪಾಲಿನ ಅನುದಾನವನ್ನು ನೀಡಿ ಸುಮ್ಮನಾಗಿದೆ. ಕಳೆದ ವರ್ಷ ಬಿಬಿಎಂಪಿ ದಕ್ಷಿಣ ವಲಯದ ಆಯುಕ್ತ, ಜಂಟಿ ಆಯುಕ್ತರು ಪರಿಷೆಯ ಜವಾಬ್ದಾರಿ ಹೊತ್ತು ಮೇಲುಸ್ತುವಾರಿ ಮಾಡಿದ್ದರು. ಈ ಬಾರಿ ವಲಯ ಆಯುಕ್ತರಿಂದ ಹಿಡಿದು ಮುಖ್ಯ ಎಂಜಿನಿಯರ್‌ ರಾಜೇಶ್‌, ಕಾರ್ಯಪಾಲಕ ಎಂಜಿನಿಯರ್‌ ರಘು ಅವರು ಮಾಹಿತಿ ನೀಡುವ ಜವಾಬ್ದಾರಿಯನ್ನು ಇನ್ನೊಬ್ಬರ ಮೇಲೆ ಹಾಕುತ್ತಿದ್ದಾರೆ.

‘ಕಳೆದ ವರ್ಷ ಚುನಾವಣೆ ಸಂದರ್ಭವಾಗಿದ್ದರಿಂದ ರಾಜಕಾರಣಿಗಳು ಪ್ರಚಾರ ಪಡೆಯಲು ಹೆಚ್ಚು ಓಡಾಡಿದ್ದರು. ಈ ಬಾರಿ ಸ್ಥಳೀಯ ಶಾಸಕರೂ ಸೇರಿದಂತೆ ಎಲ್ಲರೂ ತಣ್ಣಗಿದ್ದಾರೆ’ ಎಂದು ಹನುಮಂತನಗರ ನಿವಾಸಿ ವೆಂಕಟೇಶ್‌ ದೂರಿದರು.

ಬಸವನಗುಡಿ ಮುಖ್ಯರಸ್ತೆಯಲ್ಲಿ ಕಡಲೆಕಾಯಿ ಖರೀದಿ ಮಾಡಿದ ಯುವತಿಯರು
ಬಸವನಗುಡಿ ಮುಖ್ಯರಸ್ತೆಯಲ್ಲಿ ಕಡಲೆಕಾಯಿ ಖರೀದಿ ಮಾಡಿದ ಯುವತಿಯರು
ಬೊಂಬೆ ಮಿಠಾಯಿಯೊಂದಿಗೆ ಸೆಲ್ಫಿ ಸಂಭ್ರಮ
ಬೊಂಬೆ ಮಿಠಾಯಿಯೊಂದಿಗೆ ಸೆಲ್ಫಿ ಸಂಭ್ರಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT